ಬುಧವಾರ, ಏಪ್ರಿಲ್ 14, 2021
31 °C

ಪುನಃ ಭಾರತ-ಪಾಕ್ ಕ್ರಿಕೆಟ್ ಮೈತ್ರಿ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನ ಪ್ರಧಾನಿ ಯುಸೂಫ್ ರಾಜಾ ಗಿಲಾನಿ ಅವರ ಜತೆ ಮಾತುಕತೆ ನಡೆಸಿದ ನಂತರ ಎರಡೂ ರಾಷ್ಟ್ರಗಳ ‘ಕ್ರಿಕೆಟ್ ಮೈತ್ರಿ’ಯನ್ನು ಪುನರಾರಂಭಿಸಲು ಒಪ್ಪಿಕೊಳ್ಳಲಾಗಿದೆ.

ಕ್ರಿಕೆಟ್ ಪಂದ್ಯ, ನಡೆಯುವ ಸ್ಥಳ ಇವೇ ಮೊದಲಾದ ವಿಚಾರಗಳನ್ನು ಎರಡೂ ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳು ನಿರ್ಧರಿಸಲಿವೆ.

ಎಲ್ಲವೂ ಪೂರ್ವ ನಿರ್ಧಾರಿತ ರೀತಿಯಲ್ಲೇ ನಡೆದರೆ ಭಾರತದ ತಂಡವು ಮೊದಲು ಪಾಕಿಸ್ತಾನ ಪ್ರವಾಸ ಮಾಡಲಿದೆ. ನಂತರ ಪಾಕಿಸ್ತಾನ ತಂಡವು ಭಾರತಕ್ಕೆ ಬಂದು ಆಡಳಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪೂರ್ವ ನಿಗದಿತ ಪಂದ್ಯಗಳಲ್ಲಿ  ಆಡಬೇಕಿರುವುದರಿಂದ ಸದ್ಯದಲ್ಲಿ ಭಾರತದ ತಂಡ ಪಾಕಿಸ್ತಾನ ಪ್ರವಾಸ ಮಾಡಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಕಾರ್ಯಕ್ರಮದಂತೆ ಪಾಕಿಸ್ತಾನ ತಂಡವು 2012ರ ಮಾರ್ಚ್‌ನಲ್ಲಿ ಭಾರತ ಪ್ರವಾಸ ಮಾಡಿ ಮೂರು ಟೆಸ್ಟ್ ಪಂದ್ಯಗಳನ್ನು ಹಾಗೂ  ಐದು ಏಕ ದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಿದೆ. 26/11ರ ಮುಂಬೈ ದಾಳಿಯ ನಂತರ ಭಾರತ ಸರ್ಕಾರವು ಕ್ರಿಕೆಟ್ ಮೈತ್ರಿ ಸೇರಿದಂತೆ ಪಾಕಿಸ್ತಾನದ ಜತೆಗಿನ ಎಲ್ಲಾ ರಾಜತಾಂತ್ರಿಕ ಸಂಬಂಧವನ್ನು ಸ್ಥಗಿತಗೊಳಿಸಿತ್ತು.

2009ರ ಮಾರ್ಚ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲೆ ಪಾಕಿಸ್ತಾನದಲ್ಲಿ ಭಯೋತ್ಪಾದಕರ ದಾಳಿ ನಡೆದು ಆರು ಜನ ಆಟಗಾರರು ಗಾಯಗೊಂಡ ನಂತರ ಯಾವುದೇ ಅಂತರರಾಷ್ಟ್ರೀಯ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ  ಮಾಡಲಿಲ್ಲ.

ಎರಡೂ ರಾಷ್ಟ್ರಗಳಲ್ಲಿ ಕ್ರಿಕೆಟ್ ತುಂಬಾ ಜನಪ್ರಿಯ ಆಟವಾಗಿರುವುದರಿಂದ ಹಾಗೂ ನೆರೆಯ ರಾಷ್ಟ್ರದ ಜತೆ ಉತ್ತಮ ಸಂಬಂಧ ಹೊಂದಬೇಕು ಎಂಬ ಕಾರಣಕ್ಕಾಗಿ ಪಾಕಿಸ್ತಾನದ ಜತೆ ಕ್ರಿಕೆಟ್ ಮೈತ್ರಿ ಪುನರಾರಂಭಿಸಲಾಗಿದೆ. ಆದರೆ ಪಾಕಿಸ್ತಾನ ನೆಲದಿಂದ ಮತ್ತೆ ಭಾರತದ ಮೇಲೆ ಭಯೋತ್ಪಾದಕರ ದಾಳಿ ನಡೆದರೆ ಕ್ರಿಕೆಟ್ ಮೈತ್ರಿ ಸ್ಥಗಿತಗೊಳ್ಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.