ಗುರುವಾರ , ಏಪ್ರಿಲ್ 22, 2021
28 °C

ಪುರಸ್ಕಾರಕ್ಕೇ ಸವಾಲು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್.ನಗರ: `ನಿರ್ಮಲ ಗ್ರಾಮ ಪುರಸ್ಕಾರ~ ಪಡೆದಿರುವ ತಾಲ್ಲೂಕಿನ ಅಂಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಲ್ಪವೂ ಸ್ವಚ್ಛತೆ ಕಾಣಿಸುತ್ತಿಲ್ಲ. ಈ ಪುರಸ್ಕಾರ ನೀಡಿರುವುದು ಏಕೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಕನಹಳ್ಳಿ, ಕಳ್ಳಿಮುದ್ದನಹಳ್ಳಿ, ನಾಟನಹಳ್ಳಿ ಮತ್ತು ಶಹಬಾಳು ಗ್ರಾಮಗಳು ಸೇರಿಕೊಂಡಿವೆ. ಒಟ್ಟಾರೆ 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಅಂಕನಹಳ್ಳಿ ಗ್ರಾಮದಲ್ಲೇ ಶುಚಿತ್ವ ಇಲ್ಲ. ಎಲ್ಲೆಂದರಲ್ಲಿ ಕಸಕಡ್ಡಿ, ಮನೆಗಳ ಮುಂದೆಯೇ ತಿಪ್ಪೆಗುಂಡಿಗಳು, ಡಾಂಬರ್ ಕಾಣದ ರಸ್ತೆಗಳು ಇಲ್ಲಿ ಸಾಮಾನ್ಯವಾಗಿವೆ. ಕೆಲವು ಬೀದಿಗಳಲ್ಲಿ ಚರಂಡಿಯೇ ಇಲ್ಲ. ಇರುವ ಕೆಲವು ಚರಂಡಿಗಳು ಕಟ್ಟಿಕೊಂಡು ಮಲಿನ ನೀರು ಸಂಗ್ರಹವಾಗಿದೆ. ಅಲ್ಲದೇ ಇಲ್ಲಿ ಶೇ. 60ರಷ್ಟು ಜನ ಬಯಲನ್ನೇ ಶೌಚಾಲಯ ಮಾಡಿಕೊಂಡಿದ್ದಾರೆ.ಕಳ್ಳಿಮುದ್ದನಹಳ್ಳಿ ಕೂಡ ಅಂಕನಹಳ್ಳಿಗಿಂತ ಭಿನ್ನವಾಗಿಲ್ಲ. ಅಂಬೇಡ್ಕರ್ ಬಡಾವಣೆಯಲ್ಲಿ ಶೇ. 18ರ ಅನುದಾನದಲ್ಲಿ ಕಾಂಕ್ರಿಟ್ ರಸ್ತೆ, ಚರಂಡಿ ಆಗಿರುವುದನ್ನು ಹೊರತುಪಡಿಸಿದರೆ ಬೇರೆ ಅಭಿವೃದ್ಧಿ ಆಗಿಲ್ಲ. ಇಲ್ಲಿ ಕುಡಿಯುವ ನೀರು ಒದಗಿಸುವ ನಲ್ಲಿ ಕೂಡ ನೆಲದ ಆಳದಲ್ಲಿ ಇರುವುದರಿಂದ ಮಲಿನ ನೀರೇ ಗತಿಯಾಗಿದೆ. ನಾಟನಹಳ್ಳಿ ಮತ್ತು ಶಹಬಾಳು ಗ್ರಾಮಗಳು ಶುಚಿತ್ವದಲ್ಲಿ ಸ್ವಲ್ಪ ಭಿನ್ನವಾಗಿವೆ. ಆದರೂ ಸಂಪೂರ್ಣ ಸ್ವಚ್ಛತೆ ಸಾಧ್ಯವಾಗಿಲ್ಲ.`ಅಂಗನವಾಡಿ ಕೇಂದ್ರಗಳು ಮತ್ತು ಶಾಲೆಗಳ ವ್ಯವಸ್ಥೆ ಚೆನ್ನಾಗಿದ್ದು, ಶೌಚಾಲಯಗಳೂ ಇವೆ. ವಿದ್ಯಾರ್ಥಿಗಳು ಇದನ್ನು ಸಮರ್ಪಕವಾಗಿ ಬಳಸುತ್ತಿದ್ದಾರೆ. 2011-12ನೇ ಸಾಲಿನಲ್ಲಿ ಬಂದ ರೂ. 6 ಲಕ್ಷ ಅನುದಾನದಲ್ಲಿ ನೌಕರರ ವೇತನ, ವಿದ್ಯುತ್ ಬಿಲ್, ಗ್ರಾಮಗಳಲ್ಲಿ ಬಾಕ್ಸ್ ಚರಂಡಿ ಮಾಡಿಸಲಾಗಿದೆ. ನಿರ್ಮಲ ಗ್ರಾಮ ಪುರಸ್ಕಾರದ ಹಣ ರೂ. 4 ಲಕ್ಷ ಸಿಗಬಹುದು ಎಂದು ಹೇಳಲಾಗುತ್ತಿದೆ. ಈ ಹಣ ಬಂದರೆ ಸ್ವಚ್ಛತೆಗೆ ವಾಹನ ಖರೀದಿಸಲು ಯೋಚಿಸಲಾಗುತ್ತಿದೆ. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದ್ದರಿಂದ ಹೆಚ್ಚಿನ ಚಿಕಿತ್ಸೆ ಬೇಕಿದ್ದಲ್ಲಿ ಸಾಲಿಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗುತ್ತದೆ ಎನ್ನುತ್ತಾರೆ ಪಿಡಿಒ ನಾಗರಾಜ್.

ಏನನ್ನು ನೋಡಿ ಪುರಸ್ಕಾರ ನೀಡಿದರೋ?ಅಂಕನಹಳ್ಳಿ ಗ್ರಾಮ ಪಂಚಾಯಿತಿಗೆ `ನಿರ್ಮಲ ಗ್ರಾಮ~ ಪುರಸ್ಕಾರ ನೀಡಿದ್ದೇ ಅಚ್ಚರಿ. ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ಕೆಲವು ಕಡೆ ಚರಂಡಿ ಕಟ್ಟಿಕೊಂಡರೂ ಅದನ್ನು ಶುಚಿಗೊಳಿಸುವ ಗೋಜಿಗೆ ಹೋಗುವುದಿಲ್ಲ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇಲ್ಲಿನ ಶೇ. 60ರಷ್ಟು ಜನಕ್ಕೆ ಶೌಚಾಲಯವೇ ಇಲ್ಲ.  ಆದರೆ, ಅಧಿಕಾರಿಗಳು ಏನನ್ನು ನೋಡಿ ಪುರಸ್ಕಾರ ನೀಡಿದ್ದಾರೋ ಗೊತ್ತಿಲ್ಲ.

-ರಘು, ಅಂಕನಹಳ್ಳಿ

ತಗ್ಗಿನಲ್ಲೇ ೀರು ಸಂಗ್ರಹಗ್ರಾಮದಲ್ಲಿ ಅಂಬೇಡ್ಕರ್ ಬಡಾವಣೆಯ ಬೀದಿ ಹೊರತುಪಡಿಸಿ ಇನ್ಯಾವ ಬೀದಿಯಲ್ಲೂ ಡಾಂಬರ್ ಮಾಡಿಸಿಲ್ಲ. ಕೆಲವು ಕಡೆ ಚರಂಡಿಯಲ್ಲಿ ಮಣ್ಣು ಹಾಕಲಾಗಿದೆ. ನಲ್ಲಿ ನೀರು ಸರಿಯಾಗಿ ಬರುವುದಿಲ್ಲ. ಅನಿವಾರ್ಯವಾಗಿ ಮನೆ ಮುಂದೆ ತಗ್ಗು ತೆಗೆದು ಅದರಲ್ಲೇ ನೀರು ಸಂಗ್ರಹಿಸುತ್ತಿದ್ದೇವೆ.

-ಮಂಜುನಾಥ್. ಕಳ್ಳಿಮುದ್ದನಹಳ್ಳಿ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.