ಪೂಜಾ ಕೋಣೆ ಆಕರ್ಷಣೆ

7

ಪೂಜಾ ಕೋಣೆ ಆಕರ್ಷಣೆ

Published:
Updated:

ಮನೆ ಕಟ್ಟುವುದೆಂದಾಗ ಕುಟುಂಬದವರೆಲ್ಲಾ ತಮ್ಮ ತಮ್ಮ ಕೋಣೆಗಳ ಬಗ್ಗೆ ಒಲವು ತೋರುತ್ತಾರೆ. ಮನೆಯೊಡೆಯನಿಗೆ ಮಾತ್ರ, ಮನೆಗೆ ಬಂದ ತಕ್ಷಣ ಎಲ್ಲರ ಗಮನ ಸೆಳೆಯುವಂತಹ, ಜೀವಂತಿಕೆಯನ್ನು ಪ್ರತಿ ಬಿಂಬಿಸುವ ‘ಲಿವಿಂಗ್ ರೂಮ್’ ಬಗ್ಗೆ ಹೆಚ್ಚು ಕಾಳಜಿ. ಮನೆಯೊಡತಿಗಾದರೋ, ‘ತಮ್ಮ ಮನೆ ತನ್ನ ಗೆಳತಿಯರಿಗೆ ದೂರದಿಂದಲೇ ಆಕರ್ಷಕವಾಗಿ ಕಾಣಬೇಕು, ನೋಡಿದವರು ವಾಹ್ ಎನ್ನುವಷ್ಟು ಹೊರಗಿನಿಂದಲೂ ಸುಂದರವಾಗಿ ಕಾಣಬೇಕು’ ಎನ್ನುವ ಆಸೆ.ಮಕ್ಕಳಿಗೋ, ತಮ್ಮ ಕೋಣೆಗಳ ಬಗೆಗಷ್ಟೇ ಒಲವು. ಆದರೆ ಮನೆಯಲ್ಲಿನ ಹಿರಿಯ ಜೀವಗಳಿಗೆ ಮಾತ್ರ ‘ದೇವರ ಮನೆ’ ಬಗ್ಗೆ ವಿಶೇಷ ಆಸಕ್ತಿ. ಅವರಿಗಂತೂ, ‘ಈಗಿನ ಕಾಲದವರು ಮನೆ ಕಟ್ಟುವಾಗ ದೇವರ ಕೋಣೆ ಬಗ್ಗೆ ಮರೆತು ಬಿಡುತ್ತಾರೋ ಅಥವಾ ಅದನ್ನು ಕಡೆಗಣಿಸಿಯೇ ಬಿಡುತ್ತಾರೇನೋ’ ಎನ್ನುವ ಭಯ.ಕಾಲ ಏಷ್ಟೇ ಬದಲಾದರೂ ದೇವರ ಬಗ್ಗೆ ಉದಾಸೀನ ಮಾಡಲುಂಟೆ!

ಈಗಿನ ಆಧುನಿಕ ಮನೆಗಳಲ್ಲಿ ಇನ್ನೂ ಸುಂದರವಾದ ವಿಧ ವಿಧವಾದ, ನವ್ಯ ರೂಪಗಳಲ್ಲಿ ಕಂಗೊಳಿಸುವಂತೆ ವಿನ್ಯಾಸಕಾರರು ದೇವರ ಕೋಣೆ ರೂಪಿಸಿಕೊಡುತ್ತಾರೆ. ಅಪಾರ್ಟ್ ಮೆಂಟ್ ಆಗಿದ್ದರೂ, ಹಜಾರದಲ್ಲೇ ಗೋಡೆಗೆ ಆತುಕೊಂಡಿರುವಂತೆ ಸುಂದರ ಬೀರುವಿನಂತಹ ದೇವರ ಗೂಡು ಸಿದ್ಧವಾಗುತ್ತದೆ. ಜತೆಗೆ, ಅದರ ಬಾಗಿಲಿಗೆ ಹೊಳೆಯುವ ಹಿತ್ತಾಳೆ ಗಂಟೆಗಳು, ಚಿನ್ನದ ಬಣ್ಣದ ತೋರಣ, ಹಿಂಬದಿ ಗೋಡೆಗಂತೂ ಮಿನುಗುವಂತಹ ಬಣ್ಣ. ಒಟ್ಟಿನಲ್ಲಿ ಅಲಂಕಾರದಲ್ಲೇ ದೇವರ ದರ್ಶನವನ್ನು ಮಾಡಿಸಿ ಬಿಡುತ್ತಾರೆ.ಮನೆ ದೊಡ್ಡದಿದ್ದರಂತೂ ಇನ್ನಷ್ಟು ಸುಂದರ ವಿನ್ಯಾಸಗಳಲ್ಲಿ ನಿಮ್ಮ ಪೂಜಾ ಕೊಠಡಿ ಸಿದ್ಧವಾಗುತ್ತದೆ. ಹಿಂದೆಲ್ಲ, ಬಾಗಿಲು ಮಾತ್ರಾ ಗಾಜಿನದು ಮತ್ತು ಚೌಕಟ್ಟು ಸುಂದರ ಕೆತ್ತನೆಯ ಮರದಿಂದ ಕಂಗೊಳಿಸುತ್ತಿತ್ತು. ಆದರೆ ಈಗ ಪೂರ್ಣವಾಗಿ ಗಾಜಿನ ಪೂಜಾ ಕೋಣೆಯನ್ನೇ ನಿರ್ಮಿಸಲಾಗುತ್ತಿದೆ.ಗಾಜಿನ ಪೂಜಾ ಕೊಠಡಿ ಪಾರದರ್ಶಕವಾಗಿರುತ್ತದೆ. ಒಳಗೆ ಒಬ್ಬರೇ ಕುಳಿತು ಪೂಜೆ, ಆರತಿ ಮಾಡಿದರೂ ಹೊರಗೆ ಮೂರೂ ಬದಿಯಲ್ಲಿ ನಿಂತವರಿಗೆ ಪೂಜಾ ಕೈಂಕರ್ಯವೆಲ್ಲವೂ ಸ್ಪಷ್ಟವಾಗಿ ಗೋಚರಿಸುತ್ತದೆ.ಒಂದೊಮ್ಮೆ ಗಾಜಿನ ಪೂಜಾ ಕೊಠಡಿ ನಿರ್ವಹಣೆ ಕಷ್ಟ ಎನಿಸಿದರೆ ಹೊರಗಡೆಯಿಂದ ನೋಡಿದಾಗ ಕಾಣಿಸದಂತಹ (ಫರಾಸ್ಟ್ರೆಡ್ ಗ್ಲಾಸ್) ಬಳಸಬಹುದು. ಇವು ತಿಳಿಯಾದ ಬಣ್ಣದಿಂದ ಹಿಡಿದು ಎಲ್ಲ ಬಗೆಯ ಛಾಯೆ, ಬಣ್ಣಗಳಲ್ಲೂ ಲಭ್ಯವಿವೆ.ಇಲ್ಲವಾದಲ್ಲಿ ಗಾಜು ಮತ್ತು ಮರದ ಕಾಂಬಿನೇಷನ್‌ನಲ್ಲಿಯೂ ಪೂಜಾ ಕೋಣೆ ಕಟ್ಟಿಕೊಳ್ಳಬಹುದು. ಇದರಲ್ಲಿ ನಿಮ್ಮಲ್ಲಿರುವ ಕಲಾಭಿರುಚಿ ಮತ್ತು ಬುದ್ಧಿವಂತಿಕೆ ಬಳಸಿಕೊಂಡು ಅದ್ಭುತ ರೂಪದ ದೇವರ ಕೋಣೆ ವಿನ್ಯಾಸ ಮಾಡಿಕೊಳ್ಳಲೂ ಸಾಧ್ಯವಿದೆ.

ಒಟ್ಟಿನಲ್ಲಿ ದೇವರ ಮನೆ ನವ್ಯ ನವೀನ ರೂಪದಲ್ಲಿ ಸಿದ್ಧವಾಗುತ್ತದೆ.ವಿಶಿಷ್ಟ ದೇವರ ಕೋಣೆ

ಸುತ್ತಲೂ ನೀರು ಹರಿಯುವಂತೆ ಮಾಡಿ, ಮಧ್ಯದಲ್ಲಿ ದೇವರ ಮಂಟಪವನ್ನು ಇರಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಮತ್ತು ಕಾಸರಗೋಡಿನಲ್ಲಿ ಕಂಡುಬರುವ ದೇಗುಲುಗಳು ನೆನಪಾಗುತ್ತವೆ.ಪಿರಮಿಡ್ ಆಕಾರದಲ್ಲೂ ದೇವರ ಮನೆ ರೂಪಿಸಿದವರೂ ಇದ್ದಾರೆ. ಮೇಲೊಂದು ಹೊಳೆಯುವ ಹಿತ್ತಾಳೆಯ ಅಥವಾ ಬಣ್ಣ ಬಣ್ಣದ ಗಾಜಿನ ಗೋಪುರವನ್ನೂ ಮೂಡಿಸುತ್ತಾರೆ.ಹೆಂಚಿನ ಮನೆಯಾದರೆ, ಸೂರಿನಿಂದ ಸೂರ್ಯನ ಬೆಳಕು ನೇರವಾಗಿ ಬೀಳುವ ಅಂಗಳದಂತಹ ಸ್ಥಳದಲ್ಲೂ ದೇವರ ಕೋಣೆ ಕಟ್ಟಿಕೊಳ್ಳಬಹುದು.

ಒಂದು ಕಾಲದಲ್ಲಿ ಹೆಚ್ಚು ದೇವರ ವಿಗ್ರಹಗಳನ್ನಿರಿಸಿಕೊಂಡು ಅಲಂಕರಿಸುವುದೇ ಅಭ್ಯಾಸವಾಗಿದ್ದಿತು. ಈಗ ಹೆಚ್ಚಿನ ಮೂರ್ತಿಗಳನ್ನಿರಿಸಿ ಅವುಗಳನ್ನು ತೊಳೆಯುವ ಸಹನೆ ಯಾರಿಗಿದೆ ಅಲ್ಲವೇ? ಹೀಗಾಗಿ ಅವರಿಗೆ ಇಷ್ಟವಾದ ದೇವರ ಒಂದು ಪಠ ಅಥವಾ ಒಂದು ಮೂರ್ತಿ ದೇವರ ಮನೆಯಲ್ಲಿ ಇರುವುದುಂಟು.ನೋಡುವವರ ಕಣ್ಣಿಗೆ ಬೀಳದಂತೆ ಪೀಠದ ಕೆಳಗೆ ದೇವರ ಪುಸ್ತಕಗಳು, ಪರಿಕರಗಳನ್ನಿಡಲು ಸ್ಥಳವನ್ನು ಮಾಡುತ್ತಾರೆ. ಸುತ್ತಲಿನ ಗೋಡೆಗಳಿಗೆ ಗಾಢವಾದ ಬಣ್ಣದ ಗ್ರಾನೈಟ್  ಜೋಡಿಸಿದ್ದರೆ ಹೊಳೆಯುವ ಬೆಳ್ಳಿಯ, ವೈಟ್‌ ಮೆಟಲ್‌ನ ಅಥವಾ ಅಮೃತ ಶಿಲೆಯ ಮಂಟಪ ನಿರ್ಮಿಸಿದರೆ ಚಂದ ಎನಿಸುತ್ತದೆ. ಅದರ ಮೇಲೆ ಬಣ್ಣದ ಅಥವಾ ಹೊಂಬೆಳಕಿನ ವಿದ್ಯುತ್ ದೀಪವೂ ತೂಗುಬಿದ್ದಿದ್ದರೆ ದೇವರ ಕೋಣೆ ಮತ್ತೂ ಸುಂದರವಾಗಿ ಕಾಣುತ್ತದೆ.ಬೆಳ್ಳಿಯ ದೀಪಗಳನ್ನಿರಿಸಲು ಭಯವಾದರೆ ದೇವರ ಮನೆ ಅಲಂಕಾರಕ್ಕೆ ಕೆಂಪು ಬೆಳಕಿನ ಅಥವಾ ಬಣ್ಣ ಬಣ್ಣದ ವಿದ್ಯುತ್ ದೀಪಗಳೂ ಲಭ್ಯ. ಈಗಂತೂ ಎಲ್‌ಇಡಿ ದೀಪಗಳ ಬಳಕೆಯೂ ಹೆಚ್ಚಿದೆ. ಎಣ್ಣೆ ಮತ್ತು ಬತ್ತಿಯ ಗೋಜು ಇರುವುದಿಲ್ಲ ಎನ್ನುವವರೂ ಇದ್ದಾರೆ.ಇತ್ತೀಚೆಗಂತೂ  ಸುಂದರ ದೇವರ ಕೋಣೆ ಹೊಗೆಯಿಂದ ಕಪ್ಪಾಗುತ್ತದೆ ಎಂದು ಊದಿನ ಕಡ್ಡಿ ಬಳಸುವುದನ್ನೂ ಕೈಬಿಟ್ಟವರಿದ್ದಾರೆ. ಎಲ್‌ಇಡಿ ಬಂದಿದೆ, ಇನ್ನು ಎಣ್ಣೆಯ ದೀಪವೇಕೆ ಎಂದುಕೊಂಡವರಿಗೆ ದೇವರ ಕೋಣೆ ನಿರ್ವಹಣೆ ಮತ್ತೂ ಸುಲಭ.ದೇವರೊಬ್ಬ ನಾಮ ಹಲವು ಎನ್ನುವಂತೆ ದೇವನೊಬ್ಬನಾದರೂ ಅವನ ಕೋಣೆಗಳಂತೂ ಬಹು ವಿಧದ್ದು ಇವೆ. ನಿಮ್ಮ ಮನೆಗೆ, ಮನಸ್ಸಿಗೆ ಹೊಂದುವುದನ್ನು ಆಯ್ಕೆ ಮಾಡಿಕೊಳ್ಳ ಬಹುದು. ಆ ದೇವನಂತೂ ಏನನ್ನೂ ಪ್ರಶ್ನಿಸೋಲ್ಲ. ಎಲ್ಲವೂ ನಿಮ್ಮ ಮನಸ್ಸಿನ ಸಮಾಧಾನಕ್ಕಾಗಿ ಅಲ್ಲವೇ?

ಆದ್ದರಿಂದ ಅವರವರ ಅನುಕೂಲಕ್ಕೆ, ಸ್ಥಳದ ಲಭ್ಯತೆಗೆ ಅನುಗುಣವಾಗಿ ಹೊಸ ಮನೆಗೆ ದೇವರ ಕೋಣೆಯನ್ನೂ, ದೇವರನ್ನು ಬರಮಾಡಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry