ಶನಿವಾರ, ಮೇ 8, 2021
25 °C

ಪೂರ್ಣಗೊಳ್ಳದ ಕಾಮಗಾರಿ: ಅಧಿಕಾರಿಗಳಿಗೆ ಮೇಯರ್ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೆಟ್ರೊ ಕಾಮಗಾರಿ ನಡೆಯುತ್ತಿರುವ ರಸ್ತೆಗಳ ದುರಸ್ತಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಜಲಮಂಡಲಿ ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮದ ಅಧಿಕಾರಿಗಳನ್ನು ಮೇಯರ್ ಪಿ. ಶಾರದಮ್ಮ ತರಾಟೆಗೆ ತೆಗೆದುಕೊಂಡರು.ಮೈಸೂರು ರಸ್ತೆ ವಿಸ್ತರಣೆ, ವೃಷಭಾವತಿ ನಾಲೆಯಿಂದ ಹೂಳೆತ್ತುವಿಕೆ ಹಾಗೂ ಮೆಟ್ರೊ ಕಾಮಗಾರಿ ನಡೆಯುತ್ತಿರುವ ರಸ್ತೆಗಳಿಗೆ ಮಂಗಳವಾರ ಭೇಟಿ ನೀಡಿ ಕಾಮಗಾರಿಪರಿಶೀಲಿಸಿದರು.  ಮೆಟ್ರೊ ಕಾಮಗಾರಿ ನಡೆಯುತ್ತಿರುವ ವಿಜಯನಗರ ಮುಖ್ಯರಸ್ತೆ, ಮಾಗಡಿ ರಸ್ತೆ, ಪಶ್ಚಿಮ ಕಾರ್ಡ್ ರಸ್ತೆ ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸಿದ ಅವರು, 15 ದಿನಗಳ ಒಳಗಾಗಿ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದ್ದ ಅಧಿಕಾರಿಗಳು ಗಡುವು ಮುಗಿದ ಬಳಿಕವೂ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.  `ಮೆಟ್ರೊ ಕಾಮಗಾರಿಯಿಂದ ಸಾರ್ವಜನಿಕರ ಓಡಾಟ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಸಾರ್ವಜನಿಕವಾಗಿ ಹೇಳಿಕೆ ನೀಡುವ ಅಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸಬೇಕು~ ಎಂದರು. `ಮೈಸೂರು ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಜಲಮಂಡಲಿ, ಬೆಸ್ಕಾಂ ಹಾಗೂ ಬಿಎಸ್‌ಎನ್‌ಎಲ್ ಪೈಪ್ ಹಾಗೂ ಕೇಬಲ್‌ಗಳನ್ನು ಸ್ಥಳಾಂತರಿಸಿವೆ. ಮಳೆ ಕಡಿಮೆಯಾದ ಕೂಡಲೇ ರಸ್ತೆ ವಿಸ್ತರಣೆ ಕಾಮಗಾರಿ ನಡೆಯಬೇಕು~ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಗಾಳಿ ಆಂಜನೇಯ ದೇವಸ್ಥಾನದ ಹತ್ತಿರ ವೃಷಭಾವತಿ ನಾಲೆಯಿಂದ ಹೂಳೆತ್ತುವ ಕಾಮಾಗಾರಿ ಪರಿಶೀಲಿಸಿದ ಅವರು `ಕಳೆದ 15 ದಿನಗಳಿಂದ ನಿರಂತರವಾಗಿ ಹೂಳೆತ್ತಲಾಗಿದೆ. ಹೀಗಾಗಿ ಸೋಮವಾರ ಸುರಿದ ಮಳೆಯಿಂದ ಇಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ದೇವಸ್ಥಾನದ ಸಮೀಪ ಮತ್ತಿತರ ಕಡೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ಕೂಡಲೇ ಪೂರ್ಣಗೊಳಿಸಬೇಕು~ ಎಂದು ಆದೇಶ ನೀಡಿದರು.`ಇಸ್ಕಾನ್ ದೇವಸ್ಥಾನದ ಹತ್ತಿರ ಒಳಚರಂಡಿಯಿಂದ ಕೊಳಚೆ ನೀರು ಉಕ್ಕಿ ಹರಿಯುತ್ತಿದ್ದು, ಇದರ ದುರಸ್ತಿಗೆ ಏಕೆ ವಿಳಂಬ ಮಾಡುತ್ತಿದ್ದೀರಿ? ಜಲಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಕೂಡಾ ಈ ಕಡೆ ಗಮನಹರಿಸದೇ ಇರುವುದು ತುಂಬಾ ಶೋಚನೀಯ ಸಂಗತಿ~ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.