ಪುರಭವನ ಹೆಸರು, ರೂಪ ಎರಡೂ ಬದಲು!

7

ಪುರಭವನ ಹೆಸರು, ರೂಪ ಎರಡೂ ಬದಲು!

Published:
Updated:

ಗುಲ್ಬರ್ಗ: ಹಲವು ದಶಕಗಳನ್ನು ಕಂಡ ನಗರದ ಮೆಹಬೂಬ್‌ ಗುಲ್‌ಷನ್‌ ಸಾರ್ವಜನಿಕ ಉದ್ಯಾನದಲ್ಲಿರುವ ಇಂದಿರಾ ಸ್ಮಾರಕ ಭವನ ಇಂದು ಕೇವಲ ಸಭಾ ಭವನ ಆಗಿ ಮಾರ್ಪಡುತ್ತಿದೆ.ಒಂದು ಕಾಲದಲ್ಲಿ ನಗರದ ಪುರ­ಭವನ (ಟೌನ್‌ಹಾಲ್‌) ಆಗಿದ್ದ ಈ ಕಟ್ಟಡ ಇಂದು ಈ ಹೆಸರಿನಿಂದ ಕರೆಯ­ಲ್ಪಡುತ್ತಿದೆ. ಎಸ್‌.ಎಂ. ಪಂಡಿತ ರಂಗ­ಮಂದಿರದ ಅನತಿ ದೂರದಲ್ಲೇ ಇರುವ ಈ ಕಟ್ಟಡಕ್ಕೆ ಸಾಂಸ್ಕೃತಿಕ ಇತಿಹಾಸವಿದೆ. ಜೊತೆಗೆ ಈ ನಾಡಿನ ಇತಿಹಾಸ­ದೊಂ­ದಿಗೂ ತಳಕು ಹಾಕಿಕೊಂಡಿದೆ. ನಿಜಾ­ಮರ ಕಾಲದಲ್ಲಿ ನಿರ್ಮಾಣಗೊಂಡ ಈ ಭವನ ಇಲ್ಲಿನ ಸಾಂಸ್ಕೃತಿಕ ಪರಂಪರೆಗೆ ತನ್ನದೇ ಆದ ಕೊಡುಗೆ ನೀಡಿ ಇಂದು ಮೌನವಾಗಿದೆ. ಈಗ ಈ ಕಟ್ಟಡ ಸಂಪೂರ್ಣವಾಗಿ ಮಹಾನಗರ ಪಾಲಿಕೆ ಸದಸ್ಯರ ಸಭಾ ಭವನವಾಗಿ ರೂಪಾಂತ­ರಗೊಳ್ಳುತ್ತಿದೆ.‘ನಿಜಾಮರ ಕಾಲದಲ್ಲಿ ನಗರದಲ್ಲಿ ಉದ್ಯಾನ ನಿರ್ಮಿಸಲಾಗಿತ್ತು. ಈ ತೋಟದ ಸೌಂದರ್ಯ ಹೆಚ್ಚಿಸಲು ಕಟ್ಟಡವೊಂದರ ಅಗತ್ಯ ಇತ್ತು. ಅಲ್ಲದೆ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶದಿಂದ ಪುರಭವನ ಕಟ್ಟಡವನ್ನು ನಿಜಾಮರು ನಿರ್ಮಿಸಿದ್ದರು. ಕಟ್ಟಡ ಸಣ್ಣದಾದರೂ ಅಚ್ಚುಕಟ್ಟಾ­ಗಿತ್ತು. ಸಣ್ಣ ವೇದಿಕೆ, ಗ್ರೀನ್‌ ರೂಂ, ಬಾಲ್ಕನಿ ಇತ್ತು. ಸುಮಾರು 400ಕ್ಕೂ ಅಧಿಕ ಮಂದಿ ಕುಳಿತುಕೊಳ್ಳಬಹುದಾಗಿತ್ತು. ನಿಜಾಮ ದೊರೆ ಹೈದರಾಬಾದ್‌ನಿಂದ ಪ್ರತಿವರ್ಷ ಗುಲ್ಬರ್ಗದ ಖ್ವಾಜಾ ಬಂದೇನವಾಜ್‌ ದರ್ಗಾಕ್ಕೆ ಉರುಸ್‌ಗಾಗಿ ಆಗಮಿಸು­ತ್ತಿದ್ದರು.ಆ ಸಂದರ್ಭದಲ್ಲಿ ನಿಜಾಮರು ಇದೇ ಭವನದಲ್ಲಿ ಸಭೆ ನಡೆಸುತ್ತಿದ್ದರು. ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತಿ್ತದ್ದವು. ಮುಂದೆ ಹೈದರಾ­ಬಾದ್‌ (ವಿಲೀನಿಕರಣದ) ಬಳಿಕ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳೂ ಸರ್ಕಾರಿ ಕಾರ್ಯಕ್ರಮಗಳೂ ಈ ಭವನದಲ್ಲಿ ನಡೆಯುತಿ್ತದ್ದವು’ ಎನ್ನುತ್ತಾರೆ ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ.‘ಹೈದರಾಬಾದ್‌ ಚಳವಳಿ ಕಾಲದಲ್ಲಿ ಈ ಉದ್ಯಾನ ನಿಜಾಮ ಪೊಲೀಸರ ಅಧೀನದಲ್ಲಿತ್ತು. ಆಗ ಸಾರ್ವಜನಿಕರು ಈ ಭವನದ ಬಳಿ ಬರುತ್ತಿರಲಿಲ್ಲ. ಮುಂದೆ ವಿಲಿನೀಕರಣಗೊಂಡ ಮೇಲೆ ಈ ಕಟ್ಟಡದಲ್ಲಿ ಹೆಚ್ಚು, ಹೆಚ್ಚು ಕಾರ್ಯಕ್ರಮಗಳು ಜರುಗುತ್ತಿದ್ದವು. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದಾಗ ಬೇಂದ್ರೆಯವರಿಗೆ ಇದೇ ಪುರಭವನದಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಮುಂದೆ ಗಣೇಶೋತ್ಸವ, ನಾಡಹಬ್ಬ ಸಂದರ್ಭದಲ್ಲಿ ನಾಡಿನ ಶ್ರೇಷ್ಠ ವಿದ್ವಾಂಸರಿಂದ ಇಂಗ್ಲಿಷ್‌ ಉಪನ್ಯಾಸ ಕಾರ್ಯಕ್ರಮವನ್ನು ಇಲ್ಲಿ ಏರ್ಪಡಿಸಲಾಗಿತ್ತು.  ಶ್ರೀರಂಗ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಬಿ. ಶಿವಮೂರ್ತಿ ಶಾಸ್ತ್ರಿ, ಜಯದೇವಿತಾಯಿ ಲಿಗಾಡೆ, ರಂ.ಶಿ. ಮುಗಳಿ ಮೊದಲಾದ ನಾಡಿನ ಪ್ರಸಿದ್ಧ ಸಾಹಿತಿಗಳು ಈ ಭವನದಲ್ಲಿ ಉಪನ್ಯಾಸ ನೀಡಿದ್ದರು’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.‘ವಿಲಿನೀಕರಣವಾಗಿ ಸರ್ಕಾರ ಬಂದ ಮೇಲೆ ಈ ಉದ್ಯಾನ ಹೊಸ ರೂಪ ಪಡೆಯಿತು. ನಗರಸಭೆ ಆದ ಮೇಲೆ ಇದು ಸಭೆಗಷ್ಟೆ ಸೀಮಿತವಾಗಿತ್ತು. ಮಹಾನಗರ ಪಾಲಿಕೆ ಬಂದ ನಂತರ ಈ ಟೌನ್‌ಹಾಲ್‌ಗೆ ಇಂದಿರಾಭವನ ಎಂದು ನಾಮಕರಣ ಮಾಡಲಾಯಿತು. ಆನಂತರ ಈ ಕಟ್ಟಡದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದೇ ನಿಂತು ಹೋಯಿತು, ಉದ್ಯಾನವೂ ಮೊದಲಿನ ಸೌಂದರ್ಯ ಕಳೆದುಕೊಂಡಿತು’ ಎಂದು ಕುಷ್ಟಗಿ ತಿಳಿಸುತ್ತಾರೆ.ಇಷ್ಟೆಲ್ಲ ಇತಿಹಾಸವಿರುವ ಇಂದಿರಾ­ಭವನ­ದಲ್ಲಿ ಇದೀಗ ಮತ್ತೆ ನವೀಕರಣ ಕಾಮಗಾರಿ ನಡೆಯುತ್ತಿದೆ. ಕಟ್ಟಡದ ಒಳಭಾಗದಲ್ಲಿ ಹಿಂದಿನ ನಿರ್ಮಾಣ­ದಲ್ಲಿದ್ದ ವೇದಿಕೆ, ಬಾಲ್ಕನಿ ಮೊದಲಾ­ದವು­ಗಳನ್ನು ಬದಲಾಯಿಸಿ ಕೇವಲ ಪಾಲಿಕೆ ಸದಸ್ಯರ ಸಭೆಗೆ ಅನುಕೂಲ­ವಾಗುವ ರೀತಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry