ಸೋಮವಾರ, ಮೇ 17, 2021
26 °C

ಪುಸ್ತಕ ಕೊರತೆ; ಬಾರದ ಸಮವಸ್ತ್ರ!

ಗಣೇಶ ಚಂದನಶಿವ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಶಾಲೆಗಳು ಆರಂಭಗೊಂಡು 20 ದಿನ ಕಳೆದರೂ ಅಗತ್ಯದಷ್ಟು ಪಠ್ಯಪುಸ್ತಕ ಪೂರೈಕೆಯಾಗಿಲ್ಲ. ಪ್ರಸಕ್ತ ಸಾಲಿನ ಸಮವಸ್ತ್ರಗಳಂತೂ ಬಂದೇ ಇಲ್ಲ. ಪಠ್ಯಪುಸ್ತಕ ಕೊರತೆಯಿಂದ ಕಲಿಕೆಗೆ ತೊಂದರೆಯಾಗುತ್ತಿದ್ದರೆ, ಸಮವಸ್ತ್ರ ಬರದಿರುವುದರಿಂದ ಶಾಲೆಗಳಲ್ಲಿ `ಏಕರೂಪತೆ' ಕಂಡು ಬರುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.`ಒಟ್ಟು ಬೇಡಿಕೆಯಲ್ಲಿ ಶೇ.81ರಷ್ಟು ಪಠ್ಯ ಪುಸ್ತಕಗಳು ಪೂರೈಕೆಯಾಗಿವೆ. 6ನೇ ತರಗತಿಯ ಹಿಂದಿ ತೃತೀಯ ಭಾಷೆ, ಸಮಾಜ, ಕನ್ನಡ, ವಿಜ್ಞಾನ, ಗಣಿತ ಹಾಗೂ 9ನೇ ತರಗತಿಯ ಕನ್ನಡ, ಸಮಾಜ ವಿಜ್ಞಾನ, ಇಂಗ್ಲಿಷ್ ಮತ್ತು ಉರ್ದು ಮಾಧ್ಯಮದವರಿಗೆ ಪೂರೈಸಬೇಕಿರುವ ಕನ್ನಡ ದ್ವಿತೀಯ ಭಾಷೆಯ ಪಠ್ಯಪುಸ್ತಕ ಇನ್ನೂ ಬಂದಿಲ್ಲ' ಎಂದು ಶಿಕ್ಷಣ ಇಲಾಖೆ ಒಪ್ಪಿಕೊಳ್ಳುತ್ತದೆ.ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಪಠ್ಯ ಪುಸ್ತಕ ಗಳನ್ನು ಸರ್ಕಾರವೇ ಪೂರೈಸುತ್ತದೆ.`ನಾವು ಫೆಬ್ರುವರಿ-ಮಾರ್ಚ್ ತಿಂಗಳಲ್ಲಿಯೇ ನಮಗೆ ಬೇಕಿರುವ ಪುಸ್ತಕಗಳ ಬೇಡಿಕೆ ಸಲ್ಲಿಸಿದ್ದೇವೆ. ಆದರೂ, 6 ತರಗತಿಯ ಎಲ್ಲ ಹಾಗೂ ಮತ್ತು 9ನೇ ತರಗತಿಯ ಕೆಲ ಪಠ್ಯಪುಸ್ತಕಗಳು ಪೂರೈಕೆಯಾಗಿಲ್ಲ. ಪಾಲಕರು ನಿತ್ಯವೂ ಬಂದು ತಕರಾರು ತೆಗೆಯುತ್ತಿದ್ದು, ಅವರಿಗೆ ಉತ್ತರಿಸುವುದೇ ಕಷ್ಟವಾಗಿದೆ' ಎನ್ನುತ್ತಾರೆ ನಗರದ ಕೆಲ ಖಾಸಗಿ ಶಾಲೆಗಳ ಶಿಕ್ಷಕರು.`ಈ ಪಠ್ಯ ಪುಸ್ತಕಗಳು ಮುಕ್ತ ಮಾರುಕಟ್ಟೆಯಲ್ಲಿಯೂ ದೊರೆಯುವುದಿಲ್ಲ. ಹಣ ಪಡೆದರೂ ಪುಸ್ತಕ ಏಕೆ ಕೊಟ್ಟಿಲ್ಲ? ಶಾಲೆಗಳು ಆರಂಭಗೊಂಡು 20 ದಿನವಾಯಿತು. ಇನ್ನೂ ಪುಸ್ತಕಗಳನ್ನೇ ಕೊಡದ ನೀವು, ಇನ್ನು ನಮ್ಮ ಮಕ್ಕಳಿಗೆ ಅದು ಹೇಗೆ ಪಾಠ ಮಾಡುತ್ತೀರಿ? ಎಂದು ಕೆಲ ಪಾಲಕರು ಜಗಳ ಮಾಡುತ್ತಿದ್ದಾರೆ. ನಮ್ಮದಲ್ಲದ ತಪ್ಪಿಗೆ ಈ ಕಿರಿಕಿರಿ ಅನುಭವಿಸಬೇಕಾಗಿ ಬಂದಿದೆ' ಎಂಬುದು ಅವರ ಅಳಲು.29.52 ಲಕ್ಷ ಬೇಡಿಕೆ: ಜಿಲ್ಲೆಯ ಪಠ್ಯ ಪುಸ್ತಕಗಳ ಬೇಡಿಕೆ 29,52,793 ಇದ್ದು, ಅದರಲ್ಲಿ 23,88,303 (ಶೇ.81) ಪುಸ್ತಕಗಳು ಬಂದಿವೆ. ಈ ಪುಸ್ತಕಗಳು ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬರುತ್ತಿದ್ದು, ಅವರು ಶಾಲೆಗಳಿಗೆ ವಿತರಿಸುತ್ತಿದ್ದಾರೆ ಎನ್ನುವುದು ಸಾರ್ವಜನಿಕ ಶಿಕ್ಷಣ ಇಲಾಖೆಯವರ ವಿವರಣೆ.`ಸಿಬಿಎಸ್‌ಇ ಪಠ್ಯಕ್ರಮದ ಅನುಸಾರ ಈ ವರ್ಷ 6 ಮತ್ತು 9ನೇ ತರಗತಿಯ ಪಠ್ಯಪುಸ್ತಕಗಳು ಬದಲಾಗಿವೆ. ಹೀಗಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. 6ನೇ ತರಗತಿಯ ಎರಡನೇ ಸೆಮಿಸ್ಟರ್ ಪಠ್ಯಪುಸ್ತಕಗಳು ಬಂದಿದ್ದು, ಒಂದನೇ ಸೆಮಿಸ್ಟರ್‌ನ ಪುಸ್ತಕಗಳು ಬರಬೇಕಿದೆ. ನಮ್ಮ ಜಿಲ್ಲೆಯಲ್ಲಿ ಅಷ್ಟೇ ಅಲ್ಲ, ಇದು ರಾಜ್ಯವ್ಯಾಪಿ ಇರುವ ಸಮಸ್ಯೆ' ಎಂಬುದು ಅವರ ಸಮಜಾಯಿಷಿ.`ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಉಚಿತ ಪಠ್ಯಪುಸ್ತಕ ಪೂರೈಸುತ್ತೇವೆ. ಖಾಸಗಿ ಶಾಲೆಗಳಿಂದ ಮೊದಲು ಬೇಡಿಕೆಯನ್ನಷ್ಟೇ ಪಡೆಯಲಾಗಿದೆ. ಪಠ್ಯಪುಸ್ತಕ ಪಡೆಯುವಾಗ ಅವರಿಂದ ಡಿಡಿ ಪಡೆದುಕೊಳ್ಳಲಾಗುತ್ತಿದೆ' ಎನ್ನುತ್ತಾರೆ ಅವರು.ಕಿರಿದಾದ ಬಟ್ಟೆ: `ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಕಳೆದ ಸಾಲಿನಲ್ಲಿ ಮಕ್ಕಳಿಗೆ ಎರಡನೇ ಜೊತೆ ಸಮಸ್ತ್ರ ವಿತರಿಸಲು ನಿರ್ಧರಿಸಲಾಗಿತ್ತು. ಆ ಯೋಜನೆಯಲ್ಲಿ ಪೂರೈಕೆಯಾಗಿರುವ ಬಟ್ಟೆಗಳನ್ನು ಈಗ ಮಕ್ಕಳಿಗೆ ವಿತರಿಸಲಾಗುತ್ತಿದೆ. ಆದರೆ, ಗುತ್ತಿಗೆದಾರರೇ ಈ ಬಟ್ಟೆಗಳನ್ನು ತುಂಡರಿಸಿ ಕೊಟ್ಟಿದ್ದಾರೆ. ಸ್ವಲ್ಪ ಎತ್ತರ ಮತ್ತು ದಪ್ಪಗಿರುವ ಮಕ್ಕಳಿಗೆ ಈ ಬಟ್ಟೆಗಳು ಕಿರಿದಾಗುತ್ತಿದ್ದು, ಇದು ಹೊಸ ಸಮಸ್ಯೆ ಹುಟ್ಟುಹಾಕಿದೆ' ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಒಲ್ಲದ ಶಿಕ್ಷಕರು.

ಬಾರದ ಸಮವಸ್ತ್ರ: 1ರಿಂದ 10ನೇ ತರಗತಿಯ ಮಕ್ಕಳಿಗೆ ಸರ್ಕಾರ ಉಚಿತವಾಗಿ ಬಟ್ಟೆ ಪೂರೈಸುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದ ಸಮವಸ್ತ್ರ ಜಿಲ್ಲೆಗೆ ಇನ್ನೂ ಪೂರೈಕೆ ಆಗಿಯೇ ಇಲ್ಲ.ಜಿಲ್ಲೆಯಲ್ಲಿ ಅಂದಾಜು 12 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ತಲಾ ಎರಡು ಜೊತೆಯಂತೆ ಅಂದಾಜು 24 ಲಕ್ಷ ಸಮಸ್ತ್ರದ ಅವಶ್ಯಕತೆ ಇದೆ ಎಂದು ಎರಡು ತಿಂಗಳ ಹಿಂದೆಯೇ ಕೋರಿಕೆ ಸಲ್ಲಿಸಲಾಗಿದೆ. ಟೆಂಡರ್ ಆಗಿದ್ದು, ಜಿಲ್ಲೆಯಲ್ಲಿ ಇನ್ನೂ ಸಮವಸ್ತ್ರ ಪೂರೈಕೆಯಾಗಿಲ್ಲ. ತರಗತಿವಾರು ಬೇಡಿಕೆ, ಪೂರೈಕೆ, ವಿತರಣೆ, ಉಳಿಕೆ ಮತ್ತು ಕೊರತೆಯ ಮಾಹಿತಿ ನೀಡುವಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದು ಸೂಚಿಸಲಾಗಿದೆ. ಈ ಕುರಿತು ಇದೇ 24ರಂದು ಡಿಡಿಪಿಐ ಅವರ ನೇತೃತ್ವದಲ್ಲಿ ಸಭೆಯನ್ನೂ ಕರೆಯಲಾಗಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು.`ಸರ್ಕಾರ ಬಟ್ಟೆ ಮತ್ತು ಹೊಲಿಗೆ ವೆಚ್ಚ ನೀಡಲಿದೆ. ಆದರೆ, ಪ್ರಸಕ್ತ ಶೈಕ್ಷಣಿಕ ವರ್ಷದ ಸಮವಸ್ತ್ರ ಇನ್ನೂ ಬಂದಿಲ್ಲ. ಬಟ್ಟೆ ಮತ್ತು ಹೊಲಿಗೆ ವೆಚ್ಚ ಪಡೆದುಕೊಂಡು, ಸಮವಸ್ತ್ರ ಹೊಲಿಸಿ ಕೊಡುವಷ್ಟರಲ್ಲಿ ಮೊದಲ ಸೆಮಿಸ್ಟರ್ ಮುಗಿದು ಹೋಗಿರುತ್ತದೆ' ಎನ್ನುತ್ತಾರೆ ಕೆಲ ಪಾಲಕರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.