ಪುಷ್ಪರಾಶಿಯಲ್ಲಿ ಮೆಟ್ರೊ ರೈಲು

7

ಪುಷ್ಪರಾಶಿಯಲ್ಲಿ ಮೆಟ್ರೊ ರೈಲು

Published:
Updated:

ಬೆಂಗಳೂರಿಗರು ಸುಯ್ಯನೆ ಓಡಾಡಲು ಕಾತರರಾಗಿರುವ ‘ನಮ್ಮ ಮೆಟ್ರೊ’ ರೈಲು ಈಗ ‘ಸಸ್ಯಕಾಶಿ’ಗೆ ಬಂದಿದೆ. ಅದೂ ಕಂಗೊಳಿಸುವ ಬಣ್ಣಬಣ್ಣದ ಹೂಗಳನ್ನು ಮೈತುಂಬ ಹೊದ್ದು. ನೋಡುಗರನ್ನು ನಿಂತಲ್ಲಿಯೇ ಬೆಡಗಿನ ಲೋಕಕ್ಕೆ ಕರೆದೊಯ್ಯುವ ಈ ರೈಲು ಲಾಲ್‌ಬಾಗ್‌ನಲ್ಲಿ ಒಂದು ವಾರದವರೆಗೆ ವಿರಾಜಮಾನವಾಗಲಿದೆ.ಅಂದಹಾಗೆ ರೈಲು ಲಾಲ್‌ಬಾಗ್‌ಗೆ ಬಂದಿರುವುದು ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ಪುಷ್ಪ ಪ್ರದರ್ಶನಕ್ಕೆ. ಬುಧವಾರ ಪ್ರಾರಂಭವಾಗಿರುವ ಪ್ರದರ್ಶನ ಜ.26 ರ ವರೆಗೂ ನಡೆಯಲಿದೆ. ನಾವು ಕಾಣರಿಯದ ಅಪರೂಪದ ಅತ್ಯಾಕರ್ಷಕ ಆರ್ಕಿಡ್‌ಗಳು ಈ ಮೆಟ್ರೊ ರೈಲನ್ನು ಅಲಂಕರಿಸಿವೆ. ಬಿಇಎಂಎಲ್‌ನ ಮಾದರಿ ಮೆಟ್ರೊ ರೈಲು ಪುಷ್ಪಗಳಿಗೆ ಮೈಯೊಡ್ಡಿದೆ.ಇದರ ಜೊತೆಗೆ ಸುಮಾರು 80 ಸಾವಿರ ಹೂವುಗಳಿಂದ ಸೃಷ್ಟಿಯಾಗಿರುವ ಕೆಂಪೇಗೌಡ ಗೋಪುರದ ಕಲಾಕೃತಿ ಪ್ರದರ್ಶನದ ಮತ್ತೊಂದು ಪ್ರಮುಖ ಆಕರ್ಷಣೆ.ಬೆಂದಕಾಳೂರಿಗೆ ಸುಂದರ ರೂಪ ನೀಡಿ ಉದ್ಯಾನನಗರಿಯಾಗಿ ರೂಪಿಸಿದ ಕೆಂಪೇಗೌಡರನ್ನು ನೆನೆಯುವ ಕೆಂಪೇಗೌಡ ಗೋಪುರದಿಂದ ಹೆಮ್ಮೆಯ ‘ನಮ್ಮ ಮೆಟ್ರೋ’ವರೆಗೂ ನಗರ ಬೆಳೆದಿರುವ ಪರಿಯನ್ನು ಹೂವಿನ ಅಲಂಕಾರದ ಮೂಲಕ ಸಾಂಕೇತಿಕವಾಗಿ ಸಾರುವುದು ಈ ಬಾರಿಯ ಪುಷ್ಪ ಪ್ರದರ್ಶನದ ಉದ್ದೇಶ. ಸುಮಾರು 500ಕ್ಕೂ ಹೆಚ್ಚು ವಿವಿಧ ಪ್ರಭೇದದ ಹೂಗಳು ಸಸ್ಯಕಾಶಿಯ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ನೀಡಿವೆ. ಪೆಟೋನಿಯಾ, ಸೈಕ್ಲೋಟಿಸ್, ಹೈಡ್ರಾಂಜಿಯಾ, ಸಿಲೋಷಿಯಾ, ಫ್ಯೂಷಿಯಾ, ಜರ್ಬೆರಾ ಮುಂತಾದ ಬಗೆಬಗೆಯ ಹೂಗಳು ಗಾಜಿನ ಮನೆಯಲ್ಲಿ ಬಣ್ಣದ ಲೋಕ ಸೃಷ್ಟಿಸಿವೆ. ಮೂಲೆ ಮೂಲೆಯಲ್ಲೂ ಆಂಥೋರಿಯಂ, ಕಾಕ್ಸ್‌ಕೇಂಟ್, ಲಾರ್ಕ್ಸ್‌ಸ್ಟರ್, ಪಿಟೋನಿಯಾ, ನಾಸ್ಟಿಸ್ ಹೀಗೆ ವೈವಿಧ್ಯಮಯ ಹೂಗಳು ಕಂಗೊಳಿಸುತ್ತಿವೆ.ಕಳೆದ ವರ್ಷಕ್ಕಿಂತ ಈ ಬಾರಿ ವಿಭಿನ್ನವಾಗಿ ಹೂಗಳನ್ನು ಜೋಡಿಸಲಾಗಿದೆ. ಸಾಮಾನ್ಯ ತಳಿಗಳಿಗೆ ಸೇರಿದ ಹೂಗಳನ್ನು ವಿಂಗಡಿಸಿ ನೂತನ ಮಾದರಿಯಲ್ಲಿ ವಿನ್ಯಾಸ ಮಾಡಲಾಗಿದೆ. ಅಲ್ಲದೆ ಕಲಾವಿದರು ಕಲ್ಲಂಗಡಿ, ಕುಂಬಳಕಾಯಿ ಮುಂತಾದವುಗಳನ್ನು ಕೆತ್ತಿರುವ ಚಿತ್ರಗಳು ಹೂಗಳ ನಡುವಿನ ವಿಶೇಷಣಗಳಾಗಿವೆ.ಪ್ರತಿ ವರ್ಷದಂತೆ ಬಿಬಿಎಂಪಿ, ಬಿಡಿಎ ಮುಂತಾದ ಸಂಸ್ಥೆಗಳಿಗೆ ವಿವಿಧ ತಳಿಗಳ ಹೂಗಿಡಗಳನ್ನು ಬೆಳೆಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಗಾಜಿನ ಮನೆಯ ಹೊರ ಆವರಣದಲ್ಲಿ ತೋಟಗಾರಿಕೆ, ಪುಷ್ಪ ಕೃಷಿ, ಔಷಧಿ ಮತ್ತು ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ಮತ್ತು ಸಲಹೆ ನೀಡುವ ಘಟಕಗಳನ್ನು ತೆರೆಯಲಾಗಿದೆ. ವಿವಿಧ ಖಾಸಗಿ ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳ ನೂರಾರು ಕರಕುಶಲ ವಸ್ತುಗಳು, ದಿನಬಳಕೆ ವಸ್ತುಗಳು, ಅಡುಗೆ ಉತ್ಪನ್ನಗಳು, ಪುಸ್ತಕ, ಸಿ.ಡಿಗಳು, ನರ್ಸರಿ ಗಿಡಗಳು, ಆಹಾರ ಮಳಿಗೆಗಳು ಸಸ್ಯಪ್ರಿಯರಿಗಾಗಿ ತೆರೆದಿವೆ.ಜನವರಿ ತಿಂಗಳಲ್ಲಿ ಬಹುತೇಕ ಪ್ರಭೇದದ ಗಿಡಗಳಲ್ಲಿ ಹೂ ಬಿಡುವುದಿಲ್ಲ. ಅದರಲ್ಲಿಯೂ ನಮ್ಮ ವಾತಾವರಣಕ್ಕೆ ಹೊಂದಿಕೊಳ್ಳದ ಗಿಡಗಳನ್ನು ಬೆಳೆಸುವುದು ಇನ್ನೂ ಕಷ್ಟ. ಅಧಿಕ ವೆಚ್ಚವಾದರೂ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಅವುಗಳಲ್ಲಿ ಹೂ ಅರಳುವಂತೆ ಮಾಡಲಾಗುತ್ತದೆ ಎನ್ನುತ್ತಾರೆ ಜಂಟಿ ನಿರ್ದೇಶಕ ಡಾ. ಅಶ್ವತ್ಥ್. ಬನ್ನಿ... ಸಸ್ಯ ರಾಶಿ, ಹೂಗಳ ವರ್ಣ ವೈಭವವನ್ನು ಆಸ್ವಾದಿಸಿ.ಪ್ರವೇಶ ಶುಲ್ಕ

ಪುಷ್ಪ ಪ್ರದರ್ಶನದ ಸಲುವಾಗಿ ಪ್ರವೇಶ ಶುಲ್ಕದಲ್ಲಿ ಬದಲಾವಣೆ ಮಾಡಲಾಗಿದೆ. ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 30 ರೂಪಾಯಿ, ರಜಾ ದಿನ (ಜ.23 ಮತ್ತು 26ಕ್ಕೆ) 40 ರೂಪಾಯಿ. ಮಕ್ಕಳಿಗೆ ರೂ 10. ಶಾಲಾ ಮಕ್ಕಳಿಗೆ ರಜಾದಿನಗಳಂದು ಉಚಿತ ಪ್ರವೇಶ.ವಾಹನ ನಿಲುಗಡೆ

ಲಾಲ್‌ಬಾಗ್ ಸಿದ್ದಾಪುರ ಮಾರ್ಗದಿಂದ ಮಾತ್ರ ವಾಹನಗಳ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ.  ವಾಹನ ಒತ್ತಡ ಹೆಚ್ಚಾದಲ್ಲಿ ಮರಿಗೌಡ ಸ್ಮಾರಕ ಭವನದ ಬಳಿ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ದ್ವಿಚಕ್ರ ವಾಹನಗಳಿಗೆ ರೂ. 5, ಕಾರು ಮತ್ತು ಲಘು ವಾಹನಗಳಿಗೆ ರೂ 10 ಮತ್ತು ಬಸ್ ಹಾಗೂ ದೊಡ್ಡ ವಾಹನಗಳ ಪ್ರವೇಶ ರೂ 100 ಶುಲ್ಕ ನಿಗದಿಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry