ಪುಸ್ತಕ ಸ್ನೇಹಿ ಕು.ಗೋ.

7

ಪುಸ್ತಕ ಸ್ನೇಹಿ ಕು.ಗೋ.

Published:
Updated:
ಪುಸ್ತಕ ಸ್ನೇಹಿ ಕು.ಗೋ.

ಎಂಬತ್ತರ ಹೊಸಿತಲಲ್ಲಿರುವ ಉಡುಪಿಯ ಹೆರ್ಗ ಗೋಪಾಲಭಟ್ಟ (ಜ: 1938) ಅವರ ಮನೆಯ ಹೆಸರು `ವಾಗ್ದೇವಿ~. ಅವರ ಪುಸ್ತಕಪ್ರೀತಿಯೇ ಮನೆಯ ರೂಪದಲ್ಲಿ ಮೈದಳೆದಂತಿದೆ. ಇಷ್ಟವಾದ ಪುಸ್ತಕಗಳನ್ನು ತರಿಸಿಕೊಂಡು ಪರಿಚಿತರು, ಗೆಳೆಯರಿಗೆ ತಲುಪಿಸುವ ಭಟ್ಟರು ಸಹೃದಯರ ನಡುವೆ ಕು.ಗೋ ಎಂದೇ ಪರಿಚಿತರು. ಈ ಹೆಸರಿನಲ್ಲೂ ಒಂದು ಸ್ವಾರಸ್ಯವಿದೆ. `ಕು~ ಎನ್ನುವುದು ಕುಸುಮ ಎನ್ನುವ ಭಟ್ಟರ ತರುಣ ದಿನಗಳ ಪ್ರೇಮಿಯ ಹೆಸರು. ಪ್ರೇಮ ಕೈಗೂಡಲಿಲ್ಲ, ಪುಸ್ತಕಪ್ರೀತಿ ಕೈಬಿಡಲಿಲ್ಲ.

ಎಲ್ಲಿ ಸಮ್ಮೇಳನವಾದರೂ, ಪುಸ್ತಕಮೇಳವಾದರೂ ಹಾಜರಿ ಹಾಕುವ ಕು.ಗೋ. ವಿದ್ಯಾರ್ಥಿಗಳಿಗೆ ಹಾಗೂ ಪುಸ್ತಕ ಕೊಳ್ಳಲು ಸಾಧ್ಯವಾಗದವರಿಗೆ ಉಚಿತವಾಗಿ ಪುಸ್ತಕ ಕೊಡುವುದೂ ಇದೆ. ತಮಗಿಷ್ಟವಾದ ಪುಸ್ತಕಗಳನ್ನು ಪುಸ್ತಕಪ್ರಿಯರಿಗೆ ಅಂಚೆ ಮೂಲಕ ಸ್ವಯಂಪ್ರೇರಣೆಯಿಂದ ಕಳಿಸುವುದಿದೆ. ತಮ್ಮ `ವಾಗ್ದೇವಿ ಪ್ರಕಾಶನ~ದ ವೇದಿಕೆಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ಮನೆ ಮನೆಯಲ್ಲಿ ಸಾಹಿತ್ಯ ಕಾರ್ಯಕ್ರಮ ನಡೆಸುವುದರಲ್ಲಿ ಅವರಿಗೆ ತಾರುಣ್ಯ ಮರುಕಳಿಸಿದಷ್ಟು ಹುಮ್ಮಸ್ಸು. ಜೀವವಿಮಾ ಕಂಪನಿಯಲ್ಲಿ ಮೂರೂವರೆ ದಶಕ ದುಡಿದು ಹೊರಬಂದಿರುವ ಅವರಿಗೀಗ ಪುಸ್ತಕ ಪರಿಚಾರಿಕೆಯೇ ದೈನಿಕ. ಕು.ಗೋ. ಬರಹಗಾರರು ಕೂಡ. ಅವರ ಚುಟುಕು, ಹಾಸ್ಯ ಬರಹಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. `ಲೊಳಲೊಳಾಯಿ~, `ತೇಲುನೋಟ~, `ಅಕ್ಕನ ಮದುವೆ~, `ಶನಿ ಹಿಡಿದವ~, `ಪಟ ಪಟ ಪಟಾಕಿ~ ಅವರ ಕೆಲವು ಕೃತಿಗಳು. ಅವರ ಪುಸ್ತಕಗಳ ಹಿಂಬದಿ ರಕ್ಷಾಪುಟದಲ್ಲಿ ಹೊಸ ತಲೆಮಾರಿನ ಲೇಖಕರ ದೊಡ್ಡದೊಂದು ಪಟ್ಟಿಯೇ ಇರುತ್ತದೆ. ಈ ಲೇಖಕರ ಕೃತಿಗಳನ್ನೂ ಓದಿ ಎನ್ನುವುದು ಕು.ಗೊ. ಅವರ ಅರಿಕೆ.

 

ಹೆಗಲಚೀಲದಲ್ಲಿ ಸದಾ ಪುಸ್ತಕಗಳನ್ನು ಹೊತ್ತೊಯ್ಯುವ ಕು.ಗೋ. ಸ್ನೇಹಜೀವಿ. ಅವರಿದ್ದಲ್ಲಿ ಸಹೃದಯರ ಗುಂಪು ಇರಲೇಬೇಕು, ನಗೆಚಟಾಕಿ ಸಿಡಿಯಲೇಬೇಕು. ಈಚೆಗೆ ಹೃದಯಾಘಾತಕ್ಕೆ ತುತ್ತಾಗಿ ಮಂಕಾಗಿದ್ದ ಕು.ಗೋ. ಇದೀಗ ಚೇತರಿಸಿಕೊಂಡಿದ್ದಾರೆ. ಪುಸ್ತಕಪ್ರೀತಿ ಮುಂದುವರೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry