ಗುರುವಾರ , ಅಕ್ಟೋಬರ್ 17, 2019
26 °C

ಪುತ್ತಿಗೆ ಶ್ರೀಗಳಿಗೆ ಬಹಿಷ್ಕಾರ ಬೇಡ

Published:
Updated:

 ಈ ಬಾರಿಯ ಸೋದೆ ಮಠದ ಪರ್ಯಾಯದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರನ್ನು ಬಹಿಷ್ಕರಿಸಿ ಪರ್ಯಾಯ ನಡೆಸಲು ನಿರ್ಧರಿಸಿರುವುದು ಅತ್ಯಂತ ಖೇದಕರ ಹಾಗೂ ಖಂಡನೀಯ.ಪುತ್ತಿಗೆ ಶ್ರೀಗಳನ್ನು ಬಹಿಷ್ಕರಿಸುವ ಹಕ್ಕು ಯಾರಿಗೂ ಇಲ್ಲ ಎಂದು ಈಗಾಗಲೇ ನ್ಯಾಯಾಲಯ ತೀರ್ಪು ನೀಡಿದೆ.  ಸೋದೆ ಮಠದವರು ಶ್ರೀಗಳನ್ನು ಬಹಿಷ್ಕರಿಸಿದರೆ ಅದು ನ್ಯಾಯಾಲಯ ನಿಂದನೆಯಾಗುತ್ತದೆ. ಅದಕ್ಕೆ ಮಠದ ಕಾರ್ಯದರ್ಶಿ ಹಾಗೂ ದಿವಾಣರು ಹೊಣೆಯಾಗುತ್ತಾರೆ. ಒಬ್ಬ ವ್ಯಕ್ತಿ ವಿದೇಶಕ್ಕೆ ಹೋದರೆಂಬ ಕಾರಣಕ್ಕೆ ಅವರ ಸಾಮಾಜಿಕ, ಧಾರ್ಮಿಕ ಹಾಗೂ ಜನ್ಮ ಅಥವಾ ಸಂಸ್ಥಾತ್ಮಕ ಸ್ಥಾನವನ್ನು ನಿರಾಕರಿಸುವ ಮತ್ತು ಸ್ಥಾನಮಾನದ ಹಕ್ಕಿನಿಂದ ಬಹಿಷ್ಕರಿಸುವುದು ದಂಡನಾರ್ಹ ಅಪರಾಧವಾಗುತ್ತದೆ ಎಂದು   ಪುತ್ತಿಗೆ ಶ್ರೀಗಳ (2008-2010) ಪೀಠಾರೋಹಣ ಸಂದರ್ಭದಲ್ಲಿ ಕಾನೂನು ತಜ್ಞರಾದ ಬಿ.ವಿ.ಆಚಾರ್ಯ ಹಾಗೂ ರಾಮಾ ಜೋಯಿಸ್ ಮತ್ತಿತರರು ತಿಳಿಸಿದ್ದರು. ಸೋದೆ ಮಠದವರು ಈ ಅಭಿಪ್ರಾಯಗಳನ್ನು ಗಮನಿಸುವುದು ಅಗತ್ಯ.ಭಾವಿ ಪರ್ಯಾಯ ಪೀಠಾಧೀಶರಾದ ಸೋದೆಯ ಯತಿಗಳು  ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು. ಇಲ್ಲವಾದರೆ ಅವರ ಭವಿಷ್ಯವನ್ನು ಅವರೇ ಹಾಳು ಮಾಡಿಕೊಳ್ಳುವ ದಿನ ಬಂದೀತು ಎಂಬ ಎಚ್ಚರಿಕೆಯ ಮಾತುಗಳನ್ನು ಉಡುಪಿ ಅಷ್ಟಮಠದ ಮೇಲಿನ ಗೌರವ ಮತ್ತು ಕಾಳಜಿಯಿಂದ ಅತ್ಯಂತ ವೇದನೆಯಿಂದ ನಿವೇದಿಸಿಕೊಳ್ಳುತ್ತೇನೆ.

Post Comments (+)