ಶನಿವಾರ, ಏಪ್ರಿಲ್ 17, 2021
31 °C

ಪುರಸಭೆಯಲ್ಲಿ ವಿಶೇಷ ಲೆಕ್ಕ ಪರಿಶೋಧನೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ:  ಸ್ಥಳೀಯ ಪುರಸಭೆಯ ವಿವಿಧ ಯೋಜನೆಗಳ ಅಂದಾಜು ರೂ. 174.23ಲಕ್ಷ ಅನುದಾನ ಬೇರೆ ಉದ್ದೇಶಕ್ಕಾಗಿ ಖರ್ಚು ಮಾಡಿರುವುದು ದೃಢಪಟ್ಟಿದೆ. ಕಾರಣ ಪುರಸಭೆ ಆಡಳಿತ ಮತ್ತು ಆರ್ಥಿಕ ಶಿಸ್ತು ಕಾಪಾಡಲು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು. 3 ವರ್ಷದ ಎಲ್ಲ ದಾಖಲೆಗಳನ್ನು ವಿಶೇಷ ಲೆಕ್ಕ ಪರಿಶೋಧನೆಗೆ ಒಳಪಡಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ರಾಯಚೂರು ಯೋಜನಾ ನಿರ್ದೇಶಕರು ಜಿಲ್ಲಾಧಿಕಾರಿಗಳಿಗೆ ವರದಿ ಮಾಡಿದ್ದಾರೆ.ವಿವಿಧ ಅಭಿವೃದ್ಧಿ ಯೋಜನೆಗಳಡಿ ಬಿಡುಗಡೆಯಾದ ರೂ. 174.23 ಲಕ್ಷ ಅನುದಾನವನ್ನು ನಿಯಮಬಾಹಿರವಾಗಿ ಪುರಸಭೆಯ ವಿವಿಧ ಶೀರ್ಷಿಕೆಯಡಿ ದಿನನಿತ್ಯದ ವೆಚ್ಚಗಳಿಗೆ ಬಳಸಲಾಗಿದೆ. ಪುರಸಭೆಯ ವಾರ್ಷಿಕ ಆದಾಯದ 2 ಪಟ್ಟು ಮೊತ್ತವನ್ನು ಸರ್ಕಾರದ ಅಭಿವೃದ್ಧಿ ಅನುದಾನದಿಂದ ಖರ್ಚು ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಪುರಸಭೆಯ ಆರ್ಥಿಕ ಬಿಕ್ಕಟ್ಟಿಗೆ ಮುಖ್ಯಾಧಿಕಾರಿಗಳು ಮತ್ತು ಅಧ್ಯಕ್ಷರು ಜವಾಬ್ದಾರರಾಗಿದ್ದು, ಇವರು ಅಪರಾಧಿಕ ದಂಡನೆಗೆ ಒಳಪಡುತ್ತಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.ಅಭಿವೃದ್ಧಿ ಅನುದಾನಗಳಿಗೆ ಸಂಬಂಧಿಸಿದ ಆರ್ಥಿಕ ಮತ್ತು ಭೌತಿಕ ಪ್ರಗತಿ ತೋರಿಸುವ ಲೆಕ್ಕಪತ್ರ ಮಾಹಿತಿ ಹಾಗೂ ದಾಖಲೆಗಳು ಲಭ್ಯವಿಲ್ಲ. ಬಿಡುಗಡೆಯಾದ ಅನುದಾನಗಳ ಬಜೆಟ್ ಕಂಟ್ರೋಲ್ ವಹಿ, ತಾಂತ್ರಿಕ ಮಂಜೂರಾತಿ ವಹಿ, ಆಡಳಿತಾತ್ಮಕ ಮಂಜೂರಾತಿ ವಹಿಗಳನ್ನು ನಿರ್ವಹಸಿರುವುದಿಲ್ಲ. ಸಾಮಗ್ರಿಗಳ ಖರೀದಿಗೆ ಸಂಬಂಧಿಸಿ ಆಡಳಿತಾತ್ಮಕ ಮಂಜೂರಾತಿ ಪಡೆಯದೆ ಆಯವ್ಯಯದಲ್ಲಿ ನಿಗದಿಪಡಿಸಿದ ಮೊತ್ತಕ್ಕೆ ಮೀರಿ ಸಾಮಗ್ರಿ ಖರೀದಿಸಿ ಹಣ ಪಾವತಿಸಲಾಗಿದೆ. 5ವರ್ಷಗಳಲ್ಲಿ ಕುಡಿಯುವ ನೀರು ನಿರ್ವಹಣೆಗೆ ರೂ. 80ಲಕ್ಷ ಖರ್ಚು ಮಾಡಿದ್ದು ಪೂರಕ ದಾಖಲೆಗಳು ಲಭ್ಯವಿಲ್ಲ.ಯೋಜನೆ ಆಧರಿಸಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದಿಲ್ಲ. ಬ್ಯಾಂಕ್ ಖಾತೆಯೊಂದರಲ್ಲಿಯೆ ಎಲ್ಲಾ ಯೋಜನೆಗಳ ಅನುದಾನ ಜಮಾವಣೆ ಮಾಡಲಾಗಿದೆ. ಬಿಡುಗಡೆಯಾದ ಹಣಕ್ಕು, ಖಾತೆಯಲ್ಲಿರುವ ಹಣಕ್ಕೂ ಹೊಂದಾಣಿಕೆ ಆಗುತ್ತಿಲ್ಲ. ನ್ಯೂ ಅಮರೇಶ್ವರ ಹಾರ್ಡ್‌ವೇರ್ಸ್‌ಗೆ ರೂ. 959781, ಕಾಮಧೇನು ಎಂಟರ್ ಪ್ರೈಸಸ್‌ಗೆ ರೂ. 2450235, ಜೆಸಿಬಿ ಬಾಡಿಗೆಗೆ ರೂ. 503816, ದಿನಗೂಲಿ ನೌಕರರ ವೇತನಕ್ಕೆ ರೂ. 860684, ಲೇಖನ ಸಾಮಗ್ರಿ ಖರೀದಿಗೆ ರೂ. 129319 ಒಟ್ಟು ರೂ. 4455293 ಖರ್ಚು ಹಾಕಿರುವುದು ತನಿಖೆಯಿಂದ ಬಹಿರಂಗವಾಗಿದೆ.ಮೇಲ್ಕಾಣಿಸಿದ ಹಣ ದುರ್ಬಳಕೆ ಅಲ್ಲದೆ ಇತರೆ ಖಾತೆ ಮತ್ತು ಯೋಜನೆಗಳಡಿ ನಿಯಮ ಬಾಹಿರವಾಗಿ ಯಾವುದೇ ದಾಖಲೆಗಳಿಲ್ಲದೆ ಲಕ್ಷಾಂತರ ಹಣ ಖರ್ಚು ಮಾಡಿರುವ ಬಗ್ಗೆ ಸಮಗ್ರ ಮಾಹಿತಿಯನ್ನು ಕೂಡ ವಿವರಿಸಲಾಗಿದೆ. ಆ ವರದಿಯಲ್ಲಿ ಯಾವ ಉದ್ದೇಶಕ್ಕೆ ಖರ್ಚು ಹಾಕಲಾಗಿದೆ ಎಂಬಿತ್ಯಾದಿ ಮಾಹಿತಿ ಕೇಳಿದರೆ ಪುರಸಭೆ ದಾಖಲೆಗಳು ಸುಟ್ಟು ಹೋಗಿವೆ. ಆ ಕುರಿತು ಯಾವುದೇ ದಾಖಲೆ ತೋರಿಸಲು ಸಿಬ್ಬಂದಿ ಸಹಕರಿಸಲಿಲ್ಲ ಎಂಬ ಅಳಲನ್ನು ಕೂಡ ತನಿಖಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ವರದಿಯಲ್ಲಿ ವಿವರಿಸಿದ್ದಾರೆ.ಈಗಾಗಲೇ ಜಿಲ್ಲಾಧಿಕಾರಿಗಳು ವರದಿ ಆಧರಿಸಿ ಮುಖ್ಯಾಧಿಕಾರಿಗಳು ಮತ್ತು ಆ ಅವಧಿಯಲ್ಲಿನ ಅಧ್ಯಕ್ಷರ ವಿರುದ್ಧ ಶಿಸ್ತು ಕ್ರಮ ಕೈಕೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಇನ್ನು ಕೆಲವೆ ದಿನಗಳಲ್ಲಿ ಸರ್ಕಾರದ ಸ್ಪಷ್ಟ ಮಾಹಿತಿ ಹೊರ ಬೀಳಲಿದೆ ಎಂದು ಪುರಸಭೆ ಮೂಲಗಳು ದೃಢಪಡಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.