ಪುಣ್ಯಾಶ್ರಮದಲ್ಲಿ ಆರಾಧನಾ ಉತ್ಸವ

7

ಪುಣ್ಯಾಶ್ರಮದಲ್ಲಿ ಆರಾಧನಾ ಉತ್ಸವ

Published:
Updated:
ಪುಣ್ಯಾಶ್ರಮದಲ್ಲಿ ಆರಾಧನಾ ಉತ್ಸವ

ಗದುಗಿನ ಶ್ರೀ ವೀರೇಶ್ವರ ಆಶ್ರಮ ಅಂಗಳದಲ್ಲಿ ಸದಾ ಸಂಗೀತದ ಕಲರವ. ಅಂಧ, ಅನಾಥ ವಿದ್ಯಾರ್ಥಿಗಳ ಕಂಠದಿಂದ ಗಾಳಿಗುಂಟ ತೇಲಿಬರುವ ಸ... ರಿ... ಗ... ಮ... ನಿನಾದ. ಜೊತೆಗೆ ಸಂಗೀತ ವಾದ್ಯಗಳ ಝೇಂಕಾರ. ಸಂಗೀತದ ಯಕ್ಷಲೋಕದಲ್ಲಿ ವಿಹರಿಸುವ ಮುಗ್ಧ ಮಕ್ಕಳ ಕಲಿಯುವ ಶ್ರದ್ಧೆ ಅಂತಹದ್ದು.ಬೆಳಕನ್ನೇ ಕಳೆದುಕೊಂಡವರ ಮನದಲ್ಲಿ ಅಂಧತ್ವವನ್ನು ಸವಾಲಾಗಿ ಸ್ವೀಕರಿಸುವ ಛಲ ತುಂಬಿದ ಅದಮ್ಯ ಚೇತನವೇ ಪಂಡಿತ ಪುಟ್ಟರಾಜ ಗವಾಯಿಯವರು. ಸ್ವತಃ ಅಂಧರಾಗಿದ್ದ ಅವರು ಸಂಗೀತದಲ್ಲಿ ಎತ್ತಿದ ಕೈ. ಡಾ. ಪಂಚಾಕ್ಷರಿ ಗವಾಯಿಗಳ ಶಿಷ್ಯರಾಗಿ, ಬಳಿಕ ವೀರೇಶ್ವರ ಪುಣ್ಯಾಶ್ರಮವನ್ನೇ ಕರ್ಮಭೂಮಿ ಮಾಡಿಕೊಂಡು ಕೀರ್ತಿ ಸಂಪತ್ತು, ಪ್ರಶಸ್ತಿಗಳಿಗೆ ದುಂಬಾಲು ಬೀಳದೆ ಹಿಂದುಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತಗಳೆರಡರಲ್ಲೂ ಪರಿಣತಿ ಸಾಧಿಸಿದವರು.ಹೊಸ ಹೊಸ ಚೀಜುಗಳನ್ನು ರಚಿಸಿದ್ದ ಅವರಿಗೆ ಹಾರ‌್ಮೋನಿಯಂ, ವಯಲಿನ್, ಸಿತಾರ್, ವೀಣೆ, ಮ್ಯಾಂಡೋಲಿನ್, ತಬಲಾ ಸೇರಿದಂತೆ ಅನೇಕ ವಾದ್ಯಗಳನ್ನು ಲೀಲಾಜಾಲವಾಗಿ ನುಡಿಸುವ ಸಾಮರ್ಥ್ಯ ಇತ್ತು. ಈ ಜ್ಞಾನವನ್ನು ನಿಷ್ಕಲ್ಮಶವಾಗಿ ಅನಾಥ, ಅಂಧ ಮಕ್ಕಳಿಗೆ ಧಾರೆ ಎರೆದವರು. ಅಂಧರ ಬಾಳು ಸಾಮಾಜಿಕ ಸಮಸ್ಯೆಯಾಗದೇ ಸಮಾಜಮುಖಿ ಅಭಿವೃದ್ಧಿಗೆ ಕಾರಣವಾಗಬೇಕೆಂಬುದು ಅವರ ಮಹದಾಸೆಯಾಗಿತ್ತು. ಅದಕ್ಕೆ ತಕ್ಕಂತೆ ವೀರೇಶ್ವರ ಪುಣ್ಯಾಶ್ರಮ ಗಾಯನ, ವಾದನ, ನೃತ್ಯ ನಾಟಕ ಕಲೆಗಳ ಮೂಲಕ ನಾಡಿನ ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಂಡಿದೆ.ಅವರ ಸಾಧನೆ, ವ್ಯಕ್ತಿತ್ವಕ್ಕೆ ಅವರೇ ಸಾಟಿ. ಜನಸಾಮಾನ್ಯ ಭಕ್ತರಿಗೆ ಅವರು ಪುಟ್ಟಯ್ಯಜ್ಜ. ಸಂಗೀತ ಕ್ಷೇತ್ರದವರಿಗೆ ಪುಟ್ಟರಾಜ ಕವಿ ಗವಾಯಿ. ಅನಾಥ ಮಕ್ಕಳಿಗೆ ಆಶಾಕಿರಣ. ಅವರದ್ದು ಮಾನವೀಯ ಸ್ಪರ್ಶದ ಸಮಾಜ ಸೇವೆ.ನಿನ್ನೆಯಿಂದ ಗದಗದ ವೀರೇಶ್ವರ ಪುಣ್ಯಾಶ್ರಮದಲ್ಲಿ ಡಾ. ಪಂಚಾಕ್ಷರಿ ಗವಾಯಿಗಳ 68ನೇ ಮತ್ತು ಡಾ.ಪುಟ್ಟರಾಜ ಗವಾಯಿಗಳ 2ನೇ ವರ್ಷದ ಆರಾಧನ ಮಹೋತ್ಸವ ಆರಂಭವಾಗಿದ್ದು, ಶುಕ್ರವಾರದ ವರೆಗೆ ನಡೆಯಲಿದೆ.ಈ ಸಲ ಪಂಚಾಕ್ಷರ ಪ್ರತಿಷ್ಠಾನದ ವತಿಯಿಂದ ಪುಟ್ಟರಾಜ ಗವಾಯಿ ಕಲ್ಕೆರಿ ಅವರಿಗೆ 25 ಸಾವಿರ ರೂ ಪುರಸ್ಕಾರ, ರೇವಣ್ಣಸಿದ್ಧಯ್ಯ ಹೊಸೂರುಮಠ (ರಂಗಭೂಮಿ ಕಲಾವಿದ), ವಳ್ಳಿಯಪ್ಪ ಗವಾಯಿ ಕುರುಬಗೊಂಡ, ಅಂಧ ಕಲಾವಿದ ವಿರೂಪಾಕ್ಷಯ್ಯ ಶಾಸ್ತ್ರಿ ಹಿರೇಮಠ ಅವರಿಗೆ ಹಾನಗಲ್ ಕುಮಾರ ಸ್ವಾಮಿ ಪ್ರತಿಷ್ಠಾನದ ಕುಮಾರೇಶ್ವರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.ಈ ಬಾರಿಯ ಅಹೋರಾತ್ರಿ ಸಂಗೀತೋತ್ಸವದಲ್ಲಿ ಪಂಚಾಕ್ಷರಿ ಸ್ವಾಮಿ ಮತ್ತಿಕಟ್ಟಿ (ಧಾರವಾಡ), ಸಿದ್ಧರಾಮ ಸ್ವಾಮಿ ಕೊರವಾರ್ (ಭೋಪಾಲ್), ರಾಜು ಗುರುಸ್ವಾಮಿ ಕಲ್ಕೇರಿ (ಗದಗ), ರಘುನಾಥ್ ನಾಕೋಡ, ಎಂ.ವೆಂಕಟೇಶ್ ಕುಮಾರ್, ಡಿ.ಕುಮಾರ್ ದಾಸ, ಚಂದ್ರ ಲೇಖ, ಬಾಲಚಂದ್ರ ನಾಕೋಡ, ರವೀಂದ್ರ ಯಾವಗಲ್ (ತಬಲಾ) , ಬಸವರಾಜ್ ಹೊಂಗಲ್, ಅಕ್ಕಮಹಾದೇವಿ ಮಠ (ವಯಲಿನ್), ಈಶ್ವರ್ (ವಯಲಿನ್), ನರಸಿಂಹಲು ವಡವಾಟಿ, ಸಂಗೀತಾ ಕಟ್ಟಿ, ಶ್ರದ್ಧಾ ಜೈನ್ (ಭೋಪಾಲ್), ಗಣಪತಿ ಭಟ್ ಹಾಸಣಗಿ, ಎಂ. ಮನೀಶ್ ಮತ್ತಿತರ ಹೆಸರಾಂತ ಕಲಾವಿದರು ಭಾಗವಹಿಸುತ್ತಿದ್ದಾರೆ.

ಮಾಹಿತಿಗೆ: 99023 67099.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry