ಪುನಃ ಅದೇ ಕ್ಯಾತೆ

7

ಪುನಃ ಅದೇ ಕ್ಯಾತೆ

Published:
Updated:

ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಕ್ಯಾತೆ ತೆಗೆಯುವುದರಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸಿದ್ಧಹಸ್ತರು. ನೀರಿನ ವಿಷಯವನ್ನು ಭಾವನಾತ್ಮಕಗೊಳಿಸಿ ಅದರಿಂದ ರಾಜಕೀಯ ಲಾಭ ಪಡೆಯುವ `ಆಟ' ಅವರಿಗೆ ಕರತಲಾಮಲಕ.ಕಾವೇರಿ ಕಣಿವೆಯಲ್ಲಿ ಕರ್ನಾಟಕ ಯಾವುದಾದರೊಂದು ಯೋಜನೆ ಕೈಗೆತ್ತಿಕೊಳ್ಳಲು ಮುಂದಾದ ಕೂಡಲೇ ಜಯಲಲಿತಾ ಅವರ ತಕರಾರು ಪತ್ರ ಸಿದ್ಧವಾಗುತ್ತದೆ. ತಕ್ಷಣ ಅವರು ಪ್ರಧಾನಿಗೆ ಪತ್ರ ಬರೆಯುತ್ತಾರೆ ಇಲ್ಲವೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತಾರೆ. ಮಕ್ಕಳು ಪುಡಿ ಕಾರಣಕ್ಕೆ ಕಿತ್ತಾಡಿ ಹಿರಿಯರ ಬಳಿ ದೂರು ಒಯ್ಯುವಂತೆ ಜಯಾ ಮೇಲಿಂದ ಮೇಲೆ ಕರ್ನಾಟಕದ ವಿರುದ್ಧ ದೂರುತ್ತಿರುವುದು ಅವರ ರಾಜಕೀಯ ಅಪ್ರಬುದ್ಧತೆಗೆ ಸಾಕ್ಷಿ. ತಮ್ಮ ರಾಜ್ಯದ ರೈತರ ಮನಸ್ಸಿನಲ್ಲಿ ಭೀತಿ ಹುಟ್ಟಿಸಿ ತಮಿಳುನಾಡಿನ ಹಿತಾಸಕ್ತಿಗೆ ವಿರುದ್ಧವಾಗಿ ಕರ್ನಾಟಕ ಯಾವಾಗಲೂ ವರ್ತಿಸುತ್ತಿದೆ ಎನ್ನುವುದನ್ನು ಬಿಂಬಿಸಲು ಸದಾ ಯತ್ನಿಸುತ್ತಲೇ ಇರುತ್ತಾರೆಈಗ ಮೇಕೆದಾಟು ಜಲವಿದ್ಯುತ್ ಘಟಕ ಸ್ಥಾಪನೆ ಪ್ರಸ್ತಾವಕ್ಕೂ ಅವರು ಇದೇ ತಂತ್ರ ಅನುಸರಿಸಿದ್ದಾರೆ. ಯೋಜನೆ ಕೈಗೆತ್ತಿಕೊಳ್ಳುವುದಾಗಿ ಕರ್ನಾಟಕ ಸರ್ಕಾರದಿಂದ ಹೇಳಿಕೆ ಹೊರಬೀಳುತ್ತಲೇ ಪ್ರಧಾನಿಗೆ ಅವರಿಂದ ಪತ್ರ ರವಾನೆಯಾಗಿದೆ. ರಾಷ್ಟ್ರೀಯ ಜಲವಿದ್ಯುತ್ ನಿಗಮ ಅಥವಾ ಕೇಂದ್ರೀಯ ವಿದ್ಯುತ್ ಉತ್ಪಾದನಾ ಸಂಸ್ಥೆಗಳ ಸಹಯೋಗದಲ್ಲಿ ಮೇಕೆದಾಟು, ಶಿವನಸಮುದ್ರ, ಹೊಗೇನಕಲ್ ಮತ್ತು ರಾಸಿಮಲೆ ಜಲವಿದ್ಯುತ್ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕೇ ಹೊರತು ಸ್ವತಂತ್ರವಾಗಿ ಅನುಷ್ಠಾನಗೊಳಿಸಲು ಕರ್ನಾಟಕಕ್ಕೆ ಅವಕಾಶ ನೀಡಬಾರದು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಕೆಆರ್‌ಎಸ್ ಬಹಳ ಬೇಗ ತುಂಬಿದೆ. ತಮಿಳುನಾಡಿಗೂ ಭಾರೀ ಪ್ರಮಾಣದಲ್ಲಿ ನೀರು ಹರಿದಿದೆ. ಅದನ್ನು ಹಿಡಿದಿಟ್ಟುಕೊಂಡು ಬಳಸುವುದರಲ್ಲಿ ತಮಿಳುನಾಡು ವಿಫಲವಾದರೆ ಅದಕ್ಕೆ ಕರ್ನಾಟಕ ಜವಾಬ್ದಾರಿಯಾಗುವುದಿಲ್ಲ. ಕೆಆರ್‌ಎಸ್‌ನಿಂದ ಹೊರಬಿಡುವ ನೀರು ಬಿಳಿಗುಂಡ್ಲು ಮೂಲಕ ಮೆಟ್ಟೂರು ಜಲಾಶಯಕ್ಕೆ ಹೋಗುತ್ತದೆ. ಅದು ತುಂಬಿದ ಬಳಿಕ ನೀರು ಸಹಜವಾಗಿ ಸಾಗರ ಸೇರುತ್ತದೆ. ಕೆಆರ್‌ಎಸ್- ಬಿಳಿಗುಂಡ್ಲು ನಡುವೆ ಯಾವ ಅಣೆಕಟ್ಟೆಯೂ ಇಲ್ಲ.ಈ ಹಿಂದೆ, ಮೇಕೆದಾಟು, ಶಿವನಸಮುದ್ರ, ಹೊಗೇನಕಲ್ ಮತ್ತು ರಾಸಿಮಲೆಯಲ್ಲಿ ಅಣೆಕಟ್ಟೆ ನಿರ್ಮಿಸಿ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ರಾಷ್ಟ್ರೀಯ ಜಲವಿದ್ಯುತ್ ನಿಗಮ ಸಿದ್ಧಪಡಿಸಿತ್ತು. ಆದರೆ, ಮೇಕೆದಾಟು ಮತ್ತು ಶಿವನಸಮುದ್ರ ನಮ್ಮ ರಾಜ್ಯದ ಗಡಿಯೊಳಗೆ ಬರುವುದರಿಂದ ಇವುಗಳನ್ನು ತಾನೇ ಕಾರ್ಯಗತಗೊಳಿಸುವುದಾಗಿ ಕರ್ನಾಟಕ ಸರ್ಕಾರ ಸ್ಪಷ್ಟವಾಗಿ ತಿಳಿಸಿತ್ತು.ಕರ್ನಾಟಕದ ವಿರೋಧದ ನಡುವೆಯೂ ತಮಿಳುನಾಡು ಸರ್ಕಾರ ಹೊಗೇನಕಲ್ ಬಳಿ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಜಯಲಲಿತಾ ಅವರ ಇಂತಹ ಇಬ್ಬಗೆ ನೀತಿಯನ್ನು ಕರ್ನಾಟಕ ಸರ್ಕಾರ ಸೂಕ್ತ ವೇದಿಕೆಗಳಲ್ಲಿ ಬಯಲುಗೊಳಿಸಬೇಕು. ತನ್ನ ವ್ಯಾಪ್ತಿಯ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ಅನುಮತಿ ಪಡೆಯಲು ಕೇಂದ್ರದ ಮೇಲೆ ಒತ್ತಡ ತರಬೇಕು. ಹರಿವ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಿದರೆ ಅದರಿಂದ ತಮಿಳುನಾಡು ರೈತರಿಗೆ ಯಾವ ನಷ್ಟವೂ ಆಗದು ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಕೇಂದ್ರ ಸರ್ಕಾರ ಕೂಡ ತಮಿಳುನಾಡಿನ ತಕರಾರಿಗೆ ಕಿಮ್ಮತ್ತು ಕೊಡಬಾರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry