ಪುರಸಭೆ ಸಭೆಯಲ್ಲಿ ಗದ್ದಲ, ತರಾಟೆ

7

ಪುರಸಭೆ ಸಭೆಯಲ್ಲಿ ಗದ್ದಲ, ತರಾಟೆ

Published:
Updated:

ಸಕಲೇಶಪುರ: ಕರ್ತವ್ಯಲೋಪ ಎಸಗಿರುವ ಎಂಜಿನಿಯರ್ ಪುರಸಭೆಗೆ ಬೇಡ, ಕಳಪೆ ಕಾಮಗಾರಿ ಗುತ್ತಿಗೆದಾರರ ಮೇಲೆ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ನಿಯೋಗ, ಯೋಜನಾ ನಿರ್ದೇಶಕರಿಗೆ ಧಿಕ್ಕಾರ, ಸಭೆಯಲ್ಲಿ ಮಾಹಿತಿ ನೀಡದ ಅಧಿಕಾರಿಗಳಿಗೆ ತರಾಟೆ, ಮಹಿಳಾ ಸಿಬ್ಬಂದಿ ಕಣ್ಣೀರು, ನಕಲಿ ದಾಖಲೆ ನೀಡಿದ ಗುತ್ತಿದಾರರ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಒತ್ತಡ ಸೇರಿದಂತೆ ಬಿಸಿ ಬಿಸಿ ಚರ್ಚೆಗಳಿಗೆ ಶುಕ್ರವಾರದ ಪುರಸಭೆಯ ಸಾಮಾನ್ಯ ಸಭೆ ವೇದಿಕೆಯಾಯಿತು.ಪುರಸಭಾ ಅಧ್ಯಕ್ಷ ಎಸ್.ಡಿ.ಆದರ್ಶ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಳಪೆ ಕಾಮಗಾರಿ, ಹಣ ದುರುಪಯೋಗ, ಅಧಿಕಾರಿಗಳ ಬೇಜವಬ್ದಾರಿ ಸಂಬಂಧಿಸಿದಂತೆ ಪಕ್ಷ ಭೇದ ಮರೆತು ಎಲ್ಲ ಸದಸ್ಯರು  ಆಕ್ರೋಶ ವ್ಯಕ್ತಪಡಿಸಿದರು.ಪುರಸಭೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಶೇ 18ರ ಅನುದಾನದಲ್ಲಿ ವ್ಯವಸ್ಥಿತವಾಗಿ ಮಾಡಲಾಗಿದ್ದ ಕ್ರಿಯಾ ಯೋಜನೆಯ ಒಂದೇ ಒಂದು ಕಾಮಗಾರಿಯನ್ನು ಇದುವರೆಗೂ ಎಂಜಿನಿಯರ್ ಚಂದ್ರಶೇಖರ್ ನಿರ್ವಹಿಸದೇ ಕರ್ತವ್ಯ ಲೋಪ ಎಸಗಿದ್ದಾರೆ. ಕಚೇರಿ ಕಂಪ್ಯೂಟರ್ ಮುಂದೆ ಕಾನೂನುಬಾಹಿರವಾಗಿ ಪುರಸಭಾ ಸಿಬ್ಬಂದಿಯಲ್ಲದವರನ್ನು ಕೂರಿಸಿಕೊಂಡು ಕೆಲಸ ಮಾಡಿಸುತ್ತಾರೆ. ಶೇ 18ರ ಅನುದಾನದ ಕಾಮಗಾರಿಗಳ ಬಗ್ಗೆ ಕೇಳಿದರೆ ಸದಾ ಸುಳ್ಳು ಮಾಹಿತಿ ನೀಡುತ್ತಾರೆ,ಆದ್ದರಿಂದ ಅವರ ಸೇವೆ ಇಲ್ಲಿಯ ಪುರಸಭೆಗೆ ಬೇಡ ಎಂದು ಮಾಜಿ ಉಪಾಧ್ಯಕ್ಷ ಕಾಡಪ್ಪ  ನುಡಿದರು. ಕೂಡಲೇ ಅವರನ್ನು ಬೇರೆಡೆಗೆ ವರ್ಗಾವನೆ ಮಾಡುವಂತೆ ನಿರ್ಣಯ ಕೈಗೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಿಸುವ ಬಗ್ಗೆ ತೀರ್ಮಾನಿಸಿದರು.ಪಟ್ಟಣದಲ್ಲಿ 8 ತಿಂಗಳ ಹಿಂದೆ ಮಾಡಲಾದ ಎಲ್ಲ ಡಾಂಬರ್ ರಸ್ತೆಗಳು ಪೂರ್ಣ ಹಾಳಾಗಿವೆ. ಪಟ್ಟಣದಲ್ಲಿ ವಾರದ ಹಿಂದೆ ನಡೆದ ಕಾಂಕ್ರಿಟ್ ರಸ್ತೆಗಳು ಕಳಪೆ ಕಾಮಗಾರಿಯಿಂದ ಈಗಲೆ ಗುಂಡಿ ಬಿದ್ದಿವೆ. ‘ಗುಣಮಟ್ಟವಿಲ್ಲದ ಕಾಮಗಾರಿಗಳಿಗೆ ಯಾವ ಆಧಾರದಲ್ಲಿ ಬಿಲ್ ನೀಡಿದ್ದೀರಿ’ ಎಂದು ಎಂಜಿನಿಯರ್‌ಗಳನ್ನು ಸದಸ್ಯರಾದ ಮೋಹನ್, ಸಂತೋಷ್, ಪ್ರಕಾಶ್, ಮಂಜುನಾಥ್, ಮಾಜಿ ಅಧ್ಯಕ್ಷ ಯಾದ್‌ಗಾರ್ ಇಬ್ರಾಹಿಂ, ಮಲ್ನಾಡ್ ಜಾಕೀರ್ ಪ್ರಶ್ನೆ ಮಾಡಿದರು. ಗುತ್ತಿಗೆದಾರರಿಗೆ ಈಗಾಗಲೆ ನೋಟೀಸ್ ನೀಡಲಾಗಿದೆ ಎಂದು ಎಂಜಿನಿಯರ್ ಪ್ರಭಾವತಿ ಹೇಳಿಕೆಗೆ, ಇಬ್ರಾಹಿಂ ಹಾಗೂ ಮೋಹನ್ ಆಕ್ಷೇಪಿಸಿದರು. ಕಾಮಗಾರಿಗಳ ಎಂ.ಬಿ. ಬರೆಯಬೇಕಾದ ಎಂಜಿನಿಯರ್ ಗುತ್ತಿಗೆದಾರರಿಗೆ ನೋಟೀಸ್ ಕಳಿಸುವ ಅಗತ್ಯವಿಲ್ಲ. ಗುಂಡಿ ಮುಚ್ಚಿ ಗುಣಮಟ್ಟದ ಕಾಮಗಾರಿ ಮಾಡುವಂತೆ ತಾಕೀತು ಮಾಡಿದರೆ ಸಾಕು ಮಾಡುತ್ತಾರೆ ಇಂತಹ ಬೇಜವಬ್ದಾರಿ ಉತ್ತರ ಬೇಡ ಎಂದರು. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರ ವಿರುದ್ಧ ಹಾಗೂ ಕರ್ತವ್ಯ ಸರಿಯಾಗಿ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಬಳಿ ನಿಯೋಗ ಹೋಗಲು ಸಭೆ ನಿರ್ಧರಿಸಿತು.ಪುರಸಭೆಯ ಯಾವುದೇ ಒಂದು ಅಭಿವೃದ್ಧಿ ಕಾಮಗಾರಿಗೆ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಯೋಜನಾ ನಿರ್ದೇಶಕರು ಅನಗತ್ಯವಾಗಿ ತಡೆ ಹಿಡಿಯುವ ಮೂಲಕ ಅವರು ಅಭಿವೃದ್ಧಿಗೆ ಮಾರಕವಾಗಿದ್ದಾರೆ ಎಂದು ಆರೋಪಿಸಿ ಅವರಿಗೆ ಧಿಕ್ಕಾರ ಕೂಗಿದ ಘಟನೆ ನಡೆಯಿತು. ಪುರಸಭೆಯಿಂದ ಖರ್ಚು ಮಾಡಿದ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಕೇಳಿದರೂ ಅಧಿಕಾರಿಗಳು ಸಭೆ ಮುಂದೆ ಹಾಜರುಪಡಿಸಲಿಲ್ಲ. ಇದರಿಂದ ಎಲ್ಲ ಸದಸ್ಯರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಮಾಹಿತಿ ಇಲ್ಲದೆ ಸಭೆಗೆ ಏಕೆ ಬರುತ್ತೀರಿ ಹೊರ ಹೋಗಿ ಎಂದು ಅಧ್ಯಕ್ಷ ಎಸ್.ಡಿ.ಆದರ್ಶ ಗುಡಿಗಿದರು. ಹತ್ತಾರು ವರ್ಷಗಳಿಂದ ಇಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಕೆಲ ಸದಸ್ಯರು ಒತ್ತಾಯಿಸಿದಾಗ ಎಸ್‌ಡಿಸಿ ಲೀಲಾವತಿ ಕಣ್ಣೀರು ಹಾಕುತ್ತಾ ಹೊರ ಹೋದರು.ನಕಲಿ ದಾಖಲೆ: ಹಾಸನದ ಜಿಲ್ಲಾ ಬಂಧೀಖಾನೆ ಹಿಂಭಾಗ ಹಾಗೂ ವಿಶ್ವನಾಥನಗರ ಕೊಳಚೆ ಪ್ರದೇಶದಲ್ಲಿ 57 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿ ನಿರ್ವಹಿಸಿರುವುದಾಗಿ ಗುತ್ತಿಗೆದಾರ ಬಿ.ಕೆ.ಮಹೇಶ್ ಕರ್ನಾಟಕ ಕೊಳಚೆ ನಿಮೂಲನಾ ಮಂಡಳಿ ಹೆಸರಿನಲ್ಲಿ ನಕಲಿ ಕಾಮಗಾರಿ ದೃಢೀಕರಣ ಪತ್ರವನ್ನು ಪುರಸಭೆಗೆ ನೀಡಿದ್ದಾರೆ. ಅದೇ ರೀತಿ ಗುತ್ತಿಗೆದಾರ ರುದ್ರಕುಮಾರ್  ರೂ.37 ಲಕ್ಷ ವೆಚ್ಚದಲ್ಲಿ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಇಲಾಖೆಯ ಅಡಿಯಲ್ಲಿ ಕಾಮಗಾರಿ ಮಾಡಿರುವುದಾಗಿ ನಕಲಿ ದೃಢೀಕರಣ ಪತ್ರ ನೀಡಿದ್ದಾರೆ. ಈ ಎರಡೂ ದೃಢೀಕರಣ ಪತ್ರಗಳು ನಕಲಿ ಎಂಬುದು ಈಗಾಗಲೆ ದೃಢಪಟ್ಟಿದೆ ಎಂದು ಎಂಜಿನಿಯರ್ ಪ್ರಭಾವತಿ ಸಭೆಯಲ್ಲಿ ಸ್ಪಷ್ಟಪಡಿಸಿದರು. ಈ ಗುತ್ತಿಗೆದಾರರ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry