ಶನಿವಾರ, ಮೇ 21, 2022
27 °C

`ಪುಷ್ಪ ಕೃಷಿಯಿಂದ ಆರ್ಥಿಕ ಸಬಲೀಕರಣ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ರೈತರು ಸಂರಕ್ಷಿತ ಬೇಸಾಯ ಪದ್ಧತಿಯಲ್ಲಿ ಹೂವುಗಳನ್ನು ಬೆಳೆದು, ಉತ್ತಮ ಗುಣಮಟ್ಟದ ಜೊತೆಗೆ ಹೆಚ್ಚಿನ ಇಳುವರಿ ಪಡೆದು ಆರ್ಥಿಕವಾಗಿ ಸಬಲರಾಗಬಹುದು ಎಂದು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ.ಟಿ.ಎಚ್.ಗೌಡ ಸಲಹೆ ಮಾಡಿದರು.ನವುಲೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯುಕ್ತವಾಗಿ ನವುಲೆ ಆವರಣದಲ್ಲಿ ಮೂರು ದಿನಗಳ  ರೈತ ಮಹಿಳೆಯರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಹೂವಿನ ಬೆಳೆಯೂ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿದೆ. ಪುಷ್ಪ ಕೃಷಿಯು ಈಗ ಉದ್ಯಮವಾಗಿದೆ. ಆಯಾ ಪ್ರದೇಶಗಳಿಗೆ ಹೊಂದುವ, ಹೂಗಳ ಅನೇಕ ತಳಿಗಳಿವೆ. ರೈತರು ತಮ್ಮ ಹೊಲಗಳಲ್ಲಿ ಸ್ವಲ್ಪವೇ ಜಾಗವನ್ನು ಹೂಬೆಳೆಗೆ ಮೀಸಲಿಟ್ಟು, ಅದರಲ್ಲಿ ಹೂ ಬೆಳೆ ತೆಗೆಯಬಹುದು. ಹೂಗಳ ಸಂಸ್ಕರಣೆ, ಮಾರಾಟದ ಬಗ್ಗೆ ಸಹ ತರಬೇತಿ ನೀಡಲಾಗುತ್ತದೆ ಎಂದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ಡಿ.ಯೋಗೇಶ್, ಅನೇಕ ಧಾರ್ಮಿಕ ಕಾರ್ಯಕ್ರಮಗಳು, ಶುಭ ಸಮಾರಂಭಗಳಲ್ಲಿ ಹೂವಿನ ಬೇಡಿಕೆ ಹೆಚ್ಚಿರುವುದರಿಂದ, ಆಯಾ ಕಾಲಕ್ಕೆ ತಕ್ಕಂತೆ ಬೇಡಿಕೆಗನುಸಾರವಾಗಿ ಹೂ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಹೆಚ್ಚು ಲಾಭ ಗಳಿಸಬೇಕು ಎಂದರು.ಕಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ.ಬಸವರಾಜ ಬೀರಣ್ಣವರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಾಣಿಜ್ಯ ಪುಷ್ಪಗಳಾದ ಗುಲಾಬಿ, ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಬರ್ಡ್ ಆಫ್ ಪ್ಯಾರೆಡೈಸ್, ಗೈಲಾರ್ಡಿಯಾ ಪುಷ್ಪಗಳಿಗೆ ವರ್ಷಪೂರ್ತಿ ಬೇಡಿಕೆ ಇದೆ. ಹಾಗಾಗಿ, ರೈತರು ಇವುಗಳನ್ನು ಮನೆಯ ಸುತ್ತಮುತ್ತಲಿನ ಖಾಲಿ ಪ್ರದೇಶಗಳಲ್ಲಿ ಬೆಳೆದು ಹೂಗಳ ಮಾರಾಟ ಮಾಡಬಹುದು.ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕ ಡಾ.ಬಿ.ಸಿ.ಹನುಮಂತಸ್ವಾಮಿ ವಹಿಸಿದ್ದರು. ಕಾರ್ಯಕ್ರಮ ಸಹಾಯಕ ಡಾ.ಆರ್.ನಾಗರಾಜ ಕಾರ್ಯಕ್ರಮ ನಿರೂಪಿಸಿದರು. ವಿಷಯ ತಜ್ಞ ಡಾ.ನಾಗರಾಜಪ್ಪ ಅಡಿವಪ್ಪರ್ ವಂದಿಸಿದರು. ಒಟ್ಟು 35 ಜನ ರೈತರು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.