ಶನಿವಾರ, ಏಪ್ರಿಲ್ 10, 2021
30 °C

ಪುರಸಭೆ: ಗೊಂದಲ,ವಿಪಕ್ಷ ಸದಸ್ಯರ ಸಭಾತ್ಯಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಪ್ಲಿ: ವಿಷಯಗಳ ಗಂಭೀರ ಚರ್ಚೆಯಾಗುತ್ತಿಲ್ಲ ಎಂದು ವಿಪಕ್ಷ ಸದಸ್ಯರ ಸಭಾತ್ಯಾಗ, ಶೌಚಾಲಯ ನಿರ್ಮಿಸುವಂತೆ ಆಗ್ರಹಿಸಿ ಜನತೆ ಏಕಾಏಕಿ ಸಭೆಗೆ ಮುತ್ತಿಗೆ, ಸಭೆಯಲ್ಲಿ ಸದಸ್ಯರ ಮೊಬೈಲ್ ಮಾತು ಮುಂದುವರಿಕೆ, ಸಭೆಯಲ್ಲಿ ಶಿಸ್ತು ಪಾಲಿಸುತ್ತಿಲ್ಲ, ವಿಪಕ್ಷ ಸದಸ್ಯರ ಕಡೆಗಣನೆ ಮತ್ತು ಮಹಿಳಾ ಸದಸ್ಯರನ್ನು ನಿರ್ಲಕ್ಷಿಸಲಾಗುತ್ತದೆ ಎನ್ನುವ ಆರೋಪ ಮಹಿಳಾ ಸದಸ್ಯರಿಂದಲೇ ವ್ಯಕ್ತವಾದ ಚಿತ್ರಣ ಮಂಗಳವಾರ ಪುರಸಭೆ ಸಭಾಂಗಣದಲ್ಲಿ ಜರುಗಿದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಕಂಡು ಬಂತು.ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಿದ ನಂತರ ಪ್ರಗತಿ ವರದಿ ಕೇಳಿದ್ದಕ್ಕೆ ಆಡಳಿತ ಪಕ್ಷ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಬೇಸತ್ತ ವಿಪಕ್ಷ ಸದಸ್ಯ ಕೆ.ಎಂ. ಹೇಮಯ್ಯಸ್ವಾಮಿ ಸಭೆಯಿಂದ ಹೊರನಡೆದರು. ನಂತರ ಉಪಾಧ್ಯಕ್ಷ ಎಲಿಗಾರ ನಾಗರಾಜ, ಮಾಜಿ ಅಧ್ಯಕ್ಷರಾದ ಪಿ. ಬ್ರಹ್ಮಯ್ಯ, ಟಿ. ಲಿಂಗಾರೆಡ್ಡಿ ಮನವೊಲಿಸಿ ಸಭೆಗೆ ಕರೆತಂದರು.ಕಳೆದ ಸಭೆಯನ್ನು ಮುಂದೂಡಿ ವಿಷಯಗಳನ್ನು ಚರ್ಚಿಸದೇ ಮೊಟಕು ಮಾಡಿದ್ದು, ಪ್ರತಿ ಬಾರಿ ಇದೇ ರೀತಿ ಮಾಡಿದರೆ ಪಟ್ಟಣ ಅಭಿವೃದ್ಧಿ ಆಗುವುದಾದರೂ ಹೇಗೆ ಎಂದು ಮತ್ತೊಬ್ಬ ವಿಪಕ್ಷ ಸದಸ್ಯ ಎಂ. ರಾಜೇಂದ್ರಕುಮಾರ ಬೇಸರ ವ್ಯಕ್ತಪಡಿಸಿದರು.ಸೋಮಪ್ಪ ಕೆರೆಯನ್ನು ಅಭಿವೃದ್ಧಿಪಡಿಸಲು ಕೆರೆಏರಿ ಮತ್ತು ಅಂಗಳದಲ್ಲಿರುವ ಗುಡಿಸಲು ನಿವಾಸಿಗಳಿಗೆ ನಿವೇಶನ ಮಂಜೂರು ಮಾಡುವ ಕುರಿತು ನಡೆದ ಚರ್ಚೆಯಲ್ಲಿ ಮುಖ್ಯಾಧಿಕಾರಿ ವಿ. ರಮೇಶ ಮಾತನಾಡಿ, ಸರ್ಕಾರದ ಆದೇಶ ಜಾರಿಯಾಗುವ ಮುನ್ನ ಅಲ್ಲಿನ ನಿವಾಸಿಗಳಿಗೆ ಮುಂಜಾಗ್ರತೆಯಾಗಿ ನಿವೇಶನ ಹಂಚಲು ಕ್ರಮ ತೆಗೆದುಕೊಳ್ಳಬೇಕು ಎಂದು ಸಭೆಗೆ ಸಲಹೆ ನೀಡಿದರು. ಈ ವಿಷಯಕ್ಕೆ ಸದಸ್ಯರು ಕೆರೆ ಅಂಗಳದ ನಿವಾಸಿಗಳ ಮನವೊಲಿಸಿ ನಿವೇಶನ ಹಂಚಬೇಕು ಎಂದು ತಿಳಿಸಿದರು.ಶಿಬಿರದಿನ್ನಿ ನಿವೇಶನಗಳಿಗಾಗಿ ಕಳೆದ 24 ವರ್ಷಗಳ ಹಿಂದೆ ರೂ. 350 ಪುರಸಭೆಗೆ ಪಾವತಿಸಿರುವ ಫಲಾನುಭವಿಗಳಿಗೆ ನಿವೇಶನಗಳನ್ನು ಮಂಜೂರಾತಿ ಮಾಡುವ ಕುರಿತು ನಡೆದ ಚರ್ಚೆಯಲ್ಲಿ ಹಣ ಪಾವತಿ ಮಾಡಿದವರಲ್ಲಿ ಕೆಲವರು ಶ್ರೀಮಂತರಿದ್ದಾರೆ.ಅಂಥವರನ್ನು ಕೈ ಬಿಟ್ಟು ಅರ್ಹ ಕಡು ಬಡವ ನಿರಾಶ್ರಿತರಿಗೆ ನಿವೇಶನ ವಿತರಿಸುವಂತೆ ಕೆಲ ಸದಸ್ಯರು ಸಲಹೆ ನೀಡಿದರು. ಇದಕ್ಕೆ ಕಾಂಗ್ರೆಸ್ ಸದಸ್ಯ ಎಂ. ರಾಜೇಂದ್ರಕುಮಾರಸ್ವಾಮಿ ಕಳೆದ 24ವರ್ಷಗಳ ಹಿಂದೆ ನಿವೇಶನಕ್ಕಾಗಿ ಹಣ ಪಾವತಿಸಿದ 637ಜನರಿಗೂ ನಿವೇಶನ ನೀಡುವಂತೆ ಆಗ್ರಹಿಸಿದರು.ಪ್ರತಿ ಸಭೆಯಲ್ಲಿಯೂ ಮಹಿಳಾ ಸದಸ್ಯರಿಗೆ ಮಾತನಾಡುವುದಕ್ಕೆ ಅವಕಾಶ ನೀಡದ ಪುರುಷ ಸದಸ್ಯರ ವಿರುದ್ಧ ಎಲ್ಲಾ ಮಹಿಳಾ ಸದಸ್ಯರು ಕಿಡಿಕಾರಿದರು.ಕಲ್ಮಠದ ಬಳಿಯ ಮಹಿಳಾ ಶೌಚಾಲಯ ಶೀಘ್ರ ನಿರ್ಮಾಣ ಮಾಡುವಂತೆ ಜನತೆ ಸಭೆಗೆ ಆಗಮಿಸಿ ಆಗ್ರಹಿಸಿದ್ದರಿಂದ ಇದಕ್ಕೆ ಸ್ಪಂದಿಸಿದ ಉಪಾಧ್ಯಕ್ಷ ಎಂ. ನಾಗರಾಜ ಕಲ್ಮಠ ಆಡಳಿತ ಮಂಡಳಿ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.ಪುರಸಭೆ ಅಧ್ಯಕ್ಷೆ ಹೇಮಾವತಿ ಎಚ್.ಪಿ. ಚಂದ್ರು ಸಭೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಲಿಗಾರ ನಾಗರಾಜ, ಸ್ಥಾಯಿ ಸಮಿತಿ ಅಧ್ಯಕ್ಷ ಸಣ್ಣ ಹುಲುಗಪ್ಪ, ಮಾಜಿ ಅಧ್ಯಕ್ಷರಾದ ಪಿ. ಬ್ರಹ್ಮಯ್ಯ ಮತ್ತು ಟಿ. ಲಿಂಗಾರೆಡ್ಡಿ, ಸದಸ್ಯರಾದ ಎಂ.ಸಿ. ಮಾಯಾಪ್ಪ, ಎನ್. ರಾಮಾಂಜನೇಯಲು, ಎಂ. ರಾಜೇಂದ್ರಕುಮಾರ್, ಜಿ.ಜಿ. ಚಂದ್ರಣ್ಣ, ಅಬ್ದುಲ್ ರೌಫ್, ವಿ. ವಿದ್ಯಾಧರ, ಸತೀಶ್, ಯು. ರಾಮದಾಸ, ಟಿ. ಅಮೀನಲಿ,ಟಿ. ಲಕ್ಷ್ಮಿದೇವಿ, ಸುಲೋಚನಮ್ಮ, ಜಿ. ಕೊಂಡಮ್ಮ, ವಿ. ರತ್ನಮ್ಮ, ಹನುಮಂತಮ್ಮ, ಜಿ. ಆಶಾಕುಮಾರಿ, ಬಿ. ಅಂಬಮ್ಮ, ಗೆಜ್ಜಳ್ಳಿ ಭಾಷ, ಮೋಹನರೆಡ್ಡಿ, ಶಂಕ್ರಮ್ಮ, ವ್ಯವಸ್ಥಾಪಕ ಗುರುಪ್ರಸಾದ್, ಕಂದಾಯ ಅಧಿಕಾರಿ ಫಣಿರಾಜ್ ಇದ್ದರು.ಸನ್ಮಾನ: ಬಳ್ಳಾರಿಗೆ ವರ್ಗಾವಣೆಯಾಗಿರುವ ಮುಖ್ಯಾಧಿಕಾರಿ ವಿ. ರಮೇಶ ಅವರನ್ನು ಇದೇ ಸಂದರ್ಭದಲ್ಲಿ ಪುರಸಭೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಸನ್ಮಾನಿಸಿ ಬೀಳ್ಕೊಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.