ಭಾನುವಾರ, ಜನವರಿ 26, 2020
18 °C

ಪುರಂದರದಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂದಪದ್ಯ

ತಂಬೂರಿಯನು ಮೀಟಿ

ಜಂಗದ ಜಂಜಡ ದಾಟಿ

ಹೋದ ಹೋದನಾ ದಾಸ

ಅವನೇ ಪುರಂದರದಾಸ!

ಪುರಂದರಗಡದಲ್ಲಿ ಹುಟ್ಟಿದನಂತೆ

ಹೆಸರು ಶೀನಪ್ಪ ನಾಯಕ.

ದಮ್ಮಡಿ ದುಗ್ಗಾಣಿ ಗಂಟಿಕ್ಕಿ

ಆದ ಜಿಪುಣಾಗ್ರೇಸರ ನಾಯಕ!

ಪೂರ್ವಜನ್ಮದ ಪುಣ್ಯದ ಫಲವೋ ಎಂಬಂತೆ

ಅದೊಂದು ದಿನ ಬಡ ಬ್ರಾಹ್ಮಣನೊಬ್ಬ ಬಂದಿದ್ದ.

ಅವನೆದುರು ದೀನವದನನಾಗಿ ನಿಂತಿದ್ದ.

ಮಗನ ಮುಂಜಿಗಾಗಿ ಹಣಕಾಸು ಬೇಡಿದ್ದ.

ಎಂಜಲ ಕೈಯ್ಯಲ್ಲಿ ಕಾಗೆಯನ್ನೂ ಓಡಿಸದವ

ಕೈಯೆತ್ತಿ ದಾನ ನೀಡಲಿಲ್ಲ.

ಇಂದು ಬಾ ನಾಳೆಬಾ ಎನ್ನತೊಡಗಿದ

ಆದರೆ ಆ ಬಡವ ಬಿಡಲಿಲ್ಲ.

ನಾಯಕನ ಸರಾಫ ಕಟ್ಟೆಯಲ್ಲಿ

ಅವನಿಗೆ ಏನೂ ಗಿಟ್ಟಲಿಲ್ಲ.

ಅದಕ್ಕೆ ಅವನು ಅವನ ಮನೆಗೇ ಹೋದ.

ಸಾಧ್ವಿ ಸರಸ್ವತಿಯಿದ್ದಳು. ನಾಯಕ ಅಲ್ಲಿರಲಿಲ್ಲ.

ನೊಂದು ನುಡಿದಳು ಸರಸ್ವತಿ,

`ನಾನು ಪರಾಧೀನೆ. ನಾನೇನು ಕೊಡಬಲ್ಲೆ~

ಅವನೆಂದ, `ನಿನ್ನ ಮುತ್ತಿನ ಮೂಗತಿ ಕೊಡು ತಾಯಿ

ನಾನು ಇನ್ನೇನನ್ನೂ ಒಲ್ಲೆ....~

ದ್ವಿಜ ಎರಡನೇ ಬಾರಿಗೆ

ಸರಾಫ ಕಟ್ಟೆಗೆ ಬರುತ್ತಾನೆ.

ಮೂಗುತಿಯ ಬೆಲೆ ಕಟ್ಟಲು ಕೇಳುತ್ತಾನೆ.

ನಾಯಕ ಕ್ರುದ್ಧನಾಗಿ ಮನೆಗೆ ಹೋಗುತ್ತಾನೆ.

ನಾಯಕ ಸತಿಯನ್ನು ಪೀಡಿಸಲು

ವಿಷಪ್ರಾಶನ ಮಾಡಲು ಹೋಗುತ್ತಾಳೆ.

ಮೂಗತಿ ಬಟ್ಟಲಲ್ಲಿ ಬಂದುಬಿದ್ದಾಗ

ಏನೊಂದೂ ಅರಿಯದೆ ವಿಚಲಿತಳಾಗುತ್ತಾಳೆ.

`ಎಲ್ಲಾ ಲೊಳಲೊಟ್ಟೆ~ ಎನ್ನುತ್ತ ನಾಯಕ

`ಒಂದು ದಳ ಶ್ರೀತುಳಸಿ~ ಇಡುತ್ತಾನೆ.

ತನ್ನದನ್ನೆಲ್ಲ `ಕೃಷ್ಣಾರ್ಪಣ~ ಎನ್ನುತ್ತ

ತಾಳತಂಬೂರಿ ಹಿಡಿದು ನಡೆದುಬಿಡುತ್ತಾನೆ!

ಜಿಪುಣ ನಾಯಕ ಹರಿದಾಸನಾದುದ ಕಂಡು

ವ್ಯಾಸತೀರ್ಥರು ನಿಬ್ಬೆರಗಾಗುತ್ತಾರೆ.

`ಪುರಂದರ ವಿಠಲ~ ಎಂಬ ಅಂಕಿತವನ್ನಿತ್ತು

ಕನ್ನಡದಲ್ಲಿ ಶ್ರೀಹರಿಯ ಕೊಂಡಾಡೆಂದು ಹರಸುತ್ತಾರೆ.

ಸತಿಯ `ಮುಕ್ತಿಯ ಮೂಗುತಿ~ಯಿಂದ

ಶೀನಪ್ಪ ಪುರಂದರದಾಸನಾದ.

`ಕೆರೆಯ ನೀರನು ಕೆರೆಗೆ ಚೆಲ್ಲಿರಿ~

`ಮಾನವ ಜನ್ಮ ದೊಡ್ಡದು~ ಎನ್ನುತ್ತ ದಾಸಶ್ರೇಷ್ಠನಾದ!

(ಜನವರಿ 23 ಪುರಂದರದಾಸರ ಆರಾಧನಾ ದಿನ).

ಪ್ರತಿಕ್ರಿಯಿಸಿ (+)