ಬುಧವಾರ, ನವೆಂಬರ್ 13, 2019
23 °C

ಪುರುಷರ ಮೇಲರಿಮೆಗೆ ದಾರಿ

Published:
Updated:

ಜಾತಿ ಸಂವಾದ ಮಾಲಿಕೆಯಲ್ಲಿ ಈವರೆಗೆ ಪ್ರಕಟವಾಗಿರುವ ಲೇಖನ, ಪ್ರತಿಕ್ರಿಯೆಗಳು ಅನಿಷ್ಟ ಜಾತಿ ವ್ಯವಸ್ಥೆಯ ಹಲವು ಮಗ್ಗಲುಗಳನ್ನು ಪರಿಚಯಿಸುವಲ್ಲಿ ಸಫಲವಾಗಿವೆ.ಆದರೆ, ಜಾತಿ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾದವರು ಕೇವಲ ದಲಿತರು, ಹಿಂದುಳಿದ ವರ್ಗಗಳವರು, ಕೆಳ ಜಾತಿಯವರು ಅಷ್ಟೇ ಅಲ್ಲ. ಮೇಲುಜಾತಿಯ ಮಹಿಳೆಯರೂ ಈ ಜಾತಿ ವ್ಯವಸ್ಥೆಯ ಶೋಷಣೆಗೆ ಸಿಲುಕಿದವರೇ ಆಗಿದ್ದಾರೆ.ಭಾರತೀಯ ಸಮಾಜದ ಸ್ವರೂಪವೇ ಆಗಿರುವ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯ ಬೇರು ಸಹ ಜಾತಿ ಪದ್ಧತಿಯಲ್ಲೇ ಅಡಗಿದೆ. ಅತಿಹೆಚ್ಚು ಅಕ್ಷರಸ್ಥರನ್ನು ಹೊಂದಿರುವ ಬ್ರಾಹ್ಮಣ ಸಮುದಾಯವೂ ಇದರಿಂದ ಹೊರತಾಗಿಲ್ಲ. ಕೆಲ ಬುಡಕಟ್ಟು ಪಂಗಡಗಳನ್ನು ಹೊರತುಪಡಿಸಿ ಇಡೀ ಭಾರತವನ್ನು ವ್ಯಾಪಿಸಿರುವ ಹೆಣ್ಣು ಭ್ರೂಣ ಹತ್ಯೆಯಂತಹ ಅಂಟುಜಾಡ್ಯಕ್ಕೂ, ಗಂಡು ಮಗುವೇ ಶ್ರೇಷ್ಠ ಎಂಬ ಮನೋಭಾವಕ್ಕೂ ಜಾತಿ ವ್ಯವಸ್ಥೆಯೇ ಕಾರಣ.ಮೇಲುಜಾತಿ, ಮೇಲುವರ್ಗಗಳನ್ನು ಬಹಿರಂಗವಾಗಿ ವಿರೋಧಿಸುತ್ತಲೇ ಆ ಜಾತಿಗಳಲ್ಲಿ ಪ್ರಚಲಿತವಾಗಿರುವ ಆಡಂಬರ, ಅನಿಷ್ಟಗಳನ್ನು ಕೆಳಜಾತಿಗಳು ಅಂಧರಂತೆ ಅನುಸರಿಸುತ್ತ ಬಂದಿವೆ. ವರದಕ್ಷಿಣೆ ಪದ್ಧತಿ, ಕುಟುಂಬದ ಹೆಣ್ಣು ಮಕ್ಕಳ ತುಚ್ಛೀಕರಣ, ಸ್ತ್ರೀಯರಿಗೆ ಮನೆಯ ಆಗುಹೋಗು, ಆರ್ಥಿಕ ನಿರ್ವಹಣೆಯಲ್ಲಿ ದನಿ ಇಲ್ಲದಂತೆ ಮಾಡಿರುವುದು, ಋತುಸ್ರಾವದ ಸಮಯದಲ್ಲಿ ಹೆಣ್ಣುಮಕ್ಕಳನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳುವುದು ಇವೆಲ್ಲ ಜಾತಿವ್ಯವಸ್ಥೆಯ ಉಪಉತ್ಪನ್ನಗಳು (byproduct).ಇತ್ತೀಚೆಗೆ ಇದರ ನೇರ ಅನುಭವ ನನಗಾಯಿತು. ಹತ್ತಿರದ ಸಂಬಂಧಿಯೊಬ್ಬರು ಸತ್ತಾಗ ಅವರ ಅಪರಕ್ರಿಯೆಗಳನ್ನು, ಧಾರ್ಮಿಕ ವಿಧಿ, ವಿಧಾನಗಳನ್ನು ಸಮೀಪದಿಂದಲೇ ನೋಡುವ ಅವಕಾಶ ಲಭ್ಯವಾಯಿತು. ವೈದಿಕ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ಕುಟುಂಬಕ್ಕೆ ಸೇರಿದವಳಾದ ನನಗೆ ಅಪರಕ್ರಿಯೆಗಳಲ್ಲಿ ಸಹ ಹೆಣ್ಣುಮಕ್ಕಳಿಗೆ ಕೊನೆಯ ಸ್ಥಾನ ಎಂಬುದೂ ಸ್ಪಷ್ಟವಾಯಿತು.ಸತ್ತವರಿಗೆ ಸದ್ಗತಿ ಪ್ರಾಪ್ತಿಯಾಗಲೆಂದು ಪಿಂಡ ಇಡುವಾಗ ಅವರ ಅಪ್ಪ, ಅಜ್ಜ, ಅಜ್ಜನ ಅಪ್ಪ ಎಲ್ಲರಿಗೂ ಪಿಂಡ ಹಾಕುತ್ತಾರೆ. ಆದರೆ, ಮೃತ ವ್ಯಕ್ತಿಯ ತಾಯಿ, ಅಜ್ಜಿ, ಮುತ್ತಜ್ಜಿಯನ್ನು ಕೇಳುವವರೂ ಇಲ್ಲ. ಹಾಗೆಯೇ ಹೆಂಗಸರು ಸತ್ತಾಗ ಅವರ ಅತ್ತೆ (ಗಂಡನ ತಾಯಿ), ಗಂಡನ ಅಜ್ಜಿ ಅವರಿಗೆ ಪಿಂಡ ಹಾಕಲಾಗುತ್ತದೆ. ಮೃತ ಮಹಿಳೆಯ ತಾಯಿ, ಸ್ವಂತ ಅಜ್ಜಿಯನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ.ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ, ಮದುವೆಯಾದ ಮೇಲೆ ತವರು ಮನೆಗೂ ಆಕೆಗೂ ಸಂಬಂಧವೇ ಇಲ್ಲ ಎಂಬ ಮನಸ್ಥಿತಿ ಇಲ್ಲಿ ಎದ್ದು ಕಾಣುತ್ತದೆ.ಎಲ್ಲರಿಗೂ ತಿಳಿದಿರುವಂತೆ ಬ್ರಾಹ್ಮಣರಲ್ಲಿ ಅಪರಕರ್ಮಗಳನ್ನು ಮಾಡುವ ಹಕ್ಕು ಹೆಣ್ಣುಮಕ್ಕಳಿಗೆ ಇಲ್ಲ. ಪಿಂಡ ಹಾಕುವ ಹಕ್ಕು, ಶ್ರಾದ್ಧ ಮಾಡುವ ಹಕ್ಕು ಗಂಡುಮಕ್ಕಳಿಗೆ ಮಾತ್ರ ಎಂದು ಪ್ರತಿಪಾದಿಸಲಾಗಿದೆ. ಸತ್ತ ತಂದೆ, ತಾಯಿಯರನ್ನು ಹೆಣ್ಣುಮಕ್ಕಳು ಎಷ್ಟೇ ಪ್ರೀತಿಸುತ್ತಿದ್ದರೂ ಅಪರಕ್ರಿಯೆಗಳಲ್ಲಿ ಅವರು ಮೂಕಪ್ರೇಕ್ಷಕರಂತೆ ಪಾಲ್ಗೊಳ್ಳುತ್ತಾರೆ. ಸತ್ತವರಿಗೆ ಗಂಡು ಮಕ್ಕಳೇ ಇಲ್ಲದ ಪಕ್ಷದಲ್ಲಿ ಅಳಿಯನೋ, ದಾಯಾದಿಯೋ ಅಪರಕ್ರಿಯೆಗಳನ್ನು ನಿರ್ವಹಿಸುತ್ತಾನೆ.ಪ್ರಜ್ಞಾಪೂರ್ವಕವಾಗಿ ಒಂದೇ ಹೆಣ್ಣುಮಗುವಿಗೆ ಕುಟುಂಬ ಸೀಮಿತಗೊಳಿಸಿಕೊಂಡ ನಮ್ಮಂಥವರು ಸತ್ತ ಮೇಲೆ ವಿಕ್ರಮಾದಿತ್ಯನ ಕಥೆಯ ಬೇತಾಳದಂತೆ ಪ್ರೇತಾತ್ಮವಾಗಿ ಅಲೆಯಬೇಕೆ ಎಂಬ ಪ್ರಶ್ನೆಯೂ ನನಗೀಗ ಕಾಡುತ್ತಿದೆ.

ದುರದೃಷ್ಟವೆಂದರೆ ಗಂಡು ಸಂತಾನ ಇಲ್ಲದಿದ್ದಲ್ಲಿ ಮೋಕ್ಷವೂ ಇಲ್ಲ ಎಂಬ ಬ್ರಾಹ್ಮಣರ ಕುರುಡ ನಂಬಿಕೆಯನ್ನು ಇಡೀ ಭಾರತೀಯ ಸಮಾಜ ಸ್ವಲ್ಪವೂ ಪ್ರಶ್ನಿಸದೇ ಒಪ್ಪಿಕೊಂಡಿದೆ. ಗಂಡು ಮಕ್ಕಳೇ ಶ್ರೇಷ್ಠ, ಅವರಿಂದಲೇ ವಂಶಾಭಿವೃದ್ಧಿ ಎಂಬ ಮನೋಭಾವದ ಹಿಂದಿರುವುದು ಇದೇ ನಂಬಿಕೆ. ಈ ನಂಬಿಕೆಯೇ ಭಾರತೀಯ ಪುರುಷರಲ್ಲಿ ಅನಗತ್ಯ ಮೇಲರಿಮೆಯನ್ನು ಹುಟ್ಟುಹಾಕಿದೆ.ತವರಿನಿಂದ ಹಣ ತರದ, ಕುಡಿಯಲು ಹಣ ನೀಡದ ಹೆಣ್ಣುಮಕ್ಕಳನ್ನು ಸೀಮೆಎಣ್ಣೆ ಹಾಕಿ ಸುಡುವುದು, ಗಂಡು ಸಂತಾನಕ್ಕಾಗಿ ಹಂಬಲಿಸಿ ಸಾಲು, ಸಾಲು ಹೆಣ್ಣು ಹೆತ್ತು ಜನಸಂಖ್ಯಾ ಸ್ಫೋಟಕ್ಕೂ, ಕುಟುಂಬದ ಆರ್ಥಿಕ ಸ್ಥಿತಿಯನ್ನು ಅಧೋಗತಿಗೂ ಇಳಿಸಲು ಕಾರಣವಾಗುವುದು, ಹೆಣ್ಣು ಶಿಶುಗಳನ್ನು ಗರ್ಭದಲ್ಲಿ ಅಥವಾ ಹುಟ್ಟಿದ ಮೇಲೆ ಹೊಸಕಿಹಾಕುವುದು...ಇವೆಲ್ಲ ಪುರುಷ ಪ್ರಧಾನ ವ್ಯವಸ್ಥೆಯ ಬಹುರೂಪಗಳಷ್ಟೇ. ಈ ಅನಿಷ್ಟಗಳನ್ನೆಲ್ಲ ಕೆಳಜಾತಿಗಳು ಸೋ ಕಾಲ್ಡ್ ಮೇಲುಜಾತಿಗಳಿಂದ ಬಳುವಳಿಯಾಗಿ ಪಡೆದಿವೆ.ಇತ್ತೀಚಿನ ದಶಕಗಳಲ್ಲಿ ಮತ್ತೊಂದು ವಿಚಿತ್ರ ವಿದ್ಯಮಾನ ನಡೆಯುತ್ತಿದೆ. ಸತ್ಯನಾರಾಯಣ ಪೂಜೆ, ಸಂಕಷ್ಟ ಚತುರ್ಥಿ ಆಚರಣೆ, ನವಗ್ರಹ ಪೂಜೆ, ವರಮಹಾಲಕ್ಷ್ಮಿ ಪೂಜೆ ಇತ್ಯಾದಿ ಬ್ರಾಹ್ಮಣರ ವ್ರತಗಳನ್ನು ಕೆಳಜಾತಿಗಳು ಪ್ರಸಾದದಂತೆ ಕಣ್ಣಿಗೊತ್ತಿಗೊಂಡು ಆಚರಿಸುತ್ತಿವೆ.ಮೇಲುಜಾತಿಗಳ ಆಡಂಬರದ ಆಚರಣೆಗಳನ್ನು, ಅನಿಷ್ಟ ಪದ್ಧತಿಗಳನ್ನು ಕೆಳಜಾತಿಗಳು ವಿವೇಚನೆಯಿಲ್ಲದೇ ತಮ್ಮದೆಂದು ಸ್ವೀಕರಿಸುವ ಬದಲು ಅಕ್ಷರಕ್ಕೆ, ವಿದ್ಯೆಗೆ ಆದ್ಯತೆ ನೀಡಿದಲ್ಲಿ, ಮಹಿಳೆಯರಿಗೆ ಮನ್ನಣೆ ನೀಡಿದಲ್ಲಿ ರೋಗಗ್ರಸ್ಥ ಭಾರತೀಯ ಸಮಾಜದ ಸ್ವರೂಪ ಒಂದೆರಡು ಶತಮಾನಗಳ ನಂತರವಾದರೂ ಬದಲಾದೀತು.

 

ಪ್ರತಿಕ್ರಿಯಿಸಿ (+)