ಸೋಮವಾರ, ಮೇ 17, 2021
22 °C

ಪುನರ್ವಸತಿ ಸ್ಥಳ ವೀಕ್ಷಿಸಿದ ಡಿಸಿ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳೇಬೀಡು: ಎರಡು ವರ್ಷದ ಹಿಂದೆ ದ್ವಾರಸಮುದ್ರ ಕೆರೆ ಅಪಾಯ ಮಟ್ಟದಲ್ಲಿ ಹರಿದಾಗ ನೆರೆ ಹಾವಳಿಗೆ ತುತ್ತಾಗಿದ್ದ ಕೋಡಿಹಳ್ಳದ ಪಕ್ಕದ ಬೂದಿಗುಂಡಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಡಾ.ಜಗದೀಶ್ ಶುಕ್ರವಾರ ಹಳೇಬೀಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.



ಪುನರ್ವಸತಿ ಕಲ್ಪಿಸಲು ಉದ್ದೇಶಿಸಿ ರುವ ಒಂಟೆಮಳ್ಳಿ ಗುಡ್ಡ ಹಾಗೂ ನಿರಾ ಶ್ರಿತರು ವಾಸವಾಗಿರುವ ಬೂದಿಗುಂಡಿ ಬಡಾವಣೆಗೆ ಭೇಟಿ ನೀಡಿ ಸಂತ್ರಸ್ಥರು ಹಾಗೂ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿದರು. ಪುನರ್ವಸತಿಗೆ ಸೂಕ್ತವಾದ ಸ್ಥಳ ಆಯ್ಕೆ ಮಾಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.



ಡಿಸಿ ಅಸಮಾಧಾನ: ಹಳೇಬೀಡಿನಿಂದ 3ಕಿ.ಮೀ. ದೂರದಲ್ಲಿರುವ ಕುರುಚಲು ಕಾಡು, ತಗ್ಗು ದಿಣ್ಣೆಗಳಿಂದ ಕೂಡಿರುವ ಒಂಟೆಮಳ್ಳಿ ಗುಡ್ಡ ತಪ್ಪಲನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು ಬೂದಿಗುಂಡಿ ನಿರಾಶ್ರಿತರಿಗೆ ಈ ಸ್ಥಳದಲ್ಲಿ ಪುನರ್ವಸತಿ ಕಲ್ಪಿಸಿದರೆ ವಾಸ ಮಾಡುತ್ತಾರೆಯೇ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದರು. ಗುಡ್ಡದ ತಪ್ಪಲಿನಲ್ಲಿರುವ ಸ್ಥಳ ವಾಸಮಾಡಲು ಅಷ್ಟೇನು ಯೋಗ್ಯವಾಗಿರುವಂತೆ ಕಾಣುವುದಿಲ್ಲ. ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಮೂಲ ಸೌಲಭ್ಯ ಕಲ್ಪಿಸುವುದು ಕಷ್ಟ. ಎಂದು ಅಸಮಾಧಾನ ವ್ಯಕ್ತಪಡಿಸಿದರು.



ಈ ಸ್ಥಳದಲ್ಲಿ ರಾಣಿ ಚೆನ್ನಮ್ಮ ವಸತಿ ಶಾಲೆಯೂ ನಿರ್ಮಾಣ ಆಗುತ್ತಿದೆ. ಕಾಲಕ್ರಮೇಣ ಪ್ರದೇಶ ಅಭಿವೃದ್ದಿ ಹೊಂದುತ್ತದೆ ಎಂದು ಸ್ಥಳದಲ್ಲಿದ್ದವರು ತಿಳಿಸಿದರು. ವಸತಿ ಶಾಲೆ ಎಂದರೆ ಸ್ಥಳದಲ್ಲಿಯೇ ವಾಸವಾಗಿದ್ದು ಕಲಿಯುವುದಾಗಿರುತ್ತದೆ. ವಿದ್ಯಾರ್ಥಿಗಳು ರಜೆ ದಿನದಲ್ಲಿ ಮಾತ್ರ ತಮ್ಮ ಮನೆಗೆ ತೆರಳುತ್ತಾರೆ. ವಸತಿ ಸಮುಚ್ಚಯ ನಿರ್ಮಿಸುವುದಕ್ಕೆ ವ್ಯವಸ್ಥಿತವಾದ ಸ್ಥಳ ಅನ್ವೇಷಣೆ ಮಾಡುವುದು ಸೂಕ್ತ ಎಂದು ಡಾ,ಜಗದೀಶ್ ತಿಳಿಸಿದರು.



ಯೊಚಿಸಲು ಸಲಹೆ: ಜಿಲ್ಲಾಧಿಕಾರಿಗಳು ಬೂದಿಗುಂಡಿಗೆ ಭೇಟಿ ನೀಡಿ ನಿರಾಶ್ರಿತರ ಸಮಸ್ಯೆಗಳನ್ನು ಆಲಿಸಿದರು. ಪುನರ್ವಸತಿ ಕಲ್ಪಿಸಲು ಉದ್ದೇಶಿಸಿರುವ ಸ್ಥಳಕ್ಕೆ ಹೋಗಿ ವಾಸಮಾಡಲು ಸಿದ್ದರಿದ್ದಿರಾ? ಎಂದು ಪ್ರಶ್ನಿಸಿದರು. ವಾಸಮಾಡುವ ಜಾಗದ ಆಯ್ಕೆ ಬಗ್ಗೆ ಗೊಂದಲದಲ್ಲಿರುವ ಬೂದಿಗುಂಡಿ ನಿವಾಸಿಗಳು ಮೌನದ ಉತ್ತರ ನೀಡಿದರು.



ಪುನರ್ವಸತಿಗೆ ಒಮ್ಮೆ ಒಂದು ಸ್ಥಳ ಗೊತ್ತುಪಡಿಸಿದ ನಂತರ ಬೇರೆ ಸ್ಥಳ ನೀಡುವುದಕ್ಕೆ ಅವಕಾಶ ಇರುವುದಿಲ್ಲ. ಒಂದು ವಾರದೊಳಗೆ ಎಲ್ಲರೂ ಮಾತುಕಥೆ ನಡೆಸಿ, ಸರಿಯಾಗಿ ಯೋಚಿಸಿ ಜಾಗದ ಆಯ್ಕೆ ನಿರ್ದಾರ ಮಾಡಿ ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.



ಸರ್ಕಾರಿ ಜಾಗದ ಕೊರತೆ: ಒಂಟೆಮಳ್ಳಿ ಗುಡ್ಡ ಬಿಟ್ಟರೆ ಹಳೇಬೀಡು ಸುತ್ತಮುತ್ತಾ ಸರ್ಕಾರಿ ಜಾಗದ ಕೊರತೆ ಇದೆ. ಸುಮಾರು 120 ನಿವಾಸಿಗಳು ಒಟ್ಟಾಗಿ ವಾಸ ಮಾಡುವುದರಿಂದ ಅಷ್ಟೇನು ಸಮಸ್ಯೆ ಆಗುವುದಿಲ್ಲ ಎಂದು ಬೂದಿಗುಂಡಿ ವಾರ್ಡ್ ಸದಸ್ಯ ಜಿಯಾವುಲ್ಲಾ ತಿಳಿಸಿದರು. 



ಸ್ವಾಮೀ ಕೂಲಿ ನಾಲಿ ಮಾಡಿಕೊಂಡು ಕಷ್ಟದ ಜೀವನ ನಡೆಸುತ್ತಿದ್ದೇವೆ. ದೂರದಲ್ಲಿ ಸೌಕರ್ಯ ಇಲ್ಲದ ಸ್ಥಳದಲ್ಲಿ ಜಾಗಕೊಟ್ಟರೆ ಹೆಂಗಸರು ಮಕ್ಕಳು ನಾವು ಅಲ್ಲಿಗೆ ಹೋಗಿ ಬದುಕುವುದು ಕಷ್ಟ. ಊರಿಗೆ ಹತ್ತಿರದ ಬೆಣ್ಣೆಗುಡ್ಡ ಪ್ರದೇಶದಲ್ಲಿ ಜಾಗಕೊಟ್ಟರೆ ಅನುಕೂಲ ಆಗುತ್ತದೆ ಎಂದು ವಿಧವೆ ಜಯಮ್ಮ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಮುಂದೆ ತೋಡಿಕೊಂಡರು.



ತಹಶೀಲ್ದಾರ್ ಚಿದಾನಂದ, ತಾಪಂ. ಸದಸ್ಯ ಬಿ.ಎಸ್.ಸೋಮಶೇಖರ್, ಇಒ ಶಿವಪ್ಪ, ಉಪತಹಶೀಲ್ದಾರ್ ಶ್ರೀಧರಮೂರ್ತಿ, ಕಂದಾಯ ನಿರೀಕ್ಷಕ ಎನ್.ಡಿ.ರಂಗಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.