ಬುಧವಾರ, ಜೂನ್ 23, 2021
28 °C

ಪುಟ್ ಬಾಲ್ ಟೌನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇನ್ನೂ ಸೂರ್ಯ ಬೆಳಕಿನ ಕಿರಣಗಳ ಪ್ರಭಾವಳಿ ಕಟ್ಟಿಕೊಂಡು ಮೇಲೆದ್ದಿರಲಿಲ್ಲ; ಆಗಲೇ ಪುಟ್ಟ ಬಾಲಕರ ದಂಡು ಚೆಂಡು ಒದೆಯಲು ಸಜ್ಜಾಗಿ ನಿಂತಿತ್ತು. ಮೊದಲ ಕಿರಣದೊಂದಿಗೇ ಫುಟ್‌ಬಾಲ್ ಉತ್ಸಾಹ ಹರಿಸುವ ಹುಮ್ಮಸ್ಸು ಆ ಮಕ್ಕಳಲ್ಲಿ. ಶೂ ಕಟ್ಟಿಕೊಂಡು ಅಂಗಳಕ್ಕೆ ಚೆಂಡನ್ನು ಉರುಳಿಬಿಟ್ಟ ಕಿನ್ನರ ಲೋಕದ ಕಿಲಾಡಿಯೊಬ್ಬ. ಬಲ ಒಗ್ಗೂಡಿಸಿ ಓಡಿಬಂದು ಒದ್ದ ಇನ್ನೊಬ್ಬ. ಹೊತ್ತೇರುವವರೆಗೆ ಸಾಗಿತ್ತು ಅವರ ಆಟ.ಕಟ್ಟೆಯ ಮೇಲೆ ಕುಳಿತಿದ್ದ ಅಜ್ಜ ಹೇಳಿದ `ಈಗಲೂ ಇಲ್ಲಿನ ಮಕ್ಕಳಲ್ಲಿ ಫುಟ್‌ಬಾಲ್ ಆಸಕ್ತಿ ಕಳೆದುಹೋಗಿಲ್ಲ~ ಎಂದು.ಗಲ್ಲಿಯಿಂದ ಹಿಡಿದು ದೊಡ್ಡ ಬಯಲಿನವರೆಗೆ ಎಲ್ಲೆಡೆ ಚೆಂಡು-ದಾಂಡು ಹಿಡಿದವರ ಹಿಂಡು ಕಂಡು ಬೇಸತ್ತಿರುವ ಇಳಿವಯಸ್ಸಿನ ಡೇವಿಡ್ ಸೆಬಾಸ್ಟಿನ್ ನಿತ್ಯ ಒಂದು ಸುತ್ತು ಬರುವುದು ಆಸ್ಟಿನ್‌ಟೌನ್ ಕಡೆಗೆ. ಇದು ಅವರಿಗೆ ಆತ್ಮೀಯವಾದ ತಾಣ. ಒಲಿಂಪಿಯನ್‌ಗಳಾದ ರಾಮನ್, ಕನ್ನಯ್ಯ, ಷಣ್ಮುಗಮ್, ಅಂಥೋನಿ... ಆಟವನ್ನು ನೆನೆಯುತ್ತಲೇ `ಈಗಿನವರು ಏನು ಆಡುತ್ತಾರೆ; ಆಗ ನೋಡಬೇಕಿತ್ತು!~ ಎಂದು ಇಷ್ಟಗಲ ಕಣ್ಣರಳಿಸಿದಾಗ ವಿಶ್ವದ ಅದ್ಭುತಗಳನ್ನು ಒಟ್ಟಿಗೇ ನೋಡಿದಂಥ ಅಚ್ಚರಿಯ ಭಾವ.ಹೌದು; ಆಸ್ಟಿನ್‌ಟೌನ್ ಅಂಥ ಫುಟ್‌ಬಾಲ್ ಸಾಧಕರನ್ನು ಕಂಡಿದೆ. ಇದೇ ಕಾರಣಕ್ಕಾಗಿ ಉದ್ಯಾನನಗರಿಯ ಈ ಭಾಗವು `ಚಿನ್ನದಂಥ ಫುಟ್‌ಬಾಲ್ ಪ್ರತಿಭೆಗಳ ಗಣಿ~ ಎಂದು ಖ್ಯಾತಿ ಗಳಿಸಿದ್ದು. ಆಸ್ಟಿನ್‌ಟೌನ್ ಫುಟ್‌ಬಾಲ್ ಕ್ರೀಡಾಂಗಣವು ವಿಶ್ವ ಭೂಪಟದಲ್ಲಿ ಮಹತ್ವದ ಕ್ರೀಡಾ ಕೇಂದ್ರಗಳಲ್ಲಿ ಒಂದೆಂದು ದಾಖಲಾಗಿದ್ದು ಕೂಡ ಇದೇ ಕಾರಣಕ್ಕೆ.

 

ಈ ಕ್ರೀಡಾಂಗಣವನ್ನು ಪಿ.ಕೆ.ನಂದನ್ ಕ್ರೀಡಾಂಗಣ ಎಂದು ಕೂಡ ಕರೆಯಲಾಗುತ್ತದೆ. ಭಾರತ ಕಂಡ ಖ್ಯಾತ ಗೋಲ್‌ಕೀಪರ್‌ಗಳಲ್ಲಿ ಒಬ್ಬರಾದ ನಂದನ್ ಇಲ್ಲಿಯೇ ಯುವ ಆಟಗಾರರಿಗೆ ಶಿಸ್ತಿನಿಂದ ತರಬೇತಿ ನೀಡಿ ಬೆಳೆಸಿದ್ದು. ನಂದನ್ ಅವರು ಈ ಅಂಗಳವನ್ನು ಫುಟ್‌ಬಾಲ್ ನಂದನವನ ಎನ್ನುವಂತೆ ಮಾಡಿದ್ದು ವಿಶೇಷ.ಅದೇಕೆ ಬೆಂಗಳೂರಿನ ಇದೇ ಭಾಗದಲ್ಲಿ ಫುಟ್‌ಬಾಲ್ ಇಷ್ಟೊಂದು ಜನಪ್ರಿಯ ಕ್ರೀಡೆ ಆಯಿತು? ಎಂದು ಯೋಚಿಸಿದಾಗ ಉತ್ತರವಾಗಿ ನಿಲ್ಲುವುದು ಕಂಟೋನ್ಮೆಂಟ್. ಇತಿಹಾಸದ ಪುಟಗಳು ತಿರುಗಿದಾಗ ಬ್ರಿಟಿಷ್ ಸೇನಾ ತಾಣದ ಚಿತ್ರ ಕಣ್ಣಮುಂದೆ ಬಂದು ನಿಲ್ಲುತ್ತದೆ. ಆಗಲೇ ಹರಿಯತೊಡಗಿದ್ದು ಚೆಂಡನ್ನು ಒದೆಯುವ ಆಟದ ಉತ್ಸಾಹದ ಪ್ರವಾಹ. ಇಟಲಿಯ ಬಂಧಿಗಳನ್ನು ಇಲ್ಲಿಗೆ ತಂದಾಗಲೇ ಫುಟ್‌ಬಾಲ್ ಕೂಡ ಬಂದಿತು ಎನ್ನುವವರೂ ಇದ್ದಾರೆ. ಆಗ ಬ್ರಿಟಿಷ್ ಅಧಿಕಾರಿಗಳು ಕೈದಿಗಳ ಜೊತೆಗೆ ಫುಟ್‌ಬಾಲ್ ಪಂದ್ಯಗಳನ್ನು ಕೂಡ ಆಡುತ್ತಿದ್ದರೆಂದು ಹೇಳಲಾಗುತ್ತದೆ. ಆದರೆ ಈ ಬಗ್ಗೆ ಸ್ಪಷ್ಟವಾದ ದಾಖಲೆಗಳು ಮಾತ್ರ ಸಿಗುವುದಿಲ್ಲ.ಆದರೆ ಫುಟ್‌ಬಾಲ್ ಈ ಪ್ರದೇಶದಲ್ಲಿಯೇ ಹೆಚ್ಚು ಜನಪ್ರಿಯತೆ ಗಳಿಸಲು ಕೆಲವರು ಇನ್ನೊಂದು ಕಾರಣವನ್ನೂ ನೀಡುತ್ತಾರೆ. ಅದು ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್. ಅಲ್ಲಿ ಕೆಲಸ ಮಾಡುತ್ತಿದ್ದ ಜನರಿಗೆ ಫುಟ್‌ಬಾಲ್ ಮೇಲೆ ಅಪಾರ ಪ್ರೀತಿ. ಜೊತೆಗೆ ಎಪ್ಪತ್ತು ದಶಕಗಳ ಹಿಂದೆ ಸುತ್ತಲೂ ಸಾಕಷ್ಟು ವಿಶಾಲವಾದ ಬಯಲು ಪ್ರದೇಶ. ಆಟಕ್ಕೆ ಅಪಾರವಾದ ಸ್ಥಳಾವಕಾಶ.

 

ರೈಲ್ವೆಯಲ್ಲಿ ಉದ್ಯೋಗಿಗಳಾಗಿದ್ದವರು ಬಿಡುವಿನ ಕಾಲದಲ್ಲಿ ಆಡುತ್ತಿದ್ದ ಆಟ ಫುಟ್‌ಬಾಲ್. ಒಟ್ಟಿನಲ್ಲಿ ಫುಟ್‌ಬಾಲ್ ಇಲ್ಲಿ ಗಟ್ಟಿಯಾಗಿ ಬೇರುಬಿಟ್ಟಿತು.ನಲ್ವತ್ತು ಹಾಗೂ ಐವತ್ತರ ದಶಕದಲ್ಲಿ ಆಸ್ಟಿನ್‌ಟೌನ್‌ನಲ್ಲಿ ನಡೆಯುತ್ತಿದ್ದ ಫುಟ್‌ಬಾಲ್ ಪಂದ್ಯಗಳನ್ನು ಈಗಲೂ ಹಿರಿಯರು ಮೆಲುಕು ಹಾಕುತ್ತಾರೆ. ಬೆಂಗಳೂರು ಮುಸ್ಲಿಮ್ಸ, ಮೈಸೂರು ರೋವರ್ಸ್, ಬೆಂಗಳೂರು ಬ್ಲೂಸ್‌ನಂಥ ತಂಡಗಳ ಆಟವನ್ನು ನೋಡಲು ಸೇರುತ್ತಿದ್ದ ಜನರು ಅಪಾರ.ಈಗಲೂ ಇಲ್ಲಿನ ಅಂಗಳದಲ್ಲಿ ಪಂದ್ಯಗಳು ನಡೆದರೆ ಸೇರುವ ಪ್ರೇಕ್ಷಕರ ಸಂಖ್ಯೆ ಬೆರಗುಗೊಳಿಸುವಂಥದು. ಇದೇ ನಗರದಲ್ಲಿ ರಣಜಿ ಕ್ರಿಕೆಟ್ ನಡೆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭೂತಗನ್ನಡಿ ಹಿಡಿದು ಹುಡುಕಿದರೂ ಕ್ರಿಕೆಟ್ ಅಭಿಮಾನಿಗಳು ಕಾಣಿಸುವುದಿಲ್ಲ. ಅದೇ ಆಸ್ಟಿನ್‌ಟೌನ್‌ನಲ್ಲಿ ಯಾವುದೇ ಮಟ್ಟದ ಫುಟ್‌ಬಾಲ್ ಪಂದ್ಯ ನಡೆದರೂ ನೋಡುಗರ ಸಂಖ್ಯೆ ಸಾವಿರಾರು!ಆಸಕ್ತಿಕರ ಅಂಶವೆಂದರೆ ಆಟದ ನಿಯಮಗಳನ್ನು ಸೂಕ್ಷ್ಮವಾಗಿ ಅರಿತ ಪ್ರೇಕ್ಷಕರು ಇಲ್ಲಿನವರು. ಆದ್ದರಿಂದ ಪಂದ್ಯಗಳಲ್ಲಿ ರೆಫರಿ ಆಗುವವರು ತಪ್ಪುಗಳಿಗೆ ಅವಕಾಶ ನೀಡದಂತೆ ಭಾರಿ ಎಚ್ಚರ ವಹಿಸಬೇಕು. ಸಣ್ಣ ತಪ್ಪು ಮಾಡಿದರೂ ತಕ್ಷಣವೇ ಟೀಕೆಗಳ ಪ್ರಹಾರ ನಡೆಯುತ್ತದೆ. ಪುಟಾಣಿಗಳಿಂದ ಹಿಡಿದು ಇಳಿವಯಸ್ಸಿನವರೂ ಆಟವನ್ನು ನೋಡಿ ಆನಂದಿಸುತ್ತಾರೆ. ಆದ್ದರಿಂದಲೇ ಫುಟ್‌ಬಾಲ್‌ಗೆ ಇಲ್ಲಿ ಪ್ರೋತ್ಸಾಹದಾಯಕ ವಾತಾವರಣ.ಚೆನ್ನಾಗಿ ಆಡುವ ಆಟಗಾರ ಯಾವುದೇ ತಂಡದಲ್ಲಿ ಇರಲಿ ಅವನು ಹೀರೋ ಆಗಿ ಮೆರೆಯುತ್ತಾನೆ. ಅಪಾರ ಅಭಿಮಾನಿಗಳನ್ನೂ ಹೊಂದುತ್ತಾನೆ. ಈ ಭಾಗದಲ್ಲಿ ಒಂದು ಮಾತು ಜನಪ್ರಿಯವಾಗಿದೆ `ಪ್ರತಿ ಮನೆಯಲ್ಲೊಂದು ಫುಟ್‌ಬಾಲ್ ಚೆಂಡು; ಒಂದು ಜೊತೆ ಶೂ ಖಂಡಿತ ಇದೆ~ ಎನ್ನುವ ಮಟ್ಟಿಗೆ ಈ ಆಟದ ಪ್ರೀತಿ ಹರಡಿಕೊಂಡಿದೆ.1948 ಹಾಗೂ 1952ರಲ್ಲಿ ಒಲಿಂಪಿಕ್ಸ್‌ನಲ್ಲಿ ಉದ್ಯಾನನಗರಿಯ ಒಟ್ಟಾರೆ ಒಂಬತ್ತು ಆಟಗಾರರು ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಅವರಲ್ಲಿ ವರದರಾಜನ್ ಹಾಗೂ ವಜ್ರವೇಲು ಮಾತ್ರ ಓಕಳಿಪಾಳ್ಯದವರು. ಏಳು ಒಲಿಂಪಿಯನ್ಸ್ ಮೂಡಿಬಂದಿದ್ದು ಆಸ್ಟಿನ್‌ಟೌನ್‌ನಿಂದ. ಆಸ್ಟಿನ್‌ಟೌನ್ ಫುಟ್‌ಬಾಲ್ ಇತಿಹಾಸದ ಪುಟದಲ್ಲಿ ರಾಮನ್, ಬಷೀರ್ ಹಾಗೂ ಅಂಥೋಣಿ ಕೂಡ ಗಮನ ಸೆಳೆಯುತ್ತಾರೆ.ಇವರನ್ನು ಕಂಟೋನ್ಮೆಂಟ್ ಫುಟ್‌ಬಾಲ್ ಸ್ಟಾರ್‌ಗಳೆಂದು ಕೂಡ ಕರೆಯಲಾಗುತ್ತದೆ.ಆಸ್ಟಿನ್‌ಟೌನ್ ಹಾಗೂ ಮರ್ಫಿಟೌನ್‌ನಲ್ಲಿ ಆಡಿ ಬೆಳೆದ ಫುಟ್‌ಬಾಲ್ ಪ್ರತಿಭೆಗಳು ಗೋವಾ, ಮುಂಬೈ, ಕೋಲ್ಕತ್ತದ ದೊಡ್ಡ ಕ್ಲಬ್‌ಗಳಲ್ಲಿ ಆಡಿದ್ದಾರೆ. ಅವರೆಲ್ಲರಿಗೂ ಆಸ್ಟಿನ್‌ಟೌನ್ ಕ್ರೀಡಾಂಗಣವು ಫುಟ್‌ಬಾಲ್ ಆಟದಲ್ಲಿ ಉತ್ತಮ ಭವಿಷ್ಯ ನೀಡಿದ ಪವಿತ್ರ ಸ್ಥಾನ. ಇಂಥದೊಂದು ಕ್ರೀಡಾ ತಾಣವು ಹಿಂದೆ ಹೇಗೆ ಇತ್ತೊ ಈಗಲೂ ಹಾಗೆಯೇ ಉಳಿದಿದೆ. ಅದಕ್ಕೆ ಕಾಯಕಲ್ಪ ನೀಡುವ ಮೂಲಕ ಉದ್ಯಾನನಗರಿಯ ಭವ್ಯ ಫುಟ್‌ಬಾಲ್ ಇತಿಹಾಸದ ನೆನಪನ್ನು ಸುಂದರವಾಗಿ ಉಳಿಸಿಕೊಳ್ಳುವ ಪ್ರಯತ್ನ ನಡೆಯುವುದು ಅಗತ್ಯವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.