ಪುರುಷ ಪಾತ್ರ ಎಂದರೆ ಖುಷಿ

7

ಪುರುಷ ಪಾತ್ರ ಎಂದರೆ ಖುಷಿ

Published:
Updated:

* ಬದುಕಿನ ಬಹುಭಾಗ ಪುರುಷ ಪಾತ್ರದ ಅಭಿನಯದಲ್ಲೇ ಕಳೆದು ಹೋಯಿತು. ಈಗ ಹಿಂತಿರುಗಿ ನೋಡಿದರೆ ಹೇಗನಿಸುತ್ತೆ?

ಸಂತೋಷ ಇದೆ, ಬಹಳ ಖುಷಿ ಇದೆ. ಪುರುಷ ಪಾತ್ರದಲ್ಲೇ ಹೆಚ್ಚು ಕಾಣಿಸಿಕೊಂಡಿದ್ದರಿಂದ ಈ ಸಂತೋಷ ಇನ್ನೂ ಅಧಿಕ! ಬಾಲ ನಟಿಯಾಗಿ ನಾಟಕ ಕಂಪನಿ ಸೇರಿದ ನಾನು ಒಂದೆರಡು ದಶಕ ಕಾಲ ಸ್ತ್ರೀ ಪಾತ್ರಗಳಲ್ಲಿ ಅಭಿನಯಿಸಿದೆ. ಹಾಗೇ ಮುಂದುವರಿದಿದ್ದರೆ ನೂರರಲ್ಲಿ ನಾನೂ ಒಬ್ಬಳಾಗಿ ಬಿಡ್ತಿದ್ದೆ.

 

ನಂತರದ ಮೂರು ದಶಕ ಕಾಲ ಪುರುಷ ಪಾತ್ರಗಳಲ್ಲಿ ಅಭಿನಯಿಸಿದೆ. ಬರೀ ಸ್ತ್ರೀಯರನ್ನೊಳಗೊಂಡ ನಾಟಕ ಮಂಡಳಿ (1958) ಸ್ಥಾಪಿಸಿದೆ. ಇದರಿಂದಾಗಿ ನಾಡಿನಾದ್ಯಂತ ಹೆಸರಾದೆ. ಜನರ ಮನಸ್ಸಲ್ಲಿ ನಿಲ್ಲೋಕೆ ಸಾಧ್ಯವಾಯಿತು. ಬಹಳಷ್ಟು ಪ್ರಶಸ್ತಿಗಳು ಬಂದವು. ಪತ್ರಿಕೆಗಳ ಸಹಕಾರ ಸಿಗ್ತು.

* ನಿಮ್ಮ ಜೊತೆ ಇನ್ನೂ ಹಲವಾರು ಕಲಾವಿದೆಯರು ಪುರುಷ ಪಾತ್ರಗಳಲ್ಲೇ ಅಭಿನಯಿಸಿದರಲ್ಲ?

ಹೌದು. ಅವರೆಲ್ಲ ಹೆಸರಾಂತ ಕಲಾವಿದರು. ಎಚ್.ಪಿ.ಸರೋಜ, ಬಿ.ಪಿ.ರಾಜಮ್ಮ, ಕಲಾವತಿ, ನಿರ್ಮಲಾ, ಸುಜಾತ, ಎಂ.ಎಂ.ಪುಟ್ಟಮ್ಮ, ಬಿ.ಎಸ್.ಪುಟ್ಟಮ್ಮ (ಪೂರ್ಣಿಮಾ) ಅಂತ ಮತ್ತೊಬ್ಬಳಿದ್ದಳು. ಬಿ.ಎಸ್.ಮಂಜುಳ, ಪ್ರೇಮಾ ಸ್ವಾಮಿ, ರಾಧಾ, ಬೇಬಿ, ಸರಸ್ವತಿ, ರಮಾ, ಕಾತ್ಯಾಯನಿ, ಇಂದ್ರಾಣಿ, ಅನಸೂಯ, ವಸಂತ, ನನ್ನ ತಂಗಿ ಆರ್.ಮಂಜುಳಾ- ಹೀಗೇ.. ಇನ್ನೂ ಹಲವರು. ಕೆಲವರು ಬಂದ್ರು... ಹೋದ್ರು... ಅಷ್ಟೂ ನಟಿಯರಲ್ಲಿ ಕೆಲವರು ಮಾತ್ರ ಮಹಿಳೆ ಪಾತ್ರ, ಉಳಿದಂತೆ ಹಲವರು ಪುರುಷ ಪಾತ್ರಗಳಲ್ಲಿ ಅಭಿನಯಿಸಿದರು. ಮತ್ತೆ ಕೆಲವರು ಎರಡೂ ಪಾತ್ರಗಳಲ್ಲಿ ಅಭಿನಯಿಸಿದರು.

* ಬರೀ ಮಹಿಳೆಯರೇ ಅನ್ನೋ ಕಾರಣಕ್ಕೆ ಏನಾದರೂ ಕಿರುಕುಳ ಅನುಭವಿಸಿದಿರಾ?

ವೆಂಕಟಪ್ಪ ಅಂತ ಒಬ್ಬ ಮ್ಯಾನೇಜರ್ ಬಹಳ ವರ್ಷ ಕಾಲ ನಮ್ಮ ಕಂಪೆನಿಯಲ್ಲಿದ್ದರು. ನನ್ನ ತಮ್ಮ ಆರ್.ಪರಮಶಿವನ್ ಸಂಗೀತ ನಿರ್ದೇಶನ ಮಾಡ್ತಿದ್ದರು. ನಮಗೆ ಎಲ್ಲೇ ಹೋದರೂ ಅಡಿಗೆ ಮಾಡೋಕೆ ಒಬ್ಬರು ಭಟ್ಟರನ್ನ ಕರೆದೊಯ್ಯತಿದ್ದೆವು. ಉಳಿದಂತೆ ನಾವೇ- ಎಲ್ಲರೂ ಮಹಿಳೆಯರು. ಶಿರಸಿಯಲ್ಲಿ ನಮ್ಮ ನಾಟಕ ಪ್ರದರ್ಶನ ನಡೆದಿತ್ತು.

 

ಈ ಊರಲ್ಲಿ ಗಣೇಶ ಅನ್ನೋ ರೌಡಿ ಕಾಟ ಬಹಳ ಎಂದು ನಮ್ಮ ಹಿತೈಷಿಗಳು ಎಚ್ಚರಿಕೆ ನೀಡಿದ್ದರು. ಆಗಲೇ ನಾನು ಒಂದು ಚಾಕು ಇಟ್ಟುಕೊಂಡಿದ್ದೆ. ಅವನು ಒಂದು ದಿನ ನಮ್ಮ ನಾಟಕ ನೋಡೋಕೆ ಬಂದ. ನಾಟಕ ಏನು ಪರಿಣಾಮ ಬೀರಿತೋ ಏನೋ... ಮುಗಿದ ಮೇಲೆ ನೆಟ್ಟಗೆ ಮನೆಗೆ ಹೋದ. ಗುಳೇದಗುಡ್ಡದಲ್ಲೂ ಇಂತಹದೇ ಅನುಭವ ಆಗಿತ್ತು. ನಮ್ಮ ಭದ್ರತೆಗೆ ಇರಲಿ ಅಂತ ಒಂದು ಚಾಕು ಯಾವಾಗಲೂ ಇಟ್ಟುಗೊಂಡಿರ‌್ತಿದ್ದೆ. ಆದರೆ ಅದನ್ನೆಲ್ಲೂ ಹೊರಗೆ ತೆಗೆಯೋ ಸಂದರ್ಭ ಬರಲಿಲ್ಲ! ಈಗಲೂ ಮನೆಯಲ್ಲಿದೆ.

* ಮದುವೆ, ಮಕ್ಕಳು, ಮನೆ ಜವಾಬ್ದಾರಿ- ಹೇಗೆ ನಿಭಾಯಿಸಿದಿರಿ?

ಶೇಷಾಚಾರರ ಶೇಷಕಮಲ ನಾಟಕ ಮಂಡಳಿಯಲ್ಲಿದ್ದಾಗ ಪಾರ್ಥಸಾರಥಿ ಎನ್ನುವರೊಂದಿಗೆ ನನ್ನ ಮದುವೆಯಾಯಿತು. ಅವರೂ ದೊಡ್ಡ ನಟರು. ನಾನು ಸ್ತ್ರೀ ನಾಟಕ ಮಂಡಳಿ ಮಾಡಿದ ಮೇಲೆ ಅವರು ಬೇರೆ ಬೇರೆ ಕಂಪನಿಗಳಲ್ಲಿ ನಟರಾಗಿದ್ದರು.ಪೂರ್ಣಿಮಾ, ವಿಜಯ, ಮಾಲತಿ- ಮೂವರು ಮಕ್ಕಳು ನನಗೆ. ತಾತಂದಿರ, ಸಂಬಂಧಿಕರ ಮನೆಗಳಲ್ಲಿ ಅವರು ಬೆಳೆದರು. ಹೆಣ್ಮಕ್ಕಳನ್ನ ಮದುವೆ ಮಾಡಿಕೊಟ್ಟೆ. ಒಬ್ಬಳು ಉಷಾ ದಾತಾರ್ ಸೊಸೆ. ಮಗ ವಿಜಯ ಎಲ್‌ಐಸಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದ. ಈಗ ನಿವೃತ್ತನಾಗಿದ್ದಾನೆ.ನಮ್ಮ ಕಂಪೆನೀಲಿ ಪ್ರೇಮಾ ಅಂತ ಒಬ್ಬಳು- ಮೃದಂಗ ಮೇಷ್ಟ್ರನ್ನ ಮದುವೆ ಆದಳು. ಕಲಾವತಿ ಅಂತ ಹೆರಿಗೆಗೆ ಹೋದ್ರೆ ಬೇಗ ವಾಪಸ್ ಬಂದುಬಿಡೋಳು. ನಿರ್ಮಲಾ ಚಿಕ್ಕ ಹುಡುಗಿ ಇದ್ದಾಗಲೇ ನಮ್ಮ ಕಂಪನಿ ಸೇರಿದ್ದಳು. ಗಂಡ, ಮಗ ಇದ್ದಾರೆ. ಆಗಿನ ಕಾಲ ಅದರೂ, ಕೆಲವರಿಗೆ ಬೇಗ ಬೇಗ ಮಕ್ಕಳಾಗಲಿಲ್ಲ. ಕೆಲವರು ಮದುವೇನೇ ಆಗದೇ ಉಳಿದರು. ನನ್ನ ತಂಗಿ ಆರ್. ಮಂಜುಳಾನೂ ಮದುವೆ ಆಗಲಿಲ್ಲ. ಈಗ ನನ್ನ ಮನೆಯಲ್ಲೇ ಇದ್ದಾಳೆ.ಅಷ್ಟಕ್ಕೂ ನಾವು ಹೆಣ್ಮಕ್ಕಳನ್ನ ಹೊರಗೆ ಬಿಡ್ತಾ ಇರಲಿಲ್ಲ. ಚೆಲ್ಲು ಚೆಲ್ಲಾಗಿ ಯಾರೂ ಇರಲಿಲ್ಲ. ಪ್ರೇಕ್ಷಕರನ್ನ ನೋಡಿ ಪಾತ್ರ ಮಾಡಬೇಡಿ ಅಂತ ಸೂಚನೆ ಕೊಡ್ತಿದ್ದೆ. ಎದುರುಗಡೆ ಹಾರ‌್ಮೊನಿಯಂ ನುಡಿಸುತ್ತ ತಮ್ಮ ಕುಳಿತಿರುತ್ತಿದ್ದ. ಹೆಚ್ಚಾಗಿ ಅವನನ್ನೇ ನೋಡ್ತಾ ಅಥವಾ ಶೂನ್ಯವನ್ನು ದಿಟ್ಟಿಸುತ್ತ ಪಾತ್ರ ಮಾಡತಿದ್ದರು. ನಮ್ಮ ನೋವು, ನಲಿವು ಏನಿದ್ದರೂ ರಂಗದ ಒಳಗೆ. ಹೊರಗಡೆ ನೋಡ್ತು ಅಂದ್ರೆ ಕಲೆ ಹೋಯ್ತು ಅಂತಾಲೆ ಅರ್ಥ.

* ಅವರದ್ದೇ ಆದ ಸಂಕಟಗಳು ಇರ‌್ತಿದ್ದವಲ್ಲ..

ಅವನ್ನೆಲ್ಲ ನನ್ನ ತಂಗಿ ಮಂಜುಳಾ ಹತ್ರ ಹಂಚಿಕೊಳ್ಳೋರು. ನಾನು ದೊಡ್ಡವಳು ಅಂತ ಭಯ, ಭಕ್ತಿ ಜಾಸ್ತಿ. ನನ್ನ ಹತ್ತಿರ ಏನೂ ಹೇಳ್ತಿರಲಿಲ್ಲ. ಇಂತಾದ್ದೆಲ್ಲ ನನಗೆ ಸಮಸ್ಯೆ ಆಗಿ ಕಾಡಲಿಲ್ಲ. ಕಲೆಕ್ಷನ್ ಇಲ್ಲದೇ ಅಥವಾ ಮಳೆ ಬಂತು ಅನ್ನೋ ಕಾರಣಕ್ಕೆ ಕೆಲವೊಮ್ಮೆ ನಾಟಕ ನಿಂತಿದೆಯೇ ಹೊರತು, ಮಹಿಳೆ ಅನ್ನೋ ಕಾರಣಕ್ಕೆ ನಾಟಕ ನಿಂತಿಲ್ಲ. ಕರಾವಳಿ ಪ್ರದೇಶಗಳಲ್ಲಿ ಮಳೆಯಲ್ಲೂ ನಾಟಕ ನಡೆದದ್ದಿದೆ.

* ನಿಮ್ಮ ತಂಡದ ಸದಸ್ಯರ ಆರ್ಥಿಕ ಪರಿಸ್ಥಿತಿ ಹೇಗಿತ್ತು?

ತಿಂಗಳ ಸಂಬಳ ಅಂತ ಇರಲಿಲ್ಲ. ನಾಟಕಕ್ಕೆ ಇಂತಿಷ್ಟು ಅಂತ ಸಂಭಾವನೆ ಕೊಡ್ತಿದ್ದೆ. ನಾವೆಲ್ಲ ಬೆಂಗಳೂರು ವಾಸಿಗಳು. ಹೆಚ್ಚಾಗಿ ಅಲ್ಲಲ್ಲಿನ ಸ್ಥಳೀಯರು ನಮ್ಮ ನಾಟಕದ ಕಾಂಟ್ರಾಕ್ಟ್ ಹಿಡೀತಿದ್ರು. ಕೆಲವೊಮ್ಮೆ ಇಲ್ಲಿಂದಲೇ ನಾನು ಹೋಗಿ- ಬಂದು ವ್ಯವಸ್ಥೆ ಮಾಡತಿದ್ದೆ. ಸಾಮಾನ್ಯವಾಗಿ 15ದಿನ, ತಿಂಗಳು- ಹೀಗೆ ಕ್ಯಾಂಪ್ ಇರತಿತ್ತು. ಮಧ್ಯೆ ಬಿಡುವು ಇದ್ದಾಗ ನಮ್ಮ ನಟಿಯರು ಬೇರೆ ಕಂಪೆನಿಗಳಲ್ಲಿ ಅಥವಾ ಹವ್ಯಾಸಿ ತಂಡಗಳಲ್ಲಿ ಅಭಿನಯಿಸೋಕೆ ಅವಕಾಶ ಇತ್ತು.

* ಈ ವಯಸ್ಸಿನಲ್ಲಿ ನಿಮಗೆ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಪ್ರಕಟವಾಗಿದೆ. ಹೇಗನಿಸ್ತು?

ಎಷ್ಟೋ ಜನ ನಾಗರತ್ನಮ್ಮ ಇದ್ದಾರೋ... ಇಲ್ಲವೋ... ಅಂದೊಕೊಂಡಿದ್ದರು. ಪ್ರಶಸ್ತಿ ಪ್ರಕಟ ಆಗಿ ಪೇಪರ್‌ನಲ್ಲಿ ನನ್ನ ಚಿತ್ರ ಬಂದಿದ್ದರಿಂದ ನಾಗರತ್ನಮ್ಮ ಇನ್ನೂ ಬದುಕಿದ್ದಾರೆ ಅಂತ ಅವರಿಗೆಲ್ಲಾ ಖಾತ್ರಿಯಾಯಿತು.ಇದೆಲ್ಲಾ ದೈವ ಪ್ರೇರಣೆ. ರಂಗಭೂಮಿಯಲ್ಲಿ ನಾನು ಮಾಡಿದ ಸೇವೆಗೆ ಮನ್ನಣೆ ಸಿಕ್ತು, ಪರವಾ ಇಲ್ಲ ಅನಿಸ್ತು. ಏನೋ ಮಾಡಿದ್ದೇನೆ ಎಂಬ ಆತ್ಮತೃಪ್ತಿ. ಇನ್ನೂ ಮಾಡಬಹುದಿತ್ತು ಅನ್ನೋ ಅತೃಪ್ತಿ ಮಾತ್ರ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry