ಪುನಶ್ಚೇತನದ ದಾರಿಗಳು...

7

ಪುನಶ್ಚೇತನದ ದಾರಿಗಳು...

Published:
Updated:
ಪುನಶ್ಚೇತನದ ದಾರಿಗಳು...

ಕೃಷ್ಣ ಮತ್ತು ಗಂಗೆ ನೀರನ್ನು ಮನೆಯ ಮುಂದೆ ಹರಿಸುತ್ತೇವೆ ಎಂಬ ಭರವಸೆ ಮರೆತು ಹೋಗುತ್ತದೆಯಾ? ಕಾದು ನೋಡಬೇಕಿದೆ... ಜಲಜಾಗೃತಿ ಸರಣಿಯ ಕೊನೆಯ ಕಂತು.ಬಳಸಿ, ಹಾಳು ಮಾಡಿ, ಎಸೆಯಿರಿ, ಹುಡುಕಿ... ಇದು ಮನುಷ್ಯನ ವಿಷಯದಲ್ಲಿ ಸಹಜ ಪ್ರಕ್ರಿಯೆ. ಯಾವುದೇ ಸಂಗತಿಯಲ್ಲೂ ನಾವು ಅನುಸರಿಸುವ ಮಾರ್ಗ ಇದೇ. ನೀರಿನ ವಿಷಯದಲ್ಲೂ ಒಮ್ಮೆ ಆಗುವ ತಪ್ಪು ಪದೇಪದೇ ಮರುಕಳಿಸುತ್ತಿರುತ್ತದೆ.ಸಂಪನ್ಮೂಲಗಳನ್ನು ಎಷ್ಟು ಬೇಕೋ ಅಷ್ಟು ಮಾತ್ರ ಬಳಸಿಕೊಳ್ಳುವ ಬದಲು ದುರಾಸೆಯಿಂದ ಎಲ್ಲವನ್ನೂ ಬೇಕಾಬಿಟ್ಟಿ ಉಪಯೋಗಿಸಿ, ನಶಿಸಿದ ನಂತರ ಬೇರೆಯದಕ್ಕೆ ಕೈಹಾಕುತ್ತೇವೆ. `ನೀರು ಮತ್ತು ಸಂಪನ್ಮೂಲ ಮುಗಿದುಹೋದರೆ ಚಿಂತೆಯಿಲ್ಲ, ಇನ್ನೊಂದು ಗ್ರಹಕ್ಕೆ ಹೋಗೋಣ~ ಎಂದು ದೊಡ್ಡವರು ತುಳಿದ ಹಾದಿಯನ್ನೇ ಇಂದಿನ ಮಕ್ಕಳೂ ಅನುಸರಿಸುತ್ತಿದ್ದಾರೆ.`ತಂತ್ರಜ್ಞಾನವೊಂದಿದ್ದರೆ ಸಾಕು, ಎಲ್ಲವನ್ನೂ ಗೆಲ್ಲಬಹುದು~ ಎಂಬ ಮನುಷ್ಯನ ಭಾವನೆ ನಾಳಿನ ಬಗ್ಗೆ ಚಿಂತಿಸುವುದು ಬೇಡ ಎನ್ನುವ ಮನೋಭಾವ ತಂದೊಡ್ಡಿದೆ. `ಇಂದು ನಲ್ಲಿಯಲ್ಲಿ ನೀರಿದೆ, ಹರಿಯಲಿ ಬಿಡು~ ಎನ್ನುವ ತಾತ್ಸಾರವೂ ಜನರಲ್ಲಿದೆ. ಎಲ್ಲಾ ಮಹಾನಗರಗಳ ಬಹುಪಾಲು ಜನರ ಧೋರಣೆ ಇದೇ ಆಗಿರುವುದರಿಂದ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.ನೀರಿನ ಸಮಸ್ಯೆ ಕುರಿತು ನಾಗರಿಕರಲ್ಲಿ ನಿಜವಾದ ಅರ್ಥದಲ್ಲಿ ಜಾಗೃತಿ ಮೂಡದಿದ್ದರೆ, ಕೆರೆ, ಜಲ ಸಂಗ್ರಹ, ಅಂತರ್ಜಲವನ್ನು ರಕ್ಷಿಸುವಲ್ಲಿ ತಾವೇ ಮುಂದಾಳತ್ವ ವಹಿಸದೇ ಇದ್ದರೆ, ಇದು ಚಳವಳಿಯಾಗಿ ಬದಲಾಗದಿದ್ದರೆ, ಎಷ್ಟೇ ಕಾನೂನು, ತಂತ್ರಜ್ಞಾನ ಹೊರತಂದರೂ ಕೋಟಿ ಜನರ ದಾಹ ನೀಗಿಸಲು ಸಾಧ್ಯವಿಲ್ಲ. ನೀರಿನ ಬವಣೆ ನಿಲ್ಲುವುದಿಲ್ಲ.ಕ್ರಿಯಾ ಯೋಜನೆಇತ್ತೀಚೆಗಷ್ಟೆ ಸೆಂಟರ್ ಫಾರ್ ಪಾಲಿಸೀಸ್ ಅಂಡ್ ಪ್ರಾಕ್ಟೀಸಸ್ (ಸಿಪಿಪಿ) ಮತ್ತು ಬಿಇಟಿ ಮುಂದೆ ಒದಗಲಿರುವ ನೀರಿನ ಕೊರತೆಯ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಸಮಾವೇಶವನ್ನು ಹಮ್ಮಿಕೊಂಡಿತ್ತು. ಭವಿಷ್ಯದಲ್ಲಿ ನೀರಿನ ಕೊರತೆ ಕಾಣಿಸಿಕೊಳ್ಳದಂತೆ ತಡೆಯಲು ಈ ಸಮಾವೇಶದಲ್ಲಿ 10 ವರ್ಷಗಳ ಅವಧಿಯ ಕ್ರಿಯಾ ಯೋಜನೆಯ ಕಾರ್ಯಸೂಚಿಯನ್ನು ಹೊರತರಲಾಯಿತು.ಕೆರೆಗಳ ಅಭಿವೃದ್ಧಿ ವಿಷಯವಾಗಿ ಎಲ್‌ಡಿಎ ನೇತೃತ್ವದಲ್ಲಿ ಕೆರೆಗಳ ಅಂತರ್‌ಸಂಪರ್ಕ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಬಿಬಿಎಂಪಿ ಮತ್ತು ಬಿಡಿಎ ಪ್ರದೇಶದ ಸುಮಾರು 10,300 ಎಕರೆ ಕೆರೆ ದಂಡೆ ಪ್ರದೇಶವನ್ನು ಮತ್ತು ಬೆಂಗಳೂರು ನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಪ್ರದೇಶದ 58,000 ಎಕರೆ ಪ್ರದೇಶವನ್ನು ಪುನಶ್ಚೇತನಗೊಳಿಸಬೇಕು.ಆದರೆ ಇವೆಲ್ಲವನ್ನೂ ಸಾಧ್ಯವಾಗಿಸುವಷ್ಟು ಹಣಕಾಸಿನ ಪೂರೈಕೆ ವ್ಯವಸ್ಥಿತವಾಗಿ ಆಗದಿದ್ದರೆ 2014ರ ವೇಳೆಗೂ ಪುನಶ್ಚೇತನ ಕಾರ್ಯ ಪೂರ್ಣಗೊಳ್ಳುವುದಿಲ್ಲ ಎಂಬ ವಿಷಯ ಚರ್ಚೆಯಲ್ಲಿ ಹೊರಬಿತ್ತು.ಅಲ್ಪಾವಧಿ ಯೋಜನೆಯಡಿಯಲ್ಲಿ ಸುಮಾರು 40 ಕೆರೆಗಳನ್ನು ಪುನಶ್ಚೇತನಗೊಳಿಸಿ, 5 ವರ್ಷದೊಳಗೆ ಏರುತ್ತಿರುವ ಜನಸಂಖ್ಯೆಯ ಅವಶ್ಯಕತೆ ನೀಗಿಸಲು 500 ಎಂಎಲ್‌ಡಿ ನೀರನ್ನು ಹೆಚ್ಚಿಸುವ ಗುರಿ ಮುಟ್ಟುವುದು ಸಾಧ್ಯವಾದರೆ, ದೀರ್ಘಾವಧಿಯ ಯೋಜನೆಯನ್ನು 15 ವರ್ಷಕ್ಕೆ ನಿಗದಿಪಡಿಸಿ ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿನ (ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ) ಎಲ್ಲಾ ಕೆರೆಗಳನ್ನು (3,200 ಅಥವಾ ಹೆಚ್ಚು) ಪುನಶ್ಚೇತನಗೊಳಿಸಬಹುದು ಎಂದು ಅಂದಾಜಿಸಲಾಗಿದೆ.ಬೆಂಗಳೂರು ವ್ಯಾಪ್ತಿಯಲ್ಲಿ ಸುಮಾರು 3,200 ಜಲಮೂಲಗಳಿದ್ದು, ಇವೆಲ್ಲವನ್ನೂ ಅಭಿವೃದ್ಧಿಪಡಿಸುವ ಯೋಜನೆಯನ್ನು ರೂಪಿಸಬೇಕಿದೆ. ಈ ದೀರ್ಘಾವಧಿ ಯೋಜನೆಗೆ ಸುಮಾರು 15,000 ಕೋಟಿ ರೂ. ಹಣ ಖರ್ಚಾಗುವ ಅಂದಾಜಿದೆ.ಎಲ್‌ಡಿಎ ಈ ಕುರಿತು ಸಮರ್ಪಕ ಯೋಜನೆ ರೂಪಿಸಿ, ಕೇಂದ್ರ ಸರ್ಕಾರವಲ್ಲದೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್, ವರ್ಲ್ಡ್ ಬ್ಯಾಂಕ್, ಜಪಾನ್ ಬ್ಯಾಂಕ್ ಇನ್ನಿತರ ಹಣಕಾಸು ಸಂಸ್ಥೆಗಳಿಂದ ಸಹಾಯ ಪಡೆದುಕೊಳ್ಳಬಹುದು. ಜನಸಂಖ್ಯೆ ಏರುಗತಿಯಲ್ಲಿರುವ ಬೆಂಗಳೂರಿಗೆ ಇಂತಹ ಯೋಜನೆ ಅತ್ಯವಶ್ಯಕ ಎಂದು ಕ್ರಿಯಾ ಯೋಜನೆಯ ಕಾರ್ಯಸೂಚಿಯಲ್ಲಿ ಉಲ್ಲೇಖಿಸಲಾಗಿದೆ.ಇನ್ನು ನೀರು ಸೋರಿಕೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ, ಧಾರವಾಡ, ಬೆಳಗಾಂ, ಗುಲ್ಬರ್ಗಗಳಲ್ಲಿ ಐದು ವರ್ಷದ ಅವಧಿಯಲ್ಲಿ ಯಶಸ್ಸು ಕಂಡ, ಕೆಯುಐಡಿಎಫ್ ಕೈಗೊಂಡಿದ್ದ `24/7~ ಹೆಸರಿನ ಯೋಜನೆಯನ್ನು ಇಲ್ಲಿಯೂ ಅನುಸರಿಸಬಹುದು.

`ಕರ್ನಾಟಕ ನಗರ ಜಲಕ್ಷೇತ್ರ ಸುಧಾರಣಾ ಯೋಜನೆ~ (ಕೆಯುಡಬ್ಲುಎಎಸ್‌ಪಿಐ) ಅಡಿಯಲ್ಲಿ ನೀರಿನ ಸೋರಿಕೆಯನ್ನು ತಡೆಯಲು ಕೆಲವು ಸಂಸ್ಥೆಗಳು ಮತ್ತು ವಿಯೊಲಿಯಾ ಎಂಬ ಫ್ರೆಂಚ್ ಖಾಸಗಿ ಕಂಪೆನಿ ಜೊತೆಯಾಗಿದ್ದವು.

 

ವಿಶ್ವಬ್ಯಾಂಕ್‌ನಿಂದ ಸಹಾಯ ಪಡೆದು ನೀರಿನ ನಿರ್ವಹಣೆ ಕಾರ್ಯವನ್ನು ಕೈಗೊಂಡಿದ್ದವು. ಇದರಿಂದ ದಿನದ 24 ಗಂಟೆಯೂ ನೀರು ಸರಬರಾಜು ಸಾಧ್ಯವಾಗಿತ್ತು.

ಕೆರೆದಂಡೆಗಳ ಒತ್ತುವರಿಯನ್ನು ತಡೆಗಟ್ಟಿ, ಕೆರೆ ಪುನಶ್ಚೇತನ ಮತ್ತು ಶುದ್ಧೀಕರಣ ಯೋಜನೆಗಳಿಗೆ ಚಾಲನೆ ನೀಡಿ, ಅಂತರ್ಜಲ ಕೊರೆತವನ್ನು ಪರಿಶೀಲಿಸಿ, ಮಾಲಿನ್ಯ ನಿಯಂತ್ರಣ ಮಂಡಳಿ ಜಲಮಾಲಿನ್ಯಕ್ಕೆ ಕಾರಣರಾದವರಿಗೆ ದಂಡ ವಿಧಿಸುವುದು ಇಂತಹ ಹಲವು ಪರಿಹಾರಗಳನ್ನು ಈ ಕಾರ್ಯಸೂಚಿಯಲ್ಲಿ ತಿಳಿಸಲಾಗಿದೆ.ಈ ಎಲ್ಲಾ ಸಲಹೆಗಳನ್ನು ಜಾರಿಗೆ ತರಲು 24,000 ಕೋಟಿಗಳಷ್ಟು ಬಂಡವಾಳದ ಅಗತ್ಯವಿದೆ ಎಂದೂ ತಿಳಿಸಿದೆ.ಇಷ್ಟು ಹಣವನ್ನು ಸರ್ಕಾರ ನೀರಿಗಾಗಿ ನೀಡಲು ಸಿದ್ಧವಿದೆಯೇ ಅಥವಾ ಕೃಷ್ಣ ಮತ್ತು ಗಂಗೆ ನೀರನ್ನು ನಿಮ್ಮ ಮನೆಯ ಮುಂದೆ ಹರಿಸುತ್ತೇವೆ ಎಂಬ ಭರವಸೆ ಪ್ರಮಾಣಗಳ ಮಾತುಗಳಲ್ಲಿಯೇ ಎಲ್ಲವೂ ಮರೆತು ಹೋಗುತ್ತವೆಯೋ ಎಂಬುದನ್ನು ಕಾದು ನೋಡಬೇಕಿದೆ, ಅಷ್ಟೆ.(ಮುಗಿಯಿತು)-ಲೇಖಕಿ ಹವ್ಯಾಸಿ ಪತ್ರಕರ್ತೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry