ಪುಸ್ತಕದ ಪುಟಗಳಲಿ ಹಕ್ಕಿಗಳ ಚಿಲಿಪಿಲಿ

ಮಂಗಳವಾರ, ಜೂಲೈ 16, 2019
25 °C

ಪುಸ್ತಕದ ಪುಟಗಳಲಿ ಹಕ್ಕಿಗಳ ಚಿಲಿಪಿಲಿ

Published:
Updated:

ಹಕ್ಕಿಗಳೆಂದರೆ ಬರಿಯ ಹಕ್ಕಿಗಳಲ್ಲ. ಜೀವವೈವಿಧ್ಯದಲ್ಲಿ ಹಕ್ಕಿಗಳದ್ದೇ ವಿಶಿಷ್ಟ ವಿಸ್ಮಯಕಾರಿ ಜಗತ್ತು. ಹಕ್ಕಿಯೊಂದರ ಬದುಕನ್ನು ಬೆಂಬೆತ್ತಿದರೆ ಹತ್ತು ಹಲವು ಕೌತುಕದ ವಿಷಯಗಳು ತಿಳಿಯುತ್ತವೆ. ಆದರೆ ಹಕ್ಕಿಯ ಜಾಡು ಹಿಡಿಯವುದು ಸುಲಭವಲ್ಲ. ಅದಕ್ಕೆ ನಿರಂತರ ಅಧ್ಯಯನಶೀಲತೆ, ತಾಳ್ಮೆ, ಗ್ರಹಣ ಶಕ್ತಿ ಅಗತ್ಯ.

 

ಹಕ್ಕಿಗಳ ಬದುಕಿನ ಹರಹು ವಿಶಾಲವಾಗಿದ್ದರೂ ಭೌಗೋಳಿಕ ವ್ಯಾಪ್ತಿಗೆ ಅನುಗುಣವಾಗಿ ಅವುಗಳ ಅಸ್ತಿತ್ವವನ್ನು ಗುರುತಿಸಲು ಸಾಧ್ಯವಿದೆ. ಆದರೆ ಅವುಗಳ ಸೂಕ್ಷ್ಮ ಅಧ್ಯಯನ ಸುಲಭವಲ್ಲ. ಅದನ್ನು ಸವಾಲಾಗಿ ತೆಗೆದುಕೊಂಡು ಕರಾವಳಿಯ ದಕ್ಷಿಣ ಭಾಗದಲ್ಲಿನ ಹಕ್ಕಿಗಳ ಜಾಡು ಹಿಡಿದ ಡಾ. ಪ್ರಭಾಕರ ಆಚಾರ್ ಮತ್ತು ಶಿವಶಂಕರ್ ಅವರ ಎದುರು ಪಕ್ಷಿಗಳ ಬದುಕಿನ ವಿಸ್ಮಯಗಳು ತೆರೆದುಕೊಂಡವು. ಅವು ಕ್ಯಾಮೆರಾದಲ್ಲಿ ಸೆರೆಯಾದವು. ಅಕ್ಷರಗಳ ರೂಪದಲ್ಲಿ ಜೀವತಳೆದವು. ಅದರ ಪ್ರತಿಫಲವೇ `ಕರ್ನಾಟಕ ದಕ್ಷಿಣ ಕರಾವಳಿಯ ಹಕ್ಕಿಗಳು~ ಪುಸ್ತಕ.ಈ ಕೃತಿ ಕರ್ನಾಟಕದಲ್ಲಿನ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸೀಮಿತ ಎಂದು ಅನಿಸಿದರೂ ಪಕ್ಷಿಗಳ ಬದುಕು ಅಲ್ಲಿಗೆ ಸೀಮಿತವಲ್ಲ. ಇದು ಆ ಭಾಗದಲ್ಲಿ ಸಾಮಾನ್ಯವಾಗಿ ಕಂಡುಬರುವ ಪಕ್ಷಿಗಳ ಅಧ್ಯಯನ, ವಿವರಣೆ, ಅವುಗಳ ಜೀವನ ಕ್ರಮವನ್ನು ಸ್ಥೂಲವಾಗಿ ತೆರೆದಿಡುವ ಪ್ರಯತ್ನ ಎಂದು ಕರೆಯಬಹುದು.

 

ಒಂದೇ ಪುಸ್ತಕದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಮಾಹಿತಿ ನೀಡಿರುವುದು ಇದರ ವಿಶೇಷ. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ಪಕ್ಷಿ ವೀಕ್ಷಣೆ ಹೆಚ್ಚು ಜನಪ್ರಿಯವಾಗುತ್ತಿದೆ ಎನ್ನುವುದು ಲೇಖಕರಾದ ಡಾ. ಪ್ರಭಾಕರ ಆಚಾರ್ ಮತ್ತು ಶಿವಶಂಕರ್ ಅವರ ಅಭಿಪ್ರಾಯ.ಅದರಲ್ಲೂ ಈ ಪ್ರದೇಶಕ್ಕೆ ಪಕ್ಷಿ ವೀಕ್ಷಣೆಗಾಗಿ ಭೇಟಿ ನೀಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಮುನ್ನುಡಿಯಲ್ಲಿ ದಾಖಲಿಸಿರುವ ಅವರು ಪಕ್ಷಿ ವೀಕ್ಷಕರಿಗೆ ಅತ್ಯಗತ್ಯವಾದ ಕೈಪಿಡಿಯೊಂದನ್ನು ಈ ಕೃತಿ ರೂಪದಲ್ಲಿ ನೀಡಿದ್ದಾರೆ.ಇದರಲ್ಲಿ ಪ್ರಸ್ತಾವನೆ, ಪಕ್ಷಿ ಜೀವನ, ಪಕ್ಷಿ ವೀಕ್ಷಣೆ, ಪಕ್ಷಿಗಳ ವಲಸೆ, ಹಕ್ಕಿಗಳಲ್ಲಿ ಸಂತಾನೋತ್ಪತ್ತಿ ಮತ್ತು ಗೂಡುಕಟ್ಟುವಿಕೆ ಎಂಬ ಐದು ಅಧ್ಯಾಯಗಳು ಸಂಕ್ಷಿಪ್ತವಾಗಿ ಮತ್ತು ಅಧಿಕೃತವಾಗಿ ವಿವರ ನೀಡುತ್ತವೆ.

 

ಪಕ್ಷಿ ವೀಕ್ಷಕರಿಗೆ ಇನ್ನೂ ಹೆಚ್ಚಿನ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕದ ದಕ್ಷಿಣ ಕರಾವಳಿಯ ಹಕ್ಕಿಗಳ ಸಾರಾಂಶ ಮತ್ತು ಕರ್ನಾಟಕದ ದಕ್ಷಿಣ ಕರಾವಳಿಯ ಹಕ್ಕಿಗಳ ತಾಳೆಪಟ್ಟಿ ಎಂಬ ಎರಡು ಅಧ್ಯಾಯಗಳು ಹಕ್ಕಿಗಳ ಹೆಸರಿನೊಂದಿಗೆ, ಅವುಗಳ ಆಹಾರ-ವಿಹಾರ ಮಾಹಿತಿಯನ್ನು ನೀಡಿದ್ದಾರೆ.

 

ಹವ್ಯಾಸಿ ಪಕ್ಷಿ ವೀಕ್ಷಕರಿಗೆ ಮಾತ್ರವಲ್ಲದೆ ಈ ಕೃತಿಯಲ್ಲಿ ಅಧ್ಯಯನಶೀಲ ಸಂಶೋಧಕರಿಗೂ ನೆರವಾಗಬಲ್ಲ ಉಪಯುಕ್ತ ವಿವರಗಳಿವೆ. ಸಾಮಾನ್ಯವಾಗಿ ನಾವು ಕರಾವಳಿ ಪ್ರದೇಶದಲ್ಲಿ ನಿತ್ಯ ನೋಡುವ ಪಕ್ಷಿಗಳಾಗಿದ್ದರೂ ಗರಿಷ್ಠ 50 ಪಕ್ಷಿಗಳನ್ನು ನಿಖರವಾಗಿ ಗುರುತಿಸಬಹುದೇನೋ.

ಅಪ್ಪಟ ಪರಿಸರವಾದಿ ಜೀವಶಾಸ್ತ್ರಜ್ಞರಾಗಿರುವ ಡಾ. ಪ್ರಭಾಕರ ಆಚಾರ್ ಅವರು ಪಕ್ಷಿಗಳ ಸೂಕ್ಷ್ಮ ಸಂವೇದನೆಯ ಚಲನವಲನವನ್ನು ದಾಖಲಿಸಿರುವುದು ಸುಮಾರು 389 ಪಕ್ಷಿ ಕುಟುಂಬದ್ದು.ಪಕ್ಷಿಗಳನ್ನು ಗಮನಿಸಿದ್ದರೂ ನಮಗೆ ಅವುಗಳ ಸೂಕ್ಷ್ಮ ಪರಿಚಯವಿರುವುದಿಲ್ಲ. ಮಕ್ಕಳನ್ನು ಬೆರಗುಗೊಳಿಸುವ ರೆಕ್ಕೆ ಬಣ್ಣ, ಕಲರವ, ಕೊಕ್ಕಿನ ವಿಶೇಷತೆ, ಬಾಲ... ಜೀವವೈವಿಧ್ಯದ ವನ, ನದಿ ತೀರ, ಬೆಟ್ಟ-ಬಯಲು ಪ್ರದೇಶಗಳಿಗನುಗುಣವಾಗಿ ಗುರುತಿಸಬಹುದಾಗಿದೆ.

ಪಕ್ಷಿಗಳ ವೀಕ್ಷಣೆಗೆ ಸೂಕ್ತ ಕಾಲ, ದುರ್ಬೀನು ಬಳಕೆ, ಛಾಯಾಗ್ರಹಣಕ್ಕೆ ಸೂಕ್ತ ಮಸೂರವಿರುವ ಕ್ಯಾಮೆರಾ ವಿವರ, ಆವಾಸ ಸ್ಥಾನ-ಗೂಡುಗಳ ವೈಶಿಷ್ಟ್ಯದ ಬಗ್ಗೆ ಈ ಕೃತಿ ಮಾಹಿತಿ ನೀಡುತ್ತದೆ.ಸಾಗರದ ಹಕ್ಕಿಗಳು, ಕಡಲ ಬಾತುಗಳು, ನೀರು ಕಾಗೆಗಳು, ಹಾವಕ್ಕಿಗಳು, ಕೊಕ್ಕರೆ, ಕೆಂಬರಲು, ಹದ್ದು... ಹೀಗೆ ನಾನಾ ಕುಟುಂಬ/ಉಪಕುಟುಂಬಗಳ ಪಟ್ಟಿಯಲ್ಲಿ ವಿವಿಧ ಪ್ರಭೇದಗಳ ಹೆಸರನ್ನು ಸೂಚಿಸಲಾಗಿದೆ.

 

ಪಕ್ಷಿಗಳ ವರ್ಣಚಿತ್ರ ಮತ್ತು ಅವುಗಳ ವಿವರಗಳನ್ನು ನೀಡಲು ಹಲವು ಪುಟಗಳನ್ನು ಮೀಸಲಿಡಲಾಗಿದೆ. ಪಕ್ಷಿ ವೀಕ್ಷಣೆಗೆ ಅಗತ್ಯವಾದ ತಯಾರಿ, ಅಧ್ಯಯನ ಹಕ್ಕಿಗಳ ಚಲನವಲನಗಳನ್ನು ತಿಳಿಯಲು ಅತ್ಯವಶ್ಯಕ ಎಂಬುದನ್ನು ಕೃತಿಕಾರರು ಹೇಳಿದ್ದಾರೆ. ಪಕ್ಷಿ ಸಂಕುಲದ ವಿವರ ತಿಳಿಯಲು ಸಸ್ಯ ಸಂಕುಲದ ಪರಿಚಯವೂ ಅಗತ್ಯ ಎಂಬುದನ್ನೂ ತಿಳಿಸಿದ್ದಾರೆ.“ಉಪ್ಪು ನೀರಿನ ಜಲರಾಶಿ ಮತ್ತು ಗುಡ್ಡಕಾಡುಗಳಿಂದ ರಮಣೀಯವಾಗಿ ಕಂಗೊಳಿಸುವ ಸಹ್ಯಾದ್ರಿಯ ನಡುವೆ ಸಿಕ್ಕಿಕೊಂಡಿರುವ ಈ ಭೂ ಪ್ರದೇಶವು ನಿಜವಾಗಿಯೂ ಪಕ್ಷಿಗಳಿಗೆ ಸ್ವರ್ಗದಂತಿದೆ...

ಇಲ್ಲಿನ ಜೀವಪರಿಸರವು ವೈವಿಧ್ಯದಿಂದ ಕೂಡಿದ್ದು, ಕಡಲತೀರ, ಹಿನ್ನೀರು, ಅಳಿವೆ, ನದಿತೀರ, ಮಳೆಕಾಡು, ಕುರುಚಲು ಕಾಡು, ಶೋಲಾ ಕಾಡು, ಗುಡ್ಡಬೆಟ್ಟ ಮುಂತಾದ ವಿಶಿಷ್ಟ ಜೈವಿಕ ಭೌಗೋಳಿಕ ತಾಣಗಳು ಭಾರತದ ಪಶ್ಚಿಮ ಮೊಗಸಾಲೆಯಂತಿರುವ ಕರಾವಳಿಯನ್ನು ಶ್ರೀಮಂತಗೊಳಿಸಿದೆ” ಎಂದು ಪ್ರಕೃತಿ ವಿಜ್ಞಾನಿ, ಪಕ್ಷಿಶಾಸ್ತ್ರಜ್ಞ, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಪ್ರೊ. ಅರುಣಾಚಲಂ ಕುಮಾರ್ ಮುನ್ನುಡಿಯಲ್ಲಿ ಕೃತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಪುಸ್ತಕ ರಚನೆ ಸುಲಭದ್ದೇನಲ್ಲ. ಅಧಿಕೃತ ಮಾಹಿತಿಯನ್ನು ನಿರಂತರ ಅಧ್ಯಯನದಿಂದಲೇ ಸಂಪಾದಿಸಬೇಕು. ಹಲವಾರು ಪಕ್ಷಿತಜ್ಞರೊಂದಿಗೆ ಸಮಾಲೋಚಿಸಬೇಕಾಗುತ್ತದೆ.ಅರಣ್ಯ ಪ್ರದೇಶದೊಳಗೆ ಪ್ರವೇಶಿಸಲು ಅನುಮತಿ ಪಡೆಯಬೇಕು. ಅನೇಕ ಅಡೆತಡೆಗಳಿದ್ದರೂ ಶಿವಶಂಕರ್ ಉತ್ತಮ ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದಾರೆ. ತೀರಾ ಸಂಕೋಚದ ಸ್ವಭಾವದ, ನಿಗರ್ವಿ, ಸ್ನೇಹಭಾವ ವ್ಯಕ್ತಿತ್ವ ಅವರದು.

 

ಹಕ್ಕಿಗಳ ಜಾಡು ಹಿಡಿದು ದುರ್ಗಮ ಪ್ರದೇಶಗಳಲ್ಲಿ ಇಬ್ಬರೂ ಅಲೆದಾಡಿದ್ದಾರೆ. ಡಾ. ಪ್ರಭಾಕರ ಆಚಾರ್ ಅವರ ಜ್ಞಾನ ಸಂಪತ್ತು ಮತ್ತು ಶಿವಶಂಕರ್ ಅವರ ಛಾಯಾಗ್ರಹಣ ಕೌಶಲ್ಯದಿಂದ ಈ ಕೃತಿ ಅಪೂರ್ವ ದಾಖಲಾತಿಯಾಗಿ ಮೂಡಿಬಂದಿದೆ.ಡಾ.ಕೆ ಪ್ರಭಾಕರ ಆಚಾರ್
ಡಾ. ಕೆ. ಪ್ರಭಾಕರ ಆಚಾರ್ ಅವರು ಕಾರ್ಕಳದ ಶ್ರೀ ಭುವನೇಂದ್ರ ಕಲಾವಿಜ್ಞಾನ ಕಾಲೇಜಿನ ನಿವೃತ್ತ ಜೀವಶಾಸ್ತ್ರ ಅಧ್ಯಾಪಕರು ಹಾಗೂ ಲೇಖಕರು. ಜೀವ ವೈವಿಧ್ಯದ ಬಗ್ಗೆ ಅವರಿಗೆ ಅಪಾರ ಆಸಕ್ತಿ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಹ ಸಂಶೋಧಕರಾಗಿ ಮತ್ತು ಉಡುಪಿ ಜಿಲ್ಲೆಯ ವನ್ಯಜೀವಿ ವಿಭಾಗದ ಗೌರವಾನ್ವಿತ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದ್ದಾರೆ. ಸದಾ ಚೈತನ್ಯಶೀಲ, ವಿಶಿಷ್ಟ ಸಾಮರ್ಥ್ಯದ ವ್ಯಕ್ತಿತ್ವದವರಾದ ಅವರು ತಮ್ಮ ಜೀವಮಾನದಲ್ಲಿ ಅಧ್ಯಾಪನ ಮತ್ತು ಕ್ಷೇತ್ರಾನುಭವದಿಂದ ಗಳಿಸಿದ ಅಪಾರ ಜ್ಞಾನವನ್ನು ಬಳಸಿಕೊಂಡು ಈ ಅಪರೂಪದ ಕೃತಿ ರಚನೆಯಲ್ಲಿ ತೊಡಗಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry