ಭಾನುವಾರ, ಏಪ್ರಿಲ್ 11, 2021
25 °C

ಪುತ್ತೂರು: ಬೀಡಿ ಕಾರ್ಮಿಕರ ಪ್ರತಿಭಟನೆ:ಕೆಲಸ ಕಡಿತಕ್ಕೆ ವಿರೋಧ, ಬೇಡಿಕೆ ಈಡೇರಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ಬೀಡಿ ಕಂಪನಿಗಳು ಕಳೆದ ಕೆಲ ತಿಂಗಳಿನಿಂದ ಬೀಡಿ ಕೆಲಸವನ್ನು ಕಡಿತಗೊಳಿಸಿರುವುದನ್ನು ವಿರೋಧಿಸಿ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಐಟಿಯುಸಿ ಬೆಂಬಲಿತ ದಕ್ಷಿಣ ಕನ್ನಡ ಬೀಡಿ ಕಾರ್ಮಿಕ ಒಕ್ಕೂಟದ ಫೆಡರೇಶನ್ ವತಿಯಿಂದ ಶುಕ್ರವಾರ ಪುತ್ತೂರಿನ ಹಾರಾಡಿಯಲ್ಲಿರುವ ಭಾರತ್ ಬೀಡಿ ಕಂಪೆನಿಯ ಎದುರು ಪ್ರತಿಭಟನೆ ನಡೆಯಿತು.ಪುತ್ತೂರು ಸಿಐಟಿಯು ಕಚೇರಿ ಬಳಿಯಿಂದ ಭಾರತ್ ಬೀಡಿ ಕಂಪೆನಿಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು `ಬೀಡಿ ಕಂಪನಿಗಳು ಬೀಡಿ ಕೆಲಸವನ್ನು ಕಡಿತಗೊಳಿಸಿರುವುದರಿಂದ ಬೀಡಿ ಕೆಲಸವನ್ನೇ ನಂಬಿ ಬದುಕು ಕಟ್ಟಿಕೊಪಂಡಿರುವ ನಾವು ಸಮಸ್ಯೆ ಅನುಭವಿಸಬೇಕಾಗಿ ಬಂದಿದೆ. ಬೀಡಿ ಕಾರ್ಮಿಕರಿಗೆ ವಾರದಲ್ಲಿ ಆರು ದಿನಗಳಾದರೂ ಕೆಲಸ ನೀಡಬೇಕು~ ಎಂದು ಅವರು ಆಗ್ರಹಿಸಿದರು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್.ಕೆ. ಬೀಡಿ ಫೆಡರೇಶನ್‌ನ ಕಾರ್ಯದರ್ಶಿ ಸುರೇಶ್ ಕುಮಾರ್ ಅವರು ಪ್ರತಿಯೊಂದು ಬೀಡಿ ಕಂಪೆನಿಗಳ ಮಾಲೀಕರನ್ನು ಭೇಟಿಯಾಗಿ ಕೆಲಸ ಕಡಿತದಿಂದಾಗಿ ಕಾರ್ಮಿಕರಿಗಾಗುತ್ತಿರುವ ಸಮಸ್ಯೆಯನ್ನು ಅವರಿಗೆ ವಿವರಿಸುವ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಲಾಗಿದೆ. ಬೀಡಿ ಕಂಪನಿ ಮಾಲಕರು ಕೆಲಸ ಹೆಚ್ಚಿಸುವ ಭರವಸೆ ನೀಡಿದ್ದಾರೆ. ಮುಂದಿನ ಬೆಳವಣಿಗೆಯನ್ನು ಗಮನಿಸಿಕೊಂಡು ಮುಂದೆ ಹೋರಾಟದ ಹಾದಿ ನಿರ್ಧರಿಸಲಾಗುವುದು ಎಂದರು.ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಹಾರಾಡಿಯ ಭಾರತ್ ಬೀಡಿ ಕಂಪೆನಿಯ ವ್ಯವಸ್ಥಾಪಕ ಶ್ಯಾಮ್ ಭಟ್ ಅವರು ಮಾತನಾಡಿ, ಬೀಡಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಕಾಲದಲ್ಲಿ ಬಹುತೇಕ ಮಂದಿ ಕಾರ್ಮಿಕರು ಬೀಡಿ ಕೆಲಸ ಮಾಡುವುದಿಲ್ಲ. ಮಳೆಗಾಲದಲ್ಲಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಬೀಡಿಗೆ ಬೇಡಿಕೆ ಇದ್ದ ಸಮಯದಲ್ಲಿ ಕಾರ್ಮಿಕರು ಬೀಡಿ ಕೆಲಸ ಮಾಡದ ಕಾರಣ ನಾವು ಬೇರೆ ಕಡೆಯಿಂದ ಬೀಡಿಯನ್ನು ತರಿಸಿಕೊಳ್ಳಬೇಕಾಗಿ ಬಂದಿದೆ. ಇದರಿಂದಾಗಿ ಕೆಲಸ ಕಡಿತದ ಸಮಸ್ಯೆಯಾಗಿದೆ. ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.   ಎಸ್.ಕೆ. ಬೀಡಿ ಫೆಡರೇಶನ್ ಅಧ್ಯಕ್ಷ ಸಂಜೀವ, ಕಾರ್ಯದರ್ಶಿ ವಿ.ಎಸ್.ಬಾರಿಂಜ, ಉಪಾಧ್ಯಕ್ಷ ಹಸೈನಾರ್ ಕಡಂಬು, ಪಾಣೆಮಂಗಳೂರು ವಲಯದ ಎಐಟಿಯುಸಿ ಬೆಂಬಲಿತ ಬೀಡಿ ಯೂನಿಯನ್ ಅಧ್ಯಕ್ಷೆ  ಉಮಾವತಿ ಕುರ್ನಾಡು,  ಉಪಾಧ್ಯಕ್ಷರಾದ ಕೆ. ಈಶ್ವರ್, ಸುನೀತಾ ಗೋಪಾಲ, ಕವಿತಾ ದಿನೇಶ್, ಜೊತೆ ಕಾರ್ಯದರ್ಶಿಗಳಾದ  ಸರಸ್ವತಿ ಕಡೇಶಿವಾಲಯ, ಶಮಿತಾ, ಮೇರಿ ಮೆಂಡೋನ್ಸಾ, ತಾಲ್ಲೂಕು ಬೀಡಿ ವರ್ಕರ್ಸ್‌ ಯೂನಿಯನ್ ಮುಖಂಡರಾದ ರಾಮಣ್ಣ ರೈ, ರಮೇಶ್ ರೈ, ಕೆ.ಈಶ್ವರಿ ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.