ಪುರ್ನಜನ್ಮ ಎಂಬ ಮಾಧ್ಯಮ ಸನ್ನಿ

7

ಪುರ್ನಜನ್ಮ ಎಂಬ ಮಾಧ್ಯಮ ಸನ್ನಿ

Published:
Updated:

`ಪುರ್ನಜನ್ಮ'ವನ್ನು ಇನ್ನೂ ವೈಜ್ಞಾನಿಕವಾಗಿ ನಿರೂಪಿಸಲು ಆಗಿಲ್ಲ ಮತ್ತು ಇದಕ್ಕೆ ಪ್ರಾಯೋಗಿಕ ಉತ್ತರ ಕೊಡಲು ಮನೋವಿಜ್ಞಾನಿಗಳಿಗೂ ಸಾಧ್ಯವಾಗಿಲ್ಲ.`ಮನುಷ್ಯನನ್ನು ದೇವರಾಗಲೀ, ದೆವ್ವ- ಪಿಶಾಚಿಗಳಾಗಲೀ ಕಾಡುವುದಿಲ್ಲ; ಮನುಷ್ಯನನ್ನು ಮನುಷ್ಯನೇ ಕಾಡಿಸುತ್ತಾನೆ'- ಹೀಗೆಂದು ಆತ್ರೇಯ ಮುನಿ ಆಯುರ್ವೇದದಲ್ಲಿ ಉಲ್ಲೇಖಿಸಿದ್ದಾರೆ. ಈಗ ಟಿ.ವಿ.ಯಲ್ಲಿ ಮೂಡಿಬರುತ್ತಿರುವ ಪುರ್ನಜನ್ಮ, ಜನ್ಮಾಂತರ, ಅಗೋಚರ, ಹೀಗೂ ಉಂಟೆ, ನಡೆದದ್ದೇನು? ಮುಂತಾದ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ ನನಗೆ ಈ ಉಲ್ಲೇಖ ನೆನಪಿಗೆ ಬರುತ್ತದೆ.ಒಂದೆಡೆ ವೈಜ್ಞಾನಿಕ ಕ್ರಾಂತಿ ನಡೆಯುತ್ತಿದ್ದರೆ, ಇನ್ನೊಂದೆಡೆ ಮೌಢ್ಯದ ಪರಮಾವಧಿ. 21ನೇ ಶತಮಾನದಲ್ಲೂ ಎಂತಹ ವಿಪರ್ಯಾಸ? ಪ್ರಪಂಚದಲ್ಲಿ ಅತಿ ಕುತೂಹಲ ಮತ್ತು ರಹಸ್ಯಮಯವಾದದ್ದು ನಮ್ಮ ಮನಸ್ಸು. ಅದು ಒಂದೇ ಜಾಗದಲ್ಲಿ ಸ್ವರ್ಗ- ನರಕಗಳನ್ನು ಸೃಷ್ಟಿಸಬಲ್ಲದು. ಉತ್ತಮ ನಾಗರಿಕತೆಯನ್ನು ಹೊಂದಿದ್ದೇವೆ ಎಂದು ಭಾವಿಸುವ ನಾವು, ನಮ್ಮ ಪೂರ್ವಿಕರು ಬಹಳ ಬುದ್ಧಿವಂತಿಕೆಯಿಂದ ತಿರಸ್ಕರಿಸಿದ್ದ ಹಲವಾರು ವಿಷಯಗಳಿಗೇ ಶರಣಾಗುತ್ತಿದ್ದೇವೆ.

ಅವರು ಕೊಟ್ಟಂತಹ ಅಗಾಧವಾದ ಮಾನಸಿಕ ಜ್ಞಾನವನ್ನು ಮೀರಿ ನಾವಿನ್ನೂ ಬೆಳೆದೇ ಇಲ್ಲ. ಇಂದಿನ ನಮ್ಮ ಧೋರಣೆಯನ್ನು ನೋಡಿದರೆ ನಾವು ಅವರನ್ನು ಮೀರಿ ಬೆಳೆಯುವ ಲಕ್ಷಣಗಳು ಸದ್ಯಕ್ಕಂತೂ ಗೋಚರಿಸುತ್ತಿಲ್ಲ.ಅಸಲಿಗೆ ಈ ಪುರ್ನಜನ್ಮ, ತಂತ್ರ- ಮಂತ್ರಗಳ ಪ್ರಭಾವ ಇರುವುದೇ ನಿಜ ಆಗಿದ್ದರೆ ಅವು ಈಗ ಯಾಕೆ ಬೆಳಕಿಗೆ ಬರುತ್ತಿವೆ? ಆಧುನಿಕ ಪ್ರಪಂಚದಲ್ಲಿ ಹಣ ಮತ್ತು ಸ್ವಾರ್ಥ ಎಂಬ ಎರಡು ಅಂಶಗಳು ಎದ್ದು ಕಾಣಿಸುತ್ತಿವೆ. ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಕೋನದಿಂದಲೇ ನೋಡುವಂತಾಗಿದೆ. ಭಾರತ ಒಂದು ಭಾವನಾತ್ಮಕ ದೇಶ.

ಇಲ್ಲಿ ಬಹಳಷ್ಟು ಭಾಷೆ, ಸಂಸ್ಕೃತಿಗಳಿದ್ದರೂ ಧರ್ಮವೆಂಬ ಭಾವನಾತ್ಮಕ ಕೊಂಡಿ ಅವೆಲ್ಲವನ್ನೂ ಒಗ್ಗೂಡಿಸಿದೆ. ಇಂತಹ ಭಾವನಾತ್ಮಕ ವಿಷಯಗಳನ್ನು ಆರಿಸಿಕೊಂಡು ಮನರಂಜನೆ ನೀಡಿ ಹಣ ಗಳಿಸುತ್ತಿರುವ ಟಿ.ವಿ ವಾಹಿನಿಯವರಿಗೆ ಈಗ ಸಿಕ್ಕಿದ್ದು ಚರ್ಚಾಸ್ಪದವಾದ ವಿಷಯಗಳು. ಕಣ್ಣಿಗೆ ಕಾಣುವಂತದ್ದಾಗಿದ್ದರೆ ಈ ವಿಷಯಗಳನ್ನು ಅವು ಹೀಗೆ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ವಿಷಯಗಳು ತಾರ್ಕಿಕವಾದವು.ವಿವಿಧ ಬಗೆಯ ಜೂಜು, ಆಟಗಳು, ರಿಯಾಲಿಟಿ ಶೋಗಳಿಗೆ ಮೀಸಲಾಗಿದ್ದ ವಾಹಿನಿಗಳಿಗೆ ಈಗ ಸುಲಭವಾಗಿ ಸಿಕ್ಕಿರುವ ಮತ್ತೊಂದು ವಿಷಯ ಪುನರ್ಜನ್ಮ. ಜನರಲ್ಲಿ ಇರುವ ಮೌಢ್ಯವನ್ನು ಅಳಿಸಬೇಕಾಗಿರುವ ವಾಹಿನಿಗಳು ಟಿಆರ್‌ಪಿ ರೇಟ್ ಹೆಚ್ಚಿಸಿಕೊಳ್ಳಲು ಅದನ್ನು ವೈಭವೀಕರಿಸುತ್ತಿರುವುದು ಸಮಾಜ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ.ಮನರಂಜನೆಯೊಂದಿಗೆ ಜ್ಞಾನವನ್ನೂ ಬಿತ್ತರಿಸಬೇಕಾದದ್ದು ಮಾಧ್ಯಮಗಳ ಜವಾಬ್ದಾರಿ.

ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಸಾಮಾಜಿಕ ಹೊಣೆಗಾರಿಕೆ ಹೆಚ್ಚಾಗಿ ಇರುತ್ತದೆ. ಸರಿ- ತಪ್ಪು ಪ್ರಶ್ನೆಗಳು ಉದ್ಭವಿಸಿದಾಗ ಮಾಧ್ಯಮ ಸಮಾಜದ ಪ್ರತಿಬಿಂಬವಾಗಬೇಕು. ಜನರಿಗೆ ಪ್ರಿಯವಾದದ್ದು ಎಂಬ ಕಾರಣದಿಂದ ಅಂಧ ವಿಶ್ವಾಸಗಳನ್ನು ಮತ್ತು ಅವೈಜ್ಞಾನಿಕ ವಿಚಾರಗಳನ್ನು ವೈಭವೀಕರಿಸುವುದು ಖಂಡನೀಯ. ಆಧುನಿಕತೆಯ ಒತ್ತಡದಲ್ಲಿ ಇರುವವರ ಮೇಲೆ ಮಾಧ್ಯಮಗಳಿಂದ ಆಗುವ ದುಷ್ಪರಿಣಾಮಗಳು ಹೆಚ್ಚು. ಇಲ್ಲವಾದರೆ ಬೆಳ್ಳಿಪರದೆ ಮೇಲೆ ಎಗ್ಗಿಲ್ಲದೇ ಬಿತ್ತರವಾಗುತ್ತಿದ್ದ ಧೂಮಪಾನದ ದೃಶ್ಯಗಳನ್ನು ಕೇಂದ್ರ ಸರ್ಕಾರ ನಿಷೇಧಿಸಬೇಕಿತ್ತೇಕೆ?ನಾಗವಲ್ಲಿಯಾಗಲೀ, ಗ್ರಹಗಳಾಗಲೀ, ಜ್ಯೋತಿಷಿಗಳಾಗಲೀ ನಮ್ಮ ಭವಿಷ್ಯವನ್ನು ತಿರುಚಲು ಸಾಧ್ಯವಿಲ್ಲ. ಸ್ವಾಮಿ ವಿವೇಕಾನಂದರು ಹೇಳುವಂತೆ “ಚ್ಞ ಜಿ ಠಿಛಿ ಠಿಛ್ಟಿ ಟ್ಛ ಜಿ ಟಡ್ಞಿ ಛಿಠಿಜ್ಞಿ”. ಈ ವರ್ಷದ ಡಿಸೆಂಬರ್‌ನಲ್ಲಿ ಪ್ರಳಯವಾಗುತ್ತದೆ ಎಂದು ಹೇಳುತ್ತಿರುವ ಜ್ಯೋತಿಷಿಗಳು ಅದು ಸಂಭವಿಸದೇ ಇದ್ದಾಗ, ಹಾಗೆ ಆಗದಿದ್ದುದು ತಮ್ಮ ಜಪ- ತಪ- ಮಂತ್ರಗಳ ಫಲದಿಂದ ಎಂದು ಹೇಳುವುದರಲ್ಲಿ ಸಂದೇಹವೇ ಇಲ್ಲ.

ಸದ್ಯದ ಮಟ್ಟಿಗೆ ಪುರ್ನಜನ್ಮ ಎಂಬುದನ್ನು ವೈಜ್ಞಾನಿಕವಾಗಿ ಇನ್ನೂ ನಿರೂಪಿಸಲು ಆಗಿಲ್ಲ.ಮನೋವಿಜ್ಞಾನಿಗಳಿಗೆ ಪ್ರಾಯೋಗಿಕವಾಗಿ ಇದಕ್ಕೆ ಸಮರ್ಪಕ ಉತ್ತರ ಕೊಡಲಾಗಿಲ್ಲ ಮತ್ತು ಇದನ್ನು ಒಂದು ಚಿಕಿತ್ಸೆಯಾಗಿ ಯಾವ ಮನೋವೈಜ್ಞಾನಿಕ ಗ್ರಂಥಗಳೂ ಒಪ್ಪಿಕೊಂಡಿಲ್ಲ. ಈ ವಿಷಯಗಳನ್ನು ಟಿ.ವಿ.ಯಲ್ಲಿ ಬಿಂಬಿಸುತ್ತಿರುವ ವ್ಯಕ್ತಿಗಳು ಮನೋವಿಜ್ಞಾನವನ್ನು ಸರಿಯಾಗಿ ವ್ಯಾಸಂಗ ಮಾಡಿದಂತೆ ಕಾಣುವುದಿಲ್ಲ.ಸಂಪೂರ್ಣ ಆರೋಗ್ಯಕ್ಕೆ ಸ್ವಸ್ಥ ದೇಹ, ಮನಸ್ಸು ಮತ್ತು ಸಮಾಜ ಮುಖ್ಯ. ಇದು ಸಾಕಾರಗೊಳ್ಳಲು ಶಿಸ್ತಿನ ದಿನಚರಿ ಬೇಕೇ ಹೊರತು ಅರೆಬರೆ ತಿಳಿದ ಢೋಂಗಿ ಜನರ ಸಲಹೆಗಳಲ್ಲ.      

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry