ಸೋಮವಾರ, ಮೇ 23, 2022
27 °C
ಸನ್ನತಿ ಬ್ಯಾರೇಜ್ ಹಿನ್ನೀರು ಮುಳುಗಡೆ ಪ್ರದೇಶ: ಹುರಸಗುಂಡಿಗಿ ಸ್ಥಳಾಂತರ ಜಿಲ್ಲಾಡಳಿತದಿಂದ ಸಭೆ

ಪುನರ್ವಸತಿ ಕಲ್ಪಿಸದೇ ಗೇಟ್ ಹಾಕಬೇಡಿ: ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಸನ್ನತಿ ಬ್ಯಾರೇಜ್‌ನ ಹಿನ್ನೀರಿನಲ್ಲಿ ಮುಳುಗಡೆ ಆಗುವ ಪ್ರದೇಶದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸದೇ ಬ್ಯಾರೇಜಿನಲ್ಲಿ ನೀರು ನಿಲುಗಡೆ ಮಾಡದಿರುವಂತೆ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ, ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಂತ್ರಸ್ತ ರೈತರು, ಕೆಬಿಜೆಎನ್‌ಎಲ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಮಸ್ಯೆ ಗಂಭೀರತೆ ಅರಿತು ಹುರಸಗುಂಡಗಿ ಗ್ರಾಮಕ್ಕೆ ಕಳೆದ ಶನಿವಾರ ಭೇಟಿ ನೀಡಿದ್ದು, ಭೀಮಾ ನದಿಗೆ ನೀರು ಬಂದರೆ ಹಿನ್ನೀರು ಪ್ರದೇಶದ ರೈತರು ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಸಭೆ ಕರೆಯಲಾಗಿದೆ.ಸಭೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವನ್ನು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಲಾಗುವುದು. ರೈತರ ಹಿತ ಕಾಪಾಡುವುದು ಜಿಲ್ಲಾಡಳಿತದ ಕರ್ತವ್ಯವಾಗಿದ್ದು, ಪುನರ್ವವಸತಿ ಹಾಗೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಬ್ಯಾರೇಜ್‌ನಲ್ಲಿ ನೀರು ಸಂಗ್ರಹ ಮಾಡಬಾರದು ಎಂದು ತಿಳಿಸಿದರು.ಗೇಟ್ ಹಾಕಲು ಬಿಡುವುದಿಲ್ಲ: ಹಿನ್ನೀರಿನಲ್ಲಿ ಮುಳುಗಡೆಯಾಗುವ ಜಮೀನಿಗೆ ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸದೇ ಸನ್ನತಿ ಬ್ಯಾರೇಜ್‌ನ ಗೇಟ್ ಹಾಕಿ ನೀರು ನಿಲ್ಲಿಸಲು ಬಿಡುವುದಿಲ್ಲ ಎಂದು ಹಿನ್ನೀರಿನಲ್ಲಿ ಮುಳುಗಡೆಯಾಗುವ ಹುರಸಗುಂಡಗಿ ಗ್ರಾಮಸ್ಥರು ಒಕ್ಕೊರಲಿನಿಂದ ಹೇಳಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ, ಹುರಸಗುಂಡಗಿ ಗ್ರಾಮಸ್ಥರಾದ ಸಿದ್ಧನಗೌಡ ಪಾಟೀಲ, ವೀರಣ್ಣ ವಿಶ್ವಕರ್ಮ, ಮಲ್ಲಣ್ಣ ಇಟಗಿ, ಸನ್ನತಿ ಬ್ಯಾರೇಜ್ ನಿರ್ಮಾಣವಾಗಿ ಮೂರು ವರ್ಷ ಕಳೆದಿವೆ. ಆದರೆ ಇದುವರೆಗೆ ಪುನರ್ವಸತಿ ಕಲ್ಪಿಸಿಲ್ಲ. ಕೇವಲ ಸ್ಥಳ ಗುರುತಿಸಿದ್ದು, ಅಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಿಲ್ಲ. ಇದರಿಂದ ಗ್ರಾಮಸ್ಥರು ಸ್ಥಳಾಂತರಗೊಳ್ಳಲು ಸಿದ್ಧರಿಲ್ಲ.ಮುಳುಗಡೆಯಾಗುವ ನೀರಾವರಿ ಜಮೀನಿಗೆ ಇನ್ನೂ ಪರಿಹಾರ ನೀಡಿಲ್ಲ. ಬ್ಯಾರೇಜ್‌ನಲ್ಲಿ ನೀರು ಸಂಗ್ರಹಣೆ ಆರಂಭಿಸಿದರೆ ಮನೆಮಠ ಕಳೆದುಕೊಳ್ಳಬೇಕಾಗುತ್ತದೆ. ಮಾರುಕಟ್ಟೆ ದರದಂತೆ ಶೀಘ್ರ ಪರಿಹಾರ ಕಲ್ಪಿಸಬೇಕು.ಪುನರ್ವಸತಿ ಪ್ರದೇಶದಲ್ಲಿ ಸೌಲಭ್ಯ ಕಲ್ಪಿಸಬೇಕು. ಅಲ್ಲಿಯವರೆಗೆ ನಾವು ಸ್ಥಳಾಂತರಗೊಳ್ಳುವುದಿಲ್ಲ. ಅಲ್ಲದೇ ಬ್ಯಾರೇಜ್‌ನಲ್ಲಿ ನೀರು ಸಂಗ್ರಹ ಮಾಡಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.ಸನ್ನತಿ ಬ್ಯಾರೇಜ್‌ನಿಂದ ಮುಳುಗಡೆಯಾಗುವ ಜಮೀನು,  ಸಂತ್ರಸ್ತರ ಸಂಖ್ಯೆ, ಪುನರ್ವಸತಿಗೆ ಕೈಗೊಂಡ ಕ್ರಮ ಇತ್ಯಾದಿ ಮಾಹಿತಿ ನೀಡುವಂತೆ ಸಭೆಗೆ ಹಾಜರಾಗಿದ್ದ ಕೆಬಿಜೆಎನ್‌ಎಲ್ ಭೀಗುಡಿ ವಿಶೇಷ ಭೂಸ್ವಾಧೀನಾಧಿಕಾರಿ ಶಂಕ್ರಣ್ಣ ವಣಿಕ್ಯಾಳ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ಬಾಲಸುಬ್ರಹ್ಮಣ್ಯ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.ಹುರಸಗುಂಡಗಿ, ಅಣಬಿ, ರೋಜಾ, ಶಿರವಾಳ ಗ್ರಾಮದ ಒಟ್ಟು 947 ಮನೆಗಳಿಗೆ ಪರಿಹಾರ ನೀಡಲು ಗುರುತಿಸಲಾಗಿದೆ. ಈ ಪೈಕಿ 735 ಸಂತ್ರಸ್ತರಿಗೆ ಪರಿಹಾರ ನೀಡಲಾಗಿದ್ದು, ಇನ್ನೂ 212 ಜನರಿಗೆ ಪರಿಹಾರ ನೀಡುವುದು ಬಾಕಿಯಿದೆ.ಒಟ್ಟು 1,709 ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂಬ ಬೇಡಿಕೆಯಿದೆ. ಪುನರ್ವಸತಿ ಕಲ್ಪಿಸಲು ಹುರಸಗುಂಡಗಿ ಸಮೀಪ 1 ಸಾವಿರ ಎಕರೆ ಜಮೀನು ಗುರುತಿಸಿ, ಅಲ್ಲಿ ನಿವೇಶನ ನಿರ್ಮಾಣ ಮಾಡಲಾಗಿದೆ. ಆದರೆ ಇದುವರೆಗೆ ಅಲ್ಲಿಗೆ ಸಂತ್ರಸ್ತರು ಸ್ಥಳಾಂತರಗೊಂಡಿಲ್ಲ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದರು.ಶಾಸಕ ಗುರುಪಾಟೀಲ ಶಿರವಾಳ, ಸಮೀಕ್ಷೆ ಮಾಡುವ ಮುನ್ನವೇ ಕಟ್ಟಿರುವ ಮನೆಗಳನ್ನೂ ಪರಿಹಾರ ಪ್ರಕ್ರಿಯೆಯಿಂದ ಕೈಬಿಡಲಾಗಿದೆ. ಇದರಿಂದ ಮನೆ ಕಳೆದುಕೊಳ್ಳುವವರಿಗೆ ಅನ್ಯಾಯವಾಗುತ್ತದೆ. ಮತ್ತೊಮ್ಮೆ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಪುನರ್ವಸತಿ ಪ್ರದೇಶದಲ್ಲಿ ಸೌಲಭ್ಯ ಕಲ್ಪಿಸಿಲ್ಲ. ಮೊದಲು ಅಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿಕೊಡಬೇಕು. ಸೂಕ್ತ ಪರಿಹಾರ ನೀಡಬೇಕು. ಜಮೀನು ಸ್ವಾಧೀನ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಇದರಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಹೆಚ್ಚಿನ ಪರಿಹಾರ: ಸನ್ನತಿ ಬ್ಯಾರೇಜ್ ಹಿನ್ನೀರಿನಲ್ಲಿ 944 ಎಕರೆ ಜಮೀನು ಮುಳುಗಡೆಯಾಗುತ್ತದೆ. ಎಕರೆಗೆ ರೂ. 1.70 ಲಕ್ಷ ಪರಿಹಾರ ನಿಗದಿಪಡಿಸಲಾಗಿದೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ಮಾಹಿತಿ ನೀಡಿದರು.ಇದಕ್ಕೆ ಆಕ್ಷೇಪಿಸಿದ ಶಾಸಕ ಗುರು ಪಾಟೀಲ, ಪಕ್ಕದ ಫರಹತಾಬಾದ್‌ನಲ್ಲಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಎಕರೆಗೆ ರೂ. 9 ಲಕ್ಷ ಪರಿಹಾರ ನೀಡಲಾಗಿದೆ. ಅದೇ ಭೀಮಾ ನದಿ ತೀರದಲ್ಲಿರುವ ಫಲವತ್ತಾದ ಕೃಷಿ ಜಮೀನಿಗೆ ಯಾಕೆ ಕಡಿಮೆ ಪರಿಹಾರ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದರು.ರೈತರಿಗೆ ಅನ್ಯಾಯವಾಗಬಾರದು. ಕೃಷಿ ಜಮೀನು ಈಗ ಎಕರೆಗೆ ರೂ. 50 ಲಕ್ಷ ಕೊಟ್ಟರೂ ಸಿಗುತ್ತಿಲ್ಲ. ವರ್ಷದಲ್ಲಿ ಎರಡು ಬೆಳೆ ತೆಗೆಯುವ ಜಮೀನು ಮುಳುಗಡೆಯಾಗುತ್ತಿದ್ದು, ಹೆಚ್ಚಿನ ಪರಿಹಾರ ನೀಡಬೇಕು. ರೈತರಿಗೆ ಶೀಘ್ರ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಪರಿಹಾರ ನಿಗದಿ ಮಾಡುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಬಾಗಲಕೋಟೆಯಲ್ಲಿ ಭೂಸ್ವಾಧೀನ ಕಚೇರಿಯಿದ್ದು, ಅಲ್ಲಿ ನೀಡುವ ನಿರ್ದೇಶನವನ್ನು ಪಾಲಿಸುವುದಾಗಿ ತಿಳಿಸಿದರು.ನಂತರ ಜಿಲ್ಲಾಧಿಕಾರಿ, ಶಾಸಕರ ನೇತೃತ್ವದಲ್ಲಿ ನಿಯೋಗವನ್ನು ಕೊಂಡೊಯ್ದು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ನೀರಾವರಿ ಸಚಿವರನ್ನು ಭೇಟಿಯಾಗಿ ರೈತರ ಬೇಡಿಕೆಗಳನ್ನು ಬಗೆಹರಿಸುವಂತೆ ಮನವಿ ಮಾಡಕೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು. ಇದಕ್ಕೆ ಸಂತ್ರಸ್ತರು ಒಪ್ಪಿಗೆ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಜಹೀರಾ ನಸೀಮ್, ಉಪವಿಭಾಗಾಧಿಕಾರಿ ಬಿ.ಪಿ.ವಿಜಯ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.