ಪೂಜಾರಿ, ಎಚ್.ಕೆ.ಪಾಟೀಲ್‌ಗೆ ಕೊಕ್

7
ಪ್ರಣಾಳಿಕೆ ಅನುಷ್ಠಾನ ಸಮಿತಿ ಪುನರ್‌ರಚನೆ

ಪೂಜಾರಿ, ಎಚ್.ಕೆ.ಪಾಟೀಲ್‌ಗೆ ಕೊಕ್

Published:
Updated:

ನವದೆಹಲಿ: ಕರ್ನಾಟಕದ ಚುನಾವಣಾ ಪ್ರಣಾಳಿಕೆ ಅನುಷ್ಠಾನ ಸಮಿತಿಯನ್ನು ಪುನರ್‌ರಚಿಸಲಾಗಿದ್ದು, ಹಿರಿಯ ಮುಖಂಡ ಜನಾರ್ದನ ಪೂಜಾರಿ ಮತ್ತು ಸಚಿವ ಎಚ್.ಕೆ.ಪಾಟೀಲ್ ಅವರನ್ನು ಸದಸ್ಯತ್ವದಿಂದ ಕೈಬಿಡಲಾಗಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಂಗೀಕರಿಸಿರುವ ಹೊಸ ಸಮಿತಿಗೆ ಕೂಡ ಎ.ಕೆ.ಆಂಟನಿ ಅವರೇ ಅಧ್ಯಕ್ಷರಾಗಿ ಮುಂದುವರಿಯುವರು. ಪಕ್ಷದ ರಾಜ್ಯದ ವಿದ್ಯಮಾನಗಳ ಮೇಲ್ವಿಚಾರಕ ದಿಗ್ವಿಜಯ್ ಸಿಂಗ್, ಸಿಬ್ಬಂದಿ ಮತ್ತು ತರಬೇತಿ ಖಾತೆ ರಾಜ್ಯ ಸಚಿವ ವಿ.ನಾರಾಯಣ ಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಸಮಿತಿಯ ಸದಸ್ಯರಾಗಿದ್ದಾರೆ.

ಪೂಜಾರಿ ಮತ್ತು ಪಾಟೀಲ್ ಅವರ ಸದಸ್ಯತ್ವದಿಂದ ಕೈಬಿಡಲು ಕಾರಣವೇನು ಎಂಬುದು ಖಚಿತಪಟ್ಟಿಲ್ಲ. ಮೊದಲು ಸಮಿತಿಯಲ್ಲಿ ಏಳು ಸದಸ್ಯರನ್ನು ಹೊಂದಿರಬೇಕೆಂಬ ಅಭಿಪ್ರಾಯವಿತ್ತಾದರೂ ಅಂತಿಮವಾಗಿ ಐವರು ಸದಸ್ಯರನ್ನು ಮಾತ್ರ ಹೊಂದಲು ನಿರ್ಧರಿಸಲಾಯಿತು. ಹೀಗಾಗಿ ಇಬ್ಬರನ್ನು ಕೈಬಿಡಲಾಯಿತು ಎಂದು ಮುಖಂಡರು ತಿಳಿಸಿದ್ದಾರೆ.ಈ ಹಿಂದೆ ಕೂಡ ಹೈಕಮಾಂಡ್ ತನ್ನದೇ ಪಕ್ಷ ಅಧಿಕಾರದಲ್ಲಿರುವ ಐದು ರಾಜ್ಯಗಳಲ್ಲಿ ಈ ಸಮಿತಿಯ ಸದಸ್ಯತ್ವವನ್ನು 7ರಿಂದ 5ಕ್ಕೆ ಇಳಿಸಿ ಪುನರ್‌ರಚಿಸಿತ್ತು. ಆ ಸಂದರ್ಭಗಳಲ್ಲಿ ಕೂಡ ತಲಾ ಇಬ್ಬರನ್ನು ಸಮಿತಿಯಿಂದ ಬಿಡಲಾಗಿತ್ತು. ಇದರಲ್ಲಿ ವಿಶೇಷವೇನೂ ಇಲ್ಲ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು. ಇದಕ್ಕೆ ಮುನ್ನ ಹೈಕಮಾಂಡ್ ಕಳೆದ ತಿಂಗಳು ಪ್ರಕಟಿಸಿದ್ದ ಪ್ರಣಾಳಿಕೆ ಅನುಷ್ಠಾನ ಸಮಿತಿಯಲ್ಲಿ ಪೂಜಾರಿ ಮತ್ತು ಪಾಟೀಲ್ ಅವರು ಸೇರಿ ಏಳು ಜನ ಇದ್ದರು. ಚುನಾವಣೆ ವೇಳೆ ನೀಡಿದ ಎಲ್ಲಾ ವಾಗ್ದಾನಗಳು ಈಡೇರಿಕೆಯಾಗುವಂತೆ ನೋಡಿಕೊಳ್ಳುವುದು ಈ ಸಮಿತಿಯ ಹೊಣೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry