ಪೂಜಾ ಕುಣಿತದ ಸವಿ ಸವಿಯುತಾ

7

ಪೂಜಾ ಕುಣಿತದ ಸವಿ ಸವಿಯುತಾ

Published:
Updated:
ಪೂಜಾ ಕುಣಿತದ ಸವಿ ಸವಿಯುತಾಜನಪದ ಕಲೆಯಲ್ಲಿನ ಒಂದು ಪ್ರಕಾರವಾದ ಪೂಜಾ ಕುಣಿತ ನೃತ್ಯ ಮತ್ತು ವೇಷಭೂಷಣಗಳಿಂದ ಸಭಿಕರ ಮನ ಗೆಲ್ಲುವ ದೇಸೀ ಕಲಾ ಪ್ರಕಾರ. ಪುಷ್ಪಾಲಂಕೃತ ಸುಮಾರು 30-40 ಕೆ.ಜಿ. ತೂಕದ ದೇವರ ಉತ್ಸವವನ್ನು ತಲೆಯಲ್ಲಿ ಹೊತ್ತು ಸಮತೋಲನದಿಂದ ಕಲಾವಿದರು ಕುಣಿಯಬೇಕು.ಸುತ್ತಲೂ ಡೊಳ್ಳು, ತಮಟೆಯ ಸದ್ದು. ಎದುರಿಗೆ ಪ್ರೇಕ್ಷಕರ ಮೆಚ್ಚುಗೆಯ ಚಪ್ಪಾಳೆ. ಇದರ ನಡುವೆಯೇ ದೇವರನ್ನು ಹೊತ್ತು ಬೀಳದಂತೆ ಸಮತೋಲನ ಕಾಯ್ದು ಕೊಳ್ಳುತ್ತಾ ಲೋಟ, ಮಡಿಕೆಯ ಮೇಲೇ ಹೆಜ್ಜೆ ಹಾಕುವುದು ಸರಾಗವಾದ ಕಾರ್ಯವೇನೂ ಅಲ್ಲ.ಸಾಮಾನ್ಯವಾಗಿ ಇದು ಪುರುಷರಿಗೆ ಮೀಸಲಾದ ಕಲೆ. ತೂಕವನ್ನು ಹೊತ್ತು ಗಂಟೆ ಕಾಲ ಪೂಜಾ ಕುಣಿತ ಮಾಡುವುದು ಮಹಿಳೆಯರಿಗೆ ಕಷ್ಟಕರ ಎಂಬುದು ಇದಕ್ಕೆ ಕಾರಣ. ಹಾಗೇನೂ ಇಲ್ಲ ಎಂಬುದನ್ನು ಇಲ್ಲೊಬ್ಬ ಮಹಿಳೆ ಸಾಧಿಸಿ ತೋರಿಸಿದ್ದಾರೆ.ಇವರು ಸವಿತಾ ಚಿರುಕುನ್ನಯ್ಯ. ಮಂಡ್ಯ ಜಿಲ್ಲೆಯ ತಳಗವಾದಿ ಗ್ರಾಮದ ನಿವಾಸಿ. ಪೂಜಾ ಕುಣಿತದ ಕಲೆ ಜನ್ಮತಃ ಬಂದ ಬಳುವಳಿ. ಕಳೆದ 14 ವರ್ಷದಿಂದ ಪೂಜಾಕುಣಿತದ ಸೇವೆಯಲ್ಲಿ ತೊಡಗಿರುವ ಕಲಾವಿದೆ. ಬಹುಶಃ ರಾಜ್ಯದಲ್ಲಿ ಪೂಜಾಕುಣಿತ ಕಲೆಯಲ್ಲಿ ತೊಡಗಿರುವ ಏಕೈಕ ಮಹಿಳೆ.ಪಿಯುಸಿವರೆಗೂ ಓದಿರುವ ಸವಿತಾ ಪೂಜಾ ಕುಣಿತದ ಅ, ಆ, ಇ, ಈ ಅನ್ನು ಕರಗತ ಮಾಡಿಕೊಂಡಿರುವ ಸುಶಿಕ್ಷಿತೆ. ಇತ್ತೀಚೆಗಷ್ಟೇ ರಾಜಸ್ತಾನದಲ್ಲಿ ನಡೆದ 16ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಜನಪದ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ 19 ಜನರ ತಂಡದ ಮಂಡ್ಯ ತಾಲ್ಲೂಕು ಕೆ.ವಿ.ಎಸ್.ಎಸ್. ಕಲಾ ಬಳಗದ ಏಕೈಕ ಸದಸ್ಯೆ.‘ಹೆಚ್ಚು ಓದಿಲ್ಲ ಎಂಬ ಬೇಸರವೇನೂ ನನಗೆ ಕಾಡಿಲ್ಲ. ಪೂಜಾ ಕುಣಿತ ನನಗೆ ಸಂತೋಷ, ಗೌರವ, ಹೆಸರು ಎಲ್ಲವನ್ನು ಕೊಟ್ಟಿದೆ’ ಎನ್ನುವ ಸವಿತಾ, ಕಲಾ ಮತ್ತು ಸಂಸಾರದ ನೊಗ ಎರಡನ್ನೂ ಒಟ್ಟಿಗೆ ಹೊರುವ ಮೂಲಕ ಸಮತೋಲನ ಕಾಯ್ದುಕೊಳ್ಳುತ್ತಿದ್ದಾರೆ. ಕಲೆಗೆ ಇನ್ನಿಲ್ಲದ ಪ್ರೋತ್ಸಾಹ ಕೊಡುತ್ತಿರುವ ಪತಿ, ಕೆ.ಎಂ.ದೊಡ್ಡಿಯಲ್ಲಿ ವ್ಯಾಪಾರ ನಡೆಸುವ ಪತಿ ರಾಜು ಅವರ ಬಗೆಗೆ ವಿಶೇಷ ಪ್ರೀತಿ.ಏನಪ್ಪಾ ಈ ಹುಡುಗಿ...!

‘ಚಿಕ್ಕಂದಿನಿಂದಲೇ ಪೂಜಾ ಕುಣಿತದತ್ತ ಆಕರ್ಷಿತಳಾಗಿದ್ದು, 10 ವರ್ಷ ಇದ್ದಾಗಲೇ ಕಲಾ ಪ್ರದರ್ಶನ ನೀಡಲು ಆರಂಭಿಸಿದೆ. ತಂದೆಯೂ ಪೂಜಾ ಕುಣಿತದ ಕಲಾವಿದರು. ಅಣ್ಣಂದಿರಿಗೆ ಮನೆಯ ಬಳಿ ಹೇಳಿ ಕೊಡುತ್ತಿದ್ದರು. ಜೊತೆಗೇ ನಾನು ಸೇರಿಕೊಂಡೆ. ಬಹುಬೇಗನೆ ಕಲಿತೂಕೊಂಡೆ. ಅದು, ಹೆಣ್ಣು ಮಕ್ಕಳನ್ನು ಮನೆಯ ಹೊರಗೇ ಕಳುಹಿಸಲಾಗದ ದಿನಗಳು. ನೋಡಿದವರೂ ಏನಪ್ಪಾ ಈ ಹುಡುಗಿ ಎಂದು ಮಾತನಾಡುತ್ತಿದ್ದರು. ಈಗ ಕಾಲ ಬದಲಾಗಿದೆ. ವಿವಿಧೆಡೆ ನನ್ನ ಪ್ರದರ್ಶನಗಳು ನೀಡಿದ ಬಳಿಕ ಅದೇ ಜನರು ‘ಏನಪ್ಪಾ ಈ ಹೆಣ್ಣು’ ಎಂದು ಮೆಚ್ಚುಗೆಯ ಮಾತನಾಡುತ್ತಿದ್ದಾರೆ’ ಎಂದು ಸ್ಮರಿಸುತ್ತಾರೆ.ಈವರೆಗೂ ಚೀನಾ, ಮುಂಬೈ, ದೆಹಲಿ, ಗೋವಾ, ಹೈದರಾಬಾದ್, ಚೆನ್ನೈ, ಗುಜರಾತ್, ಹರಿಯಾಣ ಅಲ್ಲದೇ ನಾಡಿನ ಪ್ರಸಿದ್ದ ಉತ್ಸವಗಳಾದ ಮೈಸೂರು ದಸರಾ, ಹಂಪಿ ಉತ್ಸವಗಳಲ್ಲೂ ಪ್ರದರ್ಶನ ನೀಡಿ ಭೇಷ್ ಎನಿಸಿಕೊಂಡಿದ್ದಾರೆ. ಸದ್ಯ, 15-20 ಯುವತಿಯರಿಗೆ ಪೂಜಾಕುಣಿತ ಕಲಿಸುತ್ತಿದ್ದಾರೆ.ತಂದೆ ಪೂಜಾ ಕುಣಿತದ ಕಲಾವಿದರೇ ಆಗಿದ್ದು, ಅಣ್ಣಂದಿರು ಮಾಡುತ್ತಿದ್ದುದು ಆ ಕಲೆಯತ್ತ ಆಕರ್ಷಿತಳಾಗಲು ಕಾರಣ. ‘ನಾನು ಗಂಡಸಿಗೆ ಸರಿಸಮವಾಗಿ ಈ ಕಲೆಯನ್ನು ನಿಭಾಯಿಸಬಲ್ಲೆ ಎಂಬುದು ನನಗೆ ಸಮಾಧಾನ ತರುವ ಸಂಗತಿ.ಕೆವಿಎಸ್‌ಎಸ್ ಕಲಾಬಳಗದಲ್ಲಿ ನಾನು ಏಕೈಕ ಮಹಿಳಾ ಸದಸ್ಯೆಯಾದರೂ ಉಳಿದ ಕಲಾವಿದರ ಪ್ರೋತ್ಸಾಹ ನಿರೀಕ್ಷೆಗೂ ಮೀರಿ ಚೆನ್ನಾಗಿದೆ. ಇನ್ನಷ್ಟು ಯಶಸ್ಸು ಸಾಧಿಸುವ ಉತ್ಸಾಹವೂ ಇದೆ’ ಎನ್ನುತ್ತಾರೆ.ಇದೆಲ್ಲದರ ನಡುವೆಯೂ ಇರುವ ಒಂದೇ ಬೇಸರದ ಸಂಗತಿ ಎಂದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಕಚೇರಿಯು ಯಾವುದೇ ಕಾರ್ಯಕ್ರಮಕ್ಕೂ ಆಹ್ವಾನ ನೀಡುವುದಿಲ್ಲ. ವಿವಿಧ ರಾಜ್ಯಗಳಲ್ಲಿ ಕಾರ್ಯಕ್ರಮ ನೀಡಿದ್ದೇನೆ.ಇಲಾಖೆಯ ಬೆಂಗಳೂರು ಕಚೇರಿಯವರೂ ಅವಕಾಶ ನೀಡುತ್ತಾರೆ. ಜಿಲ್ಲೆಯ ಅಧಿಕಾರಿಗಳು ಏಕೆ ನಿರ್ಲಕ್ಷಿಸುತ್ತಾರೆ ಎಂಬುದು ಅವರ ಪ್ರಶ್ನೆ. ಆದರೆ, ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧಿಸುವ ಗುರಿ ಇದೆ. ಆ ನಿಟ್ಟಿನತ್ತ ಈಗ ಗಮನಹರಿಸಿ ತೊಡಗಿಸಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ಸವಿತಾ. ಪುರುಷರಿಗೆ ಮೀಸಲು ಎನ್ನುವ ಪೂಜಾ ಕುಣಿತ ಕಲೆಗೂ ಸವಿತಾ ಅವರ ಪೂಜೆ ನಿರಂತರವಾಗಿ ಸಾಗಲಿ ಎಂದು ಆಶಿಸೋಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry