ಪುರಸಭೆ ವ್ಯಾಪ್ತಿಗೆ ಹಲವು ಪ್ರದೇಶ ಸೇರ್ಪಡೆ

7

ಪುರಸಭೆ ವ್ಯಾಪ್ತಿಗೆ ಹಲವು ಪ್ರದೇಶ ಸೇರ್ಪಡೆ

Published:
Updated:

ಬೇಲೂರು: ಪಟ್ಟಣಕ್ಕೆ ಸಮೀಪದ ಗ್ರಾಮಗಳನ್ನು ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲು ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಪುರಸಭೆ ಅಧ್ಯಕ್ಷ ತೊ.ಚ. ಅನಂತ ಸುಬ್ಬರಾಯ ಅಧ್ಯಕ್ಷತೆಯಲ್ಲಿ ಬುಧ ವಾರ ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯಾಧಿಕಾರಿ ಸುರೇಶ್‌ಬಾಬು ಬೇಲೂರು ಪಟ್ಟಣಕ್ಕೆ ಸಮೀಪದ ಕುವೆಂಪುನಗರ, ರಾಯಾಪುರ, ಬಂಟೇನ ಹಳ್ಳಿಯ ಕೆಲ ಪ್ರದೇಶ, ಹನುಮಂತ ನಗರಗಳನ್ನು ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಸಂಬಂಧ ಕರ್ನಾಟಕ ರಾಜ್ಯ ನಗರ ಯೋಜನಾ ಮಂಡಳಿ ಪತ್ರ ಬರೆದಿದೆ. ಈ ಗ್ರಾಮಗಳನ್ನು ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ಉದ್ದೇಶ ಇದೆ. ಸರ್ಕಾರಕ್ಕೆ ಈ ಕುರಿತು ಪ್ರಸ್ತಾವ ಕಳುಹಿಸಿದರೆ ಸರ್ಕಾರ ಪರಿಶೀಲನೆ ನಡೆಸಲಿದೆ. ಈ ಸಂಬಂಧ ಹೊಸ ನಕ್ಷೆಯನ್ನೂ ನಗರ ಯೋಜನಾ ಪ್ರಾಧಿಕಾರ ರಚಿಸಿದೆ ಎಂದು ತಿಳಿಸಿದರು. ಬಳಿಕ ಸಭೆ ಈ ವಿಚಾರಕ್ಕೆ ಅನುಮೋದನೆ ನೀಡಿತು.ಬೇಲೂರು ಪಟ್ಟಣ ಸ್ವಚ್ಛತೆ ವಿಚಾರದಲ್ಲಿ ಮಾದರಿಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಪಟ್ಟಣ ಸ್ವಚ್ಛತೆ ಸಂಪೂರ್ಣ ಹದಗೆಟ್ಟಿದೆ. ಇದಕ್ಕೆ ಕಾರಣ ಏನು? ಎಂದು ಸದಸ್ಯ ಬಿ.ಸಿ. ಮಂಜುನಾಥ್ ಪ್ರಶ್ನಿಸಿದರೆ, ಸದಸ್ಯ ಜಿ. ಶಾಂತಕುಮಾರ್ ಗುತ್ತಿಗೆ ಪೌರ ಕಾರ್ಮಿಕರಿಗೆ ಕಡಿಮೆ ಸಂಬಳ ನೀಡ ಲಾಗುತ್ತಿದೆ. ಇದರಿಂದ ಕೆಲಸಕ್ಕೆ ಯಾರೂ ಬರುತ್ತಿಲ್ಲ. ಟೆಂಡರ್ ನೀಡುವ ಸಂದರ್ಭದಲ್ಲಿ ಗುತ್ತಿಗೆದಾರರ ಬಳಿ ಅಗತ್ಯವಿರುವ ಪೌರಕಾರ್ಮಿಕರು ಇದ್ದಾರೆಯೇ ಎಂಬುದನ್ನು ಪರಿಶೀಲಿಸಿ ನಂತರ ಟೆಂಡರ್ ನೀಡಬೇಕು ಎಂದರು.ಸದಸ್ಯ ಸಾಹಿರಾ ಬೇಗಂ ಮಾತನಾಡಿ, ಹೊಸನಗರ ಬಡಾವಣೆಯಲ್ಲಿ ವರ್ಷಕ್ಕೆ ಒಂದು ಬಾರಿ ಮಾತ್ರ ಸ್ವಚ್ಛತೆ ಮಾಡಲಾಗುತ್ತಿದೆ ಎಂದು ದೂರಿದರು. ಇದಕ್ಕೆ ಸ್ಪಷ್ಟನೆ ನೀಡಿದ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ಗುತ್ತಿಗೆ ಪೌರ ಕಾರ್ಮಿಕರನ್ನು ಸರಬರಾಜು ಮಾಡುವ ಗುತ್ತಿಗೆದಾರರಿಗೆ ಈ ಬಾರಿ ಹಲವು ನಿಬಂಧನೆ ಹೇರಲಾಗುವುದು. ಅಗತ್ಯವಿರುವ ಪೌರಕಾರ್ಮಿಕರು ಅವರ ಬಳಿ ಇದ್ದರೆ ಮಾತ್ರ ಗುತ್ತಿಗೆ ನೀಡಲಾಗುವುದು ಎಂದರು.ಪಟ್ಟಣದ ಮುಖ್ಯ ರಸ್ತೆ ಅಗಲೀ ಕರಣ ಮಾಡುವ ಸಂಬಂಧ ಜಿಲ್ಲಾಧಿ ಕಾರಿಗಳು ಮುಖ್ಯ ರಸ್ತೆಯ ವರ್ತಕರ ಸಭೆ ಕರೆದು ಚರ್ಚಿಸುವಂತೆ ಸಕಲೇಶ ಪುರ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದಾರೆ. ರಸ್ತೆ ಅಗಲೀಕರಣ ಸಂಬಂಧ ಪಟ್ಟಣದ ವರ್ತಕರಲ್ಲಿ ಗೊಂದಲ ಮೂಡಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಂಜಿನಿಯರ್ ಅವರಿಂದ ಮಾಹಿತಿ ಪಡೆಯಿರಿ ಎಂದು ಸದಸ್ಯ ಎಚ್.ಎಂ. ದಯಾನಂದ್ ಮತ್ತು ಎಂ.ಗುರುಪಾದಸ್ವಾಮಿ ಒತ್ತಾಯಿಸಿದರು. ಈ ಕುರಿತು ಎಂಜಿನಿಯರ್‌ಗೆ ಪತ್ರ ಬರೆಯುವುದಾಗಿ ಅನಂತಸುಬ್ಬರಾಯ ತಿಳಿಸಿದರು.ಇತ್ತೀಚೆಗೆ ಸಾರ್ವಜನಿಕರು ನೀರು ಸರಬರಾಜು ನೌಕರನ ವಿರುದ್ಧ ಹಲ್ಲೆ ನಡೆಸಿರುವುದು ಖಂಡನೀಯ. ಆದರೆ, ನೀರು ಸರಬರಾಜು ನೌಕರರೂ ಸಹ ಸಾರ್ವಜನಿಕರೊಂದಿಗೆ ಸೌಹಾರ್ದತೆ ಯಿಂದ ವರ್ತಿಸಬೇಕು ಎಂದು ಸದಸ್ಯ ಎಚ್.ಎಂ.ದಯಾನಂದ್ ಹೇಳಿದರು.ಯಗಚಿ ಅಣೆಕಟ್ಟೆಯಲ್ಲಿ ನೀರು ಕಡಿಮೆಯಿದೆ. ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುವ ಸಾಧ್ಯತೆ ಇದ್ದು, ಜಲಾಶಯದಿಂದ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀಡು ಬಿಡದಂತೆ ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸಿ ಎಂದು ಸದಸ್ಯ ಬಿ.ಸಿ. ಮಂಜುನಾಥ್ ಸೂಚಿಸಿದರು. ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾ ಗಿದೆ. ಪುರಸಭೆ ಸಿಬ್ಬಂದಿ ಪ್ಲಾಸ್ಟಿಕ್ ಬಳಕೆ ತಡೆಯಲು ಯಾವುದೇ ಕ್ರಮಕೈಗೊಳ್ಳು ತ್ತಿಲ್ಲ ಎಂದು ಸದಸ್ಯ ಬಿ.ಎ. ಜಮಾಲುದ್ದೀನ್ ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry