ಪುನರ್‌ವಸತಿಗೆ ಮೀನ-ಮೇಷ: ವಿಷಾದ

7

ಪುನರ್‌ವಸತಿಗೆ ಮೀನ-ಮೇಷ: ವಿಷಾದ

Published:
Updated:

ಹರಿಹರ: ಶತಮಾನಗಳಿಂದ ಅನಿಷ್ಟ ಪದ್ಧತಿಗೆ ಬಲಿಯಾಗಿರುವ ದೇವದಾಸಿ ಮಹಿಳೆಯರ ಪುನರ್‌ವಸತಿ ಬಗ್ಗೆ ಸರ್ಕಾರ ಮೀನ-ಮೇಷ ಎಣಿಸುತ್ತಿರುವುದು ವಿಷಾದದ ಸಂಗತಿ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯ ವಿಮೋಚನಾ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಬಿ. ಮಾಳಮ್ಮ ಬೇಸರ ವ್ಯಕ್ತಪಡಿಸಿದರು.

ನಗರದ ಗುರುಭವನದಲ್ಲಿ ಗುರುವಾರ ನಡೆದ ದೇವದಾಸಿ ಮಹಿಳೆಯರ 2ನೇ ತಾಲ್ಲೂಕು ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದಲ್ಲಿರುವ ಒಟ್ಟು ದೇವದಾಸಿಯರ ಪಟ್ಟಿಯನ್ನು ಸರ್ವೆ ಮಾಡಿಸಿ ಸರ್ಕಾರಕ್ಕೆ ಸಲ್ಲಿಸಿ ಮೂರು ವರ್ಷವಾಗಿದೆ. ನಿರಂತರ ಹೋರಾಟದ ಫಲವಾಗಿ, ಇತ್ತೀಚೆಗೆ ಸರ್ಕಾರ ದೇವದಾಸಿಯರ ವಯೋಮಿತಿ ಆಧರಿಸಿ ಮಾಸಿಕ ರೂ. 400 ಪಿಂಚಣಿ ನೀಡುವ ವ್ಯವಸ್ಥೆ ಮಾಡಿದೆ. ದೊಡ್ಡ ಮಠ-ಮಾನ್ಯಗಳಿಗೆ ಆಯವ್ಯಯದಲ್ಲಿ 63 ಕೋಟಿ ಅನುದಾನ ಮೀಸಲಿರಿಸುವ ಪ್ರಸ್ತುತ ಬಿಜೆಪಿ ಸರ್ಕಾರ, ದೇವದಾಸಿಯರಿಗೆ ಪಿಂಚಣಿ ನೀಡಲು ಹಾಗೂ ಅವರಿಗೆ ಪುನರ್‌ವಸತಿಗೆ ಅನುದಾನ ಮೀಸಲಾಗಿರಿಸುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಯೊಬ್ಬ ದೇವದಾಸಿಯರಿಗೆ ಎರಡು ಎಕರೆ ಜಮೀನು ನೀಡಬೇಕು. ಮಾಸಿಕ ಪಿಂಚಣಿ ರೂ 1,000ಕ್ಕೆ ಏರಿಕೆ ಮಾಡಬೇಕು. ದೇವದಾಸಿ ಮಹಿಳೆಯರ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚವನ್ನು ಸರ್ಕಾರ ಭರಿಸಬೇಕು. ದೇವದಾಸಿಯರ ಹೆಣ್ಣು ಮಕ್ಕಳ ಮದುವೆಗೆ ರೂ 1ಲಕ್ಷ ಸಹಾಯಧನ ನೀಡಬೇಕು. ಖಾಸಗಿ ಕ್ಷೇತ್ರದಲ್ಲಿ ದೇವದಾಸಿಯರ ಮಕ್ಕಳಿಗೆ ಮೀಸಲಾತಿ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.ಸಂಘದ ರಾಜ್ಯ ಘಟಕದ ಗೌರವ ಅಧ್ಯಕ್ಷ ಕೆ.ಎಲ್. ಭಟ್ ಮಾತನಾಡಿ, ದೇವದಾಸಿಯರಿಗೂ ಸರ್ಕಾರ, `ಸಮ ಪಾಲು ಸಮ ಬಾಳು~ ಕಲ್ಪಿಸುವ ಯೋಜನೆಗಳನ್ನು ಜಾರಿಗೊಳಿಸಬೇಕು. ಕೆಳವರ್ಗದ ದಲಿತ ಅಮಾಯಕ ಹೆಣ್ಣುಮಕ್ಕಳ ಜೀವನ, ದೇವದಾಸಿ ಎಂಬ ಕೆಟ್ಟ ಪದ್ಧತಿ ಆಚರಣೆ ಮೂಲಕ ಹಾಳಾಗುತ್ತಿದೆ. ಮಹಿಳೆಯರು ಈ ಪಿಡುಗಿನಿಂದ ಹೊರಬಂದು ಘನತೆ-ಗೌರವದಿಂದ ಬದುಕು ಸಾಗಿಸುವ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು.ಸಂಘದ ರಾಜ್ಯ ಘಟಕದ ಉಪಾಧ್ಯಕ್ಷೆ ಟಿ. ಪದ್ಮಾವತಿ, ಜಿಲ್ಲಾ ಘಟಕದ ಕಾರ್ಯದರ್ಶಿ ಟಿ.ವಿ. ರೇಣುಕಮ್ಮ, ತಾಲ್ಲೂಕು ಘಟಕದ ಅಧ್ಯಕ್ಷೆ ಶಾಂತಮ್ಮ ಕೊಂಡಜ್ಜಿ, ಕಾರ್ಯದರ್ಶಿ ಗುರುಶಾಂತಮ್ಮ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry