ಪುರಸಭೆ ನಿರ್ಲಕ್ಷ್ಯ: ಕೆಸರು ಗದ್ದೆಯಾದ ರಸ್ತೆಗಳು

7

ಪುರಸಭೆ ನಿರ್ಲಕ್ಷ್ಯ: ಕೆಸರು ಗದ್ದೆಯಾದ ರಸ್ತೆಗಳು

Published:
Updated:

ದೇವದುರ್ಗ: ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಬಡ್ತಿ ಪಡೆದ ನಂತರ ಪಟ್ಟಣದ ರಸ್ತೆ ಅಭಿವೃದ್ಧಿ, ಚರಂಡಿ ಮತ್ತು ಕುಡಿಯುವ ನೀರಿನ ಸಮಸ್ಯೆಗಳು ಪರಿಹಾರ ಆಗುತ್ತವೆ ಎಂಬ ನಾಗರಿಕರ ಬಹುದಿನಗಳ ನಿರೀಕ್ಷೆ ಈಗ ತಲೆಕೆಳಗಾಗಿದ್ದು, ಬಹುತೇಕ ವಾರ್ಡ್‌ಗಳಲ್ಲಿ ಪುರಸಭೆಯ ನಿರ್ಲಕ್ಷ್ಯದಿಂದಾಗಿ ಜನರು ಹೋಡಾಡಂಥ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಮೊದಲು ಇಕ್ಕಾಟಾಗಿದ್ದ ಪಟ್ಟಣದ ಮುಖ್ಯ ರಸ್ತೆಯನ್ನು ಪಟ್ಟಣದ ಅಭಿವೃದ್ಧಿ ಹೆಸರಿನಲ್ಲಿ ಕಳೆದ ಎರಡು ವರ್ಷದ ಹಿಂದೆ ವಿಸ್ತರಣೆ ಮಾಡಲಾಗಿದೆ. ಇದ್ದ ರಸ್ತೆ ಮತ್ತು ಚರಂಡಿಗಳು ವಿಸ್ತರಣೆ ಸಂದರ್ಭದಲ್ಲಿ ಕಲ್ಲು, ಮಣ್ಣಿನಿಂದ ಮುಚ್ಚಿಹೋದ ಕಾರಣ ಎಲ್ಲರ ಮನೆಯ ನೀರು ಈಗ ರಸ್ತೆಯಲ್ಲಿ ಹಳ್ಳದಂತೆ ಹರಿಯುವುದರಿಂದ ಮುಖ್ಯ ರಸ್ತೆಯಲ್ಲಿ ಓಡಾಡುವುದು ತೀರ ದುಸ್ಥರವಾಗಿದೆ.ಕಳೆದ ವಾರದಿಂದ ಹಿಂಗಾರು ಮಳೆ ಆರಂಭವಾಗಿದೆ. ವಿಸ್ತರಣೆ ಹೆಸರಿನಲ್ಲಿ ಕಿತ್ತಿಹಾಕಲಾಗಿರುವ ಕಲ್ಲು, ಮಣ್ಣು ರಸ್ತೆಯ ಮೇಲೆ ಬಿದ್ದಿರುವುದರಿಂದ ರಸ್ತೆಗಳು ಈಗ ಕೆಸರು ಗದ್ದೆಯಾಗಿವೆ. ವಾಹನ ಸಂಚಾರಕ್ಕೆ ಹಿಂದೆ ಮುಂದೆ ನೋಡಿವಂಥ ಪರಿಸ್ಥಿತಿ ಇರುವಾಗ ಮನುಷ್ಯರ ಓಡಾಡುವುದು ಅಸಾಧ್ಯ ಎನ್ನುವಂತಿದೆ. ಸೌಜನ್ಯಕಾದರೂ ಪುರಸಭೆ ಅಧಿಕಾರಿಗಳು ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕಾಗಿದ್ದರೂ ಮೌನಕ್ಕೆ ಶರಣಾಗಿರುವುದರಿಂದ ಬೆಳಗಾದರೆ ಹದಗೆಟ್ಟ ರಸ್ತೆಗಳಲ್ಲಿ ಎದ್ದು,ಬಿದ್ದು ಹೋಗುವಂಥ ಸ್ಥಿತಿ ನಿರ್ಮಾಣವಾಗಿದೆ.ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಪಟ್ಟಣದಲ್ಲಿ ಕಳೆದ ನಾಲ್ಕು ವರ್ಷದ ಹಿಂದೆ ಸುಮಾರು 8ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡ ಒಳಚರಂಡಿ ಕಾಮಗಾರಿ ಟೆಂಡರ್ ಪ್ರಕಾರ ಅವಧಿ ಮುಗಿದರೂ ಕಾಮಗಾರಿ ಮುಗಿದಿಲ್ಲ. ಕೆಲವು ವಾರ್ಡ್‌ಗಳಲ್ಲಿ ಅಪೂರ್ಣಗೊಂಡ ಕಾಮಗಾರಿ ಕಂಡು ಬಂದರೆ ಇನ್ನೂ ಕೆಲವು ವಾರ್ಡ್‌ಗಳ ಮುಖ್ಯ ರಸ್ತೆಯನ್ನು  ಅಗೆದು ತಿಂಗಳು ಗಟ್ಟಲೇ ಬಿಟ್ಟಿರುವುದರಿಂದ ಎಷ್ಟೊ ಜನರು ಗುಂಡಿಯಲ್ಲಿ ಬಿದ್ದು ಕೈ,ಕಾಲು ಮುರಿದುಕೊಂಡ ಉದಾಹರಣೆಗಳು ಇವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry