ಶುಕ್ರವಾರ, ಜನವರಿ 24, 2020
18 °C
ಆಸ್ಟ್ರೇಲಿಯಾದ ಮೈಕಲ್‌ ಕ್ಲಾರ್ಕ್‌ ಮಡಿಲಿಗೆ ಎರಡು ಪ್ರಶಸ್ತಿ, ಸಂಗಕ್ಕಾರ ‘ಅತ್ಯುತ್ತಮ ಏಕದಿನ ಆಟಗಾರ’

ಪೂಜಾರ ‘ವರ್ಷದ ಉದಯೋನ್ಮುಖ ಕ್ರಿಕೆಟಿಗ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ (ಪಿಟಿಐ/ಐಎಎನ್‌ಎಸ್‌): ಭಾರತದ ಟೆಸ್ಟ್‌ ಕ್ರಿಕೆಟ್‌ನ ಉದಯೋ ನ್ಮುಖ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ನೀಡುವ ‘ವರ್ಷದ ಉದಯೋನ್ಮುಖ ಆಟಗಾರ’ ಗೌರವಕ್ಕೆ ಭಾಜನರಾಗಿದ್ದಾರೆ. ‘ಸಾರ್ವಜನಿಕ ಆಯ್ಕೆ ಪ್ರಶಸ್ತಿ’  ನಾಯಕ ಮಹೇಂದ್ರ ಸಿಂಗ್‌ ದೋನಿ ಪಾಲಾಗಿದೆ.ಸೌರಾಷ್ಟ್ರದ ಪೂಜಾರ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗವಾಗಿ 1000 ರನ್‌ ಕಲೆ ಹಾಕಿದ ಸಾಧನೆ ಮಾಡಿದ್ದಾರೆ. ಇದೇ ವರ್ಷದ ಮಾರ್ಚ್‌ನಲ್ಲಿ     ಹೈದರಾಬಾದ್‌ನಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದರು. ಅಷ್ಟೇ ಅಲ್ಲದೇ ಮುರಳಿ ವಿಜಯ್‌ ಜೊತೆ ಎರಡನೇ ವಿಕೆಟ್‌ ಜೊತೆಯಾಟದಲ್ಲಿ ದಾಖಲೆಯ 370 ರನ್‌ ಕಲೆ ಹಾಕಿದ್ದರು.25 ವರ್ಷದ ಬಲಗೈ ಬ್ಯಾಟ್ಸ್‌ಮನ್‌ ಪೂಜಾರ 15 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 65.50ರ ಸರಾಸರಿಯಲ್ಲಿ ಒಟ್ಟು 1310 ರನ್‌ ಗಳಿಸಿದ್ದಾರೆ.  ಈ ಆಟಗಾರ ಪಡೆದ ಮೊದಲ ಐಸಿಸಿ ಪ್ರಶಸ್ತಿ  ಇದಾಗಿದೆ.ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್‌ ಕ್ಲಾರ್ಕ್‌ ಎರಡು ಗೌರವ ಗಳಿಗೆ ಪಾತ್ರರಾಗಿದ್ದಾರೆ. ‘ಸರ್‌ ಗ್ಯಾರಿ ಸೊಬರ್ಸ್‌ ಟ್ರೋಫಿ ವರ್ಷದ ಕ್ರಿಕೆಟಿಗ’ ಮತ್ತು ಐಸಿಸಿ ‘ವರ್ಷದ ಟೆಸ್ಟ್‌ ಆಟಗಾರ’ ಪ್ರಶಸ್ತಿಗಳು ಕ್ಲಾರ್ಕ್‌ ಅವರಿಗೆ ಲಭಿಸಿವೆ.ಆಸೀಸ್‌ನ ಮಾಜಿ ನಾಯಕ ರಿಕಿ ಪಾಂಟಿಂಗ್‌ 2006 ಮತ್ತು 2007 ರಲ್ಲಿ  ಗ್ಯಾರಿ ಸೊಬರ್ಸ್‌ ಪ್ರಶಸ್ತಿ ಪಡೆದಿದ್ದರು. ಪಾಂಟಿಂಗ್‌ 2006ರಲ್ಲಿ ‘ವರ್ಷದ ಟೆಸ್ಟ್‌ ಕ್ರಿಕೆಟಿಗ’ ಪ್ರಶಸ್ತಿ ಕೂಡಾ ಗಳಿಸಿದ್ದರು.ಗುಲ್‌ಗೂ ಗೌರವ: ದಕ್ಷಿಣ ಆಫ್ರಿಕಾ ಎದುರಿನ ಟ್ವೆಂಟಿ–20 ಪಂದ್ಯದಲ್ಲಿ ಆರು ರನ್‌ಗೆ ಐದು ವಿಕೆಟ್‌ ಪಡೆದಿದ್ದ ಪಾಕಿಸ್ತಾನದ ಬೌಲರ್‌ ಉಮರ್‌ ಗುಲ್‌ ‘ವರ್ಷದ ಟ್ವೆಂಟಿ–20 ಕ್ರಿಕೆಟಿಗ’ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.‘ಪ್ರಶಸ್ತಿಗೆ ಪಾತ್ರರಾದ ಎಲ್ಲರಿಗೂ ಅಭಿನಂದನೆಗಳು. ಇದು ಕ್ರಿಕೆಟ್‌ಗೆ ಅತ್ಯುತ್ತಮ ವರ್ಷ. ಎರಡು ಪ್ರಶಸ್ತಿ ಗಳನ್ನು ಪಡೆದಿರುವ ಮೈಕಲ್‌ ಕ್ಲಾರ್ಕ್‌ ಅವರಿಗೆ ವಿಶೇಷ ಅಭಿನಂದನೆ’ ಎಂದು ಐಸಿಸಿ ಅಧ್ಯಕ್ಷ ಅಲನ್‌ ಇಸಾಕ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)