ಪುಸ್ತಕ ಮೇಳಕ್ಕೆ ಶಿಕ್ಷಕರು: ಭರ್ಜರಿ ಖರೀದಿ

7

ಪುಸ್ತಕ ಮೇಳಕ್ಕೆ ಶಿಕ್ಷಕರು: ಭರ್ಜರಿ ಖರೀದಿ

Published:
Updated:

ಯಾದಗಿರಿ: ಶಾಲೆಗಳಲ್ಲಿ ಮಕ್ಕಳಿಗೆ ಹೆಚ್ಚಿನ ಜ್ಞಾನ ನೀಡುವ ನಿಟ್ಟಿನಲ್ಲಿ ಪುಸ್ತಕಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಶಾಲೆಗಳಿಗೆ ನೇರವಾಗಿ ಅನುದಾನ ಒದಗಿಸುವ ಮೂಲಕ ಪುಸ್ತಕಗಳ ಖರೀದಿಗೆ ಅನುವು ಮಾಡಿಕೊಡಲಾಗಿದೆ. ಹಾಗಂತ ಶಿಕ್ಷಕರು ಪುಸ್ತಕಗಳ ಮಳಿಗೆ ಹುಡುಕಿಕೊಂಡು ಹೋಗಬೇಕಿಲ್ಲ. ಅದಕ್ಕಾಗಿಯೇ ಪುಸ್ತಕ ಮೇಳವನ್ನು ಆಯೋಜಿಸಿದೆ.ನಗರದ ಚಿರಂಜೀವಿ ಪ್ರೌಢಶಾಲೆಯ ಆವರಣದಲ್ಲಿ ಮೂರು ದಿನಗಳ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಪುಸ್ತಕ ಮೇಳವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ವ ಶಿಕ್ಷಣ ಅಭಿಯಾನಗಳ ಆಶ್ರಯದಲ್ಲಿ ಮೂರು ದಿನಗಳ ಕಾಲ ಪುಸ್ತಕ ಮೇಳವನ್ನು ಹಮ್ಮಿಕೊಂಡಿದೆ.ಬೆಂಗಳೂರು, ಮೈಸೂರು, ಹೊಸಕೇರಿ, ಗದಗ, ಗುಲ್ಬರ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 80 ಕ್ಕೂ ಹೆಚ್ಚು ಮಳಿಗೆಗಳು ಬಂದಿದ್ದು, ವಿವಿಧ ರೀತಿಯ ಪುಸ್ತಕಗಳ ಮಾರಾಟ ಆಗುತ್ತಿದೆ. ಮೂರು ದಿನ ನಡೆಯುವ ಈ ಪುಸ್ತಕ ಮೇಳದಲ್ಲಿ ಸುರಪುರ, ಶಹಾಪುರ ಮತ್ತು ಯಾದಗಿರಿ ತಾಲ್ಲೂಕಿನ ಶಾಲಾ ಶಿಕ್ಷಕರಿಗೆ ಒಂದೊಂದು ದಿನ ನಿಗದಿ ಪಡಿಸಲಾಗಿದ್ದು, ಆಯಾ ದಿನದಂದು ಆಯಾ ತಾಲ್ಲೂಕುಗಳ ಶಾಲಾ ಮುಖ್ಯಾಧ್ಯಾಪಕರು ಮೇಳಕ್ಕೆ ಬಂದು ಖರೀದಿ ಮಾಡುತ್ತಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯ 948 ಶಾಲೆಗಳಿಗೆ ಪುಸ್ತಕ ಖರೀದಿಗಾಗಿ ರೂ. 60 ಲಕ್ಷ ಅನುದಾನ ಒದಗಿಸಿದೆ. ಕಿರಿಯ ಪ್ರಾಥಮಿಕ ಶಾಲೆಗಳಿಗೆ ರೂ. 3,000, ಹಿರಿಯ ಪ್ರಾಥಮಿಕ ಶಾಲೆಗಳಿಗೆ ರೂ. 7,500 ಮತ್ತು ಪ್ರೌಢಶಾಲೆಗಳಿಗೆ ರೂ. 13 ಸಾವಿರ ಒದಗಿಸಲಾಗಿದೆ.ಪುಸ್ತಕ ಮಳಿಗೆಯಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯಕವಾದ ಮಾಹಿತಿಯ ಪುಸ್ತಕಗಳ ಜೊತೆಗೆ ರಾಮಾಯಣ, ಮಹಾಭಾರತ, ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಕೃತಿಗಳು, ಸಾಮಾನ್ಯ ಜ್ಞಾನಗಳ ಮತ್ತು ವೇದ ಪುರಾಣಗಳ ಗ್ರಂಥಗಳು ಮಾರಾಟ ಮಳಿಗೆಯಲ್ಲಿ ಲಭ್ಯವಾಗಿವೆ. ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ವೀಕ್ಷಣೆ ಮಾಡಿ ಪುಸ್ತಕಗಳ ಖರೀದಿಯಲ್ಲಿ ತೊಡಗಿದ್ದಾರೆ.“ಏನ್ರಿ ಇಲ್ಲಿ 75-80 ಸ್ಟಾಲ್ ಅದಾವು. ನಮಗ ಬೇಕಾದ ಪುಸ್ತಕ ಖರೀದಿ ಮಾಡಬೇಕಂದ್ರ, ಎಲ್ಲ ಸ್ಟಾಲ್ ತಿರಗಾಡಬೇಕ್ರಿ. ಬುಕ್ ಖರೀದಿಗಂತ ಇವತ್ತ ಇಲ್ಲಿಗೆ ಬಂದೇವ ನೋಡ್ರಿ. ಆದ್ರು ಪುಸ್ತಕ ಭಾಳ ಛೋಲೋ ಅದಾವ್ರಿ. ಶೇ.20 ರಿಯಾಯಿತಿ ಕೊಡ್ಲಾಕತ್ತಾರ. ನಮ್ಮ ಸಾಲಿಗೂ ಇಂತಿಷ್ಟ ಅನುದಾನ ಕೊಟ್ಟಾರ. ಅದ್ರಾಗ ಪುಸ್ತಕ ತಗೊಂಡ ಹೋಗತೇವ್ರಿ. ಮಕ್ಕಳಿಗೆ ಓದಾಕ ನಾಕ ಒಳ್ಳೆ ಬುಕ್ ಕೊಟ್ಟಂಗ ಆಗತೈತಿ” ಎಂದು ಶಾಲಾ ಮುಖ್ಯಾಧ್ಯಾಪಕರೊಬ್ಬರು ತಮ್ಮ ಅನಿಸಿಕೆ ಹಂಚಿಕೊಂಡರು.ಇನ್ನು ಶಾಲಾ ವಿದ್ಯಾರ್ಥಿಗಳು ಪುಸ್ತಕ ಮೇಳಕ್ಕೆ ಭೇಟಿ ನೀಡುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ಕಥೆ, ಕವನ, ನಾಟಕ, ಇತಿಹಾಸ, ಪೌರಾಣಿಕ ಹೀಗೆ ಹತ್ತು ಹಲವು ಬಗೆಯ ಪುಸ್ತಕಗಳ ಪುಟಗಳನ್ನು ತೆರೆದು ನೋಡುತ್ತಿದ್ದಾರೆ. ಒಳ್ಳೆಯ ಪುಸ್ತಕಗಳನ್ನು ಆಯ್ಕೆ ಮಾಡುವಲ್ಲಿ ಶಿಕ್ಷಕರಿಗೂ ನೆರವಾಗುತ್ತಿದ್ದಾರೆ.“ಭಾಳ ಪುಸ್ತಕ ಬಂದಾವ್ರಿ. ಓದಾಕ ನಮಗೂ ಇಂಟರೆಸ್ಟ್ ಐತಿ. ಹಿಂಗಾಗಿ ನಮ್ಮ ಹೆಡ್ ಮಾಸ್ಟರ್ ಕೂಡ ನಾವು ಈ ಮೇಳಕ್ಕ ಬಂದೇವ್ರಿ. ನಾನಾ ನಮೂನಿ ಬುಕ್ ಅದಾವ ಬಿಡ್ರಿ. ನಾನು ಎಲ್ಲಾ ಸ್ಟಾಲಿಗೂ ಹೋಗಿ ಬಂದೇನ್ರಿ. ಮೈಸೂರು, ಬೆಂಗಳೂರು, ದಾವಣಗೆರೆ, ಗುಲ್ಬರ್ಗದಿಂದ ಪುಸ್ತಕ ಮಾರಾಟಕ್ಕ ಬಂದಾರ. ಇಂಥಾ ಮೇಳ ವರ್ಷಕ್ಕೊಮ್ಮೆ ಆದ್ರು ಇಡಬೇಕ್ರಿ. ನಮಗೂ ಒಂದ ದಿನಾ ಇಲ್ಲಿಗೆ ಬರಾಕ ಅವಕಾಶ ಕೊಡಬೇಕ ನೋಡ್ರಿ” ಎಂದು ವಿದ್ಯಾರ್ಥಿ ಶರಣಪ್ಪ ಹೇಳುತ್ತಾರೆ.ಚಿಕ್ಕ ಜಿಲ್ಲೆಯಾದರೂ ಹೆಚ್ಚಿನ ಸಂಖ್ಯೆಯ ಪ್ರಕಾಶನ ಸಂಸ್ಥೆಗಳು ಇಲ್ಲಿಗೆ ಬಂದಿದ್ದು, 80ಕ್ಕೂ ಹೆಚ್ಚು ಸಂಸ್ಥೆಗಳು ಮಾರಾಟ ಮಾಡುತ್ತಿವೆ. ಶಿಕ್ಷಣ ಇಲಾಖೆಯಿಂದ ಮಳಿಗೆಯ ವ್ಯವಸ್ಥೆ, ಹೊರಗಿನಿಂದ ಬಂದ ಪ್ರಕಾಶಕರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಸರ್ವ ಶಿಕ್ಷಣ ಆಧಿಕಾರಿ ಉಪ ಸಮನ್ವಯಾಧಿಕಾರಿ ಇನಾಯತ್-ಉರ್-ರೆಹಮಾನ್ ಶಿಂಧೆ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry