ಮಂಗಳವಾರ, ಏಪ್ರಿಲ್ 20, 2021
25 °C
ಗಣಿಗಾರಿಕೆ: 3 ಜಿಲ್ಲೆಗಳ ಸಂತ್ರಸ್ತರಿಗೆ ಪರಿಷ್ಕೃತ ಪರಿಹಾರ ಪ್ರಸ್ತಾವ

ಪುನರ್ವಸತಿಗೆ ರೂ 30 ಸಾವಿರ ಕೋಟಿ

ಪ್ರಜಾವಾಣಿ ವಾರ್ತೆ/ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಗಣಿಗಾರಿಕೆಯಿಂದ ತೀವ್ರ ಬಾಧೆಗೆ ಒಳಗಾಗಿರುವ ರಾಜ್ಯದ ಮೂರು ಜಿಲ್ಲೆಗಳಲ್ಲಿ ಪುನರ್ವಸತಿ ಮತ್ತು ಪುನಶ್ಚೇತನ ಕಾರ್ಯ (ಆರ್‌ಅಂಡ್‌ಆರ್) ಕೈಗೊಳ್ಳಲು ಒಟ್ಟು ರೂ 10,428 ಕೋಟಿಗೆ ಬದಲಾಗಿ, ರೂ 30,000 ಕೋಟಿ ಮೀಸಲು ಇರಿಸುವಂತೆ ಕೇಂದ್ರ ಉನ್ನತಾಧಿಕಾರ ಸಮಿತಿಗೆ (ಸಿಇಸಿ) ರಾಜ್ಯ ಸರ್ಕಾರ ಹೊಸದಾಗಿ ಪ್ರಸ್ತಾವ ಸಲ್ಲಿಸಿದೆ.ಸುಪ್ರೀಂ ಕೋರ್ಟ್ ನಿರ್ದೇಶಿತ ಸಿಇಸಿ ಸೂಚನೆ ಮೇರೆಗೆ ಜಿಲ್ಲಾಡಳಿತವು ನೂತನವಾಗಿ ಈ ಪ್ರಸ್ತಾವ ಸಲ್ಲಿಸಿದ್ದು, ಈ ಮೊದಲು ಸಲ್ಲಿಸಿದ್ದ ಪ್ರಸ್ತಾವದ ಮೂರು ಪಟ್ಟು ಹೆಚ್ಚು ಹಣ ನೀಡುವಂತೆ ಕೋರಲಾಗಿದೆ. ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹೊಸದಾಗಿ ಗಣಿಗಾರಿಕೆ ಆರಂಭಿಸಲಿರುವ ಗಣಿ ಕಂಪೆನಿಗಳಿಂದ ಅವುಗಳ ಒಟ್ಟು ವಾರ್ಷಿಕ ವಹಿವಾಟಿನ ಶೇ 10ರಷ್ಟು ಭಾಗವನ್ನು ಸಂಗ್ರಹಿಸುವ ಉದ್ದೇಶ ಹೊಂದಲಾಗಿತ್ತು. ಆದರೆ, ಹೊಸ ಪ್ರಸ್ತಾವದ ಪ್ರಕಾರ, ಅದರ ಪ್ರಮಾಣ ಶೇ 20ರಷ್ಟಾಗಲಿದೆ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ `ಪ್ರಜಾವಾಣಿ'ಗೆ ತಿಳಿಸಿದರು.ಇದೇ 30ರಂದು ನಡೆಯಲಿರುವ ವಿಚಾರಣೆ ಸಂದರ್ಭ ಸಿಇಸಿಯು ಈ ಪ್ರಸ್ತಾವ ಕುರಿತು ಸುಪ್ರೀಂ ಕೋರ್ಟ್ ಗಮನ ಸೆಳೆಯಲಿದ್ದು, ನ್ಯಾಯಾಲಯ ಈ ಪ್ರಸ್ತಾವವನ್ನು ಒಪ್ಪಿದಲ್ಲಿ, ಈ ಜಿಲ್ಲೆಗಳಲ್ಲಿನ ಒಟ್ಟು 11 ತಾಲ್ಲೂಕುಗಳ ವ್ಯಾಪ್ತಿಯ ನೂರಾರು ಗ್ರಾಮಗಳಲ್ಲಿ ಕೈಗೊಳ್ಳಲಿರುವ ಅಭಿವೃದ್ಧಿ ಕಾರ್ಯಗಳಿಗಾಗಿ ಈ ಹಣವನ್ನು ವ್ಯಯಿಸಲಾಗುತ್ತದೆ ಎಂದು ಅವರು ಹೇಳಿದರು.ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಸಾರಿಗೆ, ಅರಣ್ಯೀಕರಣ, ಕುಡಿಯುವ ನೀರು, ಕೃಷಿ, ನೈರ್ಮಲ್ಯ, ಮಾಲಿನ್ಯ ನಿಯಂತ್ರಣ, ರಸ್ತೆ ಸೇರಿದಂತೆ ಎಲ್ಲ ವಿಭಾಗಗಳ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದ್ದು, ಮೀಸಲಿಡಲಾಗುವ ಹಣದ ಪ್ರಮಾಣ ಮೂರು ಪಟ್ಟು ಹೆಚ್ಚಿದಲ್ಲಿ, ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಮತ್ತಷ್ಟು ಬಲ ಬರಲಿದೆ  ಎಂದು ಅವರು ಅಭಿಪ್ರಾಯಪಟ್ಟರು.

ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯದ ಗಣಿ ಪ್ರದೇಶಗಳು ಮತ್ತು ಗಣಿ ಬಾಧಿತ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿರುವ ಸಿಇಸಿ, ಪುನಶ್ಚೇತನ ಮತ್ತು ಪುನರುಜ್ಜೀವನ ಕ್ರಮಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿದೆ.ಅದಿರು ಸಾಗಣೆ ಲಾರಿಗಳಿಂದ ಸಂಕಷ್ಟಕ್ಕೆ ಈಡಾಗಿರುವ ಗ್ರಾಮಗಳಲ್ಲಿ ರಸ್ತೆ ದುರಸ್ತಿ, ಪ್ರಮುಖ ಪಟ್ಟಣಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳ ನಿರ್ಮಾಣ, ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲೆಯ ತುಂಗಭದ್ರಾ ಅಣೆಕಟ್ಟೆ, ನಾರಿಹಳ್ಳ, ದರೋಜಿ ಕೆರೆ ಸೇರಿದಂತೆ ಇತರ ಕೆರೆಗಳಲ್ಲಿ ಸಂಗ್ರಹವಾಗಿರುವ ಹೂಳು ಎತ್ತುವುದಕ್ಕೂ ಈ ಯೋಜನೆ ಅಡಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಅಲ್ಲದೆ, ಅಂತರ್ಜಲ ವೃದ್ಧಿಗೂ ಆದ್ಯತೆ ನೀಡಲಾಗುತ್ತದೆ.ಈ ಕುರಿತು ಸೆಪ್ಟೆಂಬರ್ 24ರಂದು ನಗರದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಎಜುಕೇಷನ್‌ನ (ಐಸಿಎಫ್‌ಆರ್‌ಇ) ಸದಸ್ಯರಾಗಿರುವ, ಇನ್ಸ್‌ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ (ಐಡಬ್ಲ್ಯೂಎಸ್‌ಟಿ) ನಿರ್ದೇಶಕ ಡಾ. ಎಸ್.ಸಿ. ಜೋಶಿ ನೇತೃತ್ವದಲ್ಲಿ ಜಿಲ್ಲೆಯ ಗಣಿ ಬಾಧಿತ ಗ್ರಾಮ ಮತ್ತು ಪಟ್ಟಣಗಳ ಸಾರ್ವಜನಿಕರ ಸಭೆ ನಡೆಸಿ ಸಲಹೆ ಪಡೆಯಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.