ಪೂಜಾರಿಯವರ ಸೋನಿಯಾ ಭಕ್ತಿ ಪರಾಕಾಷ್ಠೆ!

7

ಪೂಜಾರಿಯವರ ಸೋನಿಯಾ ಭಕ್ತಿ ಪರಾಕಾಷ್ಠೆ!

Published:
Updated:
ಪೂಜಾರಿಯವರ ಸೋನಿಯಾ ಭಕ್ತಿ ಪರಾಕಾಷ್ಠೆ!

 `ಸಾಲಮೇಳ~ದ ಮೂಲಕ ರಾಜ್ಯ-ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ, ಇಂದಿರಾ ಗಾಂಧಿ ಕುಟುಂಬದ `ಆಪ್ತ~ ಎಂದೇ ಕರೆಸಿಕೊಂಡ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಜನಾರ್ದನ ಪೂಜಾರಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

 

ರಾಜಕೀಯ ವಲಯದಲ್ಲಿ ಯಾವುದೇ ವಿಷಯ ಚರ್ಚೆಗೆ ಗ್ರಾಸವಾಗುತ್ತಲೇ, ಇತ್ತ ಸುದ್ದಿಗೋಷ್ಠಿಯ ಮೂಲಕ ತಮ್ಮದೇ `ಶೈಲಿ~ಯ ವಾಕ್ಚಾತುರ್ಯದಲ್ಲಿ ಅಂತಹ ಚರ್ಚೆಗಳಿಗೆ ಒಂದಷ್ಟು ಗುದ್ದು ನೀಡುವವರು ಪೂಜಾರಿ.ಇದೀಗ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆರೋಗ್ಯ ಸುಧಾರಿಸಲಿ ಎಂದು ಹಾರೈಸಿ `ವಿಶಿಷ್ಟ~ ರೀತಿಯಲ್ಲಿ ಪ್ರಾರ್ಥಿಸುವ ಮೂಲಕ ತಾನು `ಗಾಂಧಿ ಕುಟುಂಬ~ಕ್ಕೆ ಅದೆಷ್ಟು ನಿಷ್ಠ; ಇತರರಿಗಿಂತ ತಾನೆಷ್ಟು `ಭಿನ್ನ~ ಎಂದು ತೋರಿಸಿಕೊಟ್ಟಿದ್ದಾರೆ.

 

ಪೂಜಾರಿ ಮೆರೆದ ಈ `ಭಕ್ತಿಯ ಪರಾಕಾಷ್ಠೆ~ ರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ, ಅಲ್ಲಿನ ರಾಜಕೀಯ ವಲಯದಲ್ಲೂ ತಣ್ಣನೆಯ ಸಂಚಲನ ಉಂಟಾಗಿದೆಯಂತೆ!`ಸೋನಿಯಾ ಅವರು ಶೀಘ್ರ ಗುಣಮುಖರಾಗಲಿ~ ಎಂದು ಭಕ್ತಿಯಿಂದ ಪ್ರಾರ್ಥಿಸಿ, ತಾವೇ ಮುಂದಾಳುತ್ವ ವಹಿಸಿ ನವೀಕರಣಗೊಳಿಸಿದ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರನ ಸನ್ನಿಧಿಯಲ್ಲಿ ಮೊನ್ನೆ ಪೂಜಾರಿ ತಮ್ಮ ಪಕ್ಷ ಪರಿವಾರದ ಜತೆ ವಿಶೇಷ ಪೂಜೆ, ಶತ ರುದ್ರಾಭಿಷೇಕ, ಬ್ರಹ್ಮರಥೋತ್ಸವ, ಉರುಳು ಸೇವೆ ಮಾಡಿದರು.ಕುದ್ರೋಳಿ ಗೋಕರ್ಣನಾಥೇಶ್ವರ ಮತ್ತು ಕ್ಷೇತ್ರದ ಇತರ ಪರಿವಾರ ದೈವ- ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ, ಬ್ರಹ್ಮರಥೋತ್ಸವ ಹಾಗೂ ಉರುಳು ಸೇವೆ ನಡೆಯಿತು. ಜನಾರ್ದನ ಪೂಜಾರಿ ಜತೆ ಶಾಸಕ ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ನಂಜುಂಡಿ, ಕಾರ್ಯದರ್ಶಿ ಐವನ್ ಡಿ ಸೋಜ ಸಹಿತ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಹರಿಕೃಷ್ಣ ಬಂಟ್ವಾಳ್, ಬೊಂಡಾಲ ಜಗನ್ನಾಥ ಶೆಟ್ಟಿ, ಡೆನಿಸ್ ಡಿಸಿಲ್ವ ಸೇರಿದಂತೆ 17 ಮಂದಿ ಸನ್ನಿಧಿಯ ಅಂಗಳದಲ್ಲಿ ಭಕ್ತಿ ಭಾವುಕತೆಯಿಂದ `ಉರುಳು ಸೇವೆ~ಗೆ ಸಾಥ್ ನೀಡಿದರು. ಈ ನೆಪದಲ್ಲಿ ಕ್ಷೇತ್ರದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.`ಬಡವ, ಬಲ್ಲಿದರೆಂಬ ಭೇದಭಾವ ಇಲ್ಲದೆ ತಮ್ಮ ಜೀವನವನ್ನು ದೇಶ ಸೇವೆಗಾಗಿ  ಮುಡಿಪಾಗಿಟ್ಟವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ. ದೇಶಕ್ಕೆ ಸೋನಿಯಾ ಗಾಂಧಿ  ಅವರ ಅಗತ್ಯ ಬಹಳ ಇದೆ. ಅವರ ದೇಶಸೇವೆ ಹಾಗೂ ತ್ಯಾಗ ಮನೋಭಾವ ಮಾದರಿ.

ಅವರು ಭಾರತದ ಸಂಸ್ಕೃತಿ ಎತ್ತಿ ಹಿಡಿದಿದ್ದಾರೆ. ಅವರ ಸೇವೆ ಬಡವರಿಗೆ ಹಾಗೂ ಎಲ್ಲ ವರ್ಗದ ಜನರಿಗೆ ಇನ್ನೂ ಸಿಗಬೇಕು. ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸೋನಿಯಾಜಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ಶೀಘ್ರ ಆರೋಗ್ಯವಂತರನ್ನಾಗಿ ಮಾಡಬೇಕು ಎಂದು ಗೋಕರ್ಣನಾಥೇಶ್ವರ ಹಾಗೂ ಪರಿವಾರ ದೇವರುಗಳ ಮುಂದೆ ಸಂಕಲ್ಪ ಪ್ರಾರ್ಥನೆ ಮಾಡಿದ್ದೇನೆ~ ಎಂದು ಪೂಜಾರಿ ತಮ್ಮ `ದೈವ ನಂಬಿಕೆ~ಯನ್ನು ಸಮರ್ಥಿಸಿಕೊಂಡರು.

 

ಅಷ್ಟೇ ಅಲ್ಲ, `ಸೋನಿಯಾ ಗುಣಮುಖರಾಗಲು ಪ್ರಾರ್ಥಿಸಿ ಎಲ್ಲ ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಪ್ರಾರ್ಥನೆ ನಡೆಸಬೇಕು~ ಎಂದೂ ಕರೆಕೊಟ್ಟರು.

ಹಾಗೆ ನೋಡಿದರೆ, ಪೂಜಾರಿಯಿಂದ ಉರುಳು ಸೇವೆ ಇದೇ ಮೊದಲೇನೂ ಅಲ್ಲ.ಅವರೇ ಹೇಳಿಕೊಂಡಂತೆ, ಈ ಹಿಂದೆ ಡಾ.ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ ಸಂದರ್ಭದಲ್ಲಿ ಮೊದಲ ಬಾರಿ ಉರುಳು ಸೇವೆ ನಡೆಸಿದ್ದರಂತೆ. ಹಾಗೆಂದು, ಸ್ವಂತ ಪುತ್ರ ಅನಾರೋಗ್ಯಪೀಡಿತನಾಗಿದ್ದ ಸಂದರ್ಭದಲ್ಲೂ ಪೂಜಾರಿ ಉರುಳು ಸೇವೆ ಮಾಡಿ ಪ್ರಾರ್ಥಿಸಿಲ್ಲವಂತೆ. ಯಾಕೆಂದರೆ ಅದು ಪುತ್ರ ವ್ಯಾಮೋಹವಾಗುತ್ತದೆ; `ಸ್ವಾರ್ಥ~ವಾಗುತ್ತದೆ ಎನ್ನುವುದು ಪೂಜಾರಿ ಸಮಜಾಯಿಷಿ!ಯಾವುದೇ ದೇವಸ್ಥಾನ. ಮಸೀದಿ, ಚರ್ಚ್, ಗುರುದ್ವಾರವನ್ನು ಇಂದಿರಾ ಕುಟುಂಬಸ್ಥರು ಉದ್ಘಾಟಿಸಿದ್ದು ಇಲ್ಲವಂತೆ. ಆದರೆ ತಮ್ಮ ನೇತೃತ್ವದಲ್ಲಿ ನವೀಕರಣಗೊಂಡ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನವನ್ನು ರಾಜೀವ್ ಗಾಂಧಿ (1991ರಲ್ಲಿ ) ಉದ್ಘಾಟಿಸ್ದ್ದಿದಾರೆ. ಹೀಗಾಗಿ ಈ ದೇವಸ್ಥಾನಕ್ಕೂ ಇಂದಿರಾ ಗಾಂಧಿ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ~ ಎನ್ನುತ್ತಾರೆ ಪೂಜಾರಿ.ಈ ಹಿಂದೆ ಹಲವರು ಅನಾರೋಗ್ಯಕ್ಕೀಡಾದಾಗ ಗೋಕರ್ಣನಾಥನ ಬಳಿಗೆ ಬಂದು ಪ್ರಾರ್ಥಿಸಿದ್ದು, ಗುಣಮುಖರಾದ ನಿದರ್ಶನವಿದೆ. ಉದ್ಯಮಿಗಳಾದ ಕೆ.ಪಿ. ನಂಜುಂಡಿ, ಜಯ ಸಿ. ಸುವರ್ಣ ಮತ್ತಿತರರು ಅನಾರೋಗ್ಯವಾದಾಗಲೂ ಇಲ್ಲಿ ಪ್ರಾರ್ಥಿಸಿದ ಫಲವಾಗಿ ಶೀಘ್ರ ಗುಣಮುಖರಾಗಿದ್ದಾರೆ. ಗೋಕರ್ಣನಾಥನ ಅನುಗ್ರಹದಿಂದ ಸೋನಿಯಾ ಗುಣಮುಖರಾಗುತ್ತಾರೆ ಎಂಬ ವಿಶ್ವಾಸ ತಮ್ಮದು ಎಂದು ಭಾವುಕರಾಗುತ್ತಾರೆ ಪೂಜಾರಿ.ಸೋನಿಯಾ ಹಾರೈಕೆ ಬಯಸಿ ದಕ್ಷಿಣ ಅಜ್ಮೀರ್ ಎಂದೇ ಖ್ಯಾತಿ ಪಡೆದ, ಮುಸ್ಲಿಂ ಸಮುದಾಯ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಳ್ಳಾಲ ಸಯ್ಯದ್ ಮದನಿ ದರ್ಗಾದಲ್ಲೂ ಪೂಜಾರಿ ಪ್ರಾರ್ಥನೆ ಸಲ್ಲಿಸಿದ್ದು ಮತ್ತೊಂದು ವಿಶೇಷ!ಎಪ್ಪತ್ತೈದರ ಇಳಿವಯಸ್ಸಿನಲ್ಲಿರುವ ಪೂಜಾರಿ ಅವರ ಮಾತಿನಂತೆ ವ್ಯಕ್ತಿತ್ವವೂ ಆಕರ್ಷಕ. ಹಲವು ಸಂದರ್ಭಗಳಲ್ಲಿ ಅವರ ಅತಿಯಾದ ಮಾತು; ಖಾರದ ನುಡಿ ಮುಳುವಾಗಿದ್ದೂ ಇದೆ. ಅನುಕಂಪ ಸೃಷ್ಟಿಸಿದ್ದೂ ಇದೆ. ಇದೀಗ ಸೋನಿಯಾ ಪರ ಅವರ ನಿಷ್ಠೆ, ಭಕ್ತಿ ಅವರನ್ನು  ಮತ್ತೆ ಸುದ್ದಿಗೆ ಗ್ರಾಸವಾಗಿಸಿದೆ.`ಇದೀಗ ರಾಜಕೀಯವಾಗಿ ಸದ್ಯ ಪೂಜಾರಿ ಸದ್ಯ ಯಾವುದೇ ಉನ್ನತ ಹುದ್ದೆಯಲ್ಲಿ ಇಲ್ಲ. ಈ ಮೂಲಕವಾದರೂ ಸುದ್ದಿಯಲ್ಲಿರಬೇಕಲ್ಲಾ..~ಎನ್ನುವುದು ಪೂಜಾರಿ ವಿರೋಧಿಗಳ ಕೊಂಕು ನುಡಿ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry