ಪುರಸಭೆ ಜಾಗಕ್ಕೆ ತಂತಿಬೇಲಿ ಹಾಕಲು ನಿರ್ಧಾರ

7

ಪುರಸಭೆ ಜಾಗಕ್ಕೆ ತಂತಿಬೇಲಿ ಹಾಕಲು ನಿರ್ಧಾರ

Published:
Updated:

ಗಜೇಂದ್ರಗಡ: ಭೂ ಪರಿವರ್ತನೆಯ ಪ್ರದೇಶದಲ್ಲಿ ನಾಗರಿಕ ಸೌಲಭ್ಯ ಕಲ್ಪಿಸಲು ವಿಫಲವಾಗಿರುವ ಮಾಲೀಕರಿಗೆ ತಕ್ಷಣವೇ ನೋಟಿಸು ಜಾರಿ ಮಾಡಿ ಅಲ್ಲಿನ ಶೇ. 40ರಷ್ಟು ಜಾಗವನ್ನು ಪುರಸಭೆ ಹೆಸರಿನಲ್ಲಿ ನಮೂದಿಸಿ ಆ ಪ್ರದೇಶದ ಸುತ್ತಲು ತಂತಿ ಬೇಲಿ ಹಾಕುವಂತೆ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಕಳಕಪ್ಪ ಬಂಡಿ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.ಪುರಸಭೆಯಲ್ಲಿ ಈಚೆಗೆ ಜರುಗಿದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನಿವೇಶನಗಳ ಉದ್ದೇಶದಿಂದ ಭೂ ಪರಿವರ್ತನೆ ಮಾಡುವ ಮಾಲೀಕರು ಅಲ್ಲಿ ಯಾವುದೇ ನಾಗರಿಕ ಸೌಲಭ್ಯವನ್ನು ಕಲ್ಪಿಸದೇ ಜನರಿಗೆ ವಂಚಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಹೇಳಿದರು.‘ಭೂ ಪರಿವರ್ತನೆಯ ನಕ್ಷೆಯನ್ನು ಬದಲಿಸಿ ನಿವೇಶನಗಳನ್ನು ಮರು ಮಾರಾಟ ಮಾಡುತ್ತಿರುವ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇನ್ನು ಮುಂದೆ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗದೇ ಯಾವ ಭೂಪರಿವರ್ತನೆ ನಿವೇಶನಗಳನ್ನು ದಾಖಲು ಮಾಡಿಕೊಳ್ಳಬಾರದು. ಇದನ್ನು ಮೀರಿ ನಡೆಯುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಅವರು ಎಚ್ಚರಿಸಿದರು.ಮಾಹಿತಿ ತರದ ವಿಶೇಷ ತಹಸೀಲ್ದಾರಗೆ ತರಾಟೆ: 1990ರಿಂದ ಈವರೆಗೆ ಪಟ್ಟಣದಲ್ಲಿ ಎಷ್ಟು ಪ್ರದೇಶದಲ್ಲಿ ಭೂ ಪರಿವರ್ತನೆ ಮಾಡಲಾಗಿದೆ ಎನ್ನುವ ಅಂಕಿ ಅಂಶಗಳ ಬಗ್ಗೆ ವಿಶೇಷ ತಹಸೀಲ್ದಾರ ಹಿರೇಮಠ ಅವರನ್ನು ಶಾಸಕ ಬಂಡಿ ಅವರು ಪ್ರಶ್ನಿಸಿದರು.‘ಈ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ’ ಎಂದು ಹೇಳಿದ ಹಿರೇಮಠ ಅವರನ್ನು- ‘ನಿಮಗೆ ಗೊತ್ತಿರುವುದಾದರೂ ಏನು? ಏನೇ ಕೇಳಿದರೂ ಗೊತ್ತಿಲ್ಲ ಎಂದು ಹೇಳುತ್ತೀರಿ. ಸಭೆಗೆ ಬರುವಾಗ ಮಾಹಿತಿ ಸಂಗ್ರಹಿಸಿಕೊಂಡು ಬರಬೇಕೆನ್ನುವುದು ಗೊತ್ತಿಲ್ಲವೇ?’ ಎಂದು ಶಾಸಕರು ತರಾಟೆಗೆ ತೆಗೆದುಕೊಂಡರು. ಎರಡು ದಿನದಲ್ಲಿ ಎಲ್ಲ ಸೂಕ್ತ ಮಾಹಿತಿಯನ್ನು ಸಂಗ್ರಹಿಸಿಕೊಡುವಂತೆ ಸೂಚಿಸಿದರು.ವಾಣಿಜ್ಯ ಮಳಿಗೆಗಳ ಸರ್ವೆಗೆ ಆದೇಶ: ಪಟ್ಟಣದಲ್ಲಿ ಇತ್ತೀಚೆಗೆ ಹತ್ತಾರು ಸೀಡ್ಸ್ ಕಂಪೆನಿಗಳು ಅಂಗಡಿಗಳನ್ನು ತೆರೆದಿದ್ದು ಅವು ಪುರಸಭೆಗೆ ವಾರ್ಷಿಕ ಪರವಾನಿಗೆ ಶುಲ್ಕ ತುಂಬುತ್ತಿಲ್ಲ ಎಂದು ಕೆಲ ಸದಸ್ಯರು ಸಭೆಯ ಗಮನ ಸೆಳೆದರು.ಪಟ್ಟಣದಲ್ಲಿ ಬಹುತೇಕ ವಾಣಿಜ್ಯ ಮಳಿಗೆಗಳು ಪುರಸಭೆಯ ಪರವಾಣಿಗೆ ತೆಗೆದುಕೊಳ್ಳದೇ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಹೀಗಾಗಿ ನಾಳೆಯಿಂದಲೇ ಎಲ್ಲ ಅಂಗಡಿಗಳನ್ನು ಸರ್ವೆ ಮಾಡಿ ಪರವಾನಿಗೆ ಇಲ್ಲದ ಅಂಗಡಿಗಳ ಮಾಲೀಕರಿಗೆ ನೋಟಿಸು ಕೊಡಲು ಸಭೆ ತೀರ್ಮಾನಿಸಿತು.ಪುರಸಭೆಯ ಆದಾಯದ ದೃಷ್ಟಿಯಿಂದ ಎಲ್ಲ ಕರ ವಸೂಲಿಯನ್ನು ತೀವ್ರಗೊಳಿಸುವುದು, 60 ಕಸದ ತೊಟ್ಟಿಗಳನ್ನು ಖರೀದಿಸುವುದು, ಇದೇ ತಿಂಗಳಲ್ಲಿ ನಡೆಯಲಿರುವ ಲಕ್ಕುಂಡಿ ಉತ್ಸವಕ್ಕೆ ಎರಡು ಲಕ್ಷ ರೂಪಾಯಿ ವಂತಿಗೆ ಕೊಡಲು ಸಭೆ ನಿರ್ಣಯ ತೆಗೆದುಕೊಂಡಿತು.ಪುರಸಭೆ ಅಧ್ಯಕ್ಷ ಅಕ್ಕಮ್ಮ ರಾಮಜಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎ.ಬಿ.ಲೋದಿ, ಸ್ಥಾಯಿ ಕಮಿಟಿ ಅಧ್ಯಕ್ಷ ವೆಂಕಟೇಶ ಮುದಗಲ್ಲ. ಮುಖ್ಯಾಧಿಕಾರಿ ಆರ್.ಎಂ.ಕೊಡಗೆ, ಪುರಸಭೆ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry