'ಪುರ'ದ ಪುಣ್ಯ

7
ಹೂವಾದವೋ ಎಲ್ಲ ಹೂವಾದವೋ...

'ಪುರ'ದ ಪುಣ್ಯ

Published:
Updated:
'ಪುರ'ದ ಪುಣ್ಯ

ಕೋಲಾರ ಜಿಲ್ಲೆಯ ಗಡಿಭಾಗವಾದ ಈ ಹಳ್ಳಿಯಲ್ಲಿ ನಿತ್ಯವೂ ಮೊದಲ ಬಸ್ ಬೆಂಗಳೂರಿಗೆ ಹೊರಡುವುದು ಬೆಳಗಿನ ಜಾವ 3.30ಕ್ಕೆ. ಐದ್ಹತ್ತು ನಿಮಿಷ ಆಚೀಚೆಯಾಗಬಹುದು. ಆದರೆ ಅದಕ್ಕೆ ಒಂದು ಗಂಟೆ ಮುಂಚೆಯಿಂದಲೇ ಹೂವಿನ ಮೂಟೆಗಳನ್ನು ಹೊತ್ತು ಒಬ್ಬೊಬ್ಬರೇ ಬಂದು ನೆರೆಯತೊಡಗುತ್ತಾರೆ. ಅದಕ್ಕೂ ಮುಂಚೆ ಅವರು ಒಂದೆರಡು ಗಂಟೆ ನಿದ್ದೆ ಮಾಡುತ್ತಾರಷ್ಟೆ.

ಅಲ್ಲಿವರೆಗೂ ಅವರು, ಬೆಳಿಗ್ಗೆಯಿಂದ ಬಿಡುವಿಲ್ಲದಂತೆ ಹೂವಿನ ರಾಶಿಯ ನಡುವೆ ಕುಳಿತು ಹಲವು ಬಗೆಯ ಹೂ ಕುಚ್ಚುಗಳನ್ನು ಕಟ್ಟುತ್ತಿರುತ್ತಾರೆ.ಪ್ರತಿ ಸಂಜೆ ವೇಳೆ ಈ ಹಳ್ಳಿಯ ಬೀದಿಗಳಲ್ಲಿ ನಡೆದರೆ ಇಹದ ಪರಿಮಳದ ಹಾದಿಯಲ್ಲಿ ನಡೆದ ಅನುಭವವಾಗುತ್ತದೆ. ಈ ಹೂವಾಡಿಗರ ಕೈಯಲ್ಲಿ ಒಂದೊಂದೇ ಹೂವು ದಾರ ಸೇರುತ್ತಾ ಆಕರ್ಷಕ ಹೂಮಾಲೆಯಾಗುತ್ತದೆ. ಪ್ರತಿ ಮನೆಯೂ ಒಂದು ಹೂವಿನ ಮನೆ. ಮನೆಯ ಹೊರಗೆ ಕಾಣುವ ಕಸದಲ್ಲೂ ಹೂವು, ಪರಿಮಳ. ಪರಿಮಳದ ನಡುವೆ ಅವರದು ನಿದ್ದೆಗೆಟ್ಟ ಬದುಕು. ನಿಲ್ಲದ ಪರಿಶ್ರಮ. ಅದಕ್ಕಾಗಿ ಅವರು ಎಂದಿಗೂ ಬೇಸರ ಪಟ್ಟಿಲ್ಲ ಎಂಬುದೇ ವಿಶೇಷ. ಹೂ ಬೆಳೆಯುವುದು, ಮಾರುವುದರಲ್ಲಿ ಅವರದು ಎಂದಿಗೂ ಎತ್ತಿದ ಕೈ.ಮಾಲೂರು ತಾಲ್ಲೂಕಿನ ಲಕ್ಕೂರು ಹೋಬಳಿ ವ್ಯಾಪ್ತಿಯಲ್ಲಿರುವ ಎಚ್.ಹೊಸಕೋಟೆ ಗ್ರಾಮ ಪಂಚಾಯಿತಿಗೆ ಸೇರಿದ ಪುಟ್ಟ ಹಳ್ಳಿ ಪುರ. ಇದು ಹೂವಾಡಿಗರ ಊರು. ಹೂವನ್ನು ಬೆಳೆಯುವ ರೈತರೂ ಇಲ್ಲಿದ್ದಾರೆ. ಆದರೆ ಅವರಿಗಿಂತಲೂ ಹೆಚ್ಚಾಗಿ ಹೂವಿನೊಂದಿಗೆ ಒಡನಾಟ ಮಾಡುವವರು ಹೂವಾಡಿಗರು. ಇಲ್ಲಿ ಹೂ ಕಟ್ಟುತ್ತಲೇ ಮಕ್ಕಳು ಬೆಳೆಯುತ್ತಾರೆ. ಕಷ್ಟಪಟ್ಟು ಓದುತ್ತಾರೆ. ಒಳ್ಳೆ ಕೆಲಸಗಳಿಗೂ ಹೋಗುತ್ತಾರೆ.

ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಿ, ತನ್ನ ಅದ್ವಿತೀಯ ಸಾಧನೆಯ ಕಾರಣಕ್ಕೆ ರೈಲ್ವೆ ಇಲಾಖೆಯಲ್ಲಿ ಕೆಲಸ ಪಡೆದ ಅಪ್ರತಿಮ ಓಟಗಾರ್ತಿ ಲಕ್ಕೂರು ಮಂಜುಳಾ ಹೆಸರು ಯಾರು ಕೇಳಿಲ್ಲ? ಆಕೆ ಇದೇ ಹಳ್ಳಿಯ ಹುಡುಗಿ ಎಂಬುದು ಬಹಳ ಮಂದಿಗೆ ಗೊತ್ತಿಲ್ಲ. ಹೂ ಕಟ್ಟುತ್ತಲೇ ಓಡುವುದನ್ನು ಅಭ್ಯಾಸ ಮಾಡಿದ ಅಪರೂಪದ ಸಾಧಕಿ ಆಕೆ. ಮನೆಯವರು ಕಟ್ಟಿಕೊಟ್ಟ ಹೂಗುಚ್ಛಗಳನ್ನು ಬೆಂಗಳೂರಿನ ಮಾರುಕಟ್ಟೆಗೆ ಒಯ್ದು ಮಾರುತ್ತಲೇ ಬೆಳೆದು, ಈಗ ಯುವಜನಸೇವೆ ಮತ್ತು ಕ್ರೀಡಾ ಇಲಾಖೆಯಲ್ಲಿ ಉತ್ಸಾಹಿ ಅಥ್ಲೆಟಿಕ್ ತರಬೇತುದಾರರಾಗಿರುವ ಪಿ.ಎಲ್.ಶಂಕರಪ್ಪ ಮಂಜುಳಾ ಅವರ ಅಣ್ಣ ಎಂಬುದೂ ಗಮನಾರ್ಹ.ಹಗಲು-ರಾತ್ರಿ ಹೂ ಕಟ್ಟುತ್ತಾ ಹೀಗೆ ಓದಿಕೊಂಡೇ ಒಳ್ಳೆಯ ಕೆಲಸ ಪಡೆದವರೂ ಪುರದಲ್ಲಿ ಹಲವರಿದ್ದಾರೆ. ಡಿ.ಎನ್.ದೊಡ್ಡಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಂಜುನಾಥ್, ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿರುವ ಆಗಿರುವ ರವಿ, ಅಶೋಕ್, ಅರುಣಾ, ಭಾರತೀಯ ಸೇನೆಯಲ್ಲಿರುವ ಬಾಲಾಜಿ, ಹರೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಅಂಬರೀಶ್ ಇದೇ ಹಳ್ಳಿಯವರು. ಇವರೆಲ್ಲ ಹೂ ಕಟ್ಟುತ್ತಲೇ ಬೆಳೆದವರು. ಈ ಪರಂಪರೆ ಈಗಲೂ ಮುಂದುವರಿಯುತ್ತಲೇ ಇದೆ. ಈ ಪರಂಪರೆಯಲ್ಲಿ ಕೆಲ ಅಂಗವಿಕಲರೂ ಇದ್ದಾರೆ.***

`ಮಂಗಳವಾರ ಬೆಳಿಗ್ಗೆ ಹೂವನ್ನು ಬೆಂಗಳೂರಿನಿಂದ ತರುತ್ತೇವೆ. ಆವತ್ತೆಲ್ಲಾ ಹೂ ಕುಚ್ಚು ಕಟ್ಟುತ್ತೇವೆ. ಬುಧವಾರ ಬೆಳಗಿನ ಜಾವ 3.30ಕ್ಕೆ ನಮ್ಮ ಹಳ್ಳಿಯಿಂದ ಹೊರಡುವ ಬಸ್ ಹತ್ತಿ 5 ಗಂಟೆ ಹೊತ್ತಿಗೆ ಸಿಟಿ ಮಾರ್ಕೆಟ್‌ಗೆ ಹೋಗುತ್ತೇವೆ. ಅಲ್ಲಿ ಬೇಕಾದ ಹೂವನ್ನು 6 ಗಂಟೆವರೆಗೂ ಕೊಳ್ಳುತ್ತೇವೆ. ಮತ್ತೆ ಪುರದ ಬಸ್ ಹತ್ತುತ್ತೇವೆ. ಹಳ್ಳಿಗೆ ಬರುವ ಹೊತ್ತಿಗೆ 8.30 ಆಗಿರುತ್ತದೆ. ತಿಂಡಿ ತಿಂದು ಮತ್ತೆ ಹೂಕಟ್ಟಲು ಕುಳಿತುಕೊಳ್ಳುತ್ತೇವೆ. ರಾತ್ರಿ 11.30ರವರೆಗೂ ಕಟ್ಟುತ್ತೇವೆ. ಗುರುವಾರ ಬೆಳಗಿನ ಜಾವ ಮತ್ತೆ 3 ಗಂಟೆಗೇ ಏಳುತ್ತೇವೆ. ಮೊದಲ ಬಸ್ ಹತ್ತಿ ಅಲಸೂರಿನಲ್ಲಿ ಇಳೀತೀವಿ. ಬೆಳಿಗ್ಗೆ 5.30ರಿಂದ ರಾತ್ರಿ 9.30ರವರೆಗೂ ಎಲ್ಲ ಕಡೆ ಸುತ್ತಿ ವ್ಯಾಪಾರ ಮಾಡುತ್ತೇವೆ. ಆದರೆ ಆವತ್ತು ರಾತ್ರಿ ಪುರಕ್ಕೆ ವಾಪಸು ಬರುವುದಿಲ್ಲ. ಬದಲಿಗೆ ಪರಿಚಯಸ್ಥರ ಮನೆಗಳ ವರಾಂಡದಲ್ಲಿಯೇ ಚಳಿ, ಗಾಳಿ ಎನ್ನದೆ ಮಲಗುತ್ತೇವೆ...'`ಮತ್ತೆ ಶುಕ್ರವಾರ ಬೆಳಗಿನ ಜಾವ ಎದ್ದು ಅಲಸೂರು ಬಸ್‌ಸ್ಟಾಪ್‌ಗೆ ಹೋದರೆ ಮನೆಯವರು ಕಟ್ಟಿ ಕಳಿಸಿದ ಹೂ ಕುಚ್ಚಿನ ಮೂಟೆಗಳು ಬಂದಿರುತ್ತವೆ. ಅವುಗಳನ್ನು ಇಳಿಸಿಕೊಂಡು ಮತ್ತೆ ಸುತ್ತಾಡಿ ಮಾರುತ್ತೇವೆ. 10.30ರ ವೇಳೆಗೆ ಯಾವುದಾದರೂ ಹೋಟೆಲ್‌ನಲ್ಲಿ ತಿಂಡಿ ತಿಂದು ಮತ್ತೆ ಪುರದ ಬಸ್ ಹತ್ತುತ್ತೇವೆ. ಮಧ್ಯಾಹ್ನ 3 ಗಂಟೆ ಹೊತ್ತಿಗೆ ಹಳ್ಳಿಗೆ ಬರುತ್ತೇವೆ. ಆವತ್ತು ರಾತ್ರಿ ಫುಲ್ ರೆಸ್ಟ್ ತಗೋತೇವೆ.ಶನಿವಾರ ಸುತ್ತಮುತ್ತಲಿನ ಹಳ್ಳಿಗಳ ರೈತರಿಂದ ಹೂ ಕೊಳ್ಳುತ್ತೇವೆ. ಕುಚ್ಚುಗಳನ್ನು ಕಟ್ಟುತ್ತೇವೆ. ಭಾನುವಾರ ಬೆಳಿಗ್ಗೆ ಬೆಂಗಳೂರಿಗೆ ಹೋಗಿ ಮಾರಿ ಮಧ್ಯಾಹ್ನದ ಹೊತ್ತಿಗೆ ವಾಪಸ್ ಬರುತ್ತೇವೆ. ಬರುವಾಗ ಹೂವು ತರುತ್ತೇವೆ. ಭಾನುವಾರವೆಲ್ಲ ಹೂ ಕಟ್ಟುತ್ತೇವೆ. ಸೋಮವಾರ ಬೆಳಿಗ್ಗೆ ಬೆಂಗಳೂರಿಗೆ ಹೋಗಿ ಮಾರಿ ಬರ್ತಾ ಮತ್ತೆ ಹೂ ತರುತ್ತೇವೆ...'-ಹದಿನಾರು ವರ್ಷದಿಂದ ಹೂವನ್ನು ಬೆಂಗಳೂರಿನಿಂದ ಕೊಂಡು ತರುವುದು, ಕುಚ್ಚು ಕಟ್ಟುವುದು ಮತ್ತು ಬೆಂಗಳೂರಿಗೆ ಒಯ್ದು ಮಾರಿ ಬರುವ ಕೆಲಸವನ್ನು ಖುಷಿಯಾಗಿ ಮಾಡುತ್ತಿರುವ ಈ ಹಳ್ಳಿಯ 36 ಹರೆಯದ ಗೃಹಸ್ಥ ಮುನಿರಾಜು ಒಂದು ಬುಧವಾರ ಮಧ್ಯರಾತ್ರಿ ವೇಳೆಯಲ್ಲಿ ಹೂ ಕುಚ್ಚು ಕಟ್ಟುತ್ತಲೇ ತನ್ನ ವಾರದ ದಿನಚರಿಯನ್ನು ವಿವರಿಸಿದ್ದು ಹೀಗೆ!ಪುರದಿಂದ ಬೆಂಗಳೂರಿಗೆ ಹೂವಿನ ಮೂಟೆಗಳೊಂದಿಗೆ ಅಲಸೂರು ಬಸ್ ಸ್ಟಾಪಿನಲ್ಲಿ ಬೆಳಗಿನ ಜಾವ ಬಂದಿಳಿವ ಪುರದ ಹೂವಾಡಿಗರ ಪೈಕಿ ಯುವಕರು, ತಮ್ಮ ಸೈಕಲ್ ಮತ್ತು ಅದರ ಮೇಲಿಡುವ ದೊಡ್ಡ ಹೂ ಬುಟ್ಟಿಯನ್ನು ಪರಿಚಯಸ್ಥರ ಅಂಗಡಿಗಳಲ್ಲಿ, ಮನೆಗಳ ಕಾಂಪೌಂಡ್‌ನಲ್ಲಿ, ದೇವಾಲಯದ ಆವರಣಗಳಲ್ಲಿ ಇಟ್ಟಿರುತ್ತಾರೆ. ಆಶ್ರಯ ಕೊಡುವವರಿಗೂ ಇವರು ಪ್ರಿತಿಪಾತ್ರರು. ಯುವಕರು ಬಸ್ಸಿಳಿದ ಕೂಡಲೇ ಸೈಕಲ್ ಮತ್ತು ಬುಟ್ಟಿಗಳಿಗೂ ಜೀವ ಬರುತ್ತದೆ. 6 ಗಂಟೆವರೆಗೂ ಹೂಹಾರಗಳನ್ನು ಅಚ್ಚುಕಟ್ಟಾಗಿ ಜೋಡಿಸಿಕೊಂಡ ಬಳಿಕ ಹೂ ಮಾರುವ ಅವರ ಪ್ರಯಾಣ ಶುರುವಾಗುತ್ತದೆ.ಅಲಸೂರು ಸುತ್ತಮುತ್ತಲಿನ ದೂರದ ನಗರ ಪ್ರದೇಶಗಳಾದ ಲಕ್ಷ್ಮಿಪುರ, ಲಿಂಗಯ್ಯನ ಪಾಳ್ಯ, ಅಪ್ಪರೆಡ್ಡಿ ಪಾಳ್ಯ, ಧೂಪನಹಳ್ಳಿ, ಕೋಡಳ್ಳಿ, ದೊಮ್ಮಲೂರು, ಎಚ್‌ಎಎಲ್, ತಿಪ್ಪಸಂದ್ರ, ಜಿಎಂ ಪಾಳ್ಯ, ಮಲ್ಲೇಶಿಪಾಳ್ಯ, ಕಗ್ಗಿದಾಸಪುರ, ಸಿ.ವಿ.ರಾಮನ್ ನಗರ ಸೇರಿದಂತೆ ಸುಮಾರು 10 ಕಿಮೀ ದೂರದವರೆಗೂ ನಡೆದು, ಸೈಕಲ್ ತುಳಿದು ಅವರು ಹೂ ಮಾರುತ್ತಾರೆ. ಅವರು ಮಾಲೂರಿನ ಪುಟ್ಟ ಹಳ್ಳಿಯಲ್ಲಿ ಕುಳಿತು ಕಟ್ಟಿದ ಹೂ ಮಾಲೆಗಳು ಅವು ಎಂದು ಬಹುತೇಕ ಮಂದಿಗೆ ಗೊತ್ತಾಗುವುದೇ ಇಲ್ಲ!ಹೂವನ್ನು ಕಟ್ಟುತ್ತಲೇ ಪಿ.ಮುನಿರಾಜು ಅವರ ಇಡೀ ಕುಟುಂಬ ಬದುಕನ್ನೂ ಕಟ್ಟಿಕೊಂಡಿದೆ. ಅವರ ಒಬ್ಬ ತಮ್ಮ ಪಿ.ಮಂಜುನಾಥ್ ಡಿ.ಎನ್.ದೊಡ್ಡಿ ಗ್ರಾಮದಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕ. ಪಿ.ವೆಂಕಟೇಶ್ ಐಬಿಎಂನಲ್ಲಿ ಮುಖ್ಯ ಹುದ್ದೆಯಲ್ಲಿದ್ದಾರೆ. ಇವರೆಲ್ಲರೂ ಹೂ ಕಟ್ಟುತ್ತಲೇ ಮುಳ್ಳಿನ ಹಾದಿಯಲ್ಲಿ ನಡೆದವರು.ಈ ಹಳ್ಳಿಯ ಹೂವಾಡಿಗ ಸಮುದಾಯದವರ ದಿನಚರಿ ಇದಕ್ಕಿಂತ ಭಿನ್ನವಾಗಿಲ್ಲ. ಅವರಲ್ಲಿ ಚಿಕ್ಕವಯಸ್ಸಿನ ಗೃಹಿಣಿಯರು, ಗೃಹಸ್ಥರು, ಶಾಲೆಯನ್ನು ಅರ್ಧಕ್ಕೇ ಬಿಟ್ಟವರು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ತರಗತಿಗಳಲ್ಲಿ ಓದುತ್ತಿರುವವರು, ತರುಣಿಯರು, ತರುಣರು ಅವರೊಂದಿಗೆ ಮುದುಕರು-ಮುದುಕಿಯರು, ಹೀಗೆ ನೂರಾರು ಜನ ಹೂ ಸಂಗಡವೇ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದೇನೂ ಹೊಸ ತಲೆಮಾರಿನ ಕತೆಯಲ್ಲ. ಎರಡು-ಮೂರು ತಲೆಮಾರಿನಿಂದಲೂ ಈ ಹೂ ಜೀವನ ನಡೆಯುತ್ತಿದೆ. ಎಷ್ಟೋ ಮನೆಗಳ ಹೆಸರು ಹೂವಿನೊಂದಿಗೆ ಬೆರೆತುಬಿಟ್ಟಿವೆ. ಹೂವಿನ ಲಕ್ಷ್ಮಯ್ಯ, ಹೂವಿನ ಪಾಪಣ್ಣ, ಹೂವಿನ ರಾಜಣ್ಣ, ಹೂವಿನ ಕೃಷ್ಣಪ್ಪ...***

ಹಳೇ ತಲೆಮಾರಿನ ಜನ ಪುರದಿಂದ ಆಚೆಗೂ ಹಲವು ಬಗೆಯ ಬದುಕಿದೆ ಎಂಬುದನ್ನು ಸೀಮಿತವಾದ ಅರ್ಥದಲ್ಲಿ ಕಂಡವರು. ಆದರೆ ಹೊಸ ತಲೆಮಾರಿನವರು ಹೂವಿನ ವ್ಯಾಪಾರದಾಚೆಗಿನ ವೃತ್ತಿ-ಜೀವನದ ಬಗ್ಗೆಯೂ ಕನಸು, ಆಸೆಗಳನ್ನು ಇಟ್ಟುಕೊಂಡವರು. ಹಲವರು ಅದರಲ್ಲಿ ಯಶಸ್ಸು ಕಂಡಿದ್ದಾರೆ ಎಂಬುದೇ ಪುರದ ವಿಶೇಷ. ಹಲವರು ಪುರವನ್ನು ದಾಟಿ ಪಟ್ಟಣ, ನಗರ ಸೇರಿ ಒಳ್ಳೆಯ ಕೆಲಸಗಳನ್ನು ಪಡೆದು, ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry