ಭಾನುವಾರ, ನವೆಂಬರ್ 17, 2019
21 °C

ಪುರವಂಕರ ಲಾಭ ಶೇ 71 ವೃದ್ಧಿ

Published:
Updated:

ಬೆಂಗಳೂರು: ರಿಯಲ್ ಎಸ್ಟೇಟ್ ಕ್ಷೇತ್ರದ ಪ್ರಮುಖ ಕಂಪೆನಿಗಳಲ್ಲೊಂದಾದ `ಪುರವಂಕರ ಪ್ರಾಜೆಕ್ಟ್ಸ್ ಲಿ.' 2012-13ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ಒಟ್ಟಾರೆ ನಿವ್ವಳ ಲಾಭ ಗಳಿಕೆಯಲ್ಲಿ ಶೇ 71ರಷ್ಟು ಹೆಚ್ಚಳ ಸಾಧಿಸಿದೆ. ಜತೆಗೆ ಅಲ್ಪ ಪ್ರಮಾಣದಲ್ಲಿ ಷೇರು ಹೊಂದಿರುವವರಿಗೆ ಶೇ 50ರಷ್ಟು ಮಧ್ಯಂತರ ಲಾಭಾಂಶ ಘೋಷಿಸಿದೆ.2011-12ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿರೂ46 ಕೋಟಿ ನಿವ್ವಳ ಲಾಭ ಗಳಿಸಿದ್ದ ಕಂಪೆನಿ, ಈ ಬಾರಿ ಜನವರಿ-ಮಾರ್ಚ್ ಅವಧಿಯಲ್ಲಿ ನಿವ್ವಳ ಲಾಭ ಗಳಿಕೆಯನ್ನುರೂ79 ಕೋಟಿಗೆ ಹೆಚ್ಚಿಸಿಕೊಂಡಿದೆ. ಇದೇ ಅವಧಿಯಲ್ಲಿನ ಆದಾಯವೂರೂ416 ಕೋಟಿಗೆ (ಶೇ 79ರಷ್ಟು) ಹೆಚ್ಚಿದೆ. ಹಿಂದಿನ ವರ್ಷದಲ್ಲಿ 4ನೇ ತ್ರೈಮಾಸಿಕದ ಆದಾಯರೂ232 ಕೋಟಿಯಷ್ಟಿದ್ದಿತು.ಹಣಕಾಸು ವರ್ಷದ ಕಡೆಯ ತ್ರೈಮಾಸಿಕದಲ್ಲಿನ ಉತ್ತಮ ಪ್ರಗತಿಗೆ ಬೆಂಗಳೂರಿನಲ್ಲಿ `ಪ್ರಾವಿಡೆಂಟ್ ಸನ್‌ವರ್ಥ್' ಮತ್ತು ಮಂಗಳೂರಿನಲ್ಲಿ `ಪ್ರಾವಿಡೆಂಟ್ ಸ್ಕೈವರ್ಥ್' ಬೃಹತ್ ವಸತಿ ಸಂಕೀರ್ಣ ಯೋಜನೆ ಆರಂಭಿಸಿದ್ದು ಕಾರಣ. `ಸನ್‌ವರ್ಥ್'ನ 950 ಫ್ಲ್ಯಾಟ್‌ಗಳಿಗೆ ಗ್ರಾಹಕರು ಮುಂಗಡ ಪಾವತಿಸಿದ್ದಾರೆ.  ಎರಡೂ ಯೋಜನೆಗಳಿಗೆ ಭಾರಿ ಬೇಡಿಕೆ ಬಂದಿದ್ದರಿಂದ ಆದಾಯ ಮತ್ತು ಲಾಭ ಗಳಿಕೆಯಲ್ಲಿ ಹೆಚ್ಚಳವಾಗಿದೆ. ಒಟ್ಟು ಆದಾಯದಲ್ಲಿ `ಪುರವಂಕರ'ದ ಪಾಲು ಶೇ 64 ಮತ್ತು `ಪ್ರಾವಿಡೆಂಟ್' ಕೊಡುಗೆ ಶೇ 36ರಷ್ಟಿದೆ ಎಂದು `ಪುರವಂಕರ ಪ್ರಾಜೆಕ್ಟ್ ಲಿ.' ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾಕ್‌ಬಾಸ್ಟಿಯನ್ ನಝರತ್ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.2012-13ನೇ ಹಣಕಾಸು ವರ್ಷದಲ್ಲಿ ಒಟ್ಟು 39.60 ಲಕ್ಷ ಚದರಡಿಯಷ್ಟು ಮನೆ ಮಾರಾಟವಾಗಿದ್ದು, ಆದಾಯ ಶೇ 53ರ ಹೆಚ್ಚಳದೊಡನೆರೂ1248 ಕೋಟಿಗೇರಿದೆ. ಹಿಂದಿನ ವರ್ಷರೂ816 ಕೋಟಿ ಇದ್ದಿತು. ಒಟ್ಟು ನಿವ್ವಳ ಲಾಭವೂ ಶೇ 79ರ ವೃದ್ಧಿಯೊಡನೆರೂ243 ಕೋಟಿ ಮುಟ್ಟಿದೆ. ಹಿಂದಿನ ವರ್ಷರೂ136 ಕೋಟಿ ಇದ್ದಿತು ಎಂದರು. 2013-14ನೇ ಹಣಕಾಸು ವರ್ಷದ  ಯೋಜನೆಗಳ ಕುರಿತು ವಿವರ ನೀಡಲು ಒಪ್ಪದ ಅವರು, ಪ್ರಸ್ತುತ 16 ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಮುಂಬರುವ ದಿನಗಳಲ್ಲಿ 2ನೇ ಹಂತದ ನಗರಗಳತ್ತ ಹೆಚ್ಚು ಗಮನ ಕೇಂದ್ರೀಕರಿಸಲಾಗುವುದು ಎಂದು ಪ್ರಶ್ನೆಗೆ ಉತ್ತರಿಸಿದರು.

ಪ್ರತಿಕ್ರಿಯಿಸಿ (+)