ಪುರಸಭೆಯಿಂದ ವಿಧಾನಸಭೆವರೆಗೆ ಪಯಣ

7

ಪುರಸಭೆಯಿಂದ ವಿಧಾನಸಭೆವರೆಗೆ ಪಯಣ

Published:
Updated:

ಉಡುಪಿ: ಮೌಲ್ಯಾಧಾರಿತ ರಾಜಕಾರಣಕ್ಕೆ ಬದ್ಧರಾದ ಡಾ. ವೇದವ್ಯಾಸ ಶ್ರೀನಿವಾಸ(ವಿ.ಎಸ್.) ಆಚಾರ್ಯ(73) ಅವರು ಮಂಗಳವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದ ಸುದ್ದಿ ಕೃಷ್ಣನ ನಾಡಿನ ಜನರಲ್ಲಿ ದಿಗ್ಭ್ರಮೆ ಮೂಡಿಸಿದೆ. `ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದ ಹಿರಿಯ ನಾಯಕನನ್ನು ಕಳೆದುಕೊಂಡ ಉಡುಪಿ ಬಡವಾಗಿದೆ~ ಎಂದು ಜನತೆ ಶೋಕಿಸಿದ್ದಾರೆ.ಪತ್ನಿ ಶಾಂತಾ ವಿ.ಆಚಾರ್ಯ, ನಾಲ್ವರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಆಚಾರ್ಯ ಅಗಲಿದ್ದಾರೆ.

ಮಣಿಪಾಲದ ಕೆ.ಎಂ.ಸಿ. ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದ ಬಳಿಕ 1965ರಿಂದ ವೈದ್ಯಕೀಯ ವೃತ್ತಿಯಲ್ಲಿದ್ದ ಆಚಾರ್ಯ, ಸಚಿವರಾಗುವವರೆಗೂ ಮಲ್ಪೆ ಸಮೀಪದ ಕಲ್ಮಾಡಿಯಲ್ಲಿ `ಗೀತಾ ಕ್ಲಿನಿಕ್~ನಲ್ಲಿ ರೋಗಿಗಳ ಶುಶ್ರೂಷೆ ಮಾಡುತ್ತಿದ್ದರು. 1967ರಲ್ಲಿ ಜನಸಂಘದ ಉನ್ನತ ಮಟ್ಟದ ನಾಯಕರಾಗಿದ್ದ ಪಂಡಿತ್ ದೀನ ದಯಾಳ್ ಉಪಾಧ್ಯ ಅವರ ಭಾಷಣದಿಂದ ಪ್ರೇರಣೆಗೊಂಡು ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು.

 

ಭಾರತೀಯ ಜನಸಂಘಕ್ಕೆ ಸೇರಿದ ಆಚಾರ್ಯ, ಅಲ್ಲಿಂದ ಇಲ್ಲಿಯವರೆಗೂ ಬಿಜೆಪಿಗೆ ನಿಷ್ಟರಾಗಿದ್ದರು. ರಾಜ್ಯದ ಮತ್ತು ದೆಹಲಿಯ ಪ್ರಮುಖ ಬಿಜೆಪಿ ನಾಯಕರೆಲ್ಲರಲ್ಲೂ ಇವರಿಗೆ ಗೌರವದ ಸ್ಥಾನವಿತ್ತು.28 ವರ್ಷಕ್ಕೆ ಮೊದಲ ಅಧಿಕಾರ: 1968ರಲ್ಲಿ ಜನಸಂಘ ಉಡುಪಿ ಪುರಸಭೆಯಲ್ಲಿ ಅಧಿಕಾರಕ್ಕೆ ಬಂದಿತು. ಭಾರತೀಯ ಜನಸಂಘದ ಆಡಳಿತಕ್ಕೆ ಅವಕಾಶ ಕೊಟ್ಟ ದಕ್ಷಿಣ ಭಾರತದ ಮೊದಲ ನಗರವೇ ಉಡುಪಿ. ಅದಕ್ಕೆ ಆಚಾರ್ಯರೇ ಮೊದಲ ಅಧ್ಯಕ್ಷ. ಆಗಿನ್ನೂ ಅವರಿಗೆ 28 ವರ್ಷ!ಆಚಾರ್ಯ ಅವರ ಅವಧಿಯಲ್ಲಿ ಉಡುಪಿ ಅಭಿವೃದ್ಧಿ ಪಥದತ್ತ ಸಾಗಿತು ಎಂದು ಈಗಲೂ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಸ್ವರ್ಣಾ ಕುಡಿಯುವ ನೀರಿನ ಯೋಜನೆ ಇವರ ಅವಧಿಯ ಯಶಸ್ವಿ ಯೋಜನೆ. ಎರಡನೇ ಹಂತದ ಯೋಜನೆ ಕಾರ್ಯಗತವಾಗುತ್ತಿರುವಾಗಲೇ 2006ರಲ್ಲಿ ಅವರು ಸಚಿವರಾದರು. ಮೊದಲ ಹಂತದ ಯೋಜನೆಯನ್ನು ಆಗಿನ ರಾಜ್ಯಪಾಲ 1974ರಲ್ಲಿ ಉದ್ಘಾಟಿಸಿದರೆ 2ನೇ ಹಂತದ ಯೋಜನೆಯನ್ನು 2010ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಿದ್ದರು.ಮಲ ಹೊರುವ ಪದ್ಧತಿಗೆ ನಿಷೇಧ: ತಲೆ ಮೇಲೆ ಮಲ ಹೊರುವ ಪದ್ಧತಿ ನಿರ್ಮೂಲನೆ ಮಾಡಿದ್ದು ರಾಷ್ಟ್ರದಲ್ಲಿಯೇ ಪ್ರಥಮ ಎಂಬುದು ಉಡುಪಿ ಪುರಸಭೆಯಲ್ಲಿ ದಾಖಲಾಗಿದೆ. ನಗರಾಡಳಿತ ಕಚೇರಿ, ಸ್ವಚ್ಛ ಸುಧಾರಿತ ರಸ್ತೆಗಳು, ನಗರ ಯೋಜನಾ ಮಂಡಳಿ, ಭೂಗತ ಚರಂಡಿ ಯೋಜನೆ ಆರಂಭಿಸಿದ ಕೀರ್ತಿ ಆಚಾರ್ಯ ಅವರದ್ದು.2 ಬಾರಿ ಪುರಸಭೆಗೆ ಆಯ್ಕೆಯಾಗಿದ್ದ ಆಚಾರ್ಯ, ಎಂಟು ವರ್ಷ ಪುರಸಭಾ ಅಧ್ಯಕ್ಷರಾಗಿದ್ದರು. ಅಧಿಕಾರದಲ್ಲಿದ್ದಾಗಲೇ ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ 18 ತಿಂಗಳ ಕಾಲ ಸೆರೆವಾಸವನ್ನೂ ಅನುಭವಿಸಿದ್ದರು.ವಿಧಾನಸಭೆ ಪ್ರವೇಶ: 1983ರಲ್ಲಿ ಉಡುಪಿ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ವಿಧಾನಮಂಡಲದಲ್ಲಿ ಪಕ್ಷದ ಶಾಸಕಾಂಗ ನಾಯಕರಾದರು. ರಾಜ್ಯದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಾಗ ವಿಧಾನಸಭೆಯಲ್ಲಿ ಆಚಾರ್ಯ ಪ್ರಮುಖ ಪಾತ್ರ ವಹಿಸಿದ್ದರು. ಕಾನೂನಾತ್ಮಕ ಅನೇಕ ತಿದ್ದುಪಡಿಗಳನ್ನು ತರಲು ಅವರು ಕಾರಣರಾಗಿದ್ದರು.ಹೊಸ ಜಿಲ್ಲೆಗಳ ರಚನೆಗಾಗಿ 1984ರಲ್ಲಿ ಹುಂಡೇಕರ್ ನೇತೃತ್ವದ ಸಮಿತಿ ರಚನೆಯಲ್ಲಿ ಆಚಾರ್ಯರ ಪಾತ್ರ ಹಿರಿದಾಗಿತ್ತು. ಜಿಲ್ಲೆಗಳು ದೊಡ್ಡದಾಗಿದ್ದರೆ ಅಭಿವೃದ್ಧಿ ಕಷ್ಟ ಎಂಬ ಕಾರಣಕ್ಕೆ ಜಿಲ್ಲೆಗಳ ಪುನರ್ವಿಂಗಡಣೆಗೆ ಇವರೂ ಶ್ರಮಿಸಿದ್ದರು. ಈ ಸಮಿತಿಯಿಂದಾಗಿ ಹುಟ್ಟಿದ ಎಂಟು ಜಿಲ್ಲೆಗಳಲ್ಲಿ ಉಡುಪಿ ಜಿಲ್ಲೆ(1997) ಕೂಡ ಒಂದು. 2011ರ ಡಿ. 25ರಂದು ಮಣಿಪಾಲದ ರಜತಾದ್ರಿಯಲ್ಲಿ ಉದ್ಘಾಟನೆಗೊಂಡ 30 ಕೋಟಿ ವೆಚ್ಚದ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಅವರ ಬಹು ನಿರೀಕ್ಷೆಯ ಯೋಜನೆ. ಅದರ ಉದ್ಘಾಟನೆಯ ದಿನ ಅವರು ಬಹಳ ಭಾವುಕರಾಗಿ ಮಾತನಾಡಿದ್ದರು.ರಾಜ್ಯದ ಪೌರಾಡಳಿತ ನಿರ್ದೇಶನಾಲಯ ಭೂ ನ್ಯಾಯಮಂಡಳಿಗಳು ಮೇಲೆ ಟ್ರಿಬ್ಯೂನ್ ರಚನೆ, ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ಡೀಸೆಲ್ ಮೇಲಿನ ತೆರಿಗೆ ರಿಯಾಯ್ತಿ, ಮಾರಾಟ ತೆರಿಗೆ ಸರಳೀಕರಣ ಆಚಾರ್ಯರು ಮಾಡಿದ ಮಹತ್ವದ ಕೆಲಸಗಳು. 1996ರಲ್ಲಿ ಅವರು ವಿಧಾನಪರಿಷತ್‌ಗೆ ಆಯ್ಕೆಯಾದರು. ಶಾಸಕರಾಗಿ, ಹಣಕಾಸು, ಯೋಜನೆ, ನಗರಾಡಳಿತ, ವಿದ್ಯುಚ್ಛಕ್ತಿ, ಜನಾರೋಗ್ಯ ಖಾತೆಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದರು. ವಿಧಾನಮಂಡಳದಲ್ಲಿ ಆರೋಗ್ಯ, ಕುಟುಂಬ ಕಲ್ಯಾಣ ಸಮಿತಿ ಅಧ್ಯಕ್ಷರೂ ಆಗಿದ್ದರು.

2006ರ ಫೆ. 9ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ವೈದ್ಯಕೀಯ ಸಚಿವರಾದರು. 20 ತಿಂಗಳ ಇವರ ಅಧಿಕಾರ ಅವಧಿಯಲ್ಲಿ ಆರು ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭವಾದವು. 2008ರ ಮೇ 30ರಲ್ಲಿ ಗೃಹ ಸಚಿವರಾದರು.ತುರ್ತು ಪರಿಸ್ಥಿತಿ: ಬೆಲೆ ಏರಿಕೆ, ವಿದ್ಯುತ್ ಅವ್ಯವಸ್ಥೆ ವಿರುದ್ಧವೂ ಹೋರಾಟ ನಡೆಸಿದ್ದರು. ತುರ್ತು ಪರಿಸ್ಥಿತಿ ವೇಳೆಯ ಹೋರಾಟದಿಂದಾಗಿ 19 ತಿಂಗಳು ಬೆಂಗಳೂರು, ಬಳ್ಳಾರಿ ಜೈಲಿನಲ್ಲಿ ಆಚಾರ್ಯ ಜೈಲುವಾಸ ಅನುಭವಿಸಿದರು. ಜೈಲುವಾಸದಿಂದ ಮುಕ್ತರಾದಾಗ ಲೋಕಸಭೆಗೆ ಸ್ಪರ್ಧಿಸಿದ್ದರು. ಆಗ ಜನಸಂಘ ಜನತಾ ಪಕ್ಷದಲ್ಲಿ ವಿಲೀನವಾಯಿತು. 1980ರಲ್ಲಿ ಜನಸಂಘದ ನಾಯಕರು ಭಾರತೀಯ ಜನತಾ ಪಕ್ಷ ಸ್ಥಾಪಿಸಿದಾಗ ಆಚಾರ್ಯ ಸಹ ಆ ಪಕ್ಷದಲ್ಲಿ ಮುಂದುವರಿದರು.ಅವಿಭಜಿತ ದ.ಕ. ಜಿಲ್ಲೆಯ ಜನಸಂಘ, ಜನತಾ ಪಕ್ಷ, ಜಿಲ್ಲೆಯ ಜನಸಂಘ, ಜನತಾ ಪಕ್ಷ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷರಾಗಿ 10 ವರ್ಷ ಸೇವೆ ಸಲ್ಲಿಸಿದ್ದರು. ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ 21 ವರ್ಷ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ 20 ವರ್ಷ ಸೇವೆ ಸಲ್ಲಿಸುವ ಮೂಲಕ ರಾಷ್ಟ್ರೀಯ ನಾಯಕರ ನಿಕಟ ಸಂಪರ್ಕ ಹೊಂದಿದ್ದರು. ಜಿಲ್ಲೆಯಲ್ಲಿ ನೂತನ ಜಿಲ್ಲಾ ಕಚೇರಿ ಸಂಕೀರ್ಣ, ಕಲ್ಸಂಕ ರಸ್ತೆ ವಿಸ್ತರಣೆ, ಬೃಹತ್ ಸೇತುವೆ ನಿರ್ಮಾಣಕ್ಕೆ ಅಡಿಗಲ್ಲು, ಕುಡಿಯುವ ನೀರಿನ ಸೌಕರ್ಯ ಸೇರಿದಂತೆ ಹಲವು ಉಪಯುಕ್ತ ಕೆಲಸಗಳು ಉಡುಪಿಯಲ್ಲಿ ಆಗಿವೆ ಎಂಬ ಮೆಚ್ಚುಗೆಯ ಮಾತು ಸಾರ್ವಜನಿಕರದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry