ಪುತ್ತೂರು: ವರ್ತಕ-ಅಧಿಕಾರಿ ಚಕಮಕಿ

7

ಪುತ್ತೂರು: ವರ್ತಕ-ಅಧಿಕಾರಿ ಚಕಮಕಿ

Published:
Updated:

ಪುತ್ತೂರು: ಪುತ್ತೂರು ಪುರಸಭೆ ವ್ಯಾಪ್ತಿಯ ಮುಕ್ರಂಪಾಡಿ ಮುಖ್ಯ ರಸ್ತೆ ಬದಿಯಲ್ಲಿ ಅನಧಿಕೃತವಾಗಿದ್ದ ನಾಲ್ಕು ಹಣ್ಣು ಹಂಪಲು -ತರಕಾರಿ ಅಂಗಡಿಗಳ ತೆರವು ಕಾರ್ಯಾಚರಣೆಯನ್ನು ಪುರಸಭೆ ಅಧಿಕಾರಿಗಳು ಗುರುವಾರ ನಡೆಸಿದರು.ಇದೇ ಸಂದರ್ಭ ಕಾರ್ಯಾಚರಣೆಗೆ ಆಕ್ಷೇಪ ವ್ಯಕ್ತಪಡಿಸಿ ಅಲ್ಲಿ ಸೇರಿದ್ದ ಮುಸ್ಲಿಂ ಯುವಕರ ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ತುಸು ಗೊಂದಲದ ವಾತಾವರಣ ನಿರ್ಮಾಣವಾಯಿತು.ಮುಕ್ರಂಪಾಡಿಯಲ್ಲಿ ರಸ್ತೆ ಬದಿಯಲ್ಲಿದ್ದ ಉಸ್ಮಾನ್ ಕುಂಬ್ರ, ಸೂಫಿ ಪಡೀಲು, ಇಬ್ರಾಹಿಂ ಯಾನೆ ಬಶೀರ್ ರಾಮಕುಂಜ ಮತ್ತು ಮಹಮ್ಮದ್ ಪರ್ಪುಂಜ  ಎಂಬವರಿಗೆ ಸೇರಿದ ಹಣ್ಣು-ಹಂಪಲು, ತರಕಾರಿ ಅಂಗಡಿ ತೆರವು ಕಾರ್ಯಾಚರಣೆ ಪುರಸಭೆ ಮುಖ್ಯಾಧಿಕಾರಿ ಶಿವಲಿಂಗ ಕುಂಡಕೂಳಿ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮುಸ್ಲಿಂ ಯುವಕರು ಜಮಾಯಿಸಿ ತೆರವು ಪ್ರಕ್ರಿಯೆಗೆ ಆಕ್ಷೇಪ ವ್ಯಕ್ತಪಡಿಸಿದರು.ಪುರಸಭೆ ಅಧಿಕಾರಿಗಳು ಕಾಲಾವಕಾಶ ನೀಡದೆ ಏಕಾಏಕಿಯಾಗಿ ಅಂಗಡಿಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಹಣ್ಣು ಹಂಪಲುಗಳನ್ನು ಮುಟ್ಟುಗೋಲು ಹಾಕಿ ಲಾರಿಯಲ್ಲಿ ತುಂಬಿದ್ದಾರೆ ಎಂದು ಆರೋಪಿಸಿದ ತಂಡ ಅಂಗಡಿಗಳ ತೆರವಿಗೆ ಸಂಜೆ 7 ಗಂಟೆ ವರೆಗೆ ಕಾಲಾವಕಾಶ ನೀಡಬೇಕೆಂದು ಪಟ್ಟು ಹಿಡಿಯಿತು. ಈ ವಿಚಾರದಲ್ಲಿ ಅಧಿಕಾರಿಗಳ ಮತ್ತು ಅಲ್ಲಿ ಸೇರಿದ್ದ ಯುವಕರ ನಡುವೆ ಮಾತಿನ ಚಕಮಕಿ ನಡೆದು ಗೊಂದಲಮಯ ಸನ್ನಿವೇಶ ನಿರ್ಮಾಣವಾಯಿತು.  ವಕೀಲ ನೂರುದ್ದೀನ್ ಸಾಲ್ಮರ, ಎಸ್.ಡಿ.ಪಿ.ಐ ಪುತ್ತೂರು ತಾಲ್ಲೂಕು ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ, ನಗರ ಕಾರ್ಯದರ್ಶಿ ನೌಫಲ್ ಸಾಲ್ಮರ ಮತ್ತಿತರರು ಅಂಗಡಿಗಳನ್ನು ತೆರವುಗೊಳಿಸಲು ಕಾಲಾವಕಾಶ ನೀಡಬೇಕು. ಮುಟ್ಟುಗೋಲು ಹಾಕಿಕೊಂಡ ಹಣ್ಣು ಹಂಪಲುಗಳನ್ನು ಅವರಿಗೆ ಹಿಂತಿರುಗಿಸ ಬೇಕು ಎಂದು ಮನವಿ ಮಾಡಿದರು.`ಕಾನೂನು ರೀತಿಯಲ್ಲಿ ಕರ್ತವ್ಯ ಮಾಡಿದ್ದೇನೆ. ಇವು ಅನಧಿಕೃತ ಅಂಗಡಿಗಳಾಗಿರುವುದರಿಂದ ತೆರವು ಗೊಳಿಸುವಂತೆ ಮಾನವೀಯ ನೆಲೆಯಲ್ಲಿ ತಿಳಿಸಿದ್ದೇನೆ. ಅಂಗಡಿಯವರು ಸ್ಪಂದಿಸುವ ಗೋಜಿಗೆ ಹೋಗದ ಕಾರಣ ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ಅಂಗಡಿಗಳು ಅನಧಿಕೃತವಾಗಿರುವುದರಿಂದ ತೆರವಿಗೆ ನೋಟಿಸ್ ನೀಡುವ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ~ ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದರು.ಮುಟ್ಟು ಗೋಲು ಹಾಕಿಕೊಂಡ ವಸ್ತುಗಳನ್ನು ಇಲ್ಲೇ ಹಿಂತಿರುಗಿಸಲು ಸಾಧ್ಯವಿಲ್ಲ. ಮೊದಲು ಅಂಗಡಿಗಳನ್ನು ತೆರವುಗೊಳಿಸಿ ಬಳಿಕ ಪುರಸಭೆ ಕಚೇರಿಗೆ ಬಂದು ಬರವಣಿಗಯಲ್ಲಿ ಕೊಡಿ. ಅದನ್ನು ಕಾನೂನು ಪ್ರಕಾರ ಹಿಂತಿರುಗಿಸಲಾಗುವುದು ಎಂದು ಅವರು ತಿಳಿಸಿದರು.ಇಲ್ಲಿನ ಅಂಗಡಿಗಳನ್ನು ತೆರವುಗೊಳಿಸುವುದಾದರೆ ಪುತ್ತೂರು ಪೇಟೆಯಲ್ಲಿನ ಎಲ್ಲ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ ಎಂದು ಯುವಕರು ಸವಾಲು ಹಾಕಿದರು. ಈ ಗೊಂದಲದ ಸನ್ನಿವೇಶಕ್ಕೆ ತೆರೆಬಿದ್ದ ಬಳಿಕ ಅಂಗಡಿ ಮಾಲೀಕರೇ ಸ್ವತಃ ತೆರವು ಕಾರ್ಯಾಚರಣೆಗಿಳಿದರು. ಇದರಿಂದಾಗಿ ವಿವಾದ ತಣ್ಣಗಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry