ಪುತ್ತೂರು ತಾಲ್ಲೂಕಿನ ಶಾಪಗ್ರಸ್ತರಿಗೆ ಪರಿಹಾರ ಇಲ್ಲವೇ?

7

ಪುತ್ತೂರು ತಾಲ್ಲೂಕಿನ ಶಾಪಗ್ರಸ್ತರಿಗೆ ಪರಿಹಾರ ಇಲ್ಲವೇ?

Published:
Updated:

ಮುಖ್ಯಮಂತ್ರಿ ಸದಾನಂದಗೌಡರು ಪುತ್ತೂರು ತಾಲ್ಲೂಕಿನವರು. ಇಲ್ಲಿನ ಕಡಬ, ಮರ್ದಾಳ, ಅಲಂಕಾರು, ಕುಟ್ರುಪಾಡಿ ಸೇರಿದಂತೆ ಹತ್ತಕ್ಕಿಂತ ಹೆಚ್ಚು ಗ್ರಾಮಗಳಿಗೆ ಅವರು ಒಂದು ಸಲ ಭೇಟಿ ನೀಡಿದರೆ ಘನಘೋರ ಎನಿಸುವಂತಹ ದೃಶ್ಯಗಳನ್ನು ನೋಡಬೇಕಾಗುತ್ತದೆ. ಪ್ರತಿ ಮನೆಯಲ್ಲೂ ಹತ್ತಿಪ್ಪತ್ತು ವರ್ಷಗಳಿಂದೀಚೆಗೆ ಜನಿಸಿದ ಬಹುತೇಕರು ಬುದ್ಧಿಮಾಂದ್ಯರಾಗಿ, ಯಾರೋ ತಂದು ಕೊಡುವ ತುತ್ತಿಗಾಗಿ ಕಾಯುತ್ತಿರುತ್ತಾರೆ. ಕೆಲವರ ಮೈ ಚರ್ಮರೋಗದಿಂದ ಕರಗಿ ನೀರಿಳಿಯುತ್ತಿದೆ, ಕೆಲವರು ಮೂಗರು.ಅಂಗವೈಕಲ್ಯದಿಂದ ನಡೆಯಲಾಗದವರು. ಒಮ್ಮೆ ಮಾತ್ರ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಇಲ್ಲಿಗೆ ಬಂದಿದ್ದರು ಎನ್ನುವುದನ್ನು ಬಿಟ್ಟರೆ ಯಾವ ಜನಪ್ರತಿನಿಧಿಯೂ ಈ ಗ್ರಾಮಗಳತ್ತ ತಲೆ ಹಾಕಿಲ್ಲ.ಇಲ್ಲಿ ಜನ ಜೀವನದ ಮೇಲೆ ಇಂಥ ಭಯಾನಕ ಪರಿಣಾಮ ಬೀರ್ದ್ದಿದು ಗೇರು ತೋಟಗಳಿಗೆ ವೈಮಾನಿಕ ಸಿಂಪಡಣೆ ಮಾಡಿದ ಎಂಡೋಸಲ್ಫಾನ್ ಎಂಬ ಮಹಾಮಾರಿ.

 

ಇದರ ಬಾಧೆಗೊಳಗಾದವರಿಗೆ ಬೆಳ್ತಂಗಡಿ ತಾಲೂಕಿನಲ್ಲಿ ಸರ್ಕಾರ ಒಂದಿಷ್ಟು ಪರಿಹಾರ ಕೊಟ್ಟಿದೆ; ಪುತ್ತೂರು ತಾಲೂಕಿನಲ್ಲಿ ಬಿಡಿಗಾಸನ್ನೂ ಕೊಟ್ಟಿಲ್ಲ. ಎಲ್ಲ ಮನೆಗಳಲ್ಲೂ ಇಂಥ ಮಾರಿ ಕಾಡಿದಾಗ ಜನ ಮೊರೆ ಹೋದದ್ದು ಜೋತಿಷಿಗಳಿಗೆ, ಮಂತ್ರವಾದಿಗಳಿಗೆ.

 

ಅದರ ಪರಿಹಾರಕ್ಕಾಗಿ ಅವರು ಸೂಚಿಸಿದ ಹೋಮ,ಹವನಗಳಿಗಾಗಿ ಸರ್ವಸ್ವವನ್ನೂ ಕಳೆದುಕೊಂಡವರಿದ್ದಾರೆ. ಇವರಿಗೆ ಉಚಿತ ಚಿಕಿತ್ಸೆ ನೀಡಲು ಸರ್ಕಾರ ಏನನ್ನೂ ಮಾಡಿಲ್ಲ.

 ಒಂದೊಂದು ಮನೆಯಲ್ಲಿಯೂ ನಾಲ್ಕಕ್ಕಿಂತ ಹೆಚ್ಚು ಅಂಗವಿಕಲರಿದ್ದಾರೆ. ಸಮೀಪದ ಬೆಥನಿ ಆಶ್ರಮದವರು ತೀರಾ ನಿರ್ಗತಿಕ ಕುಟುಂಬಗಳ ಅರವತ್ತು ಮಕ್ಕಳಿಗೆ ಆಶ್ರಯ ನೀಡಿ ಅನ್ನ, ಔಷಧ ಕೊಡುತ್ತಿದ್ದಾರೆ. ಉಳಿದಂತೆ ಯಾವ ಸಂಘಟನೆಗಳೂ ಏನನ್ನೂ ಮಾಡಿಲ್ಲ.

 

ಕೆಲವು ಕುಟುಂಬಗಳಲ್ಲಿ ಯುವಕರಿಗೆ ಒತ್ತಾಯಕ್ಕೆ ಮದುವೆ ಮಾಡಿದ್ದಾರೆ. ಆದರೆ ಅವರಿಗೆ ಪುರುಷತ್ವವೇ ಇಲ್ಲವೆಂಬ ಮಾತು ಕೇಳಿ ಬಂದಿದೆ. ಮದುವೆಯಾದ ಯುವತಿಯರಲ್ಲಿ ಬಂಜೆತನ ಕಾಡುತ್ತಿದೆ, ಗರ್ಭ ಧರಿಸಿದರೆ ಜನಿಸುವ ಮಗು ಬಹುತೇಕ ಅಂಗವಿಕಲನೋ ಇಲ್ಲವೇ ಬುದ್ಧಿವಿಕಲನೋ ಆಗಿರುವುದು ನಿಶ್ಚಿತ.

 

ಒಂದು ಲೆಕ್ಕಾಚಾರ ಹೇಳುವಂತೆ ಹತ್ತು ಸಾವಿರಕ್ಕಿಂತ ಹೆಚ್ಚು ಸಂತ್ರಸ್ತರು ಈ ತಾಲ್ಲೂಕಿನಲ್ಲಿದ್ದರೂ ಸರ್ಕಾರಕ್ಕೆ ಅದರ ಬಿಸಿ ತಟ್ಟಿಲ್ಲ. ಬೆಳ್ತಂಗಡಿ ತಾಲೂಕಿನ ಶ್ರೀಧರಗೌಡ ಸ್ವತಃ ಎಂಡೋಸಲ್ಫಾನ್ ಪೀಡಿತನಾದರೂ ಈ ಸಂತ್ರಸ್ತರಿಗೆ ನ್ಯಾಯ ಕೊಡಿ ಎಂದು ಏಕಾಂಗಿಯಾಗಿ ಹೋರಾಟ ಮಾಡಿ ಕಡೆಗೂ ಬೆಳ್ತಂಗಡಿಯ ಮಟ್ಟಿಗೆ ಸರ್ಕಾರದ ಕಣ್ತೆರೆಸುವಲ್ಲಿ ಸಫಲರಾದವರು.

 

ಆದರೆ ಪುತ್ತೂರು ತಾಲೂಕಿನ ಈ ಅಮಾಯಕರಿಗೆ ಏನಿದೆ ಪರಿಹಾರ ಎಂಬುದು ಅವರ ಪ್ರಶ್ನೆ. ಸರ್ಕಾರಕ್ಕೆ ನೆರವಾಗುವ ಇಚ್ಛಾಶಕ್ತಿ ಇಲ್ಲವಾದರೆ ಈ ಶಾಪಗ್ರಸ್ತರಿಗೆ ಸಾಮೂಹಿಕ ಆತ್ಮಹತ್ಯೆಗೆ ಅವಕಾಶ ಮಾಡಿಕೊಡಲಿ.ಅಥವಾ ದಯಾಮರಣಕ್ಕೆ ಸರ್ಕಾರವೇ ವ್ಯವಸ್ಥೆ ಮಾಡಲಿ ಎಂಬುದು ಅವರು ಪುತ್ತೂರು ತಾಲ್ಲೂಕಿನ ಸಂತ್ರಸ್ತರ ಸಲುವಾಗಿ ಮಾಡಿಕೊಳ್ಳುತ್ತಿರುವ ಮನವಿ.ನೆರೆಯ ಕೇರಳದಲ್ಲಿ ಇಂತಹ ಸಂತ್ರಸ್ತರಿಗೆ ಎರಡು ಸಾವಿರ ರೂಪಾಯಿ ಮಾಸಿಕ ವೇತನ ಸಿಗುತ್ತದೆ. ಮೂವತ್ತು ಕಿಲೋ ಅಕ್ಕಿ ಉಚಿತವಾಗಿ ಕೊಡುತ್ತಾರೆ. ಇಲ್ಲಿಯ ತಹಶೀಲ್ದಾರರಲ್ಲಿ ಕೇಳಿದರೆ ಈ ಕುಟುಂಬದ ಆದಾಯ ನೋಡಿದರೆ ಅವರಿಗೆ ಏನೂ ಕೊಡುವಂತಿಲ್ಲ ಎನ್ನುತ್ತಾರೆ.ಜಿಲ್ಲಾ ಆಸ್ಪತ್ರೆಯಲ್ಲಿ ಇಂತಹವರಿಗೆ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಇರಬಹುದಾದರೂ ಎಂಬತ್ತು ಕಿಲೋಮೀಟರ್ ದೂರದ ಮಂಗಳೂರಿಗೆ ಹೋಗಲು ಅನೇಕರಿಗೆ ಬಸ್ ಚಾರ್ಜಿನ ಖರ್ಚಿಗೆ  ಹಣವಿಲ್ಲ.

 

ಅನೇಕ ಬಡಪಾಯಿಗಳ ಮನೆಗಳಿಗೆ ಸುಗಮ ರಸ್ತೆಇಲ್ಲ. ಇನ್ನು ವಿದ್ಯುತ್ ಗಗನ ಕುಸುಮ. ಇಲ್ಲಿನ ಕೊಕ್ಕಡದ ಸರ್ಕಾರಿ ಆಸ್ಪತ್ರೆಯಲ್ಲಿ ಈ ಸಂತ್ರಸ್ತರಿಗೆ ಚಿಕಿತ್ಸೆಗೆ ಒಳ್ಳೆಯ ವ್ಯವಸ್ಥೆಯಿದೆ ಎಂಬ ಸರ್ಕಾರದ ಮಾತು ನಂಬಿ ಹೋದರೆ ಅಲ್ಲಿರುವ ವೈದ್ಯರು ಯಾರಿಗೂ `ಕ್ಯಾರೇ~ ಅನ್ನುವುದಿಲ್ಲ ಎನ್ನುವುದು ಹಲವರ ಅನುಭವ.

 

ಈ ಸಂತ್ರಸ್ತರ ನೋವು, ನರಳಾಟಗಳಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿಸರ್ಕಾರಕ್ಕೆ ಇಚ್ಛಾಶಕ್ತಿಯಿದ್ದರೆ, ಪುತ್ತೂರು ತಾಲ್ಲೂಕಿನಲ್ಲಿ ವೈಜ್ಞಾನಿಕ ಅಧ್ಯಯನ ನಡೆಯಬೇಕೆನ್ನುತ್ತಾರೆ ಶ್ರೀಧರಗೌಡರು. ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿಸಿ ಇಂಥದೇ ಮಗು ಜನಿಸುವ ಸೂಚನೆ ಸಿಕ್ಕಿದ್ದರೆ ಗರ್ಭಪಾತ ಮಾಡಿಸಲು ಸರ್ಕಾರ ಮುಂದಾಗಬೇಕು. ಇವರಿಗೆಲ್ಲ ಉಚಿತ ವೈದ್ಯಕೀಯ ನೆರವು ಸಿಗಬೇಕು.

 

ನೋಡಿಕೊಳ್ಳಲು ಯಾರೂ ಇಲ್ಲದವರಿಗೆ ಪರಿಹಾರ ಕೇಂದ್ರಗಳಾಗಬೇಕು. ಜೀನ್ಸ್ ಪರೀಕ್ಷೆ ಮಾಡಿಸಿ ದೋಷವಿದ್ದವರು ಸಂತಾನ ಪಡೆಯದಂತೆ ನಿರ್ಬಂಧಿಸಬೇಕು.ಶ್ರೀಧರಗೌಡರು ಇಂತಹ ಬೇಡಿಕೆಗಳ ಪಟ್ಟಿ ಮಾಡಿ ಸರ್ಕಾರದ ಬಾಗಿಲು ತಟ್ಟಲು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಆದರೆ ಸರ್ಕಾರ ಸ್ಪಂದಿಸಿಲ್ಲ. ಇಲ್ಲಿ ಬಹುತೇಕ ಸಂತ್ರಸ್ತರಿಗೂ ಯಾವುದೇ ನೆರವಿನ ಭರವಸೆಯೇ ಇಲ್ಲ. ನೆಮ್ಮದಿಯಿಂದ ಬದುಕುವ ನಮ್ಮ ಹಕ್ಕನ್ನು ಕಸಿದುಕೊಂಡಿದೆಯೆಂದು ಸರ್ಕಾರದತ್ತ ಬೆರಳು ಮಾಡುತ್ತಿದ್ದಾರೆ.

 

ಕನಿಷ್ಠ ಆಸ್ಪತ್ರೆಗೆ ಹೋಗಿ ಬರಲು ಒಂದು ಆಂಬುಲೆನ್ಸ್ ಕೂಡ ಇಲ್ಲವೆಂಬುದು ಕಠೋರ ಸತ್ಯ. ಇಲ್ಲಿ ಬೀಸುವ ಗಾಳಿಯಲ್ಲಿ, ಕುಡಿಯುವ ನೀರಿನಲ್ಲಿ ಎಂಡೋಸಲ್ಫಾನಿನ ವಿಷ ಕಣಗಳಿವೆ.ಅದರ ಫಲವಾಗಿ ಸತ್ತ ಮೀನು, ಕಪ್ಪೆಗಳನ್ನು ತಿಂದು ಕೇರೆ ಹಾವುಗಳ ಸಂತತಿ ನಾಶವಾಗಿದೆ. ಪರಿಣಾಮ ಇಲಿ ಹೆಗ್ಗಣಗಳ ಹಾವಳಿ ಮಿತಿಮೀರಿದೆ. ಯಾವುದೇ  ಕೃಷಿ ಮಾಡಲಿಕ್ಕೂ ಸಾಧ್ಯವಾಗುತ್ತಿಲ್ಲ. ಮಲಗಿದಲ್ಲೇ  ಜೀವಚ್ಛವಗಳಾದವರಿಗೂ ಬದುಕುವ ಗಟ್ಟಿತನಕ್ಕೆ ಅಡೆತಡೆಗಳಿಲ್ಲ. ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳೇ ಹೆಚ್ಚಿನ ಬಾಧಿತರು. ಮುಂದೇನು? ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಇದಕ್ಕೆ ಉತ್ತರ ಕೊಡಬೇಕಾದದ್ದು ಸರ್ಕಾರ.ಕುಸಿಯುತ್ತಿರುವ ಮನೆಗಳಿಂದ ಮಿಡಿಯುತ್ತಿರುವ ಆಕ್ರಂದನ ಕರುಳು ಹಿಂಡುವ ದನಿಗೆ ಒಂದು ಮಂಗಳ ಹಾಡಲು ಮಾನವ ಹಕ್ಕುಗಳ ಆಯೋಗದ ಬಾಗಿಲು ತಟ್ಟಲು ಈ ರೋಗಗ್ರಸ್ತ ಕೈಗಳಿಗೆ ಬಲವೂ ಇಲ್ಲದೆಹೋಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry