ಸೋಮವಾರ, ಜನವರಿ 27, 2020
15 °C

ಪುರಸಭೆ ಮಾಜಿ ಸದಸ್ಯರ ವ್ಯವಸಾಯ ಪ್ರೇಮ

ಪ್ರಜಾವಾಣಿ ವಾರ್ತೆ/ –ನಾರಾಯಣರಾವ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಕುಷ್ಟಗಿ: ‘ಪುರಸಭೆ ಮಾಜಿ ಸದಸ್ಯ ಸುಭಾಸ್‌ ಹಿರೇಮಠ ಎಲ್ಲಿ?’ ಎಂದು ಅನತಿ ದೂರದಲ್ಲಿ ತಲೆಗೆ ಮುಂಡಾಸು ಸುತ್ತಿ ಮೈ, ಕೈಗೆಲ್ಲ ಕೆಸರು ಅಂಟಿಸಿ­ಕೊಂಡು ಬಿರುಬಿಸಿಲಲ್ಲಿ ಬೆವರಿಳಿಸಿ­ಕೊ­ಳ್ಳುತ್ತ ಪವರ್‌ ಟಿಲ್ಲರ್‌ನಿಂದ ಹೊಲ ಉಳುಮೆ ಮಾಡುವುದರಲ್ಲಿ ತಲ್ಲೀನ­ರಾಗಿದ್ದ ವ್ಯಕ್ತಿಯನ್ನು ಕೇಳಿದೆ. ಅವರು ತಲೆ ಎತ್ತಿ ನೋಡದೆ ‘ನಾನ ಬರ್ರಿ’ ಎಂದರು!ಇವರು ಹೊಲದಲ್ಲಿ ಅರಸನಾಗಿ ನಿಲ್ಲುವುದಕ್ಕಿಂತ ಆಳಾಗಿ ದುಡಿಯುವು­ದನ್ನು ಇಷ್ಟಪಡುತ್ತಾರೆ. ಆದ್ದರಿಂದಲೇ 55ರ ಹರೆಯದಲ್ಲೂ ಹೊಲದಲ್ಲಿ ಬೆವರು ಹರಿಸುತ್ತಿದ್ದರು.ಇವರು ಕಷ್ಟದಲ್ಲೇ ಬೆಳೆದವರು. ಪಂಪ್‌ಸೆಟ್‌ ದುರಸ್ತಿಗಾಗಿ ಹಳ್ಳಿಹಳ್ಳಿ­ಗಳನ್ನು ತಿರುಗಿದವರು. ಬೇರೊಬ್ಬರ ಅಂಗಡಿಯಲ್ಲಿ ಕೆಲಸಗಾರನಾಗಿ ದುಡಿದ­ವರು, ಸ್ವತಃ ಪರಿಶ್ರಮ ಮತ್ತು ಛಲ­ದಿಂದ ಸಾಧನೆ ಮೆಟ್ಟಿಲೇರಿ ಎಲೆಕ್ಟ್ರಿಕಲ್‌ ಅಂಗಡಿಯ ಮಾಲೀಕರಾದವರು. ಸ್ವತಃ ಜಮೀನಿನಲ್ಲಿ ದುಡಿಯುತ್ತ, ಕಬ್ಬು ಬೆಳೆಯುವುದರಲ್ಲಿ ಉತ್ತಮ ಸಾಧನೆ ಮಾಡಿರುವವರು. ಒಂದು ಅವಧಿಗೆ ಪುರಸಭೆಗೆ ಸದಸ್ಯರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿ, ಸದ್ಯ ಕೃಷಿಯಲ್ಲಿಯೇ ಸಂತೃಪ್ತಿ ಕಾಣುತ್ತಿದ್ದಾರೆ.ಕೆಲಸಗಾರ ಒಡೆಯನಾದ!: ಹಿರೇಮಠ ಓದಿದ್ದು ಪಿಯುಸಿ. ಬದುಕಿನ ಸ್ವಾವಲಂಬನೆಗಾಗಿ ಐಟಿಐ ತರಬೇತಿ ಪಡೆದು ಮೆಕಾನಿಕ್‌ ಆಗಿ ಬೇರೊಬ್ಬರ ಅಂಗಡಿಯಲ್ಲಿ ತಿಂಗಳ ಪಗಾರ­ದಲ್ಲಿ ಬದುಕಿನ ಬಂಡಿ ಎಳೆ­ಯು­ತ್ತಿದ್ದರು. ಇಂಥವರು ದಾಳಿಂಬೆ ಬೆಳೆ­ಯಲ್ಲಿ ಬಂದ ಹಣ ಒಟ್ಟುಗೂಡಿಸಿ, ಮನೆಯವರ ಸಹಕಾರದಿಂದ  ತಾವು ಪಟ್ಟ­ಣದ ಪ್ರಮುಖ ವರ್ತರಕ ಸಾಲಿನಲ್ಲಿ ನಿಲ್ಲುತ್ತೇವೆ, ಹತ್ತಾರು ಎಕರೆ ಜಮೀನಿನ ಮಾಲೀಕನಾಗುತ್ತೇವೆ ಎಂಬುದನ್ನು ಕನಸಿನಲ್ಲಿಯೂ ಎಣಿಸಿರಲಿಲ್ಲವಂತೆ.13 ವರ್ಷಗಳವರೆಗೂ ದಾಳಿಂಬೆ ಬೆಳೆಯಲ್ಲಿ ಉತ್ತಮ ಸಾಧನೆ ಮಾಡಿ­ದ್ದರೂ ಕೆಲವರ್ಷಗಳ ಹಿಂದೆ ದುಂಡಾಣು ಅಂಗಮಾರಿ ರೋಗದಿಂದ ದಾಳಿಂಬೆ ಹಾಳಾಗಿ ಹಾಕಿದ ಬಂಡ­ವಾಳವೂ ಕೈಗೆ ಬರಲಿಲ್ಲ. ಕಳಕೊಂಡಲ್ಲೇ ಮತ್ತೆ ಹುಡುಕಬೇಕು ಎನ್ನುವ ಛಲದ ಹಿರೇಮಠರಿಗೆ ರೈತ ಸ್ನೇಹಿತರು ಕಬ್ಬು ಬೆಳೆಯುವಂತೆ ಸಲಹೆ ನೀಡಿದರು. ಕಳೆದ ವರ್ಷ ನಾಲ್ಕೂವರೆ ಎಕರೆಯಲ್ಲಿ 160 ಟನ್‌ ಇಳುವರಿ ತೆಗೆದಿದ್ದಾರೆ. ಬೇಸಾದ ಎಲ್ಲ ಖರ್ಚು ತೆಗೆದು ₨ 2 ಲಕ್ಷ ನಿವ್ವಳ ಆದಾಯ ಬಂದಿತ್ತು.ಕೂಳೆ ಬೆಳೆ ಸೇರಿ ಈಗ 5 ಎಕರೆ­ಯ­ಲ್ಲಿರುವ ಕಬ್ಬು ಆಳೆತ್ತರಕ್ಕೆ ಬೆಳೆದು ನಿಂತಿದ್ದು ಅಂದಾಜು 250 ಟನ್‌ ಆಗುವ ನಿರೀಕ್ಷೆ ಹೊಂದಿದ್ದಾರೆ. ಸಿರಗು­ಪ್ಪಾದ ಸಕ್ಕರೆ ಕಾರ್ಖಾನೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಟನ್‌ಗೆ ಕನಿಷ್ಠ ₨ 2000 ಸಿಕ್ಕರೂ ಸಾಕು ಹಾನಿ­ಯಾ­ಗುವುದಿಲ್ಲ. ಅಲ್ಲದೇ ಕೂಳೆ ಬೆಳೆಯಾಗಿರುವುದರಿಂದ ಖರ್ಚು ₨ 50 ಸಾವಿರ ದಾಟುವುದಿಲ್ಲ. ಹಾಗಾಗಿ ‘ದಾಳಿಂಬೆ ಕೈಕೊಟ್ಟರೂ ಕಬ್ಬು ಕೈ­ಹಿಡಿದೆ’ ಎನ್ನುವ ಸಮಾಧಾನ ಅವರದು.ಪಂಪಸೆಟ್‌ಗಳ ದುರಸ್ತಿಗೆ ಬೇರೆಯ­ವರ ಕಡೆ ಹೋಗುವುದಿಲ್ಲ. ಪವರ್‌­ಟಿಲ್ಲರ್‌ಗೆ ವಿವಿಧ ರೀತಿಯ ಉಳುಮೆಗೆ ಬೇಕಾದ ಉಪಕರಣಗಳನ್ನು ಸ್ವತಃ ಸಿದ್ಧಪಡಿಸಿಕೊಳ್ಳುವುದು, ಇತರರಿಗೆ ಸಹಾಯ ಮಾಡುವುದು ಅವರ ದೊಡ್ಡ­ಗುಣಗಳಲ್ಲಿ ಒಂದು.‘ ಸಗಣಿ ಹಾಕುವು­ದಿಲ್ಲ ಎಂಬುದನ್ನು ಬಿಟ್ಟರೆ ಪವರ್‌­

ಟಿಲ್ಲರ್‌ ಎರಡು ಬೆಲೆಬಾಳುವ ಎತ್ತುಗಳಿಗಿಂತಲೂ ಹೆಚ್ಚು ಕೆಲಸ ನಿಭಾಯಿಸುತ್ತದೆ’ ಎಂಬ ಅನುಭವದ ಮಾತು ಹಿರೇಮಠ ಅವರದು. ‘ವ್ಯವಹಾರದಲ್ಲಿ ನಿತ್ಯ ಕೈತುಂಬ ನೋಟು ಎಣಿಸುವುದನ್ನು ಬಿಟ್ಟು ಈಗ ಮಣ್ಣಿನಲ್ಲಿ ದುಡಿಯುವುದರಿಂದ ಏನು  ಲಾಭ?’ ಎಂದು ಕೇಳಿದರೆ, ‘ನೋಡ್ರಿ ದೇವ್ರು ಎಲ್ಲಾ ರೀತಿಯಿಂದ ಅನುಕೂಲ

ಮಾಡ್ಯಾನ ಸರಿ, ಆದ್ರ ಭೂಮಿ­ಯೊಳ್ಗ­ದುಡಿದು ಪ್ರಕೃತಿಮಾತೆ­ಯೊಂ­ದಿಗೆ ಬೆರೆತಾಗ ಸಿಕ್ಕಷ್ಟು ಮಾನಸಿಕ ನೆಮ್ಮದಿ, ತೃಪ್ತಿ ರೊಕ್ಕ ಎಣಿಸುವಾಗ ಮತ್ತ ರಾಜಕಾರಣ­ದಲ್ಲಿದ್ದಾಗ ಸಿಕ್ಕಿಲ್ಲ. ಅಲ್ಲದೆ ದೈಹಿಕ, ಮಾನಸಿ ಆರೋಗ್ಯವೇ ನಿಜವಾದ ಶ್ರೀಮಂತಿಕೆ’ ಎನ್ನುತ್ತಾರೆ. (9483942225).

ಪ್ರತಿಕ್ರಿಯಿಸಿ (+)