ಗುರುವಾರ , ಜನವರಿ 23, 2020
27 °C

ಪುಟ್ಟ ಮನಸ್ಸಿನ ರೇಸಿಂಗ್ ಕನಸು

–ಪವಿತ್ರಾ ಶೆಟ್ಟಿ Updated:

ಅಕ್ಷರ ಗಾತ್ರ : | |

ಇಂಡಿಯನ್ ಕಾರ್ಟಿಂಗ್‌ ಜಗತ್ತಿಗೆ ಈಗ ಹೊಸ ರೇಸರ್‌ ಒಬ್ಬ ಸೇರ್ಪಡೆಯಾಗುತ್ತಿದ್ದಾನೆ. ಈ ಹುಡುಗನ ಹೆಸರು ಯಶ್‌ ಆರಾಧ್ಯ. ಬಿಷಪ್ ಕಾಟನ್ ಬಾಲಕರ ಶಾಲೆಯಲ್ಲಿ ಐದನೇ ಕ್ಲಾಸ್‌ ಓದುತ್ತಿರುವ ಯಶ್ ಆರಾಧ್ಯ ಕಾರ್ಟಿಂಗ್‌ನಲ್ಲಿ ತನ್ನ ಪ್ರಯಾಣ ಶುರುಮಾಡಿದ್ದಾನೆ. ಬಾಲ್ಯದಲ್ಲಿ ಕಾರಿನ ಬಗ್ಗೆ ಅದರ ಎಂಜಿನ್‌ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಒಂದು ಕುತೂಹಲದ ಕಣ್ಣಿರಿಸಿಕೊಂಡಿದ್ದ ಯಶ್‌ಗೆ ದೇಶದ ನಂ.1 ರೇಸರ್‌ ಆಗುವ ಆಸೆ.ತನ್ನ ಒಂಬತ್ತನೇ ವಯಸ್ಸಿಗೆ ರೇಸಿಂಗ್‌ನಲ್ಲಿ ಆಸಕ್ತಿ ವಹಿಸಿದ ಯಶ್‌, ಹೈದರಾಬಾದ್‌ನಲ್ಲಿ 2012ರಲ್ಲಿ ನಡೆದ ನ್ಯಾಷನಲ್‌ ‘ರುಕಿ’ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿದ್ದಾನೆ. 2013 ಜುಲೈನಲ್ಲಿ ನಡೆದ ನ್ಯಾಷನಲ್‌ ಕಾರ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಮತ್ತೆ ಗೆಲುವಿನ  ಗರಿ ಮುಡಿಗೇರಿಸಿಕೊಂಡ.ಪಯಣ ಶುರುವಾಗಿದ್ದು ಹೀಗೆ

ತಂದೆಯ ಜತೆ ಕಾರಿನಲ್ಲಿ ಪಯಣಿಸುತ್ತಿದ್ದ ಯಶ್ ರೇಸರ್‌ ಆಗುತ್ತೇನೆ ಎಂದಾಗ ಅಪ್ಪನಿಗೆ ಆಶ್ಚರ್ಯ. ಚಿಕ್ಕ ಹುಡುಗನೆಂದು ಮಾತು ತಳ್ಳಿ ಹಾಕುವುದಕ್ಕೂ ಆಗಲಿಲ್ಲ. ಮಗನ ಮನಸ್ಸಿಗೆ ಬಂದ ವಿಚಾರ ಸರಿಯಾದದ್ದು ಎಂದು ತಂದೆ ಸುಜಿತ್‌ ಅದಕ್ಕೆ ಪ್ರೋತ್ಸಾಹ ನೀಡಿದರು. ಅಂದಿನಿಂದ ಮಗನ ರೇಸಿಂಗ್‌ಗೆ ಬೇಕಾದ ತಯಾರಿ ಶುರುಮಾಡಿಕೊಂಡರು.ಅಕ್ಬರ್‌ ಇಬ್ರಾಹಿಂ ಅವರಲ್ಲಿ ತರಬೇತಿ ಪಡೆಯುತ್ತಿರುವ ಯಶ್‌ ಆರಾಧ್ಯನಿಗೆ ಫಾರ್ಮುಲಾ–1 ರೇಸರ್‌ ಆಗಬೇಕು ಎಂಬ ಕನಸು. ಕನಸು ಕಾಣುವುದರ ಜತೆಗೆ ಅದಕ್ಕಾಗಿ ಸಾಕಷ್ಟು ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾನೆ. ಬೆಳಿಗ್ಗೆ 6.30ಕ್ಕೆ ಏಳುವ ಯಶ್‌ ಆರಾಧ್ಯನಿಗೆ ತಾಯಿ ಹೇಮಾ ಮೊದಲ ತರಬೇತುದಾರರಂತೆ. ಮಗನ ಕನಸು ನನಸು ಮಾಡಲು ಅವರು ಸಾಕಷ್ಟು ಕಾಳಜಿವಹಿಸುತ್ತಿದ್ದಾರೆ. ಏನು ತಿನ್ನಬೇಕು, ಯಾವ ಪ್ರಮಾಣದಲ್ಲಿ ತಿನ್ನಬೇಕು ಎಂದು ನ್ಯೂಟ್ರಿಷನಿಸ್ಟ್‌ ರೆಯಾನ್‌ ಫೆರ್ನಾಂಡೊ ಮಾಹಿತಿ ನೀಡಿದರೆ, ಫಿಟ್‌ನೆಸ್‌ ಕುರಿತು ರೊನಿ ಸೆಹಗಾಲ್ ಇವರಿಗೆ ತರಬೇತಿ ನೀಡುತ್ತಾರೆ.ಓದಿನ ಮಜಾ...

ರೇಸರ್‌ ಆಗಬೇಕು ಎಂಬ ಕನಸು ಕಟ್ಟಿಕೊಂಡಿದ್ದ ಯಶ್‌ ಓದನ್ನು ಕಡೆಗಣಿಸಿಲ್ಲ. ಓದಿನ ಜತೆಗೆ ತನ್ನ ಆಸಕ್ತಿಯತ್ತ ಗಮನ ನೀಡುತ್ತಿದ್ದಾನೆ. ‘ಶಾಲೆಯಲ್ಲಿ ಮಧ್ಯಾಹ್ನ ಬೇಗ ಊಟ ಮುಗಿಸಿ ಹೋಂವರ್ಕ್ ಮಾಡುತ್ತೇನೆ. ಇದರಿಂದ ನನ್ನ ರೇಸಿಂಗ್‌ ಅಭ್ಯಾಸಕ್ಕೆ ತೊಂದರೆಯಾಗುವುದಿಲ್ಲ. ಶಾಲೆಯಲ್ಲಿ ಟೀಚರ್ ಕೂಡ ಬೆಂಬಲ ನೀಡುತ್ತಾರೆ. ಸ್ಪರ್ಧೆ ಇದ್ದಾಗ ಸ್ನೇಹಿತರು ನೋಟ್ಸ್‌ ಬರೆಯುವುದಕ್ಕೆ ಸಹಾಯ ಮಾಡುತ್ತಾರೆ ಇದರಿಂದ ಓದು ನನಗೆ ಹೊರೆ ಎನಿಸಿಲ್ಲ’ ಎಂಬುದು ಯಶ್‌ ನುಡಿ.ಓದು, ಕಾರ್‌ ರೇಸಿಂಗ್‌ ನಡುವೆ ಈತ ಟೆನ್ನಿಸ್‌ ಆಡುತ್ತಾನೆ. ಕ್ರೀಡೆಯಿಂದ ದೇಹಕ್ಕೆ ಬೇಕಾದ ವ್ಯಾಯಾಮ ಸಿಗುತ್ತದೆ ಎನ್ನುವುದು ಇದಕ್ಕೆ ಕಾರಣ. ಇನ್ನು ಭಾನುವಾರ ಇತರೆ ಚಟುವಟಿಕೆಗೆ ಮೀಸಲು. ಸಿನಿಮಾ, ಆಟ, ಇಷ್ಟದ ಪುಸ್ತಕಗಳನ್ನು ಓದುವುದರಲ್ಲಿ ಸಮಯ ಕಳೆಯುತ್ತದೆ. ಮುಂದಿನ ವರ್ಷ ಮಲೇಷ್ಯಾದಲ್ಲಿ ನಡೆಯುವ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಗೆಲ್ಲುವ ಭರವಸೆಯನ್ನು ಕಂಗಳಲ್ಲಿ ಸೂಸುತ್ತಾನೆ ಪುಟಾಣಿ.

ನಗೆ ರೇಸರ್‌ ಆಗು ಎಂದು ಮನೆಯಲ್ಲಿ ಯಾರೂ ಒತ್ತಾಯ ಮಾಡಿಲ್ಲ. ಅಪ್ಪನ ಜತೆ ಕಾರಲ್ಲಿ ಹೋಗುವಾಗ ನಾನೇ ಹೇಳಿದ್ದು. ಯಾಕೋ ಗೊತ್ತಿಲ್ಲ, ಆ ಕ್ಷಣ ನನಗೆ ಹಾಗೆ ಅನಿಸಿತ್ತು. ಅಪ್ಪ ಬೆಂಬಲ ನೀಡಿದರು. ನನ್ನ ಆಸಕ್ತಿ ಕ್ಷೇತ್ರದ ಕುರಿತು ಮಾಹಿತಿ ನೀಡಿದರು. ಇದರಿಂದ ನನಗೆ ಈ ಕ್ಷೇತ್ರದಲ್ಲಿ ಹೆಚ್ಚು ಗಮನ ನೀಡಲು ಸಾಧ್ಯವಾಯಿತು. ಈ ಕಾರಣಕ್ಕೆ ನನ್ನ ಅಪ್ಪ ಬೆಸ್ಟ್‌ ಅನಿಸುತ್ತಾರೆ.

-–ಯಶ್‌ ಆರಾಧ್ಯ.

ಪ್ರತಿಕ್ರಿಯಿಸಿ (+)