ಬುಧವಾರ, ಏಪ್ರಿಲ್ 21, 2021
27 °C

ಪುಣೆಯಲ್ಲಿ ಸರಣಿ ಸ್ಫೋಟ: ಅಣ್ಣಾ ಬೆಂಬಲಿಗನ ಮೇಲೆ ಶಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಪುಣೆಯ ಜನನಿಬಿಡ ಜಂಗ್ಲಿ ಮಹಾರಾಜ ರಸ್ತೆಯಲ್ಲಿ ಬುಧವಾರ ಸಂಜೆ ಅರ್ಧಗಂಟೆ ಅವಧಿಯಲ್ಲಿ ನಾಲ್ಕು ಸ್ಥಳಗಳಲ್ಲಿ ಕಡಿಮೆ ತೀವ್ರತೆಯ ಸ್ಫೋಟಗಳು ಸಂಭವಿಸಿದ್ದು, `ಭ್ರಷ್ಟಾಚಾರ ವಿರುದ್ಧ ಭಾರತ~ ಸಂಘಟನೆಗೆ ಸೇರಿದ ಅಣ್ಣಾ ಹಜಾರೆ ಬೆಂಬಲಿಗನೊಬ್ಬ ಈ ಕೃತ್ಯ ಎಸಗಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಈ ಸರಣಿ ಸ್ಫೋಟ ಆತಂಕದ ಅಲೆ ಹುಟ್ಟುಹಾಕಿದ್ದು, 2010ರ ಫೆಬ್ರುವರಿ ಯಲ್ಲಿ ಪುಣೆಯ ಒಶೊ ಆಶ್ರಮದ ಸಮೀಪ ನಡೆದಿದ್ದ ಜರ್ಮನ್ ಬೇಕರಿ ಪ್ರಕರಣವನ್ನು ನೆನಪಿಗೆ ತಂದಿದೆ. ಈ ಘಟನೆಯಲ್ಲಿ 15 ಜನ ಮೃತಪಟ್ಟಿದ್ದರು.ಈ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಜೈಲಿನಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರರು ಇರುವು ದರಿಂದ ಇಂಡಿಯನ್ ಮುಜಾಹಿದ್ದೀನ್ ಹಾಗೂ ಇತರ ಭಯೋತ್ಪಾದನಾ ಸಂಘಟನೆಗಳ ಪಾತ್ರದ ಕುರಿತೂ ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಇತ್ತೀಚೆಗೆ ಬಂಧಿಸಲಾಗಿರುವ ಉಗ್ರ ಅಬು ಜುಂದಾಲ್‌ನನ್ನು ಪ್ರಶ್ನಿಸುವ ಸಾಧ್ಯತೆಯಿದೆ.ಆದರೆ, ಪುಣೆಯ ಪೊಲೀಸ್ ಆಯುಕ್ತ ಗುಲಾಬ್‌ರಾವ್ ಪಾಲ್ ಇದು ಭಯೋತ್ಪಾದನಾ ಕೃತ್ಯ ಎಂಬ ಶಂಕೆಯನ್ನು ತಳ್ಳಿಹಾಕಿದ್ದಾರೆ. ಭಯಭೀತರಾಗದಂತೆ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.

ಈ ಮಧ್ಯೆ ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಇದು ಭಯೋ ತ್ಪಾದನಾ ಕೃತ್ಯವಲ್ಲ ಎಂಬ ತೀರ್ಮಾನಕ್ಕೆ ತಕ್ಷಣಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ  ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡಗಳು ಪುಣೆಗೆ ಧಾವಿಸಿವೆ.ದೇಶದ ಅರ್ಧಕ್ಕಿಂತಲೂ ಹೆಚ್ಚು ಭಾಗದಲ್ಲಿ ತಲೆದೋರಿದ್ದ ವಿದ್ಯುತ್ ಬಿಕ್ಕಟ್ಟಿಗೆ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಸುಶೀಲ್ ಕುಮಾರ್ ಶಿಂಧೆ, ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ದಿನವೇ ಈ ಸ್ಫೋಟಗಳು ಸಂಭವಿಸಿದ್ದು ಸಚಿವರು ಮತ್ತಷ್ಟು ಮುಜುಗರ ಅನುಭವಿಸುವಂತಾಗಿದೆ. ಸುಶೀಲ್ ಕುಮಾರ್ ಶಿಂಧೆ ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಬುಧವಾರ ಸಂಜೆ ನಗರಕ್ಕೆ ಆಗಮಿಸಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರು ತಮ್ಮ ಪ್ರಯಾಣ ರದ್ದು ಮಾಡಿದ್ದರು.ಅಣ್ಣಾ ಬೆಂಬಲಿಗನ ಕೈವಾಡ: ಸ್ಫೋಟದ ಘಟನೆಯೊಂದರಲ್ಲಿ ಗಾಯಗೊಂಡ `ಭ್ರಷ್ಟಾಚಾರ ವಿರುದ್ಧ ಭಾರತ~ ಸಂಘಟನೆಯ ದಯಾನಂದ ಪಾಟೀಲ್ ಎಂಬಾತನನ್ನು ಆಸ್ಪತ್ರೆಗೆ ಸೇರಿಸ ಲಾಗಿದ್ದು, ಸ್ಥಳೀಯ ಮಾಧ್ಯಮಗಳು ಈತನೇ ಸ್ಫೋಟ ನಡೆಸಿದ್ದಾನೆ ಎಂದು ವರದಿ ಮಾಡಿವೆ. ಈತ ಜಂಗ್ಲಿ ಮಹರಾರಾಜ್ ರಸ್ತೆಯಲ್ಲಿ ದರ್ಜಿಯ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.ಗಾಯಗೊಂಡ ಪಾಟೀಲ್ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಕೇಕ್ ಬಾಕ್ಸ್ ಒಯ್ಯುತ್ತಿದ್ದ ಎನ್ನಲಾಗಿದೆ. ಆದರೆ, ಭ್ರಷ್ಟಾಚಾರ ವಿರುದ್ಧ ಭಾರತ ಸಂಘಟನೆಯ ಸಂಚಾಲಕಿ ಪ್ರೀತಿ ಶರ್ಮಾ ಮೆನನ್ ಈ ವರದಿಗಳನ್ನು ಅಲ್ಲಗಳೆದಿದ್ದಾರೆ.ಶಂಕಿತ ಪಾಟೀಲ್ ಅಣ್ಣಾ ತಂಡದ ಸದಸ್ಯರು ಧರಣಿ ನಡೆಸುತ್ತಿದ್ದ ಪೆಂಡಾಲ್ ಬಳಿಯೇ ಬುಧವಾರ ಉಪಸ್ಥಿತನಿದ್ದ ಎನ್ನಲಾಗಿದೆ.ಘಟನೆ ವಿವರ: ಪುಣೆಯ ಜನನಿಬಿಡ ಜಂಗ್ಲಿ ಮಹಾರಾಜ ರಸ್ತೆಯ 500 ಮೀಟರ್ ವ್ಯಾಪ್ತಿಯಲ್ಲಿರುವ ನಾಲ್ಕು ಸ್ಥಳಗಳಲ್ಲಿ ಸಂಜೆ ಸಂಜೆ 7.28ರಿಂದ 8 ಗಂಟೆಯ ಅವಧಿಯಲ್ಲಿ ಈ ಸ್ಫೋಟಗಳು ಸಂಭವಿಸಿವೆ.ಮೊದಲ ಸ್ಫೋಟವು ಬಾಲಗಂಧರ್ವ ರಂಗಮಂದಿರ ಹೊರಗೆ, ಎರಡನೆಯದು ಮ್ಯಾಕ್ ಡೊನಾಲ್ಡ್ ಎದುರು,ಮೂರನೆಯದು ದೇನಾ ಬ್ಯಾಂಕ್ ಸನಿಹ ಹಾಗೂ ನಾಲ್ಕನೆಯ ಸ್ಫೋಟ ಗರ್ವಾರೆ ಚೌಕದಲ್ಲಿ ಸಂಭವಿಸಿದೆ. ಈ ಸ್ಫೋಟದ ಸದ್ದು ಪಟಾಕಿ ಸಿಡಿತದಂತೆ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆರು ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಿ ಹೆಚ್ಚಿನ ಅನಾಹುತ ತಪ್ಪಿಸಲಾಯಿತು.ಸ್ಫೋಟ ಸಂಭವಿಸಿದ ತಕ್ಷಣ ಭಯೋತ್ಪಾದನಾ ನಿಗ್ರಹ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಧಾವಿಸಿ ಇಡೀ ಪ್ರದೇಶ ಸುತ್ತುವರೆದರು.ಸಾಂಗ್ಲಿ: ಎರಡು ನಾಡಬಾಂಬ್ ಪತ್ತೆ

ಮುಂಬೈ (ಪಿಟಿಐ): ಪುಣೆಯಲ್ಲಿ ಬುಧವಾರ ರಾತ್ರಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಸಾಂಗ್ಲಿ ಜಿಲ್ಲೆಯ ಗೊಂದಲೇವಾಡಿ ಹಳ್ಳಿಯಲ್ಲಿ ಎರಡು ಶಂಕಿತ ಸ್ಫೋಟ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.