ಮಂಗಳವಾರ, ಮಾರ್ಚ್ 2, 2021
31 °C
ಸಾಮಾನ್ಯ ಸಭೆ ಠರಾವು ಕಡತದಲ್ಲಿ ನಕಲಿ ಮಾಹಿತಿ: ಸದಸ್ಯರ ಆರೋಪ

ಪುರಸಭೆ ಅಧ್ಯಕ್ಷೆ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುರಸಭೆ ಅಧ್ಯಕ್ಷೆ ವಿರುದ್ಧ ಆಕ್ರೋಶ

ಕುಷ್ಟಗಿ: ಸದಸ್ಯರ ಕಣ್ಣಿಗೆ ಮಣ್ಣೆರಚಿ ಠರಾವು ಕಡತದಲ್ಲಿ ನಕಲಿ ಮಾಹಿತಿಗಳನ್ನು ಸೇರಿಸಿ ಲಕ್ಷಾಂತರ ರೂಪಾಯಿ ಬಿಲ್‌ ಪಾವತಿಸುವುದರ ಮೂಲಕ ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆಗಿಳಿದ ಘಟನೆ ಸೋಮವಾರ ನಡೆಯಿತು.ಸ್ಥಾಯಿ ಸಮಿತಿ ಅಧ್ಯಕ್ಷ ಕಲ್ಲೇಶ ತಾಳದ, ಪುರಸಭೆ ಉಪಾಧ್ಯಕ್ಷೆ ಮಂಜುಳಾ ಪೊಲೀಸಪಾಟೀಲ ಸಹಿತ ಅನೇಕ ಸದಸ್ಯರು ಅಧ್ಯಕ್ಷೆ ಮಂಜುಳಾ ನಾಗರಾಳ ಮತ್ತು ಮುಖ್ಯಾಧಿಕಾರಿ ಮಹಾದೇವ ಭೀಸೆ ವಿರುದ್ಧ ಘೋಷಣೆ ಕೂಗಿ ಸಭೆ ಬಹಿಷ್ಕರಿಸಿ ಹೊರ ಬಂದರು. ನಂತರ ಸಭೆ ಮುಂದುವರಿಸಿರುವುದನ್ನು ವಿರೋಧಿಸಿದ ಸದಸ್ಯರು ಕಚೇರಿ ಬಾಗಿಲಲ್ಲಿ ಧರಣಿ ನಡೆಸಿದ್ದರಿಂದ ಗೊಂದಲ ಉಂಟಾಗಿ ನಂತರ ಸಭೆಯನ್ನೇ ಮೊಟಕುಗೊಳಿಸಬೇಕಾಯಿತು.ವಿದ್ಯುತ್‌ ಉಪಕರಣಗಳನ್ನು ಖರೀದಿಸಲು ರಾಯಲ್‌ ಎಲೆಕ್ಟ್ರಿಕಲ್‌ ಎಂಬ ಸರಬರಾಜುದಾರರಿಗೆ ಹಣ ಪಾವತಿಸಿರುವ ಅಂಶವನ್ನು ಸಿಬ್ಬಂದಿ ವಿವರಿಸಿದರು. ಮಧ್ಯ ಪ್ರವೇಶಿಸಿದ ಕಲ್ಲೇಶ ತಾಳದ, ಹಿಂದಿನ ಸಭೆಯಲ್ಲಿ ಈ ವಿಷಯ ಚರ್ಚೆಯೇ ಆಗಿಲ್ಲ ಆದರೂ ಠರಾವು ಪುಸ್ತಕದಲ್ಲಿ ಹೇಗೆ ಸೇರಿತು ಎಂದು ಪ್ರಶ್ನಿಸಿದರು.ಮುಖ್ಯಾಧಿಕಾರಿ ವಿರುದ್ಧ ಹರಿಹಾಯ್ದ ಕಲ್ಲೇಶ, ಅಧ್ಯಕ್ಷರ ಕೈಗೊಂಬೆಯಾಗಿ ವರ್ತಿಸುತ್ತಿರುವ ನೀವು ಈ ರೀತಿ ನಕಲಿ ಠರಾವುಗಳನ್ನು ದಾಖಲೆಗೆ ಸೇರಿಸಿದ್ದೀರಿ. ಸಭೆ ಗಮನಕ್ಕೆ ತಾರದೇ ಈ ರೀತಿ ನಿರ್ಧಾರ ತೆಗೆದುಕೊಳ್ಳುವುದಾದರೆ ಸಾಮಾನ್ಯ ಸಭೆಗೆ ಏನಾದರೂ ಅರ್ಥ ಇದೆಯೆ ಎಂದು ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಗಲಿಬಿಲಿಗೊಂಡ ಅಧ್ಯಕ್ಷೆ ನಾಗರಾಳ ಸಮಜಾಯಿಷಿ ನೀಡಲು ಮುಂದಾಗುತ್ತಿದ್ದಂತೆ ಅದನ್ನು ಕಿವಿಗೆ ಹಾಕಿಕೊಳ್ಳದ ಸದಸ್ಯರು ಸಭೆ ಬಹಿಷ್ಕರಿಸಿ ಹೊರನಡೆದರು.ಕುಡಿಯುವ ನೀರು ಪೂರೈಕೆ ಪಂಪ್‌ಸೆಟ್‌ಗಳಿಗೆ ಪೈಪ್‌ ಇತರೆ ವಿದ್ಯುತ್‌ ಉಪಕರಣ ಪೂರೈಸುವ ಗುತ್ತಿಗೆ ಅವಧಿ ಮುಗಿದಿತ್ತು, ಮತ್ತೆ ಟೆಂಡರ್‌ ಪ್ರಕ್ರಿಯೆ ನಡೆಯುವವರೆಗೂ ತುರ್ತು ಸಂದರ್ಭದಲ್ಲಿ ಕೆಲಸ ನಿರ್ವಹಿಸುವ ಸಲುವಾಗಿ ರಾಯಲ್‌ ಎಲೆಕ್ಟ್ರಿಕಲ್‌ ಎಂಬುವ ಗುತ್ತಿಗೆದಾರರನ್ನು ಮುಂದುವರೆಸಿರುವುದು ಮತ್ತು ₨ 1.85 ಲಕ್ಷ ಹಣ ಪಾವತಿಸಿರುವ ಬಗ್ಗೆ ನಿರ್ಣಯ ಬರೆದ ಹಾಳೆಯನ್ನು ಪ್ರತ್ಯೇಕವಾಗಿ ಠರಾವು ಕಡತದಲ್ಲಿ ಸೇರಿಸಿದ್ದು ಸದಸ್ಯರ ಕೋಪಕ್ಕೆ ಕಾರಣವಾಗಿತ್ತು.ಅಧ್ಯಕ್ಷರಿಗೆ ನಿರ್ಧಾರ ತೆಗೆದುಕೊಳ್ಳುವ ಪರಮಾಧಿಕಾರ ಇದೆ. ಕೆಲಸ ಆಗಿದ್ದು, ಹಣ ದುರುಪಯೋಗವಾಗಿಲ್ಲ. ಈ ಬಗ್ಗೆ ವಿವರಣೆ ನೀಡುವುದಕ್ಕೂ ಅವಕಾಶ ನೀಡದ ಸದಸ್ಯರ ವರ್ತನೆ ಎಷ್ಟು ಸರಿ ಎಂದು ಅಧ್ಯಕ್ಷೆ ಮಂಜುಳಾ ನಾಗರಾಳ ಪ್ರಶ್ನಿಸಿದರು.ಈ ಕುರಿತು ನಂತರ ವಿವರಿಸಿದ ಮುಖ್ಯಾಧಿಕಾರಿ ಮಹಾದೇವ ಭೀಸೆ, ಅಧ್ಯಕ್ಷರ ಅಪ್ಪಣೆ ಮೇರೆಗೆ ಕಚ್ಚಾಹಾಳೆಯಲ್ಲಿ ಠರಾವು ಬರೆಯಲಾಗಿತ್ತು, ಆದರೆ ಅದಕ್ಕೆ ಠರಾವು ಸಂಖ್ಯೆ ನೀಡಿಲ್ಲ ಎಂದು ಅವರು ತಿಳಿಸಿದರು.ಸಭೆ ಗಮನಕ್ಕೆ ತಾರದೆ ಠರಾವು ಬರೆದುಕೊಂಡು ಹಣ ಪಾವತಿಸಿರುವ ಈ ಪ್ರಕರಣದ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ.

ಕಲ್ಲೇಶ ತಾಳದ,
ಅಧ್ಯಕ್ಷ, ಪುರಸಭೆ ಸ್ಥಾಯಿ ಸಮಿತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.