ಪುರಸಭೆ ಆಡಳಿತ ಈಗ ಒತ್ತಕ್ಕಿ ಇಟ್ಟ ಸ್ಪ್ರಿಂಗು

ಬುಧವಾರ, ಜೂಲೈ 17, 2019
26 °C
ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ಇನ್ನೂ ಮೀಸಲಾತಿ ಘೋಷಿಸದ ಸರ್ಕಾರ

ಪುರಸಭೆ ಆಡಳಿತ ಈಗ ಒತ್ತಕ್ಕಿ ಇಟ್ಟ ಸ್ಪ್ರಿಂಗು

Published:
Updated:

ಮಳವಳ್ಳಿ: ಸ್ಥಳೀಯ ಪುರಸಭೆ ಚುನಾವಣೆ ನಡೆದು ಮೂರು ತಿಂಗಳು ಕಳೆದರೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಮಾಡಿಲ್ಲ. ಆದರೆ, ಹೊಸದಾಗಿ ಆಯ್ಕೆಯಾಗಿರುವ ಸದಸ್ಯರಲ್ಲಿ ಆಡಳಿತ ಚುಕ್ಕಾಣಿ ಹಿಡಿಯವ ಹಂಬಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಪುರಸಭೆ ಆಡಳಿತ ವ್ಯವಸ್ಥೆ ಈಗ `ಒತ್ತಕ್ಕಿ ಇಟ್ಟ ಸ್ಪ್ರಿಂಗು' ಎಂಬಂತಾಗಿದೆ.ಪ್ರಸಕ್ತ ಆರ್ಥಿಕ ವರ್ಷ ಪ್ರಾರಂಭವಾಗಿ ಈಗಾಗಲೇ ಮೂರು ತಿಂಗಳು ಕಳೆದಿದೆ. ಇನ್ನೂ 2013-14ನೇ ಸಾಲಿನ ಬಜೆಟ್ ಮಂಡನೆಯಾಗಿಲ್ಲ. ಪುರಸಭೆ ವತಿಯಿಂದ ಸಾರ್ವಜನಿಕರಿಗೆ ದೊರೆಯಬೇಕಾದ ಸವಲತ್ತುಗಳು ದೊರೆಯದೆ ಪರದಾಡು ವಂತಾಗಿದೆ. ಪಟ್ಟಣದಲ್ಲಿ ಸ್ವಚ್ಛತೆ ಮತ್ತು ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದರೂ ಕೆಲವು ಬಡಾವಣೆಗಳಲ್ಲಿ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ ಎಂಬ ದೂರು ನಿರಂತರವಾಗಿದೆ.23 ಸದಸ್ಯ ಬಲದ ಪುರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಖುರ್ಚಿಗಳು ಇನ್ನೂ ಖಾಲಿ ಉಳಿದಿದ್ದು, ಪಟ್ಟಣದ ಅಭಿವೃದ್ಧಿ ಕೆಲಸಗಳಿಗೆ ತೀವ್ರ ಹಿನ್ನಡೆಯಾಗಿದೆ.

ಈಗ ಉಪವಿಭಾಗಾಧಿಕಾರಿಯೇ ಪುರಸಭೆಗೆ ಆಡಳಿತಾಧಿಕಾರಿ ಯಾಗಿದ್ದು, ಅವರು ಯಾವಾಗ ಬಂದು ಹೋಗುತ್ತಾರೆಂಬ ಮಾಹಿತಿ ಸಾರ್ವಜನಿಕರಿಗೆ ತಿಳಿಯುತ್ತಿಲ್ಲ.

ಭ್ರಮನಿರಸನ ಉಂಟಾಗುತ್ತಿದೆಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪುರಸಭೆ ಸದಸ್ಯ ಎಂ.ಎ. ಚಿಕ್ಕರಾಜು, ಸರ್ಕಾರ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಮಾಡದೆ ಇಲ್ಲಿನ ಪುರಸಭೆಯಲ್ಲಿ ಹಲವು ಕೆಲಸಗಳಿಗೆ ಅಡ್ಡಿಯಾಗಿದೆ. ಕೆಲವು ಖಾತೆಗಳೇ ಅಕ್ರಮ ಗಳಾಗುವ ಸಂಭವವಿದೆ. ಪುರಸಭೆ ಅಧಿಕಾರಿಗಳು ಸಹಿಗಾಗಿ ಉಪ ವಿಭಾಗಾಧಿಕಾರಿಯವರನ್ನು ಹುಡುಕಿಕೊಂಡು ಅಲೆಯಬೇಕಾಗಿದೆ. ಅಧಿಕಾರ ವಿಕೇಂದ್ರೀ ಕರಣಕ್ಕೆ ಒತ್ತುನೀಡುವುದಾಗಿ ಹೇಳುವ ಸರ್ಕಾರ ಇಲ್ಲಿ ಅದಕ್ಕೆ ಅನುವು ಮಾಡಿಕೊಟ್ಟಿಲ್ಲ ಎಂದರು.ಚುನಾವಣೆ ಮುಗಿದು ಮೂರು ತಿಂಗಳಾದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಇದರಿಂದ ಹೊಸ ಸದಸ್ಯರ ಅಧಿಕಾರ ಮೊಟಕು ಗೊಳಿಸಿದಂತಾಗಿದ್ದು, ಭ್ರಮನಿರಸನ ಉಂಟುಮಾಡಿದೆ. ಜನಪ್ರತಿನಿಧಿಯಾಗಿ ಆಯ್ಕೆಯಾದ ಮೇಲೂ ಸಾರ್ವಜನಿಕರ ಕೆಲಸ ಮಾಡಲು ಸಾಧ್ಯವಾಗದೇ ಅಸಹಾಯಕ ರಾಗಿದ್ದೇವೆ. ಸರ್ಕಾರ ಕೂಡಲೇ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಮಾಡಿ, ಸಮಸ್ಯೆ ನೀಗಿಸಬೇಕು ಎಂಬುದು ಅವರ ಆಗ್ರಹ.`ನ್ಯಾಯಾಲಯಕ್ಕೆ ಮೊರೆ'

`ಪುರಸಭೆ ಆಡಳಿತವಿಲ್ಲದೆ ಹೊರಗುತ್ತಿಗೆ ಕಾರ್ಮಿಕರ ಟೆಂಡರ್ ನಡೆದಿಲ್ಲ. ಕೆಲವು ಕಡೆ ಕಾಮಗಾರಿಗಳು ನಡೆಯ ಬೇಕಿದ್ದು, ಗುತ್ತಿಗೆದಾರರು ಕಾಮಗಾರಿ ಮಾಡಲು ಹಿಂಜರಿಯುತ್ತಿದ್ದಾರೆ. ನನ್ನ ವಾರ್ಡ್‌ನಲ್ಲಿ ಮೋಟಾರ್ ಕೆಟ್ಟು ಹಲವು ದಿನಗಳು ಕಳೆದರೂ ದುರಸ್ತಿ ಮಾಡಿಸಲು ಆಗಲಿಲ್ಲ. ಇದರಿಂದ ಬೇಸತ್ತು ನನ್ನ ಸ್ವಂತ ವೆಚ್ಚದಲ್ಲಿ ದುರಸ್ತಿ ಮಾಡಿಸಿದ್ದೇನೆ. ಪುರಸಭೆ ಆಡಳಿತಾ ಧಿಕಾರಿಯಾಗಿ ನೇಮಕವಾಗಿರುವ ಉಪವಿಭಾಗಧಿಕಾರಿ ಒಂದೆರಡು ಬಾರಿ ಬಂದಿದ್ದಾರೆ ಅಷ್ಟೇ. ಈ ಗೊಂದಲದಿಂದ ಸರ್ಕಾರ ಕೂಡಲೇ ನಮ್ಮನ್ನು ದೂರ ಮಾಡಬೇಕು. ಇಲ್ಲದಿದ್ದರೆ ನಾವೇ ಸರ್ಕಾರದ ವಿರದ್ಧ ನ್ಯಾಯಾಲಯದ ಮೊರೆ ಹೋಗುತ್ತೇವೆ' ಎನ್ನುತ್ತಾರೆ ಸದಸ್ಯ ಕೆ.ಗಂಗರಾಜೇಅರಸ್.`ಗಂಡ- ಹೆಂಡತಿ ಜಗಳದ ನಡುವೆ ಕೂಸು ನಾಸು' ಎಂಬ ಗಾದೆಯಂತಾಗಿದೆ ಪಟ್ಟಣದ ಜನರ ಸ್ಥಿತಿ. ಸರ್ಕಾರ ಮೀಸಲಾತಿ ನಿಗದಿ ಮಾಡಲು ಇರುವ ಅಡ್ಡಿ ಏನೆಂದು ಗೊತ್ತಾಗಿಲ್ಲ. ಇತ್ತ ಮುಂದಿನ ಅಧ್ಯಕ್ಷ, ಉಪಾಧ್ಯಕ್ಷರ ಪಟ್ಟ ಯಾರಿಗೆ ಎಂಬ ಗೊಂದಲದಿಂದ ನೂತನ ಸದಸ್ಯರೂ ಹೊರಬಂದಿಲ್ಲ. ಮತ್ತೊಂದೆಡೆ ಕಾಮಗಾರಿ ಗಳನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಬಿಲ್‌ಗಾಗಿ ನಾಳೆ ಯಾರನ್ನು ಕೇಳುವುದು ಎಂಬ ಗೊಂದಲದಿಂದಾಗಿ ಕೆಲಸ ಮುಂದುವರಿಸುತ್ತಿಲ್ಲ. ಇದೆಲ್ಲದರ ನಡುವೆ ಪರದಾಡುತ್ತಿರುವುದು ಮಾತ್ರ ಪಟ್ಟಣದ ಜನತೆ. ಈ ಪರದಾಟಕ್ಕೆ ಸರ್ಕಾರ ಯಾವಾಗ ಕೊನೆಹಾಡುತ್ತದೋ ಗೊತ್ತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry