ಪುಸ್ತಕ ದಾನಿಯ ಹಳ್ಳಿ ಗ್ರಂಥಾಲಯ

7

ಪುಸ್ತಕ ದಾನಿಯ ಹಳ್ಳಿ ಗ್ರಂಥಾಲಯ

Published:
Updated:

ನಗರಗಳ ಬಡಾವಣೆಗಳಲ್ಲಿ ಗ್ರಂಥಾಲಯಗಳು ಇರುತ್ತವೆ. ಖಾಸಗಿ ವಾಚನಾಲಯಗಳಿಗೂ ಬರವಿಲ್ಲ. ಆದರೆ ಗ್ರಾಮಾಂತರದಲ್ಲಿ ವಾಚನಾಲಯ ಅಪರೂಪ. ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಇವೆ. ಗ್ರಾಮ ಪಂಚಾಯತ್‌ಗಳಲ್ಲೂ ಈಗೀಗ ಬರತೊಡಗಿವೆ. ಆದರೆ ಅದರ ಪ್ರಯೋಜನ ಹಳ್ಳಿಮೂಲೆಯಲ್ಲಿ ಇರುವ ಮಂದಿಗೆ ಸಿಗುವ ಸಾಧ್ಯತೆ ಕಡಿಮೆ.ಈ ವಾಸ್ತವವನ್ನು ಕಂಡುಕೊಂಡ ನಗರದ ಪುಸ್ತಕ ಪ್ರೇಮಿಯೊಬ್ಬರು ಹಳ್ಳಿ ಹಳ್ಳಿಗೆ ಉಚಿತವಾಗಿ ಪುಸ್ತಕ ವಿತರಿಸಿ ವಾಚನಾಲಯ ಸ್ಥಾಪಿಸುವ ಪ್ರೇರಣೆ ನೀಡಿ ಗ್ರಾಮೀಣರ ಜ್ಞಾನದಾಹ ನೀಗಿಸುವ ಮಹತ್ವದ ಕೆಲಸ ಕೈಗೊಂಡಿದ್ದಾರೆ. ಅವರೇ ವಿಜಯನಗರದ ಅತ್ತಿಗುಪ್ಪೆಯಲ್ಲಿರುವ ಯೂನಿವರ್ಸಲ್ ಚಾರಿಟೆಬಲ್ ಸೆಂಟರ್‌ನ ಟ್ರಸ್ಟಿ ಆರ್. ಉಪೇಂದ್ರ ಶೆಟ್ಟಿ.ಗ್ರಾಮ ಪಂಚಾಯತ್ ಕೇಂದ್ರ ಸ್ಥಳವಲ್ಲದ, ತೀರಾ ಹಿಂದುಳಿದ ಪ್ರದೇಶಗಳನ್ನು ಆಯ್ದುಕೊಂಡು ಅಲ್ಲಿಗೆ ಉಚಿತವಾಗಿ ಪುಸ್ತಕ ಕಳುಹಿಸಿಕೊಡುವುದು ಅವರು ಹಾಕಿಕೊಂಡಿರುವ ಕಾರ್ಯಕ್ರಮದ ಪ್ರಮುಖ ಅಂಶ. ಸದ್ಯ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಜಿಲ್ಲೆಗಳ 20 ಹಳ್ಳಿಗಳನ್ನು ಆರಿಸಿಕೊಂಡಿದ್ದಾರೆ. ಇದರ ಮೊದಲ ಹಂತವಾಗಿ 10 ಹಳ್ಳಿಗಳಿಗೆ ಪುಸ್ತಕ ವಿತರಿಸುವ ಕಾರ್ಯ ಮಂಗಳವಾರ ನಡೆಯಲಿದೆ.‘ಗುರುತಿಸಿದ ಹಳ್ಳಿಗಳಲ್ಲಿ ಆಸಕ್ತರನ್ನು ಒಳಗೊಂಡ ವಾಚನಾಲಯ ಸಮಿತಿ ರಚಿಸಲಾಗಿದೆ. ಅವರೇ ಗ್ರಂಥಾಲಯ ನಿರ್ಮಾಣಕ್ಕೆ ಕಟ್ಟಡ ನಿಗದಿಪಡಿಸಿದ್ದಾರೆ. ಒಂದೊಂದು ಗ್ರಂಥಾಲಯಕ್ಕೆ ಎರಡರಿಂದ ಎರಡೂವರೆ ಸಾವಿರ ಪುಸ್ತಕ ನೀಡಲಾಗುತ್ತದೆ. ವರ್ಷಕ್ಕೆ ಎರಡು ಬಾರಿ ಪುಸ್ತಕವನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂದು ನಾವು ಸಮೀಕ್ಷೆ ನಡೆಸುತ್ತೇವೆ. ಅದರ ಹೊರತಾಗಿ ಎಲ್ಲಾ ನಿರ್ವಹಣೆಯೂ ಹಳ್ಳಿಯ ಸಮಿತಿಯದ್ದು. 2013ರ ಹೊತ್ತಿಗೆ 100 ಹಳ್ಳಿಗಳಿಗೆ ಪುಸ್ತಕಗಳನ್ನು ನೀಡಿ ವಾಚನಾಲಯ ತೆರೆಯುವ ಗುರಿ ನಮ್ಮದು’ ಎನ್ನುತ್ತಾರೆ ಉಪೇಂದ್ರ ಶೆಟ್ಟಿ.ಈ ಮಹಾನ್ ಯೋಜನೆಗಾಗಿ ಅವರಾಗಲೀ, ಅವರ ಟ್ರಸ್ಟ್ ಆಗಲೀ ಹೆಚ್ಚು ದುಡ್ಡನ್ನೇನೂ ವ್ಯಯಿಸುತ್ತಿಲ್ಲ. ಅದೆಷ್ಟೋ ಮನೆಗಳಲ್ಲಿ ಇರುವ ಪುಸ್ತಕಗಳನ್ನು ರದ್ದಿಗೆ ಹಾಕುತ್ತಾರೆ, ಇಂತಹ ಪುಸ್ತಕಗಳನ್ನು ಇವರು ಕೆಲ ತಿಂಗಳಿಂದ ಸಂಗ್ರಹಿಸುತ್ತ ಬಂದಿದ್ದಾರೆ. ಹೀಗೆ 17 ಸಾವಿರ ಪುಸ್ತಕಗಳು ಸಂಗ್ರಹಿಸಿದ್ದಾರೆ. ಅದರಲ್ಲಿ ಕಾದಂಬರಿ, ಕತೆ ಸೇರಿದಂತೆ ಹಲವು ಪ್ರಕಾರಗಳ ಪುಸ್ತಕಗಳು ಮತ್ತು ಮಕ್ಕಳು, ಮಹಿಳೆಯರಿಗೆ ಪ್ರಿಯವಾಗುವಂತಹ ಪುಸ್ತಕಗಳೂ ಸೇರಿವೆ.ಗ್ರಂಥಾಲಯಗಳು ಆರಂಭವಾದ ಬಳಿಕ ಅವುಗಳಿಗೆ ಇನ್ನಷ್ಟು ಪುಸ್ತಕಗಳನ್ನು ನೀಡುವುದಾಗಿ ಈಗಾಗಲೇ ಹಲವು ಸಾಹಿತಿಗಳು, ಕವಿಗಳು ಮತ್ತು ಪುಸ್ತಕ ಪ್ರೇಮಿಗಳು ಭರವಸೆ ಕೊಟ್ಟಿದ್ದಾರೆ. ಪ್ರಕಾಶಕರೂ ತಮ್ಮ ಕಾಣಿಕೆ ನೀಡುವ ಆಸಕ್ತಿ ತೋರಿಸಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಸಿದ್ದಲಿಂಗಯ್ಯ ಅವರು ಇಂತಹ ಪ್ರತಿ ಹಳ್ಳಿ ಗ್ರಂಥಾಲಯಕ್ಕೂ ತಲಾ 500 ಪುಸ್ತಕಗಳನ್ನು ನೀಡುವ ಆಶ್ವಾಸನೆ ನೀಡಿದ್ದಾರೆ.ಇದಕ್ಕಿಂತ ದೊಡ್ಡ ಖುಷಿಯ ಮಾತು ಇನ್ನೇನಿರಲು ಸಾಧ್ಯ?’ಟ್ರಸ್ಟ್‌ನ ಈ ಮಹಾನ್ ಕಾರ್ಯದಲ್ಲಿ ಕೈಜೊಡಿಸಲು ಆಸಕ್ತಿ ಇರುವವರು ಖಂಡಿತ ದುಡ್ಡು ನೀಡುವ ಅಗತ್ಯ ಇಲ್ಲ. ಬದಲಿಗೆ ಯಾವುದೇ ಪ್ರಕಾಶನ ಸಂಸ್ಥೆಗೆ ದುಡ್ಡು ನೀಡಿ ಪುಸ್ತಕ ಖರೀದಿಸಿ ಟ್ರಸ್ಟ್‌ಗೆ ನೀಡಿದರೆ ಅದನ್ನು ಹಳ್ಳಿ ಹಳ್ಳಿಗೆ ತಲುಪಿಸುವ, ಆ ಮೂಲಕ ಜನರ ಜ್ಞಾನ ದಾಹವನ್ನು ನೀಗಿಸುವ ಕಾರ್ಯವನ್ನು ನಾವು ಮಾಡುತ್ತೇವೆ. ಇಲ್ಲಿ ಹಣದ ವ್ಯವಹಾರ ಇಲ್ಲ, ಹೀಗಾಗಿ ಹಣ ಸಂಬಂಧಿತ ಯಾವುದೇ ತಕರಾರೂ ಇರುವುದಿಲ್ಲ. ಗ್ರಾಮೀಣರ ಬಾಳಲ್ಲಿ ಜ್ಞಾನದ ಬೆಳಕು ನೀಡುವ ಕೆಲಸಕ್ಕೆ ಇನ್ನಷ್ಟು ಬೆಂಬಲ ಬೇಕು’ ಎಂದು ಉಪೇಂದ್ರ ಶೆಟ್ಟಿ ಹೇಳುತ್ತಾರೆ.ಮಾಹಿತಿಗೆ ಅವರನ್ನು 98455 12051 ಇಲ್ಲಿ ಸಂಪರ್ಕಿಸಬಹುದು.ಯೂನಿವರ್ಸಲ್ ಚಾರಿಟೇಬಲ್ ಸೆಂಟರ್: ಮಂಗಳವಾರ ಸಚಿವ ಎ.ನಾರಾಯಣ ಸ್ವಾಮಿ ಅವರಿಂದ ಗ್ರಾಮ ಗ್ರಂಥಾಲಯ ಪುಸ್ತಕ ವಿತರಣೆ, ಅತಿಥಿಗಳು: ಎನ್. ದಯಾನಂದ, ಗುರುರಾಜ್, ರವಿಶಂಕರ್ ಶೆಟ್ಟಿ, ಡಾ. ವಿಜಯಲಕ್ಷ್ಮಿ, ಶುರಿಲ್ ಜೈನ್, ಮಹಿಮಾ ಪಟೇಲ್. ಸ್ಥಳ: ಯವನಿಕ, ನೃಪತುಂಗ ರಸ್ತೆ.  ಸಂಜೆ 6.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry