ಪುಣ್ಯಾ ಬರತೈತಿ, ಸೆರೆ ಅಂಗಡಿ ಮುಚ್ಚಿಬಿಡ್ರಿ...

7

ಪುಣ್ಯಾ ಬರತೈತಿ, ಸೆರೆ ಅಂಗಡಿ ಮುಚ್ಚಿಬಿಡ್ರಿ...

Published:
Updated:
ಪುಣ್ಯಾ ಬರತೈತಿ, ಸೆರೆ ಅಂಗಡಿ ಮುಚ್ಚಿಬಿಡ್ರಿ...

ಮುದ್ದೇಬಿಹಾಳ: `ನಮ್ಮೂರಾಗ ಸಾರಾಯಿ ಅಂಗ್ಡಿ ಬಂದಾಗಿ ಒಂದು ತಿಂಗಳಾತು, ನಮ್ಮೂರಾಗ ಜಗಳ ನಡದಿಲ್ಲ, ನಮ್ಮ ಹುಡುಗರು ಸಂಜಿ ಅನ್ನೂದ್ರಾಗ ಮನ್ಯಾಗ ಇರ‌್ತಾರ; ನಿಮಗ ಪುಣ್ಯಾ ಬರತೈತಿ, ಅದನ್ನ ಕಾಯಂ ಮುಚ್ಚಿಬಿಡ್ರಿ~ ಎಂದು ಮಾಲಿಂಗವ್ವ ಪಡಶೆಟ್ಟಿ ಹೇಳುವಾಗ, ಆ ತಾಯಿಯ ಕಣ್ಣಲ್ಲಿ ನೀರಿತ್ತು.ಮದ್ಯದ ಅಂಗಡಿಯನ್ನು ಶಾಶ್ವತವಾಗಿ ಮುಚ್ಚುವಂತೆ ಶುಕ್ರವಾರ ತಂಗಡಗಿ ಗ್ರಾಮದ ಮಹಿಳೆಯರು ಕೆಲ ಹೊತ್ತು ತಹಸೀಲ್ದಾರ ಕಚೇರಿ ಆವರಣದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ಮತ್ತೆ ಸಾರಾಯಿ ಅಂಗಡಿಯನ್ನು ಆರಂಭಿಸಲು ಅನುಮತಿ ನೀಡಬಾರದು ಎಂದು ಅವರು ತಹಸೀಲ್ದಾರರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.ಸುಮಾರು ಹತ್ತು ವರ್ಷಗಳಿಂದ ತಂಗಡಗಿ ಗ್ರಾಮದಲ್ಲಿ ನಡೆಯುತ್ತಿದ್ದ ಸಾರಾಯಿ ಅಂಗಡಿಯನ್ನು  ಮುಚ್ಚುವಂತೆ ಗ್ರಾಮಸ್ಥರ, ಯುವಕರ, ಯುವಕ ಸಂಘಗಳ, ಮಹಿಳಾ ಸಂಘಗಳು ಸತತ ಹೋರಾಟ ನಡೆಸಿದ ಫಲವಾಗಿ ಇಲ್ಲಿನ ಸಾರಾಯಿ ಅಂಗಡಿ ಕಳೆದ 30 ದಿನಗಳಿಂದ ಮುಚ್ಚಿದೆ.ಈ ಅವಧಿಯಲ್ಲಿ ಗ್ರಾಮದಲ್ಲಿ ಶಾಂತಿ ನೆಲೆಸಿದ್ದು, ಮಹಿಳೆಯರು ನೆಮ್ಮದಿಯಿಂದ ಇದ್ದಾರೆ.  ಗ್ರಾಮದ ಕೆಲವರು ಸಾರಾಯಿ ಅಂಗಡಿಯವರ ಮಧ್ಯವರ್ತಿಗಳಂತೆ ವರ್ತಿಸುತ್ತಿದ್ದು, ಸಾರಾಯಿ ಅಂಗಡಿಯವರು ನೀಡುವ ಉಚಿತ ಸಾರಾಯಿ ಹಾಗೂ ಹಣದ ಆಮಿಷಗಳಿಗೆ ಬಲಿಯಾಗಿ, ಮತ್ತೆ ಗ್ರಾಮದಲ್ಲಿ ಮದ್ಯದ ಅಂಗಡಿಯನ್ನು ಆರಂಭಿಸಬೇಕು ಎಂದು  ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಮನವಿಯನ್ನು ಪುರಸ್ಕರಿಸಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.`ಗ್ರಾಮದಲ್ಲಿ ಮತ್ತೆ ಮದ್ಯದ ಅಂಗಡಿ ತಲೆ ಎತ್ತುವುದಕ್ಕೆ ಗ್ರಾಮಸ್ಥರು ಹಾಗೂ ಮಹಿಳಾ ಸಂಘಗಳ ವಿರೋಧವಿದೆ; ಊರಲ್ಲಿ ಶಾಶ್ವತವಾಗಿ ಮದ್ಯದ ಅಂಗಡಿ ಬಂದ್ ಮಾಡಬೇಕು. ಎಂದು ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ 2011ರ ಜೂನ್ 24ರಂದು ನಡೆದ ಸರ್ವ ಸದಸ್ಯರ ಸಭೆಯಲ್ಲಿ ಠರಾವು ಪಾಸು ಮಾಡಲಾಗಿದೆ. ಮತ್ತೆ ಸಾರಾಯಿ ಅಂಗಡಿ ಪ್ರಾರಂಭಿಸಲು ಅನುಮತಿ ನೀಡಿದರೆ ಪ್ರಜಾಪ್ರಭುತ್ವದ ಪ್ರತಿನಿಧಿಗಳ ಹಕ್ಕನ್ನು ಅವಮಾನಿಸಿದಂತಾಗುತ್ತದೆ. ಇದಾದ ಮೇಲೂ ಅನುಮತಿ ನೀಡಿದರೆ, ಗ್ರಾಮದ ಸಮಸ್ತ ಜನತೆ ತಾಲ್ಲೂಕು ಆಡಳಿತ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ~ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.ಗ್ರಾ. ಪಂ. ಸದಸ್ಯ ಸಂಗಣ್ಣ ಅಳ್ಳಗಿ, ರಾಜುಗೌಡ ಕೊಂಗಿ, ಶ್ರೀಶೈಲ ಮರೋಳ, ಶ್ರೀಶೈಲ ಅಳ್ಳಗಿ, ಮಲಕಾಜಪ್ಪ ಹೊಳಿ, ಮಂಜುನಾಥ ಹುಣಶ್ಯಾಳ, ಬಾಲು ಅಂಬಿಗೇರ, ನವೀನ ಉಂಡಿ, ಸಂಗಣ್ಣ ದೇವರಮನಿ, ಶಿವು ಕೋಳೂರ, ಬಸು ಚಲವಾದಿ, ಬೂತಾಳೆಪ್ಪ ಒಡೆಯರ, ನಿಂಗನಗೌಡ ಹುಣಶ್ಯಾಳ, ಸದಾನಂದ ರುದ್ರಸ್ವಾಮಿಮಠ, ಬಸವರಾಜ ಮಂಡಿ, ಗುರುರಾಜ ಕುಲಕರ್ಣಿ,  ಹನುಮಂತ ನಲವಡೆ, ಖಾದರಸಾಬ ವಾಲಿಕಾರ, ಬಸವರಾಜ ತಾಳಿಕೋಟಿ ಸೇರಿದಂತೆ ಮಹಿಳಾ ಸಂಘದ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry