ಶನಿವಾರ, ಮೇ 15, 2021
24 °C

ಪುಸ್ತಕಗಳ ಖರೀದಿ ಬಲು ಜೋರು...!

ಪ್ರಜಾವಾಣಿ ವಾರ್ತೆ / ಶ್ರೀಪಾದ ಯರೇಕುಪ್ಪಿ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರದ ಮಾರುಕಟ್ಟೆಯಲ್ಲಿ ಚಿಣ್ಣರ ಕಲರವ. ಪುಸ್ತಕ ಅಂಗಡಿಗಳಲ್ಲಿ ಖರೀದಿಗಾಗಿ ನೂಕು ನುಗ್ಗಲು. ಸ್ಕೂಲ್ ಬ್ಯಾಗ್, ರೇನ್ ಕೋಟ್ ಖರೀದಿಯೂ ಬಲು ಜೋರು.ಪಠ್ಯಪುಸ್ತಕಗಳು ಆಯಾ ಶಾಲೆಗಳಲ್ಲಿಯೇ ದೊರೆಯುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಕೇವಲ ಶಾಲಾ ಸಾಮಗ್ರಿಗಳ ಖರೀದಿ ಮಾತ್ರ ನಡೆಯುತ್ತಿದೆ. ಪಾಲಕರು ಮಕ್ಕಳೊಂದಿಗೆ ಅಂಗಡಿಗಳಿಗೆ ಆಗಮಿಸಿ ಅವರ ಅವಶ್ಯಕತೆ ಪೂರೈಸುತ್ತಿದ್ದಾರೆ.ನಗರದ ಗಣಪತ್ ಗಲ್ಲಿ, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಖಡೇ ಬಜಾರ್ ಪ್ರದೇಶದಲ್ಲಿ ಶಾಲಾ ಸಾಮಗ್ರಿಗಳ ವ್ಯಾಪಾರ ಜೋರಾಗಿ ನಡೆದಿದೆ. ಈ ಪ್ರದೇಶದ ಬಹುತೇಕ ಅಂಗಡಿಗಳ ಮಾಲೀಕರು, ಕೆಲಸಗಾರರಿಗೆ ಮಕ್ಕಳು, ಪಾಲಕರನ್ನು ಬಿಟ್ಟು ತಮ್ಮ ಸಂಬಂಧಿಕರು ಸೇರಿದಂತೆ ಮತ್ತೊಬ್ಬರೊಂದಿಗೆ ಮಾತನಾಡುವಷ್ಟು ಸಮಯವಿಲ್ಲ.ಪಠ್ಯಪುಸ್ತಕಗಳು ಶಾಲೆಯಲ್ಲಿಯೇ ನೀಡಿರುವುದರಿಂದ ಪುಸ್ತಕಗಳ ಅಂಗಡಿಯಲ್ಲಿ ನೋಟ್ ಪುಸ್ತಕ, ಕಂಪಾಸ್ ಪೆಟ್ಟಿಗೆ, ರಬ್ಬರ್, ಪೆನ್, ಪೆನ್ಸಿಲ್ ಮತ್ತಿತರ ಶಾಲಾ ಸಾಮಗ್ರಿಗಳ ಖರೀದಿ ನಡೆಯುತ್ತಿದೆ. ಸ್ಕೂಲ್ ಬ್ಯಾಗ್ ಖರೀದಿಯೂ ಜೋರಾಗಿ ನಡೆದಿದೆ.`ಪ್ರತಿಯೊಬ್ಬ ವಿದ್ಯಾರ್ಥಿ ಕನಿಷ್ಟ 1000 ರೂ. ಮೊತ್ತದ ನೋಟ್ ಪುಸ್ತಕ ಖರೀದಿಸುತ್ತಿದ್ದಾರೆ. ಪಠ್ಯಪುಸ್ತಕಗಳು ಶಾಲೆಯಲ್ಲಿಯೇ ಸಿಗುತ್ತಿವೆ. ಪ್ರಥಮ ಪಿಯುಸಿಯ ಪಠ್ಯಪುಸ್ತಕಗಳು ನಮ್ಮ ಬಳಿ ಸಿಗುತ್ತಿವೆ' ಎಂದು ಮಾರುತಿ ಗಲ್ಲಿಯ ಬುಕ್ ಸ್ಟಾಲ್ ಮಾಲೀಕರೊಬ್ಬರು ಹೇಳುತ್ತಾರೆ.`ಕೆಲವೊಂದು ಶಾಲೆಗಳಲ್ಲಿ ಪಠ್ಯಪುಸ್ತಕಗಳು ಸಿಗದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಈ ಹಿನ್ನಲೆಯಲ್ಲಿ ಅಂಗಡಿಗೆ ಬರುವ ಪಾಲಕರಿಂದ ಅವರ ಮಕ್ಕಳ ಹಿಂದಿನ ತರಗತಿಯ ಪುಸ್ತಕಗಳನ್ನು ಖರೀದಿಸಿ ಇತರರಿಗೆ ಮಾರಾಟ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂಬುದೇ ನಮ್ಮ ಉದ್ದೇಶ' ಎನ್ನುತ್ತಾರೆ ಅಂಗಡಿಕಾರರು.`ಪ್ರತಿ ವರ್ಷದ ಶೈಕ್ಷಣಿಕ ಸಾಲಿನ ಆರಂಭದಲ್ಲಿ ಪುಸ್ತಕಗಳ ಖರೀದಿಗೆ ನೂಕು ನುಗ್ಗಲು ಇರುತ್ತದೆ. ಜೂನ್ ಅಂತ್ಯದವರೆಗೆ ಪುಸ್ತಕಗಳು ಹಾಗೂ ಶಾಲಾ ಸಾಮಗ್ರಿಗಳ ಮಾರಾಟ ಜೋರಾಗಿರುತ್ತದೆ. ನೋಟ್ ಪುಸ್ತಕ ತಯಾರಿಕೆಗೆ ಸೂಕ್ತ ಸಮಯದಲ್ಲಿ ಪೇಪರ್ ಪೂರೈಕೆ ಆಗದ ಕಾರಣ ಕೊರತೆ ಉಂಟಾಗಿದೆ. ಪುಸ್ತಕಗಳ ದರದಲ್ಲಿ ಶೇ. 30 ರಷ್ಟು ಹೆಚ್ಚಳ ಉಮಟಾಗಿದೆ' ಎನ್ನುತ್ತಾರೆ ಗಣಪತ್ ಗಲ್ಲಿಯ ಶ್ರೀ ರಾಮತತ್ವ ಬುಕ್ ಡಿಪೋ ಮಾಲೀಕ ಶಿವರಾಜ್ ಸಾವಂತ.ಪಠ್ಯಪುಸ್ತಕ ಕೊರತೆ: `ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 1842 ಶಾಲೆಗಳಿಗೆ ಲ್ಲಿ ಪಠ್ಯಪುಸ್ತಕ ವಿತರಿಸಲಾಗುತ್ತಿದೆ. ಆರು ಹಾಗೂ ಒಂಬತ್ತನೆ ತರಗತಿಯ ಪಠ್ಯಕ್ರಮ ಬದಲಾವಣೆ ಮಾಡಲಾಗಿದೆ. ಆದ್ದರಿಂದ ಈ ತರಗತಿಗಳ ಪಠ್ಯಪುಸ್ತಕಗಳ ಕೊರತೆ ಇದೆ. ಪಠ್ಯಪುಸ್ತಕ ನಿರ್ದೇಶನಾಲಯದಿಂದ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (ಬಿಇಒ) ನೀಡಲಾಗಿದೆ. ಒಟ್ಟು ಶೇ. 78.7 ರಷ್ಟು ಪಠ್ಯಪುಸ್ತಕಗಳ ವಿತರಣೆ ಮಾಡಲಾಗಿದೆ' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ದಿವಾಕರ ಶೆಟ್ಟಿ `ಪ್ರಜಾವಾಣಿ'ಗೆ ತಿಳಿಸಿದರು.`ಖಾಸಗಿ ಶಿಕ್ಷಣ ಸಂಸ್ಥೆಯ ಶಾಲೆಯವರು ಮಕ್ಕಳ ಸಂಖ್ಯೆಗನುಗುಣವಾಗಿ ತಮ್ಮ ಅವಶ್ಯಕತೆಯನ್ನು ಬಿಇಒ ಅವರಿಗೆ ತಿಳಿಸಬೇಕು. ಪಠ್ಯಪುಸ್ತಕ ನೀಡಿ ಅವರಿಂದ ಡಿಡಿ ಪಡೆಯಲಾಗುವುದು. ಜಿಲ್ಲೆಯಲ್ಲಿ ಖಾಸಗಿ ಶಾಲೆಗಳು ಒಟ್ಟು 1.08 ಕೋಟಿ ರೂಪಾಯಿ ಮೊತ್ತದ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿವೆ. ಕೆಲವೊಂದು ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆ ಆಗಿಲ್ಲ. ಖಾಸಗಿ ಶಾಲೆಯವರು ಬಿಇಒ ಅವರ ಹತ್ತಿರ ಡಿಡಿ ನೀಡಿ ಪಠ್ಯಪುಸ್ತಕ ಪಡೆಯಬಹುದು' ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.