ಶನಿವಾರ, ಏಪ್ರಿಲ್ 10, 2021
30 °C

ಪುರಾತನ ದೇಗುಲದ ಕಂಬಗಳು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುನಗುಂದ: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಪಾಯದಲ್ಲಿ ಪುರಾತನ ದೇವಾಲಯದ ಮೂರು ಕಂಬಗಳು ಮಂಗಳವಾರ ಪತ್ತೆಯಾಗಿವೆ.ಶಾಲಾ ಕೋಣೆಗಳ ಕಟ್ಟಡ ಕಾಮಗಾರಿಯ ಪಾಯ ತೋಡುವ ಸಂದರ್ಭದಲ್ಲಿ ಇವು ಗೋಚರಿಸಿವೆ. ಸುಮಾರು ನಾಲ್ಕು ಅಡಿಯ ಈ ಕಂಬಗಳು ಒಂದು ಅಡಿಯ ಗಾತ್ರದ್ದಾಗಿವೆ. ಭೂಮಿಯೊಳಗೆ ಐದಾರು ಅಡಿಯಲ್ಲಿ ಇವು ದೊರಕಿದ್ದು, ಕಂಬಗಳು ಯಾವುದೇ ಕೆತ್ತನೆಯನ್ನು ಹೊಂದಿಲ್ಲ.ಕೆಲ ತಿಂಗಳ ಹಿಂದೆ ಈ ಶಾಲೆಯ ಸಮೀಪದ ಗುಡ್ಡದಲ್ಲಿ ಮೂರು ಜೈನ ತೀರ್ಥಂಕರರ ಮೂರ್ತಿಗಳು ಸಿಕ್ಕಿದ್ದವು. ಸದ್ಯ ಈ ಕಂಬಗಳು ಸಿಕ್ಕ ಜಾಗದ ಸ್ವಲ್ಪ ಪಕ್ಕದಲ್ಲಿ ಪುರಾತನ ಶಿವಲಿಂಗ ದೇವಾಲಯವಿದ್ದು ಅದನ್ನು ಪುನರುಜ್ಜೀವನ ಮಾಡಲಾಗುತ್ತಿದೆ. ಅಲ್ಲದೇ ಎರಡು ನೂರು ಅಡಿಯ ಅಂತರದಲ್ಲಿ ಮೇಗುತಿ ಹಾಗೂ ರಾಮಲಿಂಗ ದೇವಾಲಯಗಳಿದ್ದು, ಅವು ಕೂಡ ಪುರಾತನವಾದವು ಎಂಬುದು ಇತಿಹಾಸದಿಂದ ತಿಳಿದು ಬಂದಿದೆ.ಇತಿಹಾಸಕಾರರ ಅಭಿಪ್ರಾಯದಂತೆ ಹುನಗುಂದ 9 ಮತ್ತು 10 ನೇ ಶತಮಾನದಲ್ಲಿ ಚಾಲುಕ್ಯರ ಆಡಳಿತದಲ್ಲಿತ್ತು. ಆ ಸಂದರ್ಭದಲ್ಲಿ ಹುನಗುಂದದಲ್ಲಿ ಅನೇಕ ಜೈನ ಬಸದಿಗಳನ್ನು ನಿರ್ಮಿಸಿರಬಹುದು ಎನ್ನಲಾಗಿದೆ.‘ಈ ಜಾಗದಲ್ಲಿ ದೊಡ್ಡ ತೆಗ್ಗು ಹಾಗೂ ಒಂದು ಗುಡಿಯಿತ್ತು. ಗುಡ್ಡದ ಮೇಲಿನ ಮೇಗುಡಿಗೆ ಇಲ್ಲಿಂದ ಸುರಂಗ ಮಾರ್ಗವಿತ್ತು. ಇದೇ ಜಾಗವನ್ನು ಊರಿನ ಆಡಳಿತ ನಡೆಸುವ ಕಚೇರಿ ಮಾಡಲಾಗಿತ್ತು ಇದನ್ನು ಅಗಸಿಯೊಳಗಿನ ಕಚೇರಿ ಎಂದು ಕರೆಯುತ್ತಿದ್ದರು ಎನ್ನುವುದನ್ನು ನಮ್ಮ ತಂದೆ ಹೇಳುತ್ತಿದ್ದರಂತೆ. ಜನರೂ ಕೂಡ ಬಳಸುತ್ತಿದ್ದು ನಂತರ ಶಾಲೆಯನ್ನು ಕಟ್ಟಿಸಲಾಯಿತು’ ಎಂದು ಸ್ಥಳದಲ್ಲಿದ್ದ ಓಣಿಯ ಹಿರಿಯ ರೈತ ಸಿದ್ದಪ್ಪ ಜಮಾದಾರ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.