ಸೋಮವಾರ, ಮೇ 16, 2022
30 °C

ಪುರ್ತಗೇರಿ ಆಸರೆ ಇನ್ನೂ ಬಲು ದೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ತಾಲ್ಲೂಕಿನ ಪುರ್ತಗೇರಿ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಅತಿವೃಷ್ಟಿ ಸಂತ್ರಸ್ತರ ಪುನರ್ವಸತಿ ಗ್ರಾಮದಲ್ಲಿನ ಮನೆಗಳ ನಿರ್ಮಾಣಕಾರ್ಯ ಆಮೆಗತಿಯಲ್ಲಿ ನಡೆಯುತ್ತಿರುವುದು ಕಂಡುಬಂದಿದೆ.ಗ್ರಾಮದ ಪಕ್ಕದಲ್ಲಿನ ಕೆರೆಯಿಂದ ಮತ್ತು ಅತಿವೃಷ್ಟಿ ಸಂದರ್ಭದಲ್ಲಿ ಮನೆಗಳಲ್ಲಿ ನೀರು ಜಿನುಗುತ್ತಿರುವುದರಿಂದ ಪದೇ ಪದೇ ತೊಂದರೆಗೊಳಗಾಗುತ್ತಿರುವುದರಿಂದ ಇಡಿ ಗ್ರಾಮವನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಸಂಭವಿಸಿದ ಅತಿವೃಷ್ಟಿ ಸಂದರ್ಭದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಆದರೆ ಎರಡು ವರ್ಷ ಕಳೆದರೂ ಮನೆಗಳ ನಿರ್ಮಾಣ ಕಾಮಗಾರಿ ಇನ್ನೂ ಅರ್ಧದಷ್ಟು ನಡೆದಿದೆ.`ಆಸರೆ~ ಹೆಸರಿನಲ್ಲಿ ಒಟ್ಟು 159 ಮನೆಗಳ ನಿರ್ಮಾಣ 108 ಮನೆಗಳನ್ನು ಜಿ.ಎಂ.ಆರ್ ಎಂಬ ದಾನಿ ಸಂಸ್ಥೆ ನಿರ್ಮಿಸುತ್ತಿದ್ದರೆ 51 ಮನೆಗಳ ಕೆಲಸವನ್ನು ಕೊಳಚೆ ನಿರ್ಮೂಲನಾ ಮಂಡಳಿ ಕೈಗೆತ್ತಿಕೊಂಡಿದೆ. ವಿದ್ಯುತ್, ಕುಡಿಯುವ ನೀರು ಚರಂಡಿ, ಕಚ್ಚಾ ರಸ್ತೆ ಕೆಲಸ ಪೂರ್ಣಗೊಂಡಿದ್ದು ಮನೆಗಳ ನಿರ್ಮಾಣವಷ್ಟೇ ಬಾಕಿ ಉಳಿದಿದೆ.

ಮನೆಗಳ ನಿರ್ಮಾಣದಲ್ಲಿನ ವಿಳಂಬಕ್ಕೆ ಜಿ.ಎಂ.ಆರ್ ಸಂಸ್ಥೆಯವರು ನೀಡಿದ ಹೇಳಿಕೆ ಅಚ್ಚರಿ ಮೂಡಿಸಿದೆ.`ಸದರಿ ಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿನ ಸಾಕಷ್ಟು ಗುಂಡಿಗಳಿದ್ದು ಅದರಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳು ಹೆಚ್ಚಾಗಿವೆ. ಹಾಗಾಗಿ ಗ್ರಾಮದಿಂದ ಕೆಲಸಕ್ಕೆ ಬರುವ ಬಹುತೇಕ ಕೂಲಿಕಾರರು ಮಲೇರಿಯಾ ಪಿಡಿತರಾಗಿರುತ್ತಾರೆ. ಹಾಗಾಗಿ ಒಂದೆರಡು ದಿನ ಮಾತ್ರ ಕೆಲಸ ಮಾಡುತ್ತಾರೆ. ಅದರಿಂದ ಕೆಲಸಕ್ಕೆ ಅಡ್ಡಿಯಾಗಿತ್ತು. ಅದರಿಂದ ಪಶ್ಚಿಮಬಂಗಾಳ, ಆಂಧ್ರಪ್ರದೇಶ ಮೊದಲಾದ ರಾಜ್ಯಗಳ ಕಾರ್ಮಿಕರನ್ನು ಕರೆತಂದು ಕೆಲಸ ಮಾಡುವ ಅನಿವಾರ್ಯತೆ ಇದೆ ಎಂಬುದನ್ನು ಸಂಸ್ಥೆಯ ಹಿರಿಯ ಕೋ ಆರ್ಡಿನೇಟರ್ ಲೋಗನಾಥನ್ ವಿವರಿಸಿದರು.ಕಾರ್ಮಿಕರ ಸಮಸ್ಯೆಯಿಂದಾಗಿ ಮನೆಗಳ ನಿರ್ಮಾಣ ಕೆಲಸ ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಬಹುದು ಎಂದು ಅವರು ಹೇಳಿದರು.ಅನುಮಾನ: ಊರ ಹೊರವಲಯದಲ್ಲಿ ನವಗ್ರಾಮ ನಿರ್ಮಾಣಗೊಳ್ಳುತ್ತಿದ್ದರೂ ಗ್ರಾಮಸ್ಥರಲ್ಲಿ ಅದರ ಬಗ್ಗೆ ಉತ್ಸಾಹವಿಲ್ಲ, ಬಹುತೇಕ ಜನ ಅಲ್ಲಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಉಳ್ಳವರು ಲಕ್ಷಾಂತರ ಹಣದಲ್ಲಿ ಗಟ್ಟಿಮುಟ್ಟಾದ ಮನೆಗಳನ್ನು ಕಟ್ಟಿಕೊಂಡಿದ್ದು ಪುನರ್ವಸತಿ ಗ್ರಾಮಕ್ಕೆ ಹೋಗಲು ಹಿಂದೇಟು ಹಾಕಿದ್ದು ಇತರರೂ ಅವರನ್ನು ಹಿಂಬಾಲಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ತಿಳಿದು ಬಂದಿತು. ಆದರೆ ಮನೆಗಳ ನಿರ್ಮಾಣದ ನಂತರ ಹಳೆಯ ಊರನ್ನು ನೆಲಸಮ ಮಾಡುವುದಾಗಿ ಹಿಂದಿನ ಜಿಲ್ಲಾಧಿಕಾರಿ ಸತ್ಯಮೂರ್ತಿ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.